ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು!

Share This

  • ‘ಕಲಬುರಗಿ ಕಲಾ ದರ್ಶನ’ ಒಂದೊಳ್ಳೆ ಪ್ರದರ್ಶನ
  • ನೀವೂ ರಂಗೋಲಿ ಮೆಟ್ರೋಗೆ ಒಮ್ಮೆ ಹೋಗಿ ಬನ್ನಿ

ಕರ್ನಾಟಕದ ಕಲಾಪರಂಪರೆ ಅಥವಾ ಇತಿಹಾಸವನ್ನು ಅವಲೋಕಿಸಿದಾಗ ರಾಜ್ಯದ ಉದ್ದಗಲಕ್ಕೂ ವಿಭಿನ್ನ ಕಲಾಪ್ರಕಾರಗಳನ್ನು ಕಾಣಲು ಸಾಧ್ಯವಿದೆ. ವೈವಿಧ್ಯಮಯ ಶೈಲಿಗಳ ಮೂಲಕ ಇಲ್ಲಿನ ಕಲಾ ಪ್ರಕಾರಗಳು ಪರಿಚಯವಾಗಿರುವುದನ್ನು ಕಾಣುತ್ತೇವೆ. ಬೀದರ, ಕಲಬುರಗಿ, ವಿಜಯಪುರ, ಯಾದಗಿರಿಯಿಂದ ಹಿಡಿದು ಕೊಡಗು, ಮೈಸೂರು, ಚಾಮರಾಜನಗರದ ತನಕವೂ ವಿಭಿನ್ನ ಶೈಲಿಯ ಕಲಾಪ್ರಕಾರಗಳು ಜನಮನ್ನಣೆ ಗಳಿಸಿವೆ. ಆದಿವಾಸಿ, ಜನಪದ ಸೇರಿದಂತೆ ಸಮಕಾಲೀನ ಕಲಾಸಂದರ್ಭದ ಅನೇಕ ಶೈಲಿಗಳ ಮೂಲಕ ಇಲ್ಲಿನ ಕಲಾವಿದರು ಜನಪ್ರಿಯತೆ ಗಳಿಸಿದ್ದಾರೆ. ಕೂಲಂಕಷವಾಗಿ ಗಮನಿಸಿದರೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಭಿನ್ನತೆಯಿಂದ ಕೂಡಿರುವ, ಪ್ರಾದೇಶಿಕತೆಯ ಸೊಬಗು ಹಾಸುಹೊಕ್ಕಿರುವ ಕಲಾಪ್ರಕಾರಗಳು ಅನೇಕ. ಇಂದಿಗೂ ಕರ್ನಾಟಕದಲ್ಲಿ ಈ ವೈವಿಧ್ಯತೆ ಗುರುತಿಸಬಹುದು. ಜೀವನ ಕ್ರಮದಲ್ಲಿಯೇ ಅಚ್ಚರಿ ಅನಿಸುವಂತಹ ವೈವಿಧ್ಯತೆ. ಸಮಕಾಲೀನ ದೃಶ್ಯಕಲಾ ಸಂದರ್ಭದಲ್ಲಿಯೂ ಈ ಪ್ರಭಾವ ಇದ್ದು, ಆ ನೆಲದ ಗುಣವೇ ಅಷ್ಟು ಗಟ್ಟಿಯಾಗಿರುವುದಕ್ಕೆ ಈ ತಲೆಮಾರಿನ ಕಲಾವಿದರ ಕಲಾಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.

ಬೆಂಗಳೂರಿನ ರಂಗೋಲಿ ಮೆಟ್ರೋ ಗ್ಯಾಲರಿಗಳಲ್ಲಿ ‘ಕಲಬುರಗಿ ಕಲಾ ದರ್ಶನ’ ಶೀರ್ಷಿಕೆಯಡಿ ನಡೆಯುತ್ತಿರುವ ಕಲಾಪ್ರದರ್ಶನ ಇದಕ್ಕೊಂದು ಅತ್ಯುತ್ತಮ ನಿದರ್ಶನ. ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಈ ಕಲಾಪ್ರದರ್ಶನ ಆಯೋಜಿಸಿದ್ದು, ತನ್ನ ಸಂಗ್ರಹದಲ್ಲಿನ ಅನೇಕ ಹಿರಿಯ ಮತ್ತು ಉತ್ತರ ಕರ್ನಾಟಕ ಭಾಗದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿದೆ. ಇಲ್ಲಿನ ಮೂರು ಗ್ಯಾಲರಿಗಳಲ್ಲಿ 50ಕ್ಕೂ ಹೆಚ್ಚು ಕಲಾವಿದರ 140ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದೊಂದು ಗಮನಾರ್ಹ ಮತ್ತು ಮಹತ್ವ ಪಡೆದುಕೊಳ್ಳಬಹುದಾದ ಕಲಾಪ್ರದರ್ಶನ. ಈ ಭಾಗದ ಇನ್ನೂ ಅನೇಕ ಕಲಾವಿದರ ಕಲಾಕೃತಿಗಳು ಇಲ್ಲವಾಗಿರಬಹುದು, ಆದರೆ ದೃಶ್ಯ ಬೆಳಕು ಸಂಸ್ಥೆ ಇಂತಹದ್ದೊಂದು ಶ್ಲಾಘನೀಯ ನಡೆಗೆ ಚಾಲನೆ ಕೊಟ್ಟಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ, ಇನ್ನುಳಿದ ಕಲಾವಿದರ ಕಲಾಕೃತಿಗಳೂ ರಾಜಧಾನಿಯಲ್ಲಿ ಇನ್ನಷ್ಟು ಪ್ರದರ್ಶನ ಕಾಣುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯಬೇಕಿದೆ.

“ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|” ಎಂದು ನಮ್ಮ ಹೆಮ್ಮೆಯ ಡಿ.ವಿ.ಗುಂಡಪ್ಪನವರು ಹೇಳಿರುವಂತೆ ‘ಕಲಬುರಗಿ ಕಲಾ ದರ್ಶನ’ದಲ್ಲಿ ಒಂದಿಷ್ಟು ಹಿರಿಯ ಕಲಾವಿದರ, ಇನ್ನೊಂದಿಷ್ಟು ಕಿರಿಯ ಕಲಾವಿದರ ಕಲಾಕೃತಿಗಳನ್ನು ನೋಡಲು ಸಾಧ್ಯವಾಯಿತು. ಬಹುಶಃ ಮೂರು ಅಥವಾ ನಾಲ್ಕು ತಲೆಮಾರಿನ ಕಲಾವಿದರ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಒಂದರ್ಥದಲ್ಲಿ ಗುರು ಶಿಷ್ಯರ ಸಂಗಮವೇ ಈ ಪ್ರದರ್ಶನದ ವಿಶೇಷತೆ. ಅಷ್ಟೇ ಅಲ್ಲ, ಪ್ರದರ್ಶನದ ಪ್ರಾಮುಖ್ಯತೆ ಕೂಡ.

ಕರ್ನಾಟಕದ ಕಲಾಪರಂಪರೆಗೆ ಕಲಬುರಗಿ ಒಳಗೊಂಡಂತೆ ಆ ಭಾಗದ ಕಲಾವಿದರ ಕೊಡುಗೆ ಅಪಾರವಾದುದು. ಸಾಕಷ್ಟು ಪ್ರತಿಭಾವಂತ ಕಲಾವಿದರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಲಾಪ್ರದರ್ಶನದಲ್ಲಿ ಪ್ರದರ್ಶಿತ ಕೆಲವು ಕಲಾವಿದರ ಕಲಾಕೃತಿಗಳನ್ನು ಗಮನಿಸಿದಾಗ ಉಜ್ವಲ ಭವಿಷ್ಯ ಇರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದಕ್ಕೆ ಪೂರಕವಾದ ಪ್ರಾಮಾಣಿಕ ಪ್ರಯತ್ನ ಈ ಯುವ ಕಲಾವಿದರಿಂದ ಆಗಬೇಕಿದೆ. ಇಂತಹ ವೇದಿಕೆಗಳು ಇಲ್ಲಿನ ಯುವ ಕಲಾವಿದರಿಗೆ ಸೃಷ್ಟಿಯಾಗಬೇಕಿದೆ. ಕಲಾವಿದರು, ಕಲಾಶಿಕ್ಷಕರು, ಕಲಾ ಸಂಘಟಕರೂ ಆಗಿರುವ ಡಾ.ಪರಶುರಾಮ್ ಪಿ. ಅವರನ್ನೊಳಗೊಂಡಿರುವ ದೃಶ್ಯ ಬೆಳಕು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಈ ಪ್ರಯತ್ನಕ್ಕೆ ಅಭಿನಂದನಾರ್ಹರು. ಸಂಸ್ಥೆಯನ್ನು ಬೆಳೆಸುವ ದೃಷ್ಟಿಯಿಂದಲೂ ಇಂತಹ ಕಾರ್ಯಗಳು ಅಗತ್ಯವೆನಿಸಿಕೊಳ್ಳುತ್ತವೆ. ಒಂದೇ ಸೂರಿನಡಿಯಲ್ಲಿ ಇಷ್ಟೊಂದು ಕಲಾಕೃತಿಗಳನ್ನು ದೂರದ ಕಲಬುರಗಿಯಿಂದ ಬೆಂಗಳೂರಿಗೆ ತಂದು ಪ್ರದರ್ಶಿಸಲು ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆ ಹೇಳೋಣ.

ಸ್ನೇಹಿತರೆ, ‘ಕಲಬುರಗಿ ಕಲಾ ದರ್ಶನ’ ಸಮೂಹ ಕಲಾಪ್ರದರ್ಶನವೂ ಅಕ್ಟೋಬರ್ 6, ಸೋಮವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 

 


Share This

Leave a Reply

Your email address will not be published. Required fields are marked *