ಇದೊಂದು ಸಮಯೋಚಿತ, ಅಗತ್ಯ ಕಾರ್ಯಕ್ರಮ

Share This

ಆಸಕ್ತಿಯ ಕಾರಣಕ್ಕಾಗಿ ಮುಂದುವರಿದ ಕಲಿಕೆ, ಕ್ಷೇತ್ರ ವ್ಯಾಪ್ತಿಯ ಸಂಪೂರ್ಣ ಅರಿವಿಲ್ಲ, ತಮಗೆ ಸ್ಫೂರ್ತಿಯಾದವರಂತೆ ತಾವೂ ಆಗಬೇಕೆನ್ನುವ ಕನಸು, ಬದುಕು ಕಟ್ಟಿಕೊಳ್ಳಬೇಕು ಆದರೆ ಹೇಗೆ ಎಂದು ಕಾಡುವ ಪ್ರಶ್ನೆ… ನಡುವೆ ಒಂದಿಷ್ಟು ನಗು, ಗಂಭೀರತೆಯ ಭಾವ ಮತ್ತು ಮೌನ!
ಎಲ್ಲರಿಗೂ ಈ ಹಂತ ದಾಟಿಯೇ ಮುಂದೆಜ್ಜೆ ಇಡಬೇಕು. ದ್ವಂದ್ವದ ನಡುವೆಯೇ ಉತ್ತರ ಕಂಡುಕೊಳ್ಳಬೇಕು. ‘ವಿದ್ಯಾರ್ಥಿ ಜೀವನದ ಸೊಗಸು’ ಅದು ಅನಿಸುತ್ತೆ. ಅನುಭವಕ್ಕೆ ಬಂದು ಹೋದಾಗಲೇ ವಿದ್ಯಾರ್ಥಿ ಪಕ್ವವಾಗುತ್ತಾ, ವೃತ್ತಿಪರತೆಯ ಕಡೆ ನಡೆಯುತ್ತಾ ಮುಂದೊಂದು ದಿನ ವೃತ್ತಿಪರನಾಗಿ ನಿಲ್ಲುತ್ತಾನೆ. ಪ್ರಯತ್ನಕ್ಕೆ ತಕ್ಕ ಫಲ ಅವರದ್ದಾಗಲಿದೆ.
ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿರುವ ಕಲಾಮಾಲಾ ಆರ್ಟ್ ಫೌಂಡೇಷನ್ ಇಂತಹದ್ದೊಂದು ಆಪ್ತವೆನಿಸುವ ಕಾರ್ಯಕ್ರಮ ಆಯೋಜಿಸಿತ್ತು. ಈ ಫೌಂಡೇಶನ್ ಸಾರಥಿ ಗಣೇಶ್ ದೊಡ್ಡಮನಿ ಅವರು ಅತ್ಯಂತ ಜವಾಬ್ದಾರಿ ಕೆಲಸಕ್ಕೆ ಮುಂದಾದರು ಅನಿಸಿತು. ಕಾರಣ ಅಲ್ಲಿರುವ ಯುವ ಮಿತ್ರರ ಹುಡುಕಾಟದ ಅರಿವಾದಾಗ ಈ ಕಾರ್ಯಕ್ರಮಗಳು ಎಷ್ಟು ಮುಖ್ಯವಾಗುತ್ತವೆ ಅನಿಸಿತು. ನಾವು ಅನುಭವಿಸಿ ಬಂದಿರುವ ತೊಂದರೆಗಳನ್ನು ಇಂದಿನ ಯುವ ಮನಸ್ಸುಗಳು ಎದುರಿಸುವಂತೆ ಆಗಬಾರದು ಎನ್ನುವ ಪ್ರಾಮಾಣಿಕ ಕಳಕಳಿ ಅಲ್ಲಿತ್ತು. ಮಿತ್ರರೆಲ್ಲರೂ ಅತ್ಯಂತ ಮುಕ್ತವಾಗಿಯೇ ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಇದೊಂದು helpful discussion ಆಗಿತ್ತು.
ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಕಲಾಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ Sheelvanth Yadgiri RS ಮತ್ತು ಕಲೆಯನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಅನುಭವಿ ಕಲಾವಿದ Lakshman LK ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ವೃತ್ತಿಬದುಕಿಗಾಗಿ ಕಲೆಯನ್ನು ಆಯ್ಕೆಮಾಡಿಕೊಂಡವರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಅವರಲ್ಲಿನ ಗೊಂದಲಗಳನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ವೇಣುಗೋಪಾಲ ಎಚ್.ಎಸ್., ಗಣೇಶ್ ದೊಡ್ಡಮನಿ ಅವರಿದ್ದರು.
ಇದೊಂದು ಸಮಯೋಚಿತ, ಅಗತ್ಯ ಕಾರ್ಯಕ್ರಮ. ಇಂದಿನ ವಿದ್ಯಾರ್ಥಿಗಳಿಗೆ, ಯುವ ಕಲಾವಿದರಿಗೆ ಅಗತ್ಯವಾಗಿ ಬೇಕಾದದ್ದೇ ಸೂಕ್ತ ಮಾರ್ಗದರ್ಶನ. ಜೀವನೋಪಾಯಕ್ಕೆ ಬೇಕಾದುದೆಲ್ಲವೂ ಕಾಲೇಜುಗಳಲ್ಲೇ ಲಭ್ಯವಾಗುವುದಿಲ್ಲ. ವಿಶ್ವವಿದ್ಯಾಲಯಗಳಲ್ಲೂ ಲಭ್ಯವಾಗದ ಅನೇಕ ವಾಸ್ತವಾಂಶಗಳನ್ನು ಅರಿಯಬೇಕಾದ ಅನಿವಾರ್ಯತೆ ಇದೆ. ಬೇಕು-ಬೇಡಗಳನ್ನು ವಿದ್ಯಾರ್ಥಿಗಳು, ಯುವಕರು ತಮ್ಮ ಅನುಭವಕ್ಕೆ ತಂದುಕೊಂಡೇ ನಿರ್ಧರಿಸಿಕೊಳ್ಳುವ ಕಾಲಘಟ್ಟ ಇದು.
ಇತ್ತೀಚಿಗೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಓದಿ ಬಂದಿರುವ ಇಬ್ಬರು ಯುವ ಕಲಾವಿದರು ಅಲ್ಲಿನ ಉಪನ್ಯಾಸಕರು ಹಂಚಿಕೊಂಡಿರುವ ಮಾಹಿತಿಯಲ್ಲಿನ ಲೋಪದೋಷಗಳ ಬಗ್ಗೆ ಪ್ರಶ್ನಿಸಿದ್ದರು. ಅಂದರೆ, ಇಂದು ತಾಂತ್ರಿಕವಾಗಿ ನಾವು ಬಹಳಷ್ಟು ಬೆಳೆದಿದ್ದೇವೆ. ಮಾಹಿತಿ ಬೆರಳ ತುದಿಯಲ್ಲಿ ಲಭ್ಯ. ಎದುರಲ್ಲೇ fact check ಮಾಡಿಬಿಡಬಹುದಾದ ಕಾಲದಲ್ಲಿ ಇದ್ದೇವೆ. ಈ ಜಾಗ್ರತೆ ಉಪನ್ಯಾಸಕರೂ ಇಟ್ಟುಕೊಳ್ಳಬೇಕಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಯುವ ಮಿತ್ರರಿಗೆ ಒಳಿತಾಗಲಿ. ಕುಳಿತು ಕೇಳಿಸಿಕೊಳ್ಳಲು ನನಗೂ ಒಂದು ಅವಕಾಶ ಸಿಕ್ಕಿತು.
ಧನ್ಯವಾದಗಳು 🙏

Share This

Leave a Reply

Your email address will not be published. Required fields are marked *