ಪ್ರಾತಿನಿಧ್ಯತೆ ಮತ್ತು ಅಮೂರ್ತ ಭಾವ!

Share This

“If you want to make your dreams come true, the first thing you have to do is wake up”
ಈ ಮಾತು ಎಷ್ಟು ಅರ್ಥಗರ್ಭಿತ. ಜೀವನದಲ್ಲಿ ಕನಸು ಕಾಣದಿರುವ ವ್ಯಕ್ತಿ ಯಾರಾದರೂ ಇದ್ದಾರಾ? ಸಾಧ್ಯವಿಲ್ಲ ಬಿಡಿ. ಹಾಗಿದ್ದಮೇಲೆ ಕನಸನ್ನು ನನಸು ಮಾಡಿಕೊಳ್ಳಲು ಮೊದಲು ಮಾಡಬೇಕಾದ ಕೆಲಸವೇ ನೀವು ಎಚ್ಚೆತ್ತುಕೊಳ್ಳುವುದು. ಅದರರ್ಥ, ಜಡತ್ವ ಬಿಟ್ಟು ಕ್ರಿಯಾಶೀಲರಾದರೆ ಗುರಿ ತಲುಪಲು ಸಾಧ್ಯ.
ಕಲಾವಿದ ಐಶ್ವರ್ಯನ್ ಕೆ. ಅವರು ತಮ್ಮ “Archive of memory” ಶೀರ್ಷಿಕೆಯ ಕಲಾಪ್ರದರ್ಶನ ಕುರಿತು ಹೇಳುವಾಗ ಕನಸು ನನಸು ಮಾಡಿಕೊಳ್ಳುವ ಕುರಿತ ಈ ಮಾತು ಕಣ್ಣೆದುರು ಹಾದುಹೋಯಿತು. ಪ್ರದರ್ಶನ ಮತ್ತು ಪ್ರದರ್ಶಿತ ಆರು ಕಲಾಕೃತಿಗಳ ಕುರಿತ ವಿವರಣೆ ಅವರ ನಿಖರತೆಯ ಮೇಲಿನ ಆಸಕ್ತಿ ಹೆಚ್ಚಿಸಿತು. ತಮ್ಮದೇ ಜೀವನಾನುಭವವನ್ನು ಆರು ಭಾಗಗಳನ್ನಾಗಿಸಿ ಅದನ್ನೇ 6 ಕಲಾಕೃತಿಗಳಲ್ಲಿ ಕಟ್ಟಿಕೊಡುವ ಪ್ರಯತ್ನವೇ “Archive of memory”.

ಪ್ರತಿಯೊಬ್ಬರು ಭೂಸ್ಪರ್ಶ ಮಾಡುವಾಗ ಏನನ್ನೂ ತಂದಿರುವುದಿಲ್ಲ. ಹಾಗೆಯೇ ತೊರೆದು ಹೋಗುವಾಗಲೂ ಏನೂ ಕೊಂಡೊಯ್ಯಲಾರರು. ಆದರೆ ಅವರವರ ಜೀವನದ ಎಲ್ಲಾ ತರನಾದ ಸಂಗತಿಗಳನ್ನು ಈ ಭೂಮಿ(earth) ಕಂಡಿರುತ್ತದೆ. ಅವರೆಲ್ಲರ ಭಾರ ಹೊತ್ತಿರುತ್ತದೆ. ಬಿಟ್ಟು ಹೋದವರ ಅವಶೇಷಗಳನ್ನೂ ತನ್ನೊಳಗಿರಿಸಿಕೊಂಡಿರುತ್ತದೆ. ಮುಂದೊಂದು ದಿನ ಎಲ್ಲವನ್ನೂ ಸರ್ವನಾಶಮಾಡಿ ಹೊಸ ಸೃಷ್ಟಿಗೆ ಕಾರಣವಾಗಿಸುತ್ತದೆ ಎಂಬ ಭೂಮಂಡಲದ ಪರಿಕಲ್ಪನೆಯೇ ಕಲಾಕೃತಿಯಾಗಿ ” Everything yet nothing” ಶೀರ್ಷಿಕೆಯಡಿ ಪ್ರದರ್ಶಿಸಲ್ಪಟ್ಟಿದೆ. ಸರಳ ಪರಿಕರಗಳಿಂದ (simple matirial) ಪ್ರತಿಷ್ಠಾಪನೆಗೊಳಿಸಿ (installation), ಕಲಾತ್ಮಕ ಸ್ಪರ್ಶ ನೀಡಿರುವ ಸುಂದರ ಅಭಿವ್ಯಕ್ತಿ ಇದಾಗಿದೆ.
ಈ ಕಲಾಕೃತಿಯಲ್ಲಿ Handmade Paper ಬಳಸಿಕೊಂಡಿರುವ ರೀತಿ ಗಮನಾರ್ಹ. ಭೂಮಿಯ ಮಣ್ಣಿನ ಮೈವಳಿಕೆ (texture) ನೈಜತೆಯನ್ನು ಪ್ರತಿಬಿಂಬಿಸುವಂತಿವೆ. ಮಣ್ಣಿನ ಸಹಜ ಸೌಂದರ್ಯ ಮತ್ತು ಘನತ್ವ ಗಮನಸೆಳೆಯುವಂತಿದೆ. ಒಟ್ಟಾರೆಯಾಗಿ ಅದೊಂದು ಸಾಂಕೇತಿಕ ಪ್ರಾತಿನಿಧ್ಯತೆಯ ಅಭಿವ್ಯಕ್ತಿ (symbolic representation) ಅನಿಸಿದರೂ, ಅನೇಕ ಆಗುಹೋಗುಗಳನ್ನು ಅನುಭವಿಸಿದ ನೆಲದ ಜೊತೆಗಿನ ಅನುಸಂಧಾನಕ್ಕೆ ಕಾರಣವಾಗಲಿದೆ ಎನ್ನುವುದು ಸ್ಪಷ್ಟ. ಅದೇ ಕಾರಣದಿಂದಾಗಿ ನೋಡುಗ ಬೇಗ ಆಪ್ತನಾಗಿ ಎದುರು ನಿಲ್ಲುತ್ತಾನೆ. ಕಲಾಕೃತಿಯೊಳಗೆ ಒಬ್ಬನಾಗಿ ಮೈಮರೆಯುತ್ತಾನೆ.
ಉಳಿದಂತೆ ಶಾಂತ ರಸ ಪ್ರತಿಪಾದಿಸುವ ” Embedded ” ಶೀರ್ಷಿಕೆಯ ಅರಳಿಮರ, ತಾಯಿ ಮತ್ತು ಮಗನ ನಡುವಿನ ಪ್ರೀತಿ, ಕೋಪ, ತುಂಟುತನ ಪ್ರತಿಬಿಂಬಿಸುವ ” Ammayum Njanum ” ಶೀರ್ಷಿಕೆಯ ಕಲಾಕೃತಿ, ಸ್ನೇಹಿತರು ಮತ್ತು ಹಿತೈಷಿಗಳ ಜೊತೆಗಿನ ನಿತ್ಯ ಸತ್ಯ ಪ್ರತಿಪಾದಿಸಿದ ” Silver lining ” ಶೀರ್ಷಿಕೆಯ ಕಲಾಕೃತಿ, ಮಾತೃಪ್ರಧಾನ ಪ್ರತಿಬಿಂಬಿತ ” Matrilineal ” ಶೀರ್ಷಿಕೆಯ ಕಲಾಕೃತಿ ಹಾಗೂ ” Mersalaayitten ” ಶೀರ್ಷಿಕೆಯ ಕಲಾಕೃತಿ ಅವರ ಜೀವನದ ಅನುಭವಗಳನ್ನು ಹೇಳುತ್ತವೆ.
ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ಎಲ್ಲವೂ ಅಮೂರ್ತವಾದ ಭಾವಾಭಿವ್ಯಕ್ತಿ. ಅರಳಿಮರವನ್ನು ದುಡಿಸಿಕೊಂಡಿರುವ ಕಲಾಕೃತಿ ಹೊರತುಪಡಿಸಿ ಉಳಿದೈದು ಕಲಾಕೃತಿ ನೋಡುಗನನ್ನು ತನ್ನೊಳಗಿನ ಭಾವದಾಳಕ್ಕೆ ಕರೆದೊಯ್ಯುತ್ತವೆ.

Friends, ಸಾಧ್ಯವಾದರೆ ಬಿಡುವು ಮಾಡಿಕೊಂಡು ಸುಮುಖ ಗ್ಯಾಲರಿಗೆ ಭೇಟಿ ನೀಡಿ. ಅಕ್ಟೋಬರ್ 7ರ ತನಕ ಸಾರ್ವಜನಿಕ ವೀಕ್ಷಣೆಗೆ ಲಭ್ಯ.


Share This

Leave a Reply

Your email address will not be published. Required fields are marked *