“ರಾಮಾಯಣ ದಿಗ್ದರ್ಶನ”ಕ್ಕೆ ಸಾಕ್ಷಿಯಾದ ಅರಸು ಗ್ಯಾಲರಿ

Share This

   ಕಲಾಶಿಕ್ಷಣದಲ್ಲಿ ಕಡೇ ಪಕ್ಷ ಭಾರತೀಯ ಚಿತ್ರಕಲಾ ಪ್ರಕಾರಗಳಿಗೆ ಸಾಸಿವೆಯಷ್ಟೂ ಜಾಗವಿಡದಿದ್ದರೆ ಈ ನೆಲದ ಕಲೆ ಹೇಗೆ ತಾನೆ ಉಳಿಯಲು ಸಾಧ್ಯ? ನನಗಿರುವ ಮಾಹಿತಿಯ ಪ್ರಕಾರ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯ (Indian Traditional Art) ಅಭ್ಯಾಸ ಕೇವಲ ಓದಿಗಾಗಿ ಉಳಿದಿದೆಯಷ್ಟೆ!!
ಇದನ್ನು ಎಷ್ಟು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಕಲಾಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಮೊದಲ ಆಕರ್ಷಣೆಯೇ ಇಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿರುತ್ತದೆ. ಅದನ್ನು ಆ ಹಂತದಲ್ಲಿ ವ್ಯಕ್ತಪಡಿಸಲು ವಿದ್ಯಾರ್ಥಿ ಹಿಂಜರಿಯುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಕಲಾವಿದ್ಯಾರ್ಥಿಗೆ ಏಕಾಗ್ರತೆ (concentration) ಹೆಚ್ಚಿಸಿಕೊಳ್ಳಲು, ಕೌಶಲ್ಯಾಭಿವೃದ್ಧಿಗೆ, ಅಧ್ಯಯನಕ್ಕೆ ಖಂಡಿತವಾಗಿ ಸಹಕಾರಿಯಾಗಬಲ್ಲವು ಎಂಬ ಸತ್ಯವನ್ನು ಯಾರು ಹೇಳಿಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಕಲಾಶಾಲೆಗಳಲ್ಲಿ ವಿಶೇಷ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಕಲಾಪ್ರಕಾರಗಳ ಅಭ್ಯಾಸಕ್ಕೆ ಅನುವು ಮಾಡಿಕೊಡುತ್ತಿರುವುದು ಶ್ಲಾಘನೀಯ.
ಈ ವಿಚಾರದಲ್ಲಿ ಸಾಂಪ್ರದಾಯಿಕ ಚಿತ್ರಗಳ ರಚನೆಯಲ್ಲಿ ತೊಡಗಿರುವ ಕಲಾವಿದರೂ ಹೊಣೆಗಾರರು. ಭವಿಷ್ಯದಲ್ಲಿ ಈ ಕಲಾಪ್ರಕಾರಗಳು ಹಿನ್ನಡೆ ಕಂಡುಕೊಂಡಾಗ ಉತ್ತರದಾಯಿತ್ವ ಅವರಿಗೂ ಇರಬೇಕಲ್ಲವೆ? ಹೀಗಾಗಿ ಸಾಧ್ಯವಾದಷ್ಟು ಆಸಕ್ತರಿಗೆ ಕಲಿಸಿಕೊಟ್ಟು, ಅಭ್ಯಾಸಕ್ಕೆ ಪ್ರೇರೇಪಿಸಿ ಪರಂಪರೆ ಮುನ್ನಡೆಸುವ ಇಚ್ಛಾಶಕ್ತಿ ಇರಬೇಕು.
ಆಶಾಕಿರಣ ಎಂಬಂತೆ ಕರ್ನಾಟಕ ಚಿತ್ರಕಲಾ ಪರಿಷತ್ ತಮ್ಮ ವಿದ್ಯಾರ್ಥಿಗಳು ರಚಿಸಿರುವ ಮೈಸೂರು ಶೈಲಿ ಸಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಆಯೋಜಿಸಿದೆ. ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಒಂದಿಷ್ಟು ಕಲಾಕೃತಿಗಳು ಹಿಡಿದು ನಿಲ್ಲಿಸುವ, ಕ್ರಿಯಾತ್ಮಕ ಸಂಗತಿಗಳ ಬಗ್ಗೆ ಚಿಂತನೆ, ಅಧ್ಯಯನಕ್ಕಿಳಿಯಲು ಪ್ರೇರೇಪಿಸುವಂತಿವೆ. ಕೌಶಲ್ಯ ಸಾಮರ್ಥ್ಯವಿಲ್ಲದೇ ಮೃಸೂರು ಶೈಲಿಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವು ಈ ಪ್ರದರ್ಶನದಿಂದ ಸಾಧ್ಯ. ಕಲಾವಿದ್ಯಾರ್ಥಿಗಳು ನೋಡಲೇಬೇಕಾದ ಪ್ರದರ್ಶನ ಇದಾಗಿದೆ.
ಈ ಪ್ರದರ್ಶನವೂ ‘ ರಾಮಾಯಣ ದಿಗ್ಧದರ್ಶನ ‘! ಸಂಪೂರ್ಣ ರಾಮಾಯಣ ಸೇರಿದಂತೆ ವಿವಿಧ ಕಥಾಭಾಗ ಆಧರಿಸಿದ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಈ ಶೈಲಿಯ ಸಾಮಾನ್ಯವೆನಿಸುವ ಸನ್ನಿವೇಶಗಳನ್ನೇ ಆಯ್ದು ಮಾಡಿರುವ ಕಲಾಕೃತಿಗಳು ಇದ್ದು, ಮಗದಷ್ಟು ಸನ್ನಿವೇಶಗಳನ್ನು ಕಡೇ ಪಕ್ಷ ಪ್ರದರ್ಶನಕ್ಕೆಂದೇ ರಚಿಸಿ ಪ್ರದರ್ಶಿಸಿದ್ದರೆ ಬಹುಶಃ ಹೆಚ್ಚೆಚ್ಚು ಪರಿಣಾಮಕಾರಿ ಆಗಿರುತ್ತಿತ್ತು.
ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನು ರಚಿಸುವ ಕಲಾವಿದ ನವ್ಯ, ಸಮಕಾಲೀನ ಕಲಾ ಪ್ರಕಾರಗಳ ಚಿತ್ರಗಳ, ಶಿಲ್ಪಗಳ ರಚನೆಯಲ್ಲಿ ತೊಡಗಿಕೊಳ್ಳಬಾರದು ಎನ್ನುವ ನಿಯಮವೆಲ್ಲೂ ಇಲ್ಲ. ವಿದ್ಯಾರ್ಥಿಗಳಿಗೆ ಇಂತಹ ಪ್ರದರ್ಶನ, ಕಾರ್ಯಾಗಾರ, ಸಂವಾದಗಳ ಅಗತ್ಯತೆ ಖಂಡಿತವಾಗಿ ಇದೆ. ಹೀಗಾಗಿ ಈ ಪ್ರದರ್ಶನ ಮಹತ್ವ ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಉನ್ನತ ವ್ಯಾಸಂಗ ಮಾಡುತ್ತಿರುವ ಕಲಾವಿದರ ಅಧ್ಯಯನಕ್ಕೂ ಸಹಕಾರಿ.
Friends, ಈ ಪ್ರದರ್ಶನ ನಾಳೆ ಜ.25ಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ನೋಡಿ ಬನ್ನಿ. ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿರುವ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು 💐💐.

Share This

Leave a Reply

Your email address will not be published. Required fields are marked *