- ಗುರು ಜ್ಯೋತಿ ಪಟ್ಟಾಭಿರಾಮ್, ಗುರು ಸಾಧನಾ ಶ್ರೀ ಮಾರ್ಗದರ್ಶನದಲ್ಲಿ ಹೆಜ್ಜೆ ಇಟ್ಟ ಶಿಷ್ಯೆ
ಆಗಿನ್ನು ಎರಡುವರೆ ಮೂರು ವರ್ಷ ಇದ್ದಿರಬಹುದು. ಚಂದನ ವಾಹಿನಿಯಲ್ಲಿ ಭರತನಾಟ್ಯದಂತಹ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಬಂದರೆ ಕಣ್ಣು ಪಿಟಿಕ್ ಅನ್ನದೇ ಕುಳಿತಿರುತ್ತಿದ್ದಳು. ಉಸಿರು ತಡೆಹಿಡಿದು ಖುಷಿ ವ್ಯಕ್ತಪಡಿಸುತ್ತಿದ್ದಳು. ಅದು ಆಕೆಯ excitement.
ಗಟ್ಟಿಯಾಗಿ ನಿಂತುಕೊಳ್ಳಲು ಸಾಧ್ಯವಿಲ್ಲದಿದ್ದರೂ ಹೆಜ್ಜೆ ಹಾಕುವ ಬಯಕೆ. ಅವರು ತೋರುವ ಮುಖ ಭಾವನೆಯನ್ನು ಅನುಕರಿಸಲು ತನ್ನ ಮುಖ ಸಿಂಡರಿಸಿಕೊಳ್ಳುತ್ತಿದ್ದಳು. ಒಂಥರಾ ಹುಣಸೆ ಹಣ್ಣು ಬಾಯಲ್ಲಿಟ್ಟುಕೊಂಡು ಹುಳಿ ಸವಿಯುವಂತಿರುತ್ತಿತ್ತು ಆಕೆಯ expression. ಆಗಂತೂ ಖುಷಿಯೋ ಖುಷಿ. ಆಕೆಯ ಚಟುವಟಿಕೆ ನೋಡಿದ ನಮ್ಮ ಆನಂದವನ್ನಂತೂ ವರ್ಣಿಸಲು ಪದಗಳಿಲ್ಲ. ಆನಂದ ಭಾಷ್ಪವೇ ಅದಕ್ಕೆ ಪ್ರತಿಕ್ರಿಯೆ ಆಗಿರುತ್ತಿತ್ತು.
Yes, ಒಂದೇ ಒಂದು ದಿನವೂ ಆಕೆಯ ಆಸಕ್ತಿ ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಗೋಜಿಗೆ ಹೋಗಿರಲಿಲ್ಲ. ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿರಲಿಲ್ಲ. ಇನ್ನು ಚಿಕ್ಕವಳಲ್ಲವಾ… ಎಂದುಕೊಂಡಿದ್ದೆವು. ಆದರೆ ಸಹಜವಾಗಿ ಮಕ್ಕಳು ಆಕರ್ಷಿತರಾಗುವ ವಿಚಾರ, ವಸ್ತುಗಳ ಬಗ್ಗೆ ಗಮನಿಸುತ್ತಿದ್ದೆವು. ಎಲ್ಲರ ಮನೆಗಳಲ್ಲಿರುವಂತೆ ಇದೊಂದು ಸಹಜ ಪ್ರಕ್ರಿಯೆ ಆಗಿತ್ತಷ್ಟೆ. ಹಾಗಂತ ಯಾವ ಒತ್ತಡವನ್ನೂ ಹೇರಿದ್ದಿಲ್ಲ.
ನಮ್ಮ ಪ್ರಪಂಚವೇ ಆಕೆಯಾಗಿದ್ದಕ್ಕೆ ಒಂದೇಟು ಭಾರಿಸಿದ್ದೂ ನೆನಪಿಗೆ ಬರುತ್ತಿಲ್ಲ. ಆದರೆ ಈಗ ಆಕೆ ಗೆಜ್ಜೆ ಕಟ್ಟಿಕೊಂಡು ಹಾಕಿರುವ ಒಂದೊಂದು ಹೆಜ್ಜೆಯೂ ನಮ್ಮ ಕಣ್ಮುಂದೆ ಇದೆ. ನಮ್ಮ ಹೃದಯದಲ್ಲಿ ಮನೆ ಮಾಡಿದೆ.
ಹೌದು, ಮಗಳು ಕ್ಷಮಾ ಭರತನಾಟ್ಯ ಕ್ಷೇತ್ರದಲ್ಲಿ ಗುರು ಹಿರಿಯರ ಆಶೀರ್ವಾದದಿಂದ ಸಂಪ್ರದಾಯದಂತೆ ಮೊದಲ ಏಕವ್ಯಕ್ತಿ ಪ್ರದರ್ಶನಕ್ಕೆ ಸಿದ್ಧಳಾಗಿದ್ದಾಳೆ.
ವಿಧ್ಯಾ ಭಾರತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕ್ಷಮಾ ಅಗ್ನಿಹೋತ್ರಿ ಸಾಧನಾ ಸಂಗಮ ನೃತ್ಯ ಕೇಂದ್ರದಲ್ಲಿ ಭರತನಾಟ್ಯ ಕಲಿಕೆ ಮುಂದುವರಿಸಿದ್ದಾಳೆ. ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಗೌರವ ಪುರಸ್ಕೃತೆ ಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಹಾಗೂ ಆಯುರ್ವೇದ ವೈದ್ಯೆ ಗುರು ವಿದುಷಿ ಸಾಧನಾಶ್ರೀ ಅವರ ಮಾರ್ಗದರ್ಶನದಂತೆ ವೇದಿಕೆ ಏರುತ್ತಿದ್ದಾಳೆ.
ನೂರಾರು ಚಾಣದ ಏಟು ಬಿದ್ದ ಬಳಿಕವೇ ಶಿಲೆ ಮೂರ್ತಿಯಾಗಿ ರೂಪ ಪಡೆಯುವುದು ಎಂಬ ಸತ್ಯೋಕ್ತಿಯಂತೆ ತನ್ನ ಒಂದೊಂದು ನೃತ್ಯದ ಹೆಜ್ಜೆಗೂ ಗುರುವಿನ ಆಶೀರ್ವಾದದ ಬಲವಿದೆ ಎಂದು ನಂಬಿದ್ದಾಳೆ ಮಗಳು ಕ್ಷಮಾ. ಆಕೆಯ ಭಕ್ತಿ ಅನೇಕ ಭಾರಿ ನನ್ನನ್ನೇ ಬೆರಗು ಗೊಳಿಸುದ್ದುಂಟು. ಪಾಪ್, ಹಿಪಾಪ್ ಎಂದು ಪಾಶ್ಚಿಮಾತ್ಯ ನೃತ್ಯಕ್ಕೆ ಬಲು ಬೇಗ ಆಕರ್ಷಿತರಾಗುವ ಇಂದಿನ ದಿನದಲ್ಲಿ ಸಾಂಪ್ರದಾಯಿಕ ನೃತ್ಯ ಶೈಲಿಯ ಬಗ್ಗೆ ಅವಳಿಗಿರುವ ಆಸಕ್ತಿ ನಮಗೆ ಹೆಮ್ಮೆ. ಬೇರೆ ಏನೇ ಹೆಳಿದರೂ ಅತಿಶಯೋಕ್ತಿ ಆದೀತು. ಒಂದಂತು ಖರೆ ಪತ್ನಿ ಮೇಧಾ ಹಾಗೂ ನಾನು ಏನು ಬಯಸಿದ್ದೇವೋ ಅದೇ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದಾಳೆ. ಹೆಜ್ಜೆ ತಪ್ಪಿದಾಗ ಸನ್ಮಾರ್ಗದಲ್ಲಿ ನಡೆಸಿದ ಪ್ರತಿಯೊಬ್ಬ ಗುರು ಹಿರಿಯರನ್ನೂ ಸ್ಮರಿಸಿಕೊಳ್ಳುತ್ತಾಳೆ. ಅವರ ಆಶೀರ್ವಾದ ಬಯಸುತ್ತಾಳೆ. ಇದಕ್ಕಿಂತ ನಮಗಿನ್ನೇನು ಬೇಕು.
ಕ್ಷಮಾ ಒಬ್ಬ ಒಳ್ಳೆಯ ನರ್ತಕಿ ಆಗುತ್ತಾಳೆ ಎಂದು ನಮಗೆ ಧೈರ್ಯ ತುಂಬಿ ಸ್ಫೂರ್ತಿಯಾದವರು ಶರ್ಮಾಸ್ ನೃತ್ಯ ಕೇಂದ್ರದ ಗುರು, ಸಂಸ್ಥಾಪಕಿ ಪ್ರಸನ್ನ ಕುಮಾರಿ ಹಾಗೂ ಗುರು ಗಜೇಂದ್ರ ಶರ್ಮಾ ಅವರು. ಆಗಲೇ ಹೇಳಿದಂತೆ ಅವರ ಆಶೀರ್ವಾದ, ಮಾರ್ಗದರ್ಶನ ಕ್ಷಮಾಳ ವಿಶ್ವಾಸ ಹೆಚ್ಚಿಸಿದೆ.
ಕ್ಷಣ ಕ್ಷಣವೂ ಗುರು- ಹಿರಿಯರ ಸ್ಮರಿಸುವ ಸಂಸ್ಕಾರ ನೀಡಿದ್ದೇ ಭರತನಾಟ್ಯ ಎಂದು ಹೆಮ್ಮೆಯಿಂದ ಹೇಳುತ್ತೇವೆ ಹೆತ್ತವರಾದ ನಾವು. ಮಕ್ಕಳನ್ನು ವಿನಯವಂತರಾಗಿ ರೂಪಿಸುವ ಮಹಾಶಕ್ತಿ ಈ ಕಲೆಯಲ್ಲಿದೆ. ಆರೋಗ್ಯ ನೀಡುವ ದಿವ್ಯ ಔಷಧ ಈ ಕಲೆಯಲ್ಲಿದೆ. ಗುರುವಿನ ಮಾರ್ಗದರ್ಶನದಂತೆ ನಡೆದರೆ ನಟರಾಜ ಸ್ವರೂಪಿ ಶಿವ ಎಲ್ಲಾ ಭಾಗ್ಯವನ್ನೂ ನೀಡುತ್ತಾನೆ. ಭಕ್ತಿ, ಶ್ರದ್ಧೆ, ಛಲದಿಂದ ಕಲಿಕೆ, ಅಭ್ಯಾಸ ಮುಂದುವರಿಸಿದರೆ ಸಿಗುವ ಫಲಿತಾಂಶವೇ ಅದಾಗಿರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಈ ಸನ್ಮಾರ್ಗ ಕ್ಷಮಾ ಪಾಲಿಗಿದೆ. ಆ ಮಾರ್ಗದಲ್ಲೇ ಇರಲಿ ಎನ್ನುವುದು ನಮ್ಮ ಆಶಯ ಕೂಡ. ವೈವಿಧ್ಯಮಯ ಜೀವನ ಶೈಲಿ ರೂಢಿಸಿಕೊಂಡು ಹಿತೈಷಿಗಳ ಜೊತೆಗೂಡಿ ಸಾಧನೆಗೆ ತಪಸ್ಸು ಮಾಡಲಿ. ಸಜ್ಜನರು ಶಹಬ್ಬಾಸ್ ಎಂದು ಬೆನ್ನು ತಟ್ಟುವಂತೆ ವ್ಯಕ್ತಿತ್ವ ರೂಪಿಸಿಕೊಳ್ಳಲಿ.
ಕ್ಷಮಾ… ನೀ ಧೈರ್ಯವಾಗಿ ವೇದಿಕೆ ಏರು. ನಿನ್ನ ಮನಸ್ಸಿಗೆ, ಹೆತ್ತವರಾದ ನಮ್ಮ ಮನಸ್ಸಿಗೆ, ವೇದಿಕೆ ಮುಂಭಾಗವಿರುವ ಪ್ರೇಕ್ಷಕರು ಮೆಚ್ಚುವ ರೀತಿಯಲ್ಲಿ ನೃತ್ಯ ಮಾಡು. ಇನ್ನೂ ಸಾಗರದಷ್ಟು ಕಲಿಯುವುದಿದೆ… ಗರ್ವ, ಅಹಂ, ಅಸೂಯೆ ಪಡುವ ಮಗು ನೀ ಆಗಬೇಡ.
ಶುಭವಾಗಲಿ ನಿನಗೆ…