ಶ್ರಾವಣಿ ‘ಇಂದಿರಾ’ ನೃತ್ಯ ಸುಂದರ!

Share This

  • ಗುರು ಮಿಥುನ್ ಶ್ಯಾಮ್ ಶಿಷ್ಯೆಯ ನಿರೀಕ್ಷೆ ಮೀರಿದ ಪ್ರದರ್ಶನ

‘ಇಂದಿರೆ ಮಂದಿರದೊಳು ನಿಂದಿರೆ…’

ಹರಿದಾಸ ಪಂಥೀಯರಲ್ಲೊಬ್ಬರಾದ ವಾದಿರಾಜರ ಕೃತಿಯ ಪಲ್ಲವಿ. ವೈಕುಂಠ ಅಧಿಪತಿ ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿಯ ಕುರಿತಾಗಿ ರಚಿಸಲಾದ ಒಂದು ಸುಂದರ ಕೃತಿ. ಬೆಂಗಳೂರಿನ ವೈಷ್ಣವಿ ನಾಟ್ಯಶಾಲೆ ಆಯೋಜನೆಯ ‘ಇಂದಿರಾ’ – ಸ್ತ್ರೀ ಸೌಂದರ್ಯ (Indira-The Ethereal Beauty) ನೃತ್ಯ ಕಾರ್ಯಕ್ರಮ ವಾದಿರಾಜರ ಈ  ಕೃತಿಯನ್ನು ನೆನಪಿಸಿಕೊಳ್ಳುವಂತೆ ಮಾಡಿತು!

ನವೆಂಬರ್ ೨೭, ಬುಧವಾರದ ಚುಮು ಚುಮು ಚಳಿಯ ನಡುವೆ ಚಿಗರೆ ಸಂಚಲನದ ನೃತ್ತದೊಂದಿಗೆ ಇಂದಿರೆಯ ಸೌಂದರ್ಯದಲ್ಲಿ ಗಮನ ಸೆಳೆದವರು ಕುಮಾರಿ ಶ್ರಾವಣಿ ಸತೀಶ್. ನಾಟ್ಯಾಚಾರ್ಯ ಮಿಥುನ್ ಶ್ಯಾಮ್ ಅವರ ಶಿಷ್ಯೆಯಾಗಿರುವ ಶ್ರಾವಣಿ ಅವರು ಗುರುವಿಗೆ ತಕ್ಕ ಶಿಷ್ಯೆ ಎಂಬ ಶ್ಲಾಘನೆ ಸಂಪಾದಿಸುವಲ್ಲಿ ಯಶಸ್ವಿಯಾದರು. ಅತ್ಯಂತ ಪ್ರೌಢವೆನಿಸುವ ಪ್ರಸ್ತುತಿಯ ಮೂಲಕ ನೃತ್ಯಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ಎಲ್ಲಿಯೂ ತಮ್ಮ ಉತ್ಸಾಹ(enthusiasm), ತಾಜಾತನ(freshness) ಕಳೆದುಕೊಳ್ಳಲಿಲ್ಲ. ಬಹಳ ಅಚ್ಚುಕಟ್ಟಾದ ಪ್ರದರ್ಶನ. ಶ್ರಾವಣಿ ಅವರ ಒಂದೊಂದು ಪ್ರಸ್ತುತಿಯೂ, ‘Performing Bharatanatyam is my purest joy’ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ  ಎನ್ನುವಂತಿತ್ತು.

‘ The beauty of Bharatanatyam in perfect unison ‘ ಎನ್ನುವಂತೆ ಪರಿಪೂರ್ಣವಾದ ಪ್ರದರ್ಶನದಲ್ಲಿ ಭರತನಾಟ್ಯದ ಸೌಂದರ್ಯ ಸವಿಯಲು ಸಾಧ್ಯವಾಗುತ್ತದೆಂದು ಅನೇಕ ನರ್ತಕರು/ನರ್ತಕಿಯರು ಹೇಳಿರುವುದುಂಟು. ಭರತನಾಟ್ಯ ಒಂದು ದೈವಿಕ ಭಾಷೆ (Bharatanatyam: The language of the divine) ಆಗಿದ್ದರಿಂದ ಸಹಜವಾಗಿಯೆ ವೇದಿಕೆಯಲ್ಲಿ ಶಕ್ತಿ ಕಳೆದುಕೊಳ್ಳುವ ಉದಾಹರಣೆ ಕಡಿಮೆ. ಆ ನಟರಾಜನೆ ನರ್ತಕ/ನರ್ತಕಿಯರಿಗೆ ಬಲ ನೀಡುತ್ತಾನೇನೋ… ಶ್ರಾವಣಿ ಸತಿಶ್ ಅವರ ಸಾಮರ್ಥ್ಯವೂ ಇದಕ್ಕೊಂದು ಉತ್ತಮ ಸಾಕ್ಷಿ ಎನ್ನುವಂತೆ ಇತ್ತು. ಖಂಡಿತವಾಗಿಯೂ ಇದೊಂದು ಅಪರೂಪದ ನೃತ್ಯ ಪ್ರಸ್ತುತಿಯಾಗಿತ್ತು.

ನೃತ್ಯ ನಮಸ್ಕಾರದೊಂದಿಗೆ ವಿಘ್ನನಿವಾರಕ ವಿಘ್ನೇಶನನ್ನು ಸ್ಮರಿಸಿ, ಸಾಂಪ್ರದಾಯಿಕ ಮಾರ್ಗಾನುಸಾರ ನೃತ್ತ ಮತ್ತು ಅಭಿನಯದೊಂದಿಗೆ ಎಲ್ಲರ ಚಿತ್ತವನ್ನು ತನ್ನ ಕಡೆ ಸೆಳೆದುಕೊಳ್ಳುವ ಮೋಡಿ ಮಾಡಿದರು. ಬಳಿಕ, ವಾಗದೇಶ್ವರಿ ರಾಗ, ಆದಿ ತಾಳದಲ್ಲಿ ನಿಬಂಧಿತ ಸರಸ್ವತಿ ಕೌತ್ವಂ ಆಯ್ದುಕೊಂಡ ಶ್ರಾವಣಿ ಅವರು ಶುದ್ಧ  ನೃತ್ತ ಮತ್ತು ಅಭಿನಯದಿಂದ ಖ್ಯಾತ ನೃತ್ಯ ಗುರು ಶಂಕರ ಕಂಡಸ್ವಾಮಿ ಅವರನ್ನು ಸ್ಮರಿಸುವಂತೆ ಮಾಡಿದರು.

 

 

ಮುಂದಿನ ಆಯ್ಕೆ ವರ್ಣಂ ಎನ್ನುವುದು ಖಾತ್ರಿ. ಆದರೆ, ಯಾವುದೆನ್ನುವ ಕುತೂಹಲವಿತ್ತು. ನಿರೀಕ್ಷೆಗೂ ಮೀರಿದ ಆಯ್ಕೆ ಶ್ರಾವಣಿ ಅವರದ್ದಾಯಿತು. ಅವರ ಸಾಮರ್ಥ್ಯವರಿತೆ ಗುರು ಮಿಥುನ್ ಶ್ಯಾಮ್, ಕ್ಲಿಷ್ಣಕರವಾದ ಆಯ್ಕೆ ಮಾಡಿದ್ದರು. ದೃತಿಗೆಡದ ಶ್ರಾವಣಿ ಅವರು ಅತ್ಯಂತ ಮನೋಜ್ಞವಾದ ನೃತ್ತ ಮತ್ತು ಅಭಿನಯದಿಂದ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಶ್ರೇಷ್ಠ ನರ್ತಕ ಕೆ.ಎನ್. ದಂಡಾಯುಧ ಪಾಣಿ ಪಿಳ್ಳೈ ಅವರ ಸಂಯೋಜನೆಯ ನವರಾಗಮಾಲಿಕಾ, ಆದಿ ತಾಳದಲ್ಲಿ ನಿಬಂಧಿತ ‘ಸ್ವಾಮಿಯೈ ಅಝೈತೋಡಿ ವಾ (Swamiyai Azhaithodi Vaa)’ ಎಂದು ಹೆಜ್ಜೆ ಹಾಕಿದರು. ಪಲ್ಲವಿ ಮತ್ತು ಅನುಪಲ್ಲವಿಗೆ ಹಿತ-ಮಿತ  ಭಾವಾಭಿನಯ ಮತ್ತು ಶುದ್ಧ ಮುದ್ರೆ ಸಹಿತ ಆಂಗಿಕಾಭಿನಯದಿಂದ ರಸಿಕರ ಗಮನ ಅತ್ತಿತ್ತ ಚಲಿಸದಂತೆ ನಿಭಾಯಿಸಿದರು. ವಿದ್ವಾನ್ ರೋಹಿತ್ ಭಟ್ ಉಪ್ಪೂರು ಅವರ ಕಂಠ ಸಿರಿಯಲ್ಲಿ ಮೂಡಿಬಂದ ಚರಣಗಳ ಪ್ರಸ್ತುತಿಗಂತೂ ಶ್ರಾವಣಿ ಪರಕಾಯ ಪ್ರವೇಶ ಮಾಡಿದ್ದಾರೆನೋ ಎಂಬ ಭಾವ ಮೂಡಿತ್ತು. ವಿದ್ವಾನ್ ಧನುಷ್ ನಟಂಪಲ್ಲಿ ಅವರ ಮೃದಂಗ, ವಿದ್ವಾನ್ ಮಹೇಶ್ ಸ್ವಾಮಿ ಅವರ ವೇಣುವಾದನದ ಸಾಥ್ ಅಪರೂಪದ ನೃತ್ಯ ಪ್ರದರ್ಶನವನ್ನಾಗಿಸಿತು.

ಪಲ್ಲವಿಯಲ್ಲಿ ತೋಡಿ ಮತ್ತು ಮೋಹನ, ಅನುಪಲ್ಲವಿಯಲ್ಲಿ ವಸಂತ, ದೇವಮನೋಹರಿ, ಮೋಹನ ಮತ್ತು ತೋಡಿಯಲ್ಲಿ ಸಾಗಿ, ಚರಣಗಳಲ್ಲಿ ಮೈನವಿರೇಳಿಸುವ ಶಂಕರಾಭರಣ, ಸಾರಂಗ, ಕಾನಡ, ಆರಭಿಯಲ್ಲಿ ಮುಂದುವರಿಯುತ್ತದೆ. ಅಂತಿಮವಾಗಿ ಭೈರವಿಯಲ್ಲಿ ಕೊನೆಗೊಳ್ಳುವ ಸಂಯೋಜನೆಗೆ ಶ್ರಾವಣಿ ಪ್ರಯಾಸವಿಲ್ಲದ ನೃತ್ತದಿಂದ ಮೆಚ್ಚುಗೆಗೆ ಪಾತ್ರರಾದರು.

ಈ ಯಶಸ್ವಿ ಪ್ರಸ್ತುತಿಯನ್ನು ಮೀರಿಸುವ ಸಂಚಾರಿ, ಭಕ್ತಿ ಪ್ರಧಾನ ‘ರುಸಲಿ ರಾಧಾ ರುಸಲಾ ಮಾಧವ’ ಮರಾಠಿ ಕೃತಿಗೆ ಭಲೇ ಎಂದು ಹುಬ್ಬೇರಿಸುವ ಅಭಿನಯ ನೀಡಿ ರಸಿಕರ ಮನಗೆದ್ದರು. ಅಂತಿಮವಾಗಿ ರಾಗಮಾಲಿಕಾ, ಆದಿ ತಾಳದಲ್ಲಿ ನಿಬಂಧಿತ ಗತಿ ಭೇದ ಪ್ರಿಯ ರಾಗಮಾಲಿಕಾ ತಿಲ್ಲಾನದ ಬಳಿಕ ಕೆ.ಎಸ್.ನರಸಿಂಹಸ್ವಾಮಿ ಅವರ ‘ದೀಪವು ನಿನ್ನದೆ, ಗಾಳಿಯು ನಿನ್ನದೆ’ ಭಾವಗೀತೆಯೊಂದಿಗೆ ಸಂಪನ್ನಗೊಳಿಸಿದರು.

ಒಟ್ಟಾರೆ ಪ್ರದರ್ಶನ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಕೆಲವೊಂದು ಹಂತದಲ್ಲಿ ತುಸು ನಗು ಮತ್ತು ಭಾವ ಪ್ರಧಾನ ಅಭಿನಯಕ್ಕೆ ಇನ್ನಷ್ಟು ಒತ್ತು ಕೊಡಬಹುದಿತ್ತು ಅನಿಸಿತು. ಉಳಿದಂತೆ ಆಪ್ತವೆನಿಸಿದ ನೃತ್ಯ ಪ್ರಸ್ತುತಿ ‘ಇಂದಿರಾ’.

 

 


Share This

Leave a Reply

Your email address will not be published. Required fields are marked *