• “BIRDSONG” ಕಲಾಪ್ರದರ್ಶನ ಹೃದಯಸ್ಪರ್ಶಿ
“Birds can survive without humans but a human can’t survive without birds”
Birdman of India ಖ್ಯಾತಿಯ ಪಕ್ಷಿ ತಜ್ಞ ಸಲಿಂ ಅಲಿ ಅವರ ಮಾತಿದು. ಪಕ್ಷಿಗಳಿಲ್ಲದೇ ಮನುಷ್ಯ ಖಂಡಿತವಾಗಿ ಬದುಕಲಾರ. ಆದರೆ ಪಕ್ಷಿಗಳು ಮನುಷ್ಯನಿಲ್ಲದೇ ಬದುಕಬಲ್ಲವು. ಈ ಸತ್ಯವನ್ನು ಅರಿಯದ ಮಾನವ ಪಕ್ಷಿಗಳ ಆವಾಸ ಸ್ಥಾನಗಳಿಗೇ ಮಾರಕವಾಗಿದ್ದಾನೆ. ಸಂರಕ್ಷಣೆಯ ಹೆಸರಲ್ಲಿ ಏನೇನೋ ಕಾರ್ಯಗಳಿಗೆ ಇಳಿಯುವ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದು ಧರೆಗುರುಳಿಸಿದ ಉದಾಹರಣೆಗಳು ನೂರಾರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ವಿಕಿರಣದ ಪರಿಣಾಮ ನೂರಾರು ಜಾತಿಯ ಪಕ್ಷಿಗಳು ಕಣ್ಮರೆಯಾಗಿವೆ.
ಈ ಸಂಗತಿಯನ್ನು ಮತ್ತಿಲ್ಲಿ ಪ್ರಸ್ತಾಪಿಸಲು ಪ್ರಮುಖ ಕಾರಣವಾಗಿದ್ದು ಕಲಾವಿದ ಮನೀಶ್ ಚಾವ್ಡಾ (Manish Chavda) ಅವರ ಕಲಾಕೃತಿಗಳು. ಬೆಂಗಳೂರಿನ ಕಿಂಕಿಣಿ ಗ್ಯಾಲರಿಯಲ್ಲಿ ” BIRDSONG ” ಶೀರ್ಷಿಕೆಯಡಿ ಪ್ರದರ್ಶಿಸಲ್ಪಟ್ಟ ಮನೀಶ್ ಅವರ ಕಲಾಕೃತಿಗಳು ವೈಯುಕ್ತಿಕವಾಗಿ ನನಗೆ ಆಪ್ತವೆನಿಸುವಂತವು.
ಸೀಮಿತ (limited) ಬಣ್ಣಗಳಿಂದ ತಮ್ಮದೇ ಶೈಲಿಯಲ್ಲಿ ಹೂ, ಬಳ್ಳಿ, ಎಲೆಗಳ ನಡುವೆ ವಿರಮಿಸುವ ಪಕ್ಷಿಗಳನ್ನು ರಚಿಸಿ ಪ್ರಕೃತಿ ಪ್ರಿಯರಿಗೆ, ವನ್ಯಜೀವಿ ಪ್ರಿಯರಿಗೆ ಆಪ್ತವೆನಿಸುವ ಆಹ್ಲಾದಕರ, ಮನೊಹರ ಕಲಾಕೃತಿಗಳನ್ನು ರಚಿಸುತ್ತಾರೆ. ಅಲಂಕಾರ ಪ್ರಧಾನವೆನಿಸುವ ಕಲಾಕೃತಿಗಳು ಆಧುನಿಕತೆಯ ಪ್ರಭಾವ ಕಾಣಿಸುವುದಿಲ್ಲ. ಬಹುಶಃ ಕುತೂಹಲಕ್ಕೂ ಚೌಕಟ್ಟು ಮೀರುವ ದುಸ್ಸಾಹಸ ಮಾಡಲಾರರು ಅನಿಸಿಬಿಡುತ್ತವೆ. ನಯವಾದ ಕುಂಚದ ಬೀಸು (brush stroke) ನೋಡುಗರ ಮನಕರಗಿಸುವ, ಸ್ಪಂದಿಸುವ, ಕಲಾಕೃತಿಗಳ ಜೊತೆ ಮಾತುಕತೆಗೆ ಇಳಿಯಬೇಕೆನ್ನಿಸುವ ಭಾವ ಮೂಡಿಸುತ್ತವೆ. ಬಹಳ ಸರಳ, ಸಾಮಾನ್ಯವೆನಿಸುವ ವಸ್ತು ವಿಷಯವನ್ನೇ ಬಳಸಿ ರಚಿಸುವ ಕಲಾಕೃತಿಗಳು ಪ್ರೇರೇಪಿಸುತ್ತವೆ. ಸಮಕಾಲೀನ ವರ್ಣ ಬಳಕೆ, ಸಂಯೋಜನೆ ಹೃದಯಸ್ಪರ್ಶಿ.
Friends, ಈ ಕಲಾಪ್ರದರ್ಶನ ಜೂನ್ 14ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.