ಕಲಾವಿದ, ಕಲಾವಿಮರ್ಶಕ ಶಶಿಧರರಿಗೆ ಅಕ್ಷರ ನಮನ

Share This

“ಇನ್ನಷ್ಟು ಕಾಲ ಕಲಾಕ್ಷೇತ್ರದ ಜೊತೆಗಿರಬೇಕಾದವರಾಗಿದ್ದರು. ಕಲಾವಿಮರ್ಶೆಯ ಮೂಲಕ ಕಲಾಕ್ಷೇತ್ರದಲ್ಲಿ ಆಯಾ ಕಾಲಘಟ್ಟದ ಆಗು-ಹೋಗುಗಳನ್ನು ದಾಖಲಿಸಬೇಕಾದವರಾಗಿದ್ದರು. ಕಲಾಕೃತಿಗಳ ಮೂಲಕ ನಮ್ಮ ನಡುವೆ ಇದ್ದು ಅನುಭವ ಹಂಚಿಕೊಳ್ಳುವ ಹಾಗೂ ತಮ್ಮ ನಿರಂತರ ಅಧ್ಯಯನ, ಲೇಖನಗಳ ಮೂಲಕ ಕಲಾವಿದರ ಜ್ಞಾನ ಹೆಚ್ಚಿಸಬೇಕಾದವರಾಗಿದ್ದರು”
ಹೌದು, ಇಂತಹ ಅಪರೂಪದ ವ್ಯಕ್ತಿಯೊಬ್ಬರನ್ನು ನಾವಿಂದು ಕಳೆದುಕೊಂಡಿದ್ದೇವೆ. ಕಲಾವಿದ, ಕಲಾವಿಮರ್ಶಕ ಸಿ.ಎಸ್.ಶಶಿಧರ್ ಅವರು ಸೋಮವಾರ ರಾತ್ರಿ ನಿಧನರಾದರು. ಪತ್ನಿ, ಪುತ್ರಿ ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.
ಶಶಿಧರ್ ಅವರು ಬೆಂಗಳೂರಿನ ಜಯಗರದಲ್ಲಿ ತಮ್ಮದೇ ಕಲಾ ಸಂಸ್ಥೆಯನ್ನು ನಡೆಸುತ್ತಿದ್ದರು ಶಶಿಧರ್. ಬರವಣಿಗೆಯನ್ನೂ ಹಾಗೂ ಕಲಾಕೃತಿಗಳ ರಚನೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಶಶಿಧರ್ ಅವರು ಸದಾಕಾಲ ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಿದ್ದರು. ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ಅವರು ಸಾಕಷ್ಟು ಲೇಖನಗಳನ್ನೂ ಬರೆದಿದ್ದಾರೆ. ಕಲೆಯ ಕುರಿತ ಲೇಖನಗಳು, ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ನಿಧನ ಕರ್ನಾಟಕ ಕಲಾಕ್ಷೇತ್ರಕ್ಕಾದ ಬಲುದೊಡ್ಡ ನಷ್ಟ. ಶಶಿಧರ್ ಅವರ ನಿಧನಕ್ಕೆ ನಾಡಿನ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.
ಶಶಿಧರ್ ಅವರು ಕಲಾ ಶಾಲೆಗೆ ಹೋಗಿ ಕಲಾ ಶಿಕ್ಷಣ ಪಡೆದವರಲ್ಲ. ಆದರೆ ಅವರ ಕಲಾಕೃತಿಗಳನ್ನು ನೋಡಿದರೆ ಯಾರೂ ಕೂಡ ಅಕಾಡೆಮಿಕ್ ಆಗಿ ಕಲಾ ಶಿಕ್ಷಣ ಪಡೆದವರಲ್ಲ ಎಂದು ಹೇಳಲು ಸಾಧ್ಯವೇ ಇರಲಿಲ್ಲ. ನಿರಂತರ ಅಭ್ಯಾಸದಿಂದ ಚಿತ್ರಕಲೆಯನ್ನು ವೃತ್ತಿಯಾಗಿಸಿಕೊಂಡ ಕಲಾವಿದರಷ್ಟೇ ಹಿಡಿತ ಸಾಧಿಸಿಕೊಂಡಿದ್ದರು. ಗಾಢವಾದ ಬಣ್ಣಗಳಿಂದ ಸಾಮಾನ್ಯ ವಿಷಯಗಳನ್ನೇ ಆಯ್ದುಕೊಂಡು ಕಲಾಕೃತಿ ರಚಿಸುತ್ತಿದ್ದರು.

ಅಧ್ಯಯನಶೀಲ ಲೇಖಕ

ಚಿಂತಾಮಣಿ ಜಿ.ಜಿ

ಶಿಧರ್ ಅವರು ನನ್ನ ಆತ್ಮೀಯರಲ್ಲಿ ಒಬ್ಬರು. ನಿರಂತರ ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಕಲೆಗೆ ಸಂಬಂಧಿಸಿ ಆಳವಾದ ಅಧ್ಯಯನ ನಡೆಸಿದವರು. ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಬರೆಯುವ ಸಾಮಥ್ರ್ಯ ಹೊಂದಿದ್ದರು. ಆಂಗ್ಲ ಕಾದಂಬರಿಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ರಸಭಾಷವನ್ನು ಆಹ್ಲಾದಿಸಿದವರು. ಆಂಗ್ಲ ಭಾಷೆಯಲ್ಲಿಯೇ ಕಾದಂಬರಿಯನ್ನೂ ಬರೆದು ತಮ್ಮದೇ ಶೈಲಿ ರೂಪಿಸಿಕೊಂಡಿದ್ದರು. ಕಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರೊಬ್ಬ ಅಪರೂಪದ ಅಧ್ಯಯನಶೀಲ ಲೇಖಕ. ಅವರನ್ನ ಕಳೆದುಕೊಂಡಿದ್ದೇವೆ. ಅವರ ಆಕಸ್ಮಿಕ ನಿಧನ ಆಘಾತವನ್ನುಂಟು ಮಾಡಿದೆ. ಅವರನ್ನು ಕಳೆದುಕೊಂಡ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಆ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ.

  • ಚಿಂತಾಮಣಿ ಜಿ.ಜಿ. ಕಲಾವಿದರು, ಕಲಾವಿಮರ್ಶಕರು

ಬಹಳ ಒಳ್ಳೆಯ ಕಲಾ ಚಿಂತಕ

ಶ್ಯಾಮಲಾ

ತ್ತೀಚೆಗೆ ಭಾವಚಿತ್ರಗಳ ಕಲಾಪ್ರದರ್ಶನವೊಂದನ್ನು ಆಯೋಜಿಸಬೇಕೆಂದು ಸಿದ್ಧತೆ ಮಾಡಿಕೊಳ್ಳುವಾಗ ಶಶಿಧರ್ ಅವರು ಸಾಕಷ್ಟು ಸಹಕಾರ ನೀಡಿದ್ದರು. ಅವರ ಕೆಲವೊಂದು ಸಲಹೆಗಳಿಂದ ಪ್ರದರ್ಶನವೂ ಯಶಸ್ವಿಯಾಗಿ ನಡೆಯಿತು. ಪ್ರದರ್ಶನಕ್ಕೆ ಚಾಲನೆ ನೀಡುವ ದಿನ ಅತಿಥಿಗಳಾಗಿ ಬಂದು ಎಷ್ಟು ಸೊಗಸಾಗಿ ಮಾತನಾಡಿದರು. ಬಹಳ ಒಳ್ಳೆಯ ಲೇಖಕ, ಕಲಾವಿಮರ್ಶಕರಾಗಿದ್ದರು. ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿವ ಅವರ ಗುಣ ಬಹಳ ಇಷ್ಟವಾಗಿತ್ತು. ಅವರ ನಿಧನ ವಾರ್ತೆ ಕೇಳಿ ಬಹಳ ದುಃಖವಾಯ್ತು. ನಮ್ಮೊಂದಿಗೆ ಇನ್ನಷ್ಟು ದಿನಗಳ ಕಾಲ ಇರಬೇಕಾದವರು ಎಷ್ಟು ಬೇಗ ಹೊರಟುಹೋದರಲ್ಲ ಅನಿಸುತ್ತಿದೆ. ದೇವರು ಅವರಿಗೆ ಶಾಂತಿ ನೀಡಲಿ.

  • ಶ್ಯಾಮಲಾ ರಮಾನಂದ್, ಕಲಾ ಪೋಷಕಿ, ಕಲಾವಿದೆ

ಗಂಭೀರ ವ್ಯಕ್ತಿತ್ವದ ಕಲಾವಿದ, ಕಲಾವಿಮರ್ಶಕ

ಎಸ್.ರವಿ

ತ್ತೀಚೆಗೆ ಅವರ ಕಲಾಕೃತಿಗಳ ಪ್ರದರ್ಶನವೊಂದನ್ನು ನಮ್ಮ ಗ್ಯಾಲರಿಯಲ್ಲಿ ಆಯೋಜಿಸಿದ್ದೆವು. ಕಲೆಯ ಬಗ್ಗೆ ಬರಹಗಳನ್ನು ಬರೆಯುವವರ ಕೊರತೆ ನೀಗಿಸಿದ ವ್ಯಕ್ತಿ ಅವರಾಗಿದ್ದರು. ಕಲಾವಿದರಾಗಿ, ಕಲಾವಿಮರ್ಶಕರಾಗಿ, ಕಲಾ ಚಿಂತಕರಾಗಿ ಇರುವವರು ಬಹಳ ಅಪರೂಪ. ಶಶಿಧರ್ ಅವರು ಈ ಮೂರು ಕ್ಷೇತ್ರದಲ್ಲಿ ಅಧ್ಯಯನದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು. ಅವರ ಇಂಗ್ಲಿಷ್ ಕಾದಂಬರಿಯ ಕನ್ನಡದ ಅವತರಣಿಕೆಯ ಬಗ್ಗೆ ತಿಳಿದವರು ಮಾತನಾಡಲು ನಮ್ಮ ಫಿಡಿಲಿಟಸ್ ಗ್ಯಾಲರಿ ವೇದಿಕೆಯಾಗಿತ್ತು. ಅವರದೇ ಕಲಾಕೃತಿಗಳ ಪ್ರದರ್ಶನದ ಜತೆ ಜೊತೆಗೇ ಈ ಕಾರ್ಯಕ್ರಮ ನಡೆದಿತ್ತು. ಚಿಂತಕ, ಪತ್ರಕರ್ತ ಅಗ್ನಿ ಶ್ರೀಧರ್, ಪುಸ್ತಕಮನೆ ಹರಿಪ್ರಿಯ, ಚಿತ್ರನಟ ಸೋಮಶೇಖರ್, ಕಲಾವಿದರಾದ ಚಿ.ಸು.ಕೃಷ್ಣಸಟ್ಟಿ, ಸಿ.ಚಂದ್ರಶೇಖರ್, ಉದ್ಯಮಿ ಅಚ್ಚುತ್ ಗೌಡ ಸೇರಿದಂತೆ ಅನೇಕ ಮಂದಿಯನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ತಮ್ಮ ಸಂಘಟನಾ ಶಕ್ತಿಯನ್ನೂ ನಿರೂಪಿಸಿದ್ದರು. ಸದಾಕಾಲ ಗಂಭೀರ ಹಾಗೂ ಮೌನವಾಗಿರುತ್ತಿದ್ದ ಅವರು ತಮ್ಮ ಸಹೋದರ ದಿ.ರಾಜೇಶ್ ಅವರ ಬಗ್ಗೆ ಬಹಳ ಮಮತೆ ಹೊಂದಿದ್ದರು. ಬೆಳಗ್ಗೆ ಎದ್ದೇಳುವಾಗಲೇ ಶಶಿಧರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಯಿತು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.

  • ಕೋಟೆಗದ್ದೆ ಎಸ್.ರವಿ ಕಲಾವಿದರು, ಫಿಡಿಲಿಟಸ್ ಗ್ಯಾಲರಿ

Share This

Leave a Reply

Your email address will not be published. Required fields are marked *