• ಚಿತ್ರಕಲಾ ಪರಿಷತ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಹುಡುಕಾಟ
Yes, ಹೊಸತನದ ಹುಡುಕಾಟದಲ್ಲಿ ಯುವ ಕಲಾ ಸಮುದಾಯ ಒಂದೆಜ್ಜೆ ಮುಂದಿದೆ. ಸಮಕಾಲೀನ (contemporary) ಮತ್ತು ಸಮಕಾಲೀನೋತ್ತರ (post contemporary) ಸಂದರ್ಭದ ಕಲಾಭಿವ್ಯಕ್ತಿಯನ್ನು ಬಹಳ ಚೆನ್ನಾಗಿ ಅರ್ಥೈಸಿಕೊಳ್ಳುವ ಮೂಲಕ ವಿಭಿನ್ನ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಅವಕಾಶಗಳನ್ನು ವಿಪುಲವಾಗಿ ಬಳಸಿಕೊಂಡಿದ್ದು, ಭರವಸೆಯ ಬೆಳಕು ಚೆಲ್ಲಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ನಡೆದ ಕಾಲೇಜ್ ಆಫ್ ಫೈನ್ ಆರ್ಟ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಕಲಾಪ್ರದರ್ಶನ ಕಳೆದವಾರ ನಡೆಯಿತು. ನಿಜಕ್ಕೂ ಒಂದು ಅಚ್ಚರಿ ಮೂಡಿದ್ದು ನಿಜ. ಈಗಷ್ಟೇ ಬಿವಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆಲೋಚನಾ ಲಹರಿ ಇಂದಿನ ಕಲಾ ಮಾಧ್ಯಮದಲ್ಲಿ ಹೊಸದೊಂದು ಹುಟ್ಟಿಗೆ ಕಾರಣವಾದೀತು ಅನಿಸುವಂತಿತ್ತು. ಕೆಲವು ವಿದ್ಯಾರ್ಥಿಗಳ ಕಲಾಕೃತಿಗಳು ಬಹಳ ವಿಭಿನ್ನವೆನಿಸುವ ಕಲಾಕೃತಿಗಳೇ ಆಗಿದ್ದವು. ಮಾಧ್ಯಮಗಳ ಬಳಕೆ, ತಂತ್ರಗಾರಿಕೆ, ಮೈವಳಿಕೆ, ವಸ್ತು ವಿಷಯಕ್ಕೆ ನೀಡಲಾಗುವ ಮಹತ್ವ ಆಪ್ತವೆನಿಸುವಂತೆ ಇತ್ತು.
ಪ್ರತಿಯೊಬ್ಬ ವಿದ್ಯಾರ್ಥಿಯ ಕಲಾಕೃತಿ ರಚನೆಯಲ್ಲಿನ ಆಸಕ್ತಿ, ಭಿನ್ನ ದೃಷ್ಟಿಕೋನ ನೋಡುಗ ಎದುರುನಿಂತು ಯೋಚಿಸುವಂತೆ ಮಾಡಿತು. ಕೆಲವು ಕಲಾಕೃತಿಗಳು ಕೊಂಚ ಮೃದು ಅನಿಸಿದವು. ಉಳಿದಂತೆ ಬಹಳ ಸೊಗಸಾದ, ಜಾಣ್ಮೆಯ ನಿರ್ವಹಣೆಯನ್ನು ಕಲಾಕೃತಿಗಳಲ್ಲಿ ನೋಡಲು ಸಾಧ್ಯವಾಯಿತು.
ವಿದ್ಯಾರ್ಥಿಗಳಲ್ಲಿ ಹೊಸತನದ ಅಭಿರುಚಿಯ ಬಗ್ಗೆ ತಿಳವಳಿಕೆ ನೀಡಿ, ಅರ್ಥಮಾಡಿಸಿ ಕಲಾಕೃತಿ ಹುಟ್ಟುವಂತೆ ಮಾಡಿದ್ದು ಕಲಾಶಿಕ್ಷಕರು. ಬೆರಳೆಣಿಕೆಯಷ್ಟು ಕಲಾಕೃತಿ ಹೊರತು ಪಡಿಸಿ ಉಳಿದೆಲ್ಲವೂ ಉತ್ತಮವೆನಿಸಿದವು. ಕಲಾವಿದರಾಗಬೇಕೆನ್ನುವ ಕನಸು ಹೊತ್ತ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಶುಭವಾಗಲಿ 
