• ಡಿಟೇಲ್ ಆರ್ಚಿಸ್ಟ್ ಗ್ಯಾಲರಿಯಲ್ಲಿ ಕಲಾಪ್ರದರ್ಶನ
ಹೊಸತನ, ಹೊಸ ಅರ್ಥ, ಹೊಸ ಆಯಾಮದ ಚಿಂತನೆ, ಹೊಸ ತರಹದ ಚರ್ಚೆ ಎಲ್ಲವೂ ನಡೆಯಬೇಕು. ಯೋಚಿಸಿದ್ದನ್ನು, ಚಿಂತಿಸಿದ್ದನ್ನು, ಅರ್ಥೈಸಿದ್ದನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವಾಗ ಅಥವಾ ಪ್ರದರ್ಶಿಸುವಾಗ ಎಚ್ಚರಿಕೆಯೂ ಇರಬೇಕು. ಅನೇಕ ಸಂದರ್ಭಗಳಲ್ಲಿ ಇದರಲ್ಲಾಗುವ ಲೋಪಗಳು, ಕಲಾಕೃತಿಗಳಲ್ಲಿನ ಅಪಕ್ವತೆ (immaturity) ಅಲ್ಲಿನ ಕಲಾಕೃತಿಗಳ ಮೇಲೆ, ಕಲಾ ಪ್ರದರ್ಶನದ ಮೇಲೆ, ವೇದಿಕೆಯ (platform) ಮೇಲೆ ಮತ್ತು ಕ್ಯುರೇಟ್ ಮಾಡಿರುವವರ ಮೇಲೆ ಬಲವಾದ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಈ ಜಾಗ್ರತೆ, ಎಚ್ಚರಿಕೆ ಇರಬೇಕಾಗುತ್ತದೆ.
ಬೆಂಗಳೂರಿನ ಡಿಟೇಲ್ ಆರ್ಚಿಸ್ಟ್ (DTALE ARCHIST) ಗ್ಯಾಲರಿಯಲ್ಲಿ ನಡೆಯುತ್ತಿರುವ ಕಲಾಪ್ರದರ್ಶನ ನೋಡುವ ಸಂದರ್ಭದಲ್ಲಿ ಯಾಕೋ ಹೀಗನ್ನಿಸಿತು. ಖ್ಯಾತ ಕಲಾವಿದ ಮತ್ತು ಕ್ಯುರೇಟರ್ ಬೋಸ್ ಕೃಷ್ಣಮಾಚಾರಿ ( Bose Krishnamachari ) ಅವರು ಈ ಬಾರಿ ತುಸು ಎಡವಿದ್ದಾರೆ ಅನಿಸಿತು. ಅವರ ಈ ಹಿಂದಿನ ಆಯ್ಕೆಗಳಿಗೂ ಈಗಿನ ಆಯ್ಕೆಗೂ ವ್ಯತ್ಯಾಸ ಕಾಣಿಸಿದೆ. ಈ ವ್ಯತ್ಯಾಸ ನೋಡುಗರಲ್ಲಿ ಭಿನ್ನ ಅಭಿಪ್ರಾಯಕ್ಕೆ ದಾರಿ ಮಾಡಿಕೊಡದಿರಲಿ ಎನ್ನುವ ಕಳಕಳಿ ಇದಷ್ಟೆ.
ಸಮಕಾಲೀನ ಮತ್ತು ಸಮಕಾಲೀನೋತ್ತರ ಸಂದರ್ಭದ ಅಭಿವ್ಯಕ್ತಿ ಮತ್ತು ಭಾವಾಭಿವ್ಯಕ್ತಿ ಪ್ರದರ್ಶನಕ್ಕೆ ಯೋಗ್ಯವೇ ಆಗಿರುತ್ತದೆಂದು ಭಾವಿಸೋಣ. ಆದರೆ, ಯಾವುದೋ ನಾಲ್ಕು ಕಲಾಕೃತಿಗಳು ಪ್ರದರ್ಶನದಲ್ಲಿರುವ ಉಳಿದ ಉತ್ತಮ ಮತ್ತು ಗುಣಮಟ್ಟದ ಕಲಾಕೃತಿಗಳ ಮೇಲೆ ಋಣಾತ್ಮಕ ಪರಿಣಾಮಕ್ಕೆ ಅವಕಾಶ ಕೊಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಸಣ್ಣದೊಂದು ತೊಡಕು ಹೊರತುಪಡಿಸಿದರೆ ಇದೊಂದು ಉತ್ತಮ ಕಲಾಪ್ರದರ್ಶನ ಅನಿಸಿಕೊಳ್ಳುವುದರಲ್ಲಿ ಯಾವ ಸಂದೇಹವಿಲ್ಲ. ಈಗಾಗಲೇ ಆಯೋಜನೆಯಾಗಿರುವ ಮೂರು ಪ್ರದರ್ಶನಗಳು ಗುಣಮಟ್ಟದ ಕಲಾಕೃತಿಗಳಿಂದ ಕೂಡಿದ್ದರಿಂದ ಒಳ್ಳೆಯ ಅಭಿಪ್ರಾಯವೂ ಮೂಡಿತ್ತು.
ಇದೀಗ ನಡೆಯುತ್ತಿರುವ ಸಮೂಹ ಕಲಾಪ್ರದರ್ಶನದಲ್ಲಿ ಅಬಿನ್ ಶ್ರೀಧರ್ (Abin Sreedhar), ಅಮ್ಷು ಚುಕ್ಕಿ (Amshu Chukki) ಅನಿಲ್ ತಂಬೈ (Anil Thambai), ಅರವಿಂದ್ ಸುಂದರ್ (Arvind Sundar), ದೀಪಾ ಕುಮವತ್ (Deepa Kumawat) ಕಜಾಲ್ ಸಿ. ದೆತ್ (Kajal C Deth), ಅರ್ ನೂರು ಕರೀಂ ರಜಿತಾ ಸ್ಚಡೆ (Ar Nuru Karim Rajita Schade) ಮತ್ತು ರಿಯಾ ಚಂದ್ವಾನಿ (Riya Chandwani) ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಪ್ರೋತ್ಸಾಹದ ದೃಷ್ಟಿಯಿಂದ ಒಳ್ಳೆಯ ಪ್ರಯತ್ನ ಎಂದೇ ಭಾವಿಸಿದರೂ ಗ್ಯಾಲರಿ, ಕ್ಯುರೇಶನ್ ವಿಚಾರದಲ್ಲಿ ಅನುಸರಿಸಲಾದ ಗುಣಮಟ್ಟಕ್ಕೆ ಅಪಕ್ವತೆಯ ಕೆಲ ಕಲಾಕೃತಿಗಳು ಬೆಲೆ ತೆರದಿರಲಿ. ಉಳಿದಂತೆ ಇದೊಂದು ಉತ್ತಮ ಕಲಾಪ್ರದರ್ಶನ.
ಸ್ನೇಹಿತರೆ, ಈ ಕಲಾಪ್ರದರ್ಶನ ಸೆಪ್ಟೆಂಬರ್ 19ಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ನೋಡಿ ಬನ್ನಿ.
Congratulations to all participants
