- ಮೆಚ್ಚುಗೆ ಗಳಿಸಿದ ಸಾಕ್ಷಿ ಅಶೋಕ್ ಏಕವ್ಯಕ್ತಿ ಪ್ರದರ್ಶನ
- ಗುರು ಮಿಥುನ್ ಶ್ಯಾಮ್ ಶಿಷ್ಯೆಯಿಂದ ಮನಮೋಹಕ ನೃತ್ಯ
‘ನಾರಾಯಣ’! ಹೌದು ಅವನೇ ಆ ಮಹಾವಿಷ್ಣು. ಪದ್ಮ ಪುರಾಣ, ಗರುಡ ಪುರಾಣ, ಭಾಗವತ ಪುರಾಣ, ವಿಷ್ಣು ಪುರಾಣಗಳಲ್ಲಿ ನಾರಾಯಣನೇ ವಿಷ್ಣುವಾಗಿದ್ದಾನೆ. ವಿವಿಧ ಅವತಾರಗಳಲ್ಲಿ ಅವತರಿಸಿದ್ದಾನೆ ಎಂದು ನಂಬಲಾಗುತ್ತದೆ. ಭಾಗವತ ಪುರಾಣದಲ್ಲಿ ಪರಮಾತ್ಮನ ಪರಮ ಪುರುಷನೆಂದು ನಾರಾಯಣನನ್ನು ಬಣ್ಣಿಸಲಾಗಿದೆ. ಪುರುಷ ಸೂಕ್ತ, ನಾರಾಯಣ ಸೂಕ್ತ ಮತ್ತು ಉಪನಿಷತ್‌ನಲ್ಲಿಯೂ ನಾರಾಯಣನೇ ಪರಮಾತ್ಮನಾಗಿದ್ದಾನೆ. ಭಗವದ್ಗೀತೆಯಲ್ಲಿ ನಾರಾಯಣನೇ ಕೃಷ್ಣನಾಗಿ ಸಾರ್ವತ್ರಿಕ ರೂಪ ತಾಳಿದ್ದಾನೆ.
ಪರಮಾತ್ಮ, ಶ್ರೀಕೃಷ್ಣ, ನಾರಾಯಣನಾದ ಆ ಮಹಾವಿಷ್ಣುವಿನ ನಾಮದ ಬಲ ವರ್ಣಿಸಲಾಗದು. ಪಂಡಿತರು, ಹಿರಿಯರು, ಗುರುವರ್ಯರು ಆ ಕಾರಣಕ್ಕಾಗಿಯೆ ವಿಷ್ಣು ಸಹಸ್ರನಾಮವನ್ನು ಓದುವಂತೆ ಪ್ರೇರೇಪಿಸುತ್ತಾರೆ. ‘ರೋಗಾರ್ತೋ ಮುಚ್ಯತೇ ರೋಗಾತ್, ಬದ್ಧೋ ಮುಚ್ಯೇತ ಬಂಧನಾತ್. ಅಂದರೆ ಯಾವುದೇ ರೋಗವಿದ್ದರೂ ಆ ರೋಗದಿಂದ ಮುಕ್ತನಾಗುತ್ತಾನೆ, ಅಷ್ಟೇ ಅಲ್ಲ, ಸಂಸಾರ ಬಂಧನದಿಂದಲೂ ಮುಕ್ತನಾಗುತ್ತಾನೆ ಎಂಬರ್ಥದಲ್ಲಿ ವಿಶ್ಲೇಷಿಸಲಾಗುತ್ತದೆ. ನಾರಾಯಣ, ವಿಷ್ಣುವಿನ ನಾಮಸ್ಮರಣೆಯಿಂದ ಊಹಿಸಲಾಗದ ಬದಲಾವಣೆ ಸಾಧ್ಯ ಎಂದು ಬಣ್ಣಿಸಲಾಗುತ್ತದೆ.
ಇಂತಹ ನಾರಾಯಣನನ್ನು ಸ್ಮರಿಸುವ ಸುವರ್ಣಾವಕಾಶವೊಂದನ್ನು ವೈಷ್ಣವಿ ನಾಟ್ಯಾಲಯ ಕಲ್ಪಿಸಿಕೊಟ್ಟಿತು. ನಾಟ್ಯಾಚಾರ್ಯ, ಗುರು ಮಿಥುನ್ ಶ್ಯಾಮ್ ಅವರ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಅಶೋಕ್ ಅವರ ‘ನಾರಾಯಣ’ ಏಕವ್ಯಕ್ತಿ ನೃತ್ಯ ಪ್ರಸ್ತುತಿ ನವೆಂಬರ್ 17, ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಸೇವಾಸದನ ರಂಗಮಂದಿರದಲ್ಲಿ ನಡೆಯಿತು. ಸಾಕ್ಷಿ ಅಶೋಕ್ ಅವರು ಬಹಳ ಸೊಗಸಾದ ನೃತ್ತ, ಭಾವಾಭಿನಯ, ಆಂಗಿಕಾಭಿನಯದೊಂದಿಗೆ ಸಹೃದಯಿ ರಸಿಕರನ್ನು ರಂಜಿಸಿ ಮೆಚ್ಚುಗೆ ಗಿಟ್ಟಿಸಿಕೊಂಡರು. ಹೆಚ್ಚು ಕಡಿಮೆ ಒಂದುವರೆ ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಎಲ್ಲಿಯೂ ರಸಭಂಗವಾಗದ ರೀತಿಯಲ್ಲಿ, ಅಚ್ಚುಕಟ್ಟಾದ ಪ್ರದರ್ಶನ ನೀಡಿದರು. ಪ್ರೇಕ್ಷಕರನ್ನು ಭಕ್ತಿ ರಸೋನ್ಮಾದದಲ್ಲಿ ಮಿಂದೇಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಬಹುಶಃ ಭಾವಾಭಿನಯ ಇನ್ನೊಂದು ಹೆಜ್ಜೆ ಮುಂದೆ ಇರುವಂತೆ ನಿರ್ವಹಿಸಿದ್ದರೆ, ಉತ್ಪ್ರೇಕ್ಷೆಯೊಂದೆ ಬರಹದ ಸಾಲುಗಳಾಗುತ್ತಿದ್ದವು. ಅರ್ಥಾತ್, ಅಷ್ಟು ಹಿತ-ಮಿತವಾದ ಪ್ರದರ್ಶನ ‘ನಾರಾಯಣ’ ಪ್ರಸ್ತುತಿಯದ್ದಾಗಿತ್ತು. ಸ್ವತಃ ನಾರಾಯಣ ರಂಗದೆದುರು ಕುಳಿತು ರಸಸ್ವಾದನೆ ಮಾಡಿ, ಆನಂದಿಸಿರಬಹುದು ಎನ್ನುವ ಭಾವ ಆವರಿಸಿತ್ತು.
ಎಲ್ಲಾ ನೃತ್ಯ ಕಾರ್ಯಕ್ರಮಗಳಲ್ಲಿ ಈ ಕಂಪನ (vibe) ನಿರೀಕ್ಷಿಸಲು ಸಾಧ್ಯವಿಲ್ಲ. ಸಾಕ್ಷಿ ಅಶೋಕ್ ಅವರ ನೃತ್ಯ ಹಾಗೂ ಸಂಗೀತ ಮೇಳದ ಸಾಥ್ ರಂಗಮಂದಿರವನ್ನು ದೇವಮಂದಿರವನ್ನಾಗಿಸಿತ್ತು. ಗುರು ಮಿಥುನ್ ಶ್ಯಾಮ್ ಅವರ ನಟ್ಟುವಾಂಗ, ವಿದ್ವಾನ್ ಕೊವೈ ಎನ್. ಹರಿ ಆದರ್ಶ ಅವರ ಗಾಯನ, ವಿದ್ವಾನ್ ಧನುಷ್ ನಟಂಪಲ್ಲಿ ಅವರ ಮೃದಂಗ ವಾದನ, ವಿದ್ವಾನ್ ಮಹೇಶ್ ಸ್ವಾಮಿ ಅವರ ವೇಣು ವಾದನವು ಸಾಕ್ಷಿಯವರ ನೃತ್ಯ ವೈಭವಕ್ಕೆ ಸಾಕ್ಷಿ ಎನ್ನುವಂತಿತ್ತು. ನೃತ್ಯದ ರಸಸ್ವಾದವನ್ನು ಹೆಚ್ಚಿಸಿತು.
ಪುರಂದರದಾಸರ ರಾಗಭರಿತ ಪಿಳ್ಳಾರಿ ಗೀತೆಗಳಲ್ಲಿ ನಾಲ್ಕನೇ ಮತ್ತು ಕೊನೆಯದೆನಿಸಿಕೊಳ್ಳುವ ‘ಪದುಮನಾಭ ಪರಮ ಪುರುಷ’ ಹಾಡಿಗೆ ನೃತ್ಯ ನಮಸ್ಕಾರ ಮಾಡಿ ಶುಭಾರಂಭ ಮಾಡಿದರು. ಮಲಹರಿ ರಾಗ, ತಿಶ್ರ ಜಾತಿ ತ್ರಿಪುಟದಲ್ಲಿ ನಿಬಂಧಿತ ಗೀತೆ ಮಹಾವಿಷ್ಣುವನ್ನು ವರ್ಣಿಸಿ, ಸ್ಮರಿಸುವ ಮೂಲಕ ‘ನಾರಾಯಣ’ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಮಹಾವಿಷ್ಣುವಿನ ರೂಪವೆ ಆದ ವೆಂಕಟೇಶ್ವರನ ಸ್ಮರಿಸಿದ ಮೇಲೆ ಪತ್ನಿ ಪದ್ಮಾವತಿ ಕಣ್ಣೆದುರು ಬರದಿರಲು ಸಾಧ್ಯವೆ? ಸಾಕ್ಷಿ ಅವರ ಮುಂದಿನ ಆಯ್ಕೆ ದೇವಿ ಪದ್ಮಾವತಿ ಕುರಿತ ಕೃತಿ. ಅಣ್ಣಮಾಚಾರ್ಯ ರಚಿತ, ರಾಗ ಶಂಕರಾಭರಣ ಆದಿ ತಾಳದಲ್ಲಿ ನಿಬಂಧಿತ ‘ಅಲರುಲು ಕುರಿಯಗ ಆಡಿನದೆ’ ಹಾಡಿಗೆ ಮೆಚ್ಚುಗೆಯ ಪ್ರದರ್ಶನ ನೀಡಿದರು.
ಸಾಕ್ಷಿ ಅವರ ಮುಂದಿನ ಆಯ್ಕೆ ವರ್ಣಂ. ಗುರು ಮಿಥುನ್ ಶ್ಯಾಮ್ ಅವರ ಚೊಚ್ಚಲ ರಚನೆಯ ವರ್ಣಂಗೆ ಸಾಕ್ಷಿ ಅಶೋಕ್ ಅವರು ಎಲ್ಲಿಯೂ ಧಕ್ಕೆಯಾಗದ ರೀತಿಯಲ್ಲಿ ಅತ್ಯಂತ ಆತ್ಮವಿಶ್ವಾಸದ ಗಟ್ಟಿ ಹೆಜ್ಜೆ ಇಟ್ಟು ಸಭಿಕರು ಸಾಕ್ಷಿಯಾಗುವಂತಹ ಭಾವಪೂರ್ಣವಾದ ಪ್ರದರ್ಶನ ನೀಡಿದರು. ರಾಗಮಾಲಿಕ ಆದಿ ತಾಳದಲ್ಲಿ ನಿಬಂಧಿತ ಸಂಯೋಜನೆಗೆ ಸ್ವತಃ ಗುರು ಮಿಥುನ್ ಶ್ಯಾಮ್ ಅವರ ಉಪಸ್ಥಿತಿ, ನಟ್ಟುವಾಂಗ ನಿರ್ವಹಣೆಯಲ್ಲಿ ಪ್ರದರ್ಶನ ನೀಡಿರುವುದು ಶ್ಲಾಘನೀಯ. ಸಾಕ್ಷಿ ಅವರಿಗೆ ದಕ್ಕಿರುವ ಅದೃಷ್ಟವೂ ಹೌದು.
ರಾಗದ ಪ್ರಮುಖ ಲಕ್ಷಣಗಳನ್ನು ಒಳಗೊಳ್ಳುವ ವರ್ಣಂ ನಿರ್ವಹಣೆ ಜಟಿಲವಾದುದು. ನರ್ತಕಿ/ನರ್ತಕಗೆ ಎಂದಿಗೂ ಇದೊಂದು ಸವಾಲಾಗಿರುತ್ತದೆ. ಸಾಕ್ಷಿ ಈ ಸವಾಲನ್ನು ಸ್ವೀಕರಿಸಿ ನಿರಾಯಾಸವಾಗಿ ನಿಭಾಯಿಸಿದರು. ಅಚ್ಚರಿ ಏನೆಂದರೆ, ಗಾಯಕ ವಿದ್ವಾನ್ ಕೊವೈ ಎನ್. ಹರಿ ಆದರ್ಶ ಅವರು ಇದೇ ಮೊದಲ ಬಾರಿಗೆ ಭರತನಾಟ್ಯಕ್ಕೆ ಹಾಡುವ ಮೂಲಕ ಪದಾರ್ಪಣೆ ಮಾಡಿದರು. ಈ ಮೊದಲಲ್ಲೂ ಮಿಥುನ್ ಶ್ಯಾಮ್ ಅವರ ಚೊಚ್ಚಲ ವರ್ಣ ‘ಶ್ರೀರಂಗನೆ ಪಣಿಮನವೆ…’ ಕೃತಿ ನೃತ್ಯ ಸಹಿತ ಅನಾವರಣವೂ ಆಗಿರುವುದು ಗಮನಾರ್ಹ. ಇದಕ್ಕೆ ಸಾಕ್ಷಿ ನಾಟ್ಯ ಮಾಡಿರುವುದು ಮತ್ತು ವರ್ಣಕ್ಕೆ ಜತಿಗಳ ಸಂಯೋಜನೆ ಮಾಡಿರುವ ವಿದ್ವಾನ್ ಧನುಷ್ ಅವರೇ ಮೃದಂಗ ವಾದನದಲ್ಲಿರುವುದು ಇನ್ನೊಂದು ವಿಶೇಷ. ಇವೆಲ್ಲವೂ ಆ ಶ್ರೀರಂಗನ ಇಚ್ಚೆಯಂತೆ ನೆರವೇರಿದೆ ಎನ್ನಬಹುದು. ಕೆಲವೊಂದು ಸಂಗತಿಗಳು ಘಟಿಸಲು ಕಾಲ ಕೂಡಿ ಬರಬೇಕಂತೆ, ಹಾಗೆಯೇ ಈ ಎಲ್ಲಾ ವಿಶೇಷಗಳಿಗೆ ಸಾಕ್ಷಿ ಪ್ರದರ್ಶನದ ವೇದಿಕೆ ಸಾಕ್ಷಿಯಾಯಿತು.
ಅಂತಿಮವಾಗಿ ಸಾಕ್ಷಿ ಅವರು, ವಿರಹ ಶೃಂಗಾರ ಪದಂ, ತಿಲ್ಲಾನ ಮತ್ತು ದಾಸರ ಕೃತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು. ಪದಂ ಮತ್ತು ತಿಲ್ಲಾನಗಳನ್ನು ಅಷ್ಟೇ ಪ್ರೌಢ ನೃತ್ತ, ಭಾವಾಭಿನಯ ಮತ್ತು ಅಂಗಾಭಿನಯದೊಂದಿಗೆ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲ, ಈ ಮೂಲಕ ವೇದಿಕೆ ಕಲ್ಪಿಸಿಕೊಟ್ಟ ವೈಷ್ಣವಿ ನಾಟ್ಯಾಲಯದ ಹೆಮ್ಮೆಯ ಪ್ರತಿಭೆ ಎನ್ನುವುದನ್ನು ಮಗದೊಮ್ಮೆ ಸಾಬೀತುಪಡಿಸಿದರು.