ಇಂಡಿಯಾ ಪೆವಿಲಿಯನ್ ಗೆ ‘Visitors Lion’ ಪ್ರಶಸ್ತಿ!

Share This

• ವೆನಿಸ್ ಬೆನಾಲೆಯಲ್ಲಿ ಭಾರತೀಯ ಕಲಾವಿದರ ಕಲಾಕೃತಿಗಳಿಗೆ ಜನಮೆಚ್ಚುಗೆ
• ಭಾರತೀಯ ಗುಂಪಿನಲ್ಲಿ ಕನ್ನಡತಿ ರಂಜನಿ ಇರುವುದು ನಮಗೆಲ್ಲರಿಗೆ ಹೆಮ್ಮೆ

ಭಾರತೀಯರ ಕಲಾ ಸಮುದಾಯ ಖುಷಿಯಿಂದ ಸಂಭ್ರಮಿಸಬೇಕಾದ ಸಮಯವಿದು!
ಕಾರಣ, ಪ್ರಪಂಚದ ‘ವಾಟರ್ ಸಿಟಿ’ ಎಂಬ ಖ್ಯಾತಿಗೆ ಪಾತ್ರವಾದ ಇಟಲಿಯ ವೆನಿಸ್ ನಗರದಲ್ಲಿ ನಡೆಯುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕಲಾಪ್ರದರ್ಶನದಲ್ಲಿ ಭಾರತೀಯ ಕಲಾವಿದರ ತಂಡ ನಾವೆಲ್ಲ ಹೆಮ್ಮೆಪಡುವ ಸಾಧನೆ ಮಾಡಿದೆ. ಕರ್ನಾಟಕದ ಕಲಾವಿದೆ ರಂಜನಿ ಶೆಟ್ಟರ್ (Ranjani Shettar) ಸೇರಿದಂತೆ ದೆಹಲಿಯ ಆಸಿಮ್ ವಾಕಿಫ್ (Asim Waqif), ತಮಿಳುನಾಡು ಮೂಲದ ಅಲ್ವರ್ ಮಾಲಸುಬ್ರಮಣಿಯಂ (Alwar Balasubramaniam), ದೆಹಲಿಯ ಸುಮಾಕ್ಷಿ ಸಿಂಗ್ (Sumakshi Singh) ಮತ್ತು ಲಡಾಕ್ನ ಸ್ಕರ್ಮ ಸೋನಮ್ ತಾಶಿ (Skarma Sonam Tashi) ಅವರ ಕಲಾಕೃತಿಗಳು 61ನೇ ವೆನಿಸ್ ಆರ್ಟ್ ಬೆನಾಲೆಯಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ‘ಇಂಡಿಯಾ ಪೆವಿಲಿಯನ್’ ವಿಭಾಗದ ‘Geographies of Distance: Remembering Home’ ಶೀರ್ಷಿಕೆಯ ಪ್ರದರ್ಶನಕ್ಕೆ ಪ್ರತಿಷ್ಠಿತ ‘Best National Pavilion – Visitors Lion’ ಪ್ರಶಸ್ತಿ ಲಭಿಸಿದೆ. ಮೇ 9ರಂದು ಆರಂಭವಾದ ಕಲಾಪ್ರದರ್ಶನ ನವೆಂಬರ್ 22ರಂದು ಸಂಪನ್ನವಾಗಿದೆ. ಲಂಡನ್ ಮೂಲದ ಅಮಿನ್ ಜಫರ್ ಅವರು ಭಾರತೀಯ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದರು.

ನಾವು ಕನ್ನಡಿಗರು ಕೇವಲ ಸಿನಿಮಾ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಆದಾಗ ಅಥವಾ ಸಾಧನೆ ಮಾಡಿದಾಗ ಎಷ್ಟು ಖುಷಿಯಿಂದ ಸಂಭ್ರಮಿಸುತ್ತೇವೆ. ಆದರೆ ಇದೇ ಸಂಭ್ರಮ ಕಲಾಸಮುದಾಯ ಕನ್ನಡಿಗ ಅಥವಾ ಕನ್ನಡತಿ ಸಾಧನೆ ಮಾಡಿದಾಗಲೂ ವ್ಯಕ್ತವಾಗಬೇಕು. ಈ ಸಮಯ ಈಗ ಸಿಕ್ಕಿದೆ. ನಮ್ಮ ಸಂಭ್ರಮಕ್ಕೆ ಎರಡು ಕಾರಣ. ಒಂದು ಭಾರತೀಯ ಕಲಾವಿದರು ಈ ಸಾಧನೆ ಮಾಡಿದರು ಎನ್ನುವುದು, ಇನ್ನೊಂದು ಸಾಧಕ ಕಲಾವಿದರಲ್ಲಿ ಕನ್ನಡತಿಯೊಬ್ಬರು ಇದ್ದಾರೆ ಎನ್ನುವುದು. ಹೌದು, ಇಂಡಿಯಾ ಪೆವಿಲಿಯನ್ ವಿಭಾಗದಲ್ಲಿ ಪ್ರದರ್ಶಿತ ಕಲಾವಿದರಲ್ಲಿ ರಂಜನಿ ಶೆಟ್ಟರ್ ಕೂಡ ಒಬ್ಬರಾಗಿದ್ದು, ಅವರು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಅಧ್ಯಯನ ನಡೆಸಿದವರಾಗಿದ್ದಾರೆ. 1977ರಲ್ಲಿ ಜನಿಸಿರುವ ರಂಜನಿ ಅವರು, 1998ರಲ್ಲಿ ಬಿಎಫ್ಎ, 2000ರಲ್ಲಿ ಎಫ್ಎಫ್ಎ ಪದವಿ ಪಡೆದುಕೊಂಡು ಪೂರ್ಣಕಾಲಿಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಕೈಗಾರಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಬೃಹತ್ ಶಿಲ್ಪ, ಪ್ರತಿಷ್ಠಾಪನಾ ಕಲಾಕೃತಿಗಳನ್ನು ರಚಿಸುವುದು ಇವರ ವಿಶೇಷತೆಯಾಗಿದೆ. ಸಾಕಷ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.

ವೆನಿಸ್ ಬಿನಾಲೆಯ ‘Geographies of Distance: Remembering Home’ ಶೀರ್ಷಿಕೆಯ ಪ್ರದರ್ಶನದಲ್ಲಿ ರಂಜನಿ ಶೆಟ್ಟರ್ ಅವರ ‘Under the Same Sky’ ಶೀರ್ಷಿಕೆಯ ಪ್ರತಿಷ್ಠಾಪನಾ ಕಲಾಕೃತಿ ಪ್ರದರ್ಶಿಸಲ್ಪಟ್ಟಿತ್ತು. ಕೈ ನೇಯ್ಗೆಯ ಖಾದಿ ಬಟ್ಟೆ (Handwoven cotton fabric), ಸ್ಟೀಲ್ (steel), ಮತ್ತು ಮೆರುಗೆಣ್ಣೆ (lacquer) ಬಳಸಿ ಈ ಕಲಾಕೃತಿ ರಚಿಸಿದ್ದರು. ಎಲೆ, ಹೂವು, ಮೊಗ್ಗುಗಳನ್ನು ಒಳಗೊಂಡಿರುವ ಈ ಬಳ್ಳಿಯನ್ನು ನೇತಾಬಿದ್ದಿರುವಂತೆ ಪ್ರತಿಷ್ಠಾಪಿಸಲಾಗಿತ್ತು. ಇದೊಂದು ಅಲೌಕಿಕ ದೃಶ್ಯ ಸಂಯೋಜನೆ ಆಗಿತ್ತು. ನಿಸರ್ಗದ ಸುಂದರ, ಭಾವನಾತ್ಮಕ ವಾತಾವರಣ ರೂಪುಗೊಳ್ಳುವಂತೆ, ಗ್ಯಾಲರಿಯ ಕಂಪನ ಹೆಚ್ಚುವಂತೆ ಪ್ರದರ್ಶಿಸಲಾಗಿತ್ತು.

ಇದೀಗ ಭಾರತೀಯ ಕಲಾವಿದರಿಗೆ ಸಂದ ಗೌರವಕ್ಕೆ ಈ ಮೊದಲು ‘ಗೋಲ್ಡನ್ ಲಯನ್ಸ್/ Golden Lions ‘ ಎಂದು ಕರೆಯಲಾಗುತ್ತಿತ್ತು. ವೈಯಕ್ತಿಕವಾಗಿ ಒಬ್ಬ ಕಲಾವಿದಗೆ ಮತ್ತು ಪೆವಿಲಿಯನ್ಗೆ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ವೈಯಕ್ತಿಕ ಕಲಾವಿದರೊಬ್ಬರಿಗೆ ನೀಡಲಾಗುವ ಪ್ರಶಸ್ತಿಯನ್ನು ಅಮೆರಿಕದ ನಿಕ್ ಕೇವ್ (Nick Cave) ಕಲಾಕೃತಿಗೆ ನೀಡಲಾಗಿದೆ.

 

 

 

 

 

 

 


Share This

Leave a Reply

Your email address will not be published. Required fields are marked *