ಕಲಾವಿದೆ ಜರೀನಾ ಹಶ್ಮಿ ಇನ್ನಿಲ್ಲ

Share This

ಭಾರತೀಯ ಮೂಲದ ಅಮೆರಿಕ ಕಲಾವಿದೆ ಜರೀನಾ ಹಶ್ಮಿ ಅವರು ನಿಧನರಾಗಿದ್ದಾರೆ. ವಿಶ್ವದೆತ್ತರಕ್ಕೆ ಬೆಳೆದ ಬಹಳ ಅಪರೂಪದ ಕಲಾವಿದೆ. ಇವರಿಗೆ 83 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜರೀನ ಹಶ್ಮಿ ಅವರು ಶನಿವಾರ ಲಂಡನ್‍ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತ ಮೂಲಗಳು ದೃಢಪಡಿಸಿವೆ.
ಕನಿಷ್ಠ ರೇಖೆಗಳನ್ನು ಮುದ್ರಣ ಕಲೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಗೂ ಶಿಲ್ಪ ಕಲಾಕೃತಿಗಳಿಗೂ ಅಳವಡಿಸಿಕೊಳ್ಳುವ ಮೂಲಕ ಒಂದು ಹೊಸ ಆರ್ಟ್ ಟ್ರೆಂಡ್ ಹುಟ್ಟು ಹಾಕಿದವರ ಸಾಲಿನಲ್ಲಿ ನಿಲ್ಲುವ ಮೇರು ಕಲಾವಿದೆಯಾಗಿ ಬೆಳೆದಿದ್ದರು. 1960-70ರ ಸಾಲಿನಲ್ಲಿ ಅಮೆರಿಕದಲ್ಲಿ ಮಿಂಚಿನ ವೇಗದಲ್ಲಿ ಬೆಳೆದುಬಂದ ಕಲಾಪರಂಪರೆ “ಮಿನಿಮಲಿಸಂ”ನಿಂದ ಆಕರ್ಷಣೆಗೊಂಡ ಜರೀನಾ ಅವರು ತಮ್ಮ ಸಮಕಾಲೀನ, ಅಂದಿನ ಮೇರು ಕಲಾವಿದರಾದ ನ್ಯೂಯಾರ್ಕ್‍ನ ಡೊನಾಲ್ಡ್ ಜುಡ್ ಹಾಗೂ ಮಾಲ್ಡೆಲ್ಲಾ ಮೂಲದ ನ್ಯೂಯಾರ್ಕ್ ಕಲಾವಿದ ಫ್ರಾಂಕ್ ಸ್ಟೆಲ್ಲಾ ಅವರ ಧೋರಣೆಗಳನ್ನೇ ಬೆಳೆಸಿಕೊಂಡು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಿಶೇಷವೆಂದರೆ ಕನಿಷ್ಠ ರೇಖೆಗಳ ಈ ಸೈದ್ಧಾಂತಿಕವಾದ ವಾದಕ್ಕೆ ಜರೀನಾ ಅವರು ಆಯ್ದುಕೊಂಡದ್ದು ಮುದ್ರಣ ಕಲೆಯಾಗಿದ್ದರಿಂದ ಯಶಸ್ಸು ಕೂಡ ಅವರನ್ನು ಕೈಬಿಡಲಿಲ್ಲ.
ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಆಯೋಜಿಸುವ ಮೂಲಕ ಈ ಪ್ರಕಾರದ ಕಲೆಗೆ ಮನ್ನಣೆ ದೊರಕಿಸಿಕೊಡುವಲ್ಲಿ ಜರೀನಾ ಹಶ್ಮಿ ಅವರ ಪಾತ್ರ ವಿಶೇಷವಾದುದು ಎನ್ನುವುದು ಗಮನಾರ್ಹ ಸಂಗತಿ.

ಜರೀನಾ ಹಶ್ಮಿ

ಉತ್ತರಪ್ರದೇಶದಿಂದ ಜಗದೆತ್ತರಕ್ಕೆ
ಜರೀನಾ ಹಶ್ಮಿ ಎಂಬುದು ಈ ಕಲಾವಿದೆಯ ಪೂರ್ಣ ಹೆಸರಾದರೂ ಕಲಾಕ್ಷೇತ್ರಕ್ಕೆ ಪರಿಚಯವಾಗಿದ್ದು ಮಾತ್ರ ಜರೀನಾ ಎಂದಷ್ಟೇ. ಜರೀನಾ ಅವರು ಉತ್ತರ ಪ್ರದೇಶದ ಅಲೀಗಢದಲ್ಲಿ ಜನಿಸಿದ 1937ರಲ್ಲಿ ಜನಿಸಿದರು. ಗಣಿತ ಪದವೀಧರೆಯಾದ ಜರೀನಾ ಅವರ ಆಸಕ್ತಿ ನಂತರದ ದಿನಗಳಲ್ಲಿ ಮುದ್ರಣ ಕಲೆಯತ್ತ ಹೊರಳಿತು. ವುಡ್‍ಬ್ಲಾಕ್ ಮುದ್ರಣದತ್ತ ಚಿತ್ತ ಹರಿಸಿದ ಜರೀನಾ ಈ ಬಗ್ಗೆ ಬ್ಯಾಂಕಾಕ್ ಮತ್ತು ಟೋಕಿಯೋದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಇಷ್ಟಕ್ಕೇ ತೃಪ್ತಿಪಡದ ಜರೀನಾ ಅವರು ಪ್ಯಾರಿಸ್‍ನಲ್ಲಿ ಮುದ್ರಣ ಕಲೆಯ ಬಹಳ ಪ್ರಮುಖ ಘಟ್ಟವೆಂದೇ ಪರಿಗಣಿಸಲಾಗುತ್ತಿದ್ದ ಇಂಟಾಗ್ಲಿಯೋ ಟೆಕ್ನಿಕ್‍ಗಳತ್ತ ಗಮನ ಕೊಟ್ಟರು. ಪ್ಯಾರಿಸ್‍ನಲ್ಲಿದ್ದ ಇಂಗ್ಲಿಷ್ ಪೇಂಟರ್ ಮತ್ತು ಮುದ್ರಣ ಕಲೆಯ ತಜ್ಞರೆನಿಸಿಕೊಂಡಿದ್ದ ಸ್ಟ್ಯಾನ್ಲಿ ವಿಲಿಯಂ ಹಯ್ಟರ್ ಅವರ ಸ್ಟುಡಿಯೋದಲ್ಲಿ ಅಧ್ಯಯನ ನಡೆಸಿದರು. ಈ ಮೂಲಕ ವಿಶ್ವದ ಅನೇಕ ಘಟಾನುಘಟಿ ಕಲಾವಿದರೊಂದಿಗೆ ಬೆರೆತು ವಿಶೇಷ ಜ್ಞಾನ ಸಂಪಾದನೆ ಮಾಡಿಕೊಂಡರು.
ಜರೀನಾ ಅವರೇ ಹೇಳಿಕೊಂಡಿರುವಂತೆ ಅವರ ಬಾಲ್ಯದ ದಿನಗಳಲ್ಲಿ ಅವರಲ್ಲಿದ್ದ ಗಣಿತ ಮತ್ತು ವಾಸ್ತುಶಿಲ್ಪ ಶಾಸ್ತ್ರದ ಮೇಲಿದ್ದ ಆಸಕ್ತಿ ಮುಂದೆ ಅವರ ಕಲಾ ಜೀವನಕ್ಕೆ ಸಾಕಷ್ಟು ಸಹಕಾರಿಯಾಯಿತು. ಅಷ್ಟೇ ಅಲ್ಲ, ಇವರು ಮುಸ್ಲಿಂ ಮಹಿಳೆಯಾಗಿದ್ದರಿಂದ ಜಾಮಿಟ್ರಿಕಲ್ ವಿನ್ಯಾಸಗಳೇ ಹೆಚ್ಚಿರುವ ಇಸ್ಲಾಂ ವಾಸ್ತುಶಿಲ್ಪಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕೂ ಸಹಕಾರಿಯಾಯಿತು. ಅದರಲ್ಲೂ ಪ್ರವಾಸ ಪ್ರವೃತ್ತಿ ಇದಕ್ಕೆ ಪೂರಕವಾಗಿ ಕೆಲಸ ಮಾಡಿತು ಎನ್ನಬಹುದು.

“ಹ್ಯಾರಸೀಸ್” ಮ್ಯಾಗಝಿನ್ ನಂಟು
ತಾವು ಸಶಕ್ತರಾಗಿರುವ ದಿನಗಳವರೆಗೂ ನ್ಯೂಯಾರ್ಕ್‍ನಲ್ಲಿಯೇ ಕಲಾಸೇವೆ ಮುಂದುವರಿಸಿದ್ದ ಜರೀನಾ ಅವರ ಕಾರ್ಯವ್ಯಾಪ್ತಿ ಇಷ್ಟೇ ಅಲ್ಲ. ಯವ್ವನದ ದಿನಗಳಲ್ಲಿ ಸ್ಪುರದ್ರೂಪಿ ಸುಂದರಿಯಾಗಿದ್ದ ಜರೀನಾ ಅವರು ಜ್ಞಾನವೃದ್ಧಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. 1980ರಲ್ಲಿ ನ್ಯೂಯಾರ್ಕ್‍ನ ಫೆಮಿನಿಸ್ಟ್ ಆರ್ಟ್ ಇನ್‍ಸ್ಟಿಟ್ಯೂಟ್‍ನ ಸದಸ್ಯೆಯೂ ಆಗಿ ತಮ್ಮ ಅನುಭವಗಳನ್ನೂ ಕಲಾವಿದರ ಜೊತೆ ಹಂಚಿಕೊಳ್ಳುತ್ತಿದ್ದರು. ಇದೇ ಸಂಸ್ಥೆ ಪ್ರಕಟಿಸುತ್ತಿದ್ದ “ಹ್ಯಾರಸೀಸ್” ಮ್ಯಾಗಝಿನ್‍ನ ಸಂಪಾದಕೀಯ ಮಂಡಳಿಯಲ್ಲೂ ಕಾರ್ಯನಿರ್ವಹಿಸಿದ್ದರು. ಕಲೆಯ ನಾನಾ ಆಯಾಮಗಳನ್ನು ಪರಿಚಯಿಸಿಕೊಡುವಲ್ಲಿ ಹಾಗೂ ವಿಭಿನ್ನ ಓದು ಬೆಳೆಸಿಕೊಡುವಲ್ಲಿ ಜರೀನಾ ಅವರ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಯಿತು. ಈ ಮ್ಯಾಗಝಿನ್ ಇತಿಹಾಸದಲ್ಲೇ ಜರೀನಾ ಅವರಿ ವಿಶೇಷ ಗೌರವ ಸಲ್ಲುವಂತಾಯಿತು. ಕಾರಣ ಈ ಮ್ಯಾಗಝಿನ್‍ಗೆ ಸೇವೆ ಸಲ್ಲಿಸಿದ ಮೂರನೇ ಮಹಿಳಾ ಸದಸ್ಯೆ ಜರೀನಾ ಅವರಾಗಿದ್ದರು. ಇದು ಜರೀನಾ ಅವರ ಕಲಾ ಜೀವನಕ್ಕೂ ಒಂದು ವಿಶೇಷ ತಿರುವನ್ನೂ ನೀಡಿತು.

ಪ್ರಮುಖ ಪ್ರದರ್ಶನಗಳು
ವಿಶ್ವ ಕಲಾಕ್ಷೇತ್ರದಲ್ಲಿ ಶ್ರೇಷ್ಠ ಪ್ರದರ್ಶನಗಳ ಸಾಲಿನಲ್ಲಿ ಅಗ್ರವಾದುದು ವೆನಿಸ್ ಬಿನ್ನಾಲೆ ಪ್ರದರ್ಶನ. 2011ರ ವೆನಿಸ್ ಬಿನ್ನಾಲೆ ಆವೃತಿಯಲ್ಲಿ ಮೊದಲ ಬಾರಿಗೆ ನಾಲ್ವರು ಕಲಾವಿದರು ಭಾರತವನ್ನು ಪ್ರತಿನಿಧಿಸಿದ್ದು ಇತಿಹಾಸ. ಈ ನಾಲ್ವರಲ್ಲಿ ಜರೀನಾ ಅವರೂ ಒಬ್ಬರಾಗಿದ್ದರು. ಇನ್ನು 2012ರಲ್ಲಿ ಇವರ ಕಲಾಕೃತಿಗಳು ಲಾಸ್ ಏಂಜಲೀಸ್‍ನ ಪ್ರತಿಷ್ಠಿತ ಹಮ್ಮರ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಂಡವು. ಇದು ಅವರ ಕಲಾ ಜೀವನಕ್ಕೆ ವಿಶೇಷ ಮನ್ನಣೆ ದೊರಕುವಂತೆ ಮಾಡಿತು. ಚಿಕಾಗೋನ ಆಟ್ ಇನ್‍ಸ್ಟಿಟ್ಯೂಟ್ ಹಾಗೂ ಸೊಲೊಮಾನ್ ಆರ್.ಗುಗ್ಗೇನ್ಹಿಯಮ್ ಮ್ಯೂಸಿಯಂನಲ್ಲಿಯೂ ಜರೀನಾ ಅವರ ಕಲಾಕೃಗಳು ಪ್ರದರ್ಶನಗೊಂಡಿವೆ. ಅದರಲ್ಲೂ ಇವರ ಮುದ್ರಣ ಕಲಾಕೃತಿಗಳು ವಿಶ್ವದ ಶ್ರೇಷ್ಠ ಮುದ್ರಣ ತಜ್ಞರ ಗಮನ ಸೆಳೆದವು. ವಿಶ್ವದ ಅನೇಕ ರಾಷ್ಟ್ರಗಳ ಕಲಾ ಸಂಗ್ರಹಾಲಯಗಳಲ್ಲಿ ಜರೀನಾ ಅವರ ಕಲಾಕೃತಿಗಳಿವೆ.

ಜರೀನಾ ಹಶ್ಮಿ

Share This

Leave a Reply

Your email address will not be published. Required fields are marked *