- 1532 ಬೂತ್ಗಳಲ್ಲಿ 50,000ಕ್ಕೂ ಹೆಚ್ಚು ಕಲಾಕೃತಿ ಪ್ರದರ್ಶನ
ಸಹಸ್ರಾರು ಮಂದಿ ಏಕಕಾಲದಲ್ಲಿ ಒಂದೆಡೆ ಬಂದು ನೇರವಾಗಿ ಕಲಾವಿದರ ಜೊತೆ ಮಾತನಾಡಿ, ಕಲಾಕೃತಿಗಳನ್ನು ಕೊಂಡುಕೊಳ್ಳುವಂತಹ ಒಂದು ಸುಂದರ ಸಂಗಮಕ್ಕೆ ದೊಡ್ಡದೊಂದು ಉದಾಹರಣೆ ಬೆಂಗಳೂರು ಚಿತ್ರಸಂತೆ!
ಹೌದು, ನಾಳೆ ಭಾನುವಾರ, 2026, ಜನವರಿ 4ರಂದು 23ನೇ ಚಿತ್ರಸಂತೆಗೆ ಅದ್ದೂರಿ ಸಿದ್ಧತೆ ನಡೆದಿದೆ. ಇಡೀ ದಿನ ಕುಮಾರಕೃಪಾ ಮಾರ್ಗ ಕಲಾವಿದರು, ಕಲಾಪ್ರಿಯರ ಸಾಗರವಾಗಲಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವಿರಾರು ಕಲಾವಿದರ ಸಹಸ್ರಾರು ಕಲಾಕೃತಿಗಳನ್ನು ವೀಕ್ಷಿಸಲಿದ್ದಾರೆ. ಈಗಾಗಲೇ ಕರ್ನಾಟಕ ಚಿತ್ರಕಲಾ ಪರಿಷತ್ ನೀಡಿರುವ ಮಾಹಿತಿಯ ಪ್ರಕಾರ 1550ಕ್ಕೂ ಹೆಚ್ಚು ಕಲಾವಿದರು, 1532 ಬೂತ್ಗಳಲ್ಲಿ 50,000ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ.
ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಬೆಳಗ್ಗೆ 23ನೇ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಾಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ಟಿ.ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ಕೈಗಾರಿಕೋದ್ಯಮಿ ಎಸ್.ಎನ್.ಅಗರ್ವಾಲ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ವಹಿಸಲಿದ್ದಾರೆ.







