ಕಬ್ಬಿಣದ ದೇಹ, ಮೀರಿಸುವ ಮೃದು ಮನಸ್ಸು

Share This

• ‘ಕಿಂಕಿಣಿ’ಯಲ್ಲಿ ಐರನ್ ಶಿಲ್ಪಗಳ ಪಂಜರದ ನೆರಳು!
• ಜನಾರ್ಧನನ್ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ
ಮನುಷ್ಯಾಕೃತಿಗಳು ಅನೇಕ ಸಂದರ್ಭಗಳಲ್ಲಿ ಅಚ್ಚರಿ ಮೂಡಿಸುವಂತಹ ವಸ್ತು ವಿಷಯ. ಮನುಷ್ಯನ ದೇಹವೊಂದನ್ನು ಹೇಗೆಲ್ಲಾ ನೋಡಲು ಸಾಧ್ಯ ಎನ್ನುವುದಕ್ಕೆ ನೂರಾರು ಕಲಾವಿದರು ತಮ್ಮ ವರ್ಣ ಮತ್ತು ಶಿಲ್ಪ ಕಲಾಕೃತಿಗಳಲ್ಲಿ, ರೇಖೆಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಆದರೂ ಅದೇ ಮನುಷ್ಯಾಕೃತಿಗಳು ಮತ್ತೆ ಮತ್ತೆ ನೋಡಬೇಕೆನ್ನಿಸುವಷ್ಟು ಆಕರ್ಷಣೀಯ.
” The human body is the best work of art.” ಸೃಷ್ಟಿಯ ಒಂದೊಂದು ಸಂಗತಿಗಳ ಬಗ್ಗೆ ಆಳವಾದ ಅಧ್ಯಯನಕ್ಕೆ ಇಳಿದಾಗ ಅದೆಷ್ಟೋ ಅಚ್ಚರಿ, ನಿಗೂಢಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಸಾಗುತ್ತವೆ. ಇಂತಹ ಮನುಷ್ಯಾಕೃತಿಗಳನ್ನೆ ಅಭಿವ್ಯಕ್ತಿಗೆ ಸ್ಫೂರ್ತಿಯಾಗಿಸಿಕೊಂಡು ಕಲಾತ್ಮಕ ಲೋಕ ಸೃಷ್ಟಿಸಿರುವ ತಮಿಳುನಾಡಿನ ಕಲಾವಿದ ಜನಾರ್ಧನನ್ ರುಧ್ರಮೂರ್ತಿ ಅವರ ಕಲಾಕೃತಿಗಳ ‘ NESTED WITHIN’ ಪ್ರದರ್ಶನ ಬೆಂಗಳೂರಿನ ಕಿಂಕಿಣಿ ಗ್ಯಾಲರಿಯಲ್ಲಿ ನಡೆಯುತ್ತಿದೆ. ಶಿಲ್ಪವಾಗಿಯೂ, ಪ್ರತಿಷ್ಠಾಪನಾ ಕಲಾಕೃತಿಯಾಗಿ ಪ್ರದರ್ಶಿಸಿ ವಿಭಿನ್ನ ಮತ್ತು ಕಲಾತ್ಮಕ ನೋಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕಬ್ಬಿಣದ ಸಲಾಕೆ, ದಪ್ಪನೆಯ ತಗಡುಗಳನ್ನು ಬಹಳ ಜಾಣತನದಿಂದ ದುಡಿಸಿಕೊಂಡಿರುವ ರೀತಿ ಕಲಾವಿದ ಜನಾರ್ಧನನ್ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ತುಕ್ಕು ಹಿಡಿದಿರುವ ಅಂಶವೆ ಕಲಾಕೃತಿಗೆ ಒಂದು ವಿಭಿನ್ನ ಸೌಂದರ್ಯ ನೀಡಿದಂತಿದೆ. One of the Several, The Surface of My Body, Fludity, Airborne, Conscience, Skin ಶೀರ್ಷಿಕೆಗಳ ಕಲಾಕೃತಿಗಳು ಖುಷಿಕೊಟ್ಟವು. Fludity ಶೀರ್ಷಿಕೆಯ ಕಲಾಕೃತಿ ತುಸು ಹೊತ್ತು ನಿಂತು ನೋಡುವಂತೆ ಮಾಡಿತು.
ಜನಾರ್ಧನನ್ ಅವರ ಕಲಾಕೃತಿಗಳು ನನ್ನನ್ನು ಈ ಸಾಧ್ಯತೆಗಳಲ್ಲಿ ಇನ್ನಷ್ಟು ವಿಭಿನ್ನ ಪ್ರಯತ್ನಗಳ ಕಡೆ ದೃಷ್ಟಿ ಹಾಯಿಸಿದ ಕೊರಿಯಾದ ಯುವ ಕಲಾವಿದ Kang Sung Hoon ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಕಲಾಕೃತಿಯೊಂದು ಹೇಗೆ ಮನಸ್ಸಿನ ಮೇಲೆ ಬೇರೂರಬಹುದು ಎನ್ನುವುದಕ್ಕೆ ಹೂನ್ ನೆನಪಿಗೆ ಬಂದಿದ್ದೂ ಸಾಕ್ಷಿಯಾಗಿ ನಿಲ್ಲುವಂತದ್ದೆ. ನಾನು ಇಂದಿಗೂ ಅವರ ಕಲಾಕೃತಿಗಳನ್ನು ಕಣ್ಣಾರೆ ನೋಡಿಲ್ಲ, ಅವರನ್ನು ಎಂದೂ ಭೇಟಿ ಮಾಡಿಲ್ಲ. ಆದರೆ, ಅವರ ಕಲಾಕೃತಿಗಳನ್ನು ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ಗಮನಿಸಿ ಮೆಚ್ಚಿಕೊಂಡಿದ್ದೇನೆ. ಎಂದಾದರೂ ಈ ಯುವ ಕಲಾವಿದನ ಭೇಟಿ ಮಾಡಬೇಕಂದುಕೊಂಡಿದ್ದೇನೆ. ಲೋಹವನ್ನು ಬಹಳ ಸೊಗಸಾಗಿ ಬಳಸಿಕೊಳ್ಳುವ ಕಲಾವಿದನ ಕಲಾಕೃತಿಗಳು ಆಪ್ತವೆನಿಸಿವೆ. ಹಾಗೇ ಜನಾರ್ಧನನ್ ಅವರ ಕಲಾಕೃತಿಗಳೂ, ಅವರ ಪ್ರಯತ್ನಗಳು ಇಷ್ಟವಾದವು.
ಜನಾರ್ಧನನ್ ರುಧ್ರಮೂರ್ತಿ ಅವರಿಗೆ, ಆಯೋಜಿಸಿದ ಕಿಂಕಿಣಿ ಗ್ಯಾಲರಿಗೆ ಅಭಿನಂದನೆಗಳು 💐
ಸ್ನೇಹಿತರೆ, ಕಲಾಪ್ರದರ್ಶನ ಜೂನ್ 27ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ನೋಡಿಬನ್ನಿ.

Share This

Leave a Reply

Your email address will not be published. Required fields are marked *