ಕಲಾವಿದ ಸಾಲಿ ಜನ್ಮ ಶತಮಾನೋತ್ಸವ

Share This

ಸಾಮಾನ್ಯ ವ್ಯಾಪಾರಸ್ಥ ಕುಟುಂಬದಲ್ಲಿ ಜನಿಸಿ, ಬಳಿಕ ಚಿತ್ರಕಲೆಯ ಕಲಿಕೆಗಾಗಿ ಮುಂಬೈಗೆ ಪ್ರಯಾಣ ಬೆಳೆಸಿ ಪದವಿ ಪಡೆದು ಕನ್ನಡನಾಡಿನ ಖ್ಯಾತ ಕಲಾವಿದರ ಸಾಲಿಗೆ ಸೇರುವಂತಹ ಸಾಧನೆ ಮಾಡಿದ ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವ ವರ್ಷ ಇದು. ಈ ಹಿನ್ನೆಲೆಯಲ್ಲಿ ಸಾಲಿ ಅವರ ಅಭಿಮಾನಿಗಳು, ವಿಜಯಪುರದ ಸೋಮಶೇಖರ ಸಾಲಿ ಪ್ರತಿಷ್ಠಾನ ವರ್ಷ ಪೂರ್ತಿ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. ಅವರ ಕಲಾಕೃತಿಗಳನ್ನು ರಾಜ್ಯದ ನಾನಾ ಭಾಗಗಳಲ್ಲಿ ಪ್ರದರ್ಶಿಸಲು ಮುಂದಾಗಿದೆ. ಇಂದು ವಿಜಯಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲಾಪ್ರದರ್ಶನಕ್ಕೆ ಚಾಲನೆ ಸಿಗಲಿದೆ.

ಕರ್ನಾಟಕ ಕಲಾವಲಯ ಹೆಮ್ಮೆಯಿಂದ ಸಂಭ್ರಮಿಸಬೇಕಾದ ಮತ್ತು ಇತಿಹಾಸದ ಪುಟದಲ್ಲಿ ದಾಖಲಿಸಬೇಕಾದ ಸಂಗತಿಯೂ ಹೌದು. ಅಷ್ಟೇ ಅಲ್ಲ, ಸೋಮಶೇಖರ ಸಾಲಿ ಅವರ ಕುರಿತು ಒಂದಿಷ್ಟು ಮಾಹಿತಿ ತಿಳಿದುಕೊಳ್ಳಬೇಕಾದ ಸಂದರ್ಭವೂ ಇದಾಗಿದೆ.

ರಾಜ್ಯ ಸರ್ಕಾರ ಸಾಲಿ ಅವರನ್ನು ಸ್ಮರಿಸಿ, ಪ್ರತಿಷ್ಠಾನಕ್ಕೆ ಅನುದಾನ ನೀಡಿ, ಬಲ ಹೆಚ್ಚಿಸುವ ಕೆಲಸ ಮಾಡಲು ಇದು ಸುಸಂದರ್ಭ. ಕಲಾ ಸಮುದಾಯದ ಒಕ್ಕೊರಲ ಮನವಿ ಕೂಡ ಎಂದು ಭಾವಿಸುತ್ತೇನೆ.

| ಕ್ರಿಯಾಶೀಲ ದಾರಿಯಲ್ಲಿ ಸಾಲಿ |

ಕಟ್ಟರ್ ಗಾಂಧಿವಾದಿಯಾಗಿದ್ದ ಸೋಮಶೇಖರ ಸಾಲಿ ಅವರದು ಬಹುಮುಖ ಮತ್ತು ಮೇರು ವ್ಯಕ್ತಿತ್ವ. ರಾಜಕಾರಣದಲ್ಲೂ ಗುರುತಿಸಿಕೊಂಡು, ಕುಟುಂಬ ವೃತ್ತಿ ವ್ಯಾಪಾರವನ್ನೂ ನೋಡಿಕೊಂಡು, ಸಮಾಜ ಸೇವಕರಾಗಿಯೂ, ಸಂಘಟನೆಯಲ್ಲೂ ಒಂದು ಹೆಜ್ಜೆ ಮುಂದಿಟ್ಟು, ಕಲಾ ಶಿಕ್ಷಣದಲ್ಲಿಯೂ ತೊಡಗಿಸಿಕೊಂಡು ಚಿತ್ರಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಬೆಳೆಯುವುದಷ್ಟೇ ಅಲ್ಲ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸಮರ್ಥ ಆಡಳಿತ ನೀಡಿದ ಹಿರಿಮೆ ಸೋಮಶೇಖರ ಸಾಲಿ ಅವರದು. ಪ್ರಗತಿಶೀಲ ಚಿಂತನೆಗಳೊಂದಿಗೆ ರಾಷ್ಟ್ರೀಯವಾದ ಮೈಗೂಡಿಸಿಕೊಂಡಿದ್ದರು.

1922, ನವೆಂಬರ್ 7ರಂದು, ಚಿಕ್ಕಾಲಗುಂಡಿ ಮೂಲದವರಾದ ತಾಯಿ ರೇವಮ್ಮ ಅವರ ತವರು ಮನೆಯಲ್ಲಿ ಜನಿಸಿದರು. ತಂದೆ ಮಾಗುಂಡಯ್ಯ ಅವರು ಅರಳೆ ವ್ಯಾಪಾರಿಯಾಗಿದ್ದರು. ಅಚ್ಚರಿಯ ಸಂಗತಿ ಏನೆಂದರೆ ಸೋಮಶೇಖರ ಸಾಲಿ ಅವರ ಹಿರಿಯ ಅಣ್ಣ ಚನ್ನಬಸವಯ್ಯ ಅವರು ಜಲವರ್ಣ ನಿಸರ್ಗ ಕಲಾಕೃತಿಗಳನ್ನು ರಚಿಸುತ್ತಿದ್ದರು. ಇಲಸ್ಟ್ರೇಟೆಡ್ ವಾರ ಪತ್ರಿಕೆಯ ಅಂಕಣಕಾರರೂ ಆಗಿದ್ದರು. ಅವರ ಚಿಕ್ಕಪ್ಪ ಶರಣಯ್ಯ ಅವರು ಹುಡಿವರ್ಣ ಮತ್ತು ಪೆನ್ಸಿಲ್ ಕಲಾಕೃತಿಗಳನ್ನು ಚಿತ್ರಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.

ಹೀಗಾಗಿ, ಸಹಜವಾಗಿ ಸೋಮಶೇಖರ ಸಾಲಿ ಅವರಿಗೂ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಇತ್ತು. 1941ರಲ್ಲಿ ಎಸ್‌ಎಸ್‌ಸಿ ಮುಗಿಸಿದ ಸಾಲಿ ಅವರು ಒಂದಿಷ್ಟು ದಿನಗಳ ಕಾಲ ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ, ಕುಟುಂಬ ವ್ಯಾಪಾರ ನೋಡಿಕೊಳ್ಳುವುದರಲ್ಲಿ ಹೆಚ್ಚಿನ ಸಮಯ ಮೀಸಲಿಡುತ್ತಿದ್ದರು. ಬಳಿಕ ಖ್ಯಾತ ಇತಿಹಾಸಕಾರ ಸರ್ ಜದುನಾಥ ಸರ್ಕಾರ್ ಮತ್ತು ಡಾ. ಶಿವರಾಮ ಕಾರಂತ ಅವರ ಪ್ರಶಂಸೆಯಿಂದ ಪ್ರೇರೇಪಿತರಾಗಿ ಮುಂಬೈನ ಪ್ರತಿಷ್ಠಿತ ಕಲಾಶಾಲೆ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ಅಧ್ಯಯನ ಪೂರ್ಣಗೊಳಿಸಿದರು. ಆ ಕಾಲಘಟ್ಟದ ಪ್ರಸಿದ್ಧ ಕಲಾವಿದರಾದ ಡಿ.ವಿ.ಹಾಲಭಾವಿ, ಜಿ.ಎಸ್.ದಂಡಾವತಿಮಠ, ಅಹಿವಾಸೆ, ಕಲಾಚಾರ್ಯ ಅಡೂರಕರ್, ಪಳಸಿಕರ್ ಮತ್ತು ಎಂ.ವಿ.ಮಿಣಜಗಿ ಅವರ ಪ್ರೋತ್ಸಾಹದಿಂದ ಕಲಾವಿದರಾಗಿ ಬೆಳೆದರು.

ಸೋಮಶೇಖರ ಸಾಲಿ ಅವರು ರೊಮ್ಯಾಂಟಿಕ್ ಸಂಪ್ರದಾಯದ ಸಾಲಿಗೆ ಸೇರಿದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದರು. ಪಾಶ್ಚಿಮಾತ್ಯ ಕಲೆಯ ಪ್ರಭಾವದ ನಡುವೆಯೂ ಭಾರತೀಯ ಕಲಾ ಪರಂಪರೆ, ಕಲಾಪ್ರಕಾರಗಳತ್ತ ಒಲವು ಹೊಂದಿದ್ದರು. ಭಾವಚಿತ್ರ ಹಾಗೂ ಸಂಯೋಜನಾತ್ಮಕ ಕಲಾಕೃತಿಗಳ ರಚನೆ ಅವರ ಬಲು ಇಷ್ಟದ ವಿಷಯವಾಗಿದ್ದವು. ತೈಲವರ್ಣ, ಜಲವರ್ಣ, ಪೆನ್ಸಿಲ್‌ಗಳಲ್ಲಿ ಸಾಕಷ್ಟು ಕಲಾಕೃತಿಗಳನ್ನು ರಚಿಸಿರುವ ಸೋಮಶೇಖರ ಸಾಲಿ ಅವರು, ಪರುಷ ಮತ್ತು ಮಹಿಳೆಯರ ನಗ್ನ ಸೌಂದರ್ಯವನ್ನು ಪೆನ್ಸಿಲ್‌ನಲ್ಲಿ ಬಹಳ ಪ್ರಮಾಣಬದ್ಧವಾಗಿ ಚಿತ್ರಿಸಿದ್ದಾರೆ. ಪೆನ್ಸಿಲ್ ಸ್ಕೆಚ್‌ಗಳನ್ನು ಗಮನಿಸಿದರೆ, ಅವರ ನಿರಂತರ ಅಭ್ಯಾಸ ಎಷ್ಟು ಬದ್ಧತೆಯಿಂದ ಕೂಡಿತ್ತು ಎನ್ನುವುದನ್ನು ಗಮನಿಸಬಹುದಾಗಿದೆ. ತಮ್ಮ ಕಾಲದ ಬಂಗಾಲಿ ಕಲಾವಿದರ ವಿಭಿನ್ನ ಶೈಲಿ ಮತ್ತು ಬಣ್ಣಗಳ ಬಳಕೆಯ ತಂತ್ರಗಳನ್ನು ಕೈಗೂಡಿಸಿಕೊಂಡಿದ್ದರು.

| ಸಂಘಟನೆಯಲ್ಲಿ ಚತುರ ನಡೆ |

ಕಲಾ ಸಂಸ್ಥೆಗಳ ಆಡಳಿತದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಸೋಮಶೇಖರ ಸಾಲಿ ಅವರು 1985-86ನೇ ಸಾಲಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಇತಿಮಿತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸಂಚಾರಿ ಕಲಾಪ್ರದರ್ಶನಕ್ಕೆ ಚಾಲನೆ ನೀಡಿದ ಹಿರಿಮೆ ಅವರದು. ವಾಹನದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಸಂಚರಿಸುವ ವಿಶೇಷ ಜಾಗೃತಿ ಯೋಜನೆ ಇದಾಗಿತ್ತು. ಅಷ್ಟೇ ಅಲ್ಲ, ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದ ಸಂದರ್ಭದಲ್ಲಿ ಕಲಾ ಸಮಿತಿ ಜವಾಬ್ದಾರಿ ಹೊತ್ತು ಯಶಸ್ವಿಗೊಳಿಸಿದರು. ಕಲಾವಿದ, ಕಲಾಸಂಘಟಕರಾಗಿದ್ದ ನಂಜುಂಡರಾವ್ ಅವರ ಆಪ್ತರಾಗಿದ್ದ ಸಾಲಿ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಉಪಾಧ್ಯಕ್ಷರಾಗಿ, ಹಂಗಾಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಾಗಲಕೋಟೆಯ ಶ್ರೀ ಬಸವೇಶ್ವರ ವಿಧ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿದ್ದರು. ಭಾರತೀಯ ನವ್ಯಕಲಾ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರರ ಮುಂದಾಳತ್ವದಲ್ಲಿ 1986ರಲ್ಲಿ ಭಾರತದಲ್ಲಿ ನಡೆದ ಸಾರ್ಕ್ ಸಮ್ಮೇಳನದ ಭಾಗವಾಗಿ ನಡೆದ ಕಲಾಸಮ್ಮೇಳನ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

| ಸ್ವಾತಂತ್ರ್ಯ ಹೋರಾಟಗಾರರು |

ಯುವಕರಾಗಿದ್ದಾಗ ಸ್ವಾತಂತ್ರ್ಯಕ್ಕಾಗಿ ಸಂಗ್ರಾಮವೇ ನಡೆದ ಸಂದರ್ಭದಲ್ಲಿ ಸೋಮಶೇಖರ ಸಾಲಿ ಅವರು ಚಲೇಜಾವ್ ಚಳವಳಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಖಾದಿ ವಸ್ತçಧರಿಸುವುದನ್ನು ರೂಢಿಸಿಕೊಂಡಿದ್ದ ಸಾಲಿ ಅವರು ತಮಗೆ ಕೊಡುವ ಉಡುಗೊರೆಗಳಲ್ಲಿ ಖಾದಿಯನ್ನು ಮಾತ್ರ ಒಯ್ಯುತ್ತಿದ್ದರು. ಉಳಿದೆಲ್ಲವನ್ನೂ ಬಿಟ್ಟುಹೋಗುವ ಬದ್ಧತೆ ಅವರದ್ದಾಗಿತ್ತು.

| ಪುರಸ್ಕಾರ, ಗೌರವ |

ಸೋಮಶೇಖರ ಸಾಲಿ ಅವರು ನಿಷ್ಠಾವಂತ ಕಲಾಸೇವಕರಾಗಿದ್ದರು. ಸಹೃದಯಿ ಮನೋಭಾವ ಅವರದ್ದಾಗಿತ್ತು. ಕಲಾಕ್ಷೇತ್ರದಲ್ಲಿ ಅವರು ತೋರಿದ ನಿಷ್ಠೆ ಹಾಗೂ ಸೇವೆಗಳನ್ನು ಗುರುತಿಸಿದ ಅಖಿಲ ಭಾರತ ಲಲಿತಕಲೆ ಮತ್ತು ಕರಕುಶಲ ಕಲಾಸಂಸ್ಥೆ (All India Fine Arts & Crafts Society) ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಭಾಷಾ ಸಾಹಿತ್ಯ ಸಮ್ಮೇಳನದಲ್ಲಿ ” ಭಾರತ ಭಾಷಾ ಭೂಷಣ ” ಬಿರುದು ನೀಡಿ ಸನ್ಮಾನಿಸಿತು. ಅಷ್ಟೇ ಅಲ್ಲ ಶ್ರೀ ಕೊಳದ ಸಂಸ್ಥಾನ ಮಠ ” ಚಿತ್ರಕಲಾ ರತ್ನ ” ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿಗೂ ಪಾತ್ರರಾಗಿರುವ ಸಾಲಿ ಅವರಿಗೆ ” ಲಲಿತಕಲಾ ಸುಧಾಕರ, ವಿಜಯ ಲಲಿತಕಲಾ ಮಂದಿರ ಹಾಗೂ ಇನ್ನೂ ಅನೇಕ ಸಂಘ, ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ.

| ಭಾವಪ್ರಧಾನ ಕಲಾಕೃತಿಗಳು |

ಸೋಮಶೇಖರ ಸಾಲಿ ಅವರ ಬಹುತೇಕ ಕಲಾಕೃತಿಗಳು ಭಾವ ಪ್ರಧಾನವಾದುದು. ತೈಲವರ್ಣ, ಜಲವರ್ಣ ಮತ್ತು ಪೆನ್ಸಿಲ್‌ನಿಂದ ರಚನೆಗೊಂಡಿರುವ ಕಲಾಕೃತಿಗಳು ವಿಭಿನ್ನ ವಸ್ತು ವಿಷಯ ಹೊಂದಿವೆಯಾದರೂ ಎಲ್ಲವೂ ಭಾವ ಪ್ರಧಾನವಾದುವೇ ಆಗಿವೆ. ಭಾವಪ್ರಧಾನ ಸಿದ್ಧಾಂತ (Romanticism)ಗೆ ಬಹಳ ಹತ್ತಿರದ ತತ್ವಪಾಲನೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು ಎನ್ನುವುದನ್ನು ಅವರ ಕಲಾಕೃತಿಗಳಿಂದ ತಿಳಿಯಲು ಸಾಧ್ಯವಾಗುತ್ತದೆ.

ಭಾರತೀಯ ಕಲಾ ಪರಂಪರೆಯಲ್ಲಿ ಭಾವಪ್ರಧಾನವಾದ ಸಿದ್ಧಾಂತದ ನಂಬಿಕೆ ಇಟ್ಟು ಕಲಾಕೃತಿ ರಚಿಸಿದ ಕಲಾವಿದರು ಹಲವರಿದ್ದು, ಅವರಲ್ಲಿ ಸೋಮಶೇಖರ್ ಸಾಲಿ ಅವರೂ ಒಬ್ಬರಾಗಿದ್ದರು. ಸ್ವಭಾವತಃ ರಾಜಕೀಯ ಆಸಕ್ತಿ ಬೆಳೆಸಿಕೊಂಡಿದ್ದ ಅವರು ತಮಗಾದ ಅನುಭವಗಳನ್ನು, ಪ್ರಭಾವಗಳನ್ನೇ ವಿಷಯವಾಗಿಸಿಕೊಂಡು ಕಲಾಕೃತಿಗಳನ್ನು ರಚಿಸಿರುವುದೂ ಗಮನಕ್ಕೆ ಬರುತ್ತವೆ. ಅವರ ನಗ್ನ ಸ್ಕೆಚ್‌ಗಳು, ವರ್ಣ ಚಿತ್ರಗಳಲ್ಲಿ ಈ ಅಂಶಗಳನ್ನು ನಿಖರವಾಗಿ ಗುರುತಿಸಬಿಡಬಹುದು. ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿ ನಿಲ್ಲುವ ಕಲಾಕೃತಿಗಳು ಇವಾಗಿವೆ. ದರ್ಪಣ ಸುಂದರಿಯ ತೈಲವರ್ಣ ಕಲಾಕೃತಿಯನ್ನು ಗಮನಿಸಿದಾಗ ಅವರು ಸೌಂದರ್ಯ ಪ್ರಧಾನ ವಿಚಾರಗಳ ಕಡೆ ಒಲವು ಹೊಂದಿದ್ದರು ಎಂದೆನಿಸುತ್ತದೆ. ಅವರ ತೈಲವರ್ಣದ ಭಾವ ಚಿತ್ರಗಳನ್ನು ಗಮನಿಸಿದಾಗ ಎಷ್ಟು ಹಿಡಿತ ಸಾಧಿಸಿದ್ದರು ಎನ್ನುವ ಸೂಕ್ಷ್ಮವನ್ನು ಗುರುತಿಸಬಹುದಾಗಿದೆ.

ಸಾಲಿ ಅಭಿಮಾನಿಗಳು, ಸಾಲಿ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ಅಭಿನಂದನೆಗಳು 💐


Share This

Leave a Reply

Your email address will not be published. Required fields are marked *