• ನಗರೀಕರಣದ ಅಮಲು; ಬದುಕು ಕವಲು • ಮನಮಿಡಿಸಿದ ನಾಲ್ವರು ಕಲಾವಿದರ ಅಭಿವ್ಯಕ್ತಿ
20ನೇ ಶತಮಾನದ ಪ್ರಮುಖ ಬೆಳವಣಿಗೆ ಯಾವುದು ಎಂದು ಪ್ರಶ್ನಿಸಿದರೆ ಏನೆಲ್ಲಾ ಉತ್ತರ ಬರಲುಸಾಧ್ಯ?
ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಗೆ ಉತ್ತರಿಸುವಾಗ ನಿತ್ಯ ಬಳಕೆ ವಸ್ತುಗಳಲ್ಲಿ ಆದ ಕ್ರಾಂತಿಕಾರಿ ಬೆಳವಣಿಗೆಯನ್ನು ಉತ್ತರವಾಗಿಸಿಬಿಡುತ್ತೇವೆ. ಬೇರಿನ್ನಾವುದೇ ವಿಚಾರಗಳು ಪ್ರಸ್ತಾಪವಾಗುವುದಿಲ್ಲ. ಆದರೆ, ಇತಿಹಾಸದ ಪುಟದಲ್ಲಿ ದಾಖಲಾದಂತೆ 20ನೇ ಶತಮಾನದ ಪ್ರಮುಖ ಬೆಳವಣಿಗೆ ನಗರೀಕರಣ (urbanization). ಸರಿ-ತಪ್ಪು ಎನ್ನುವ ವಾದ ಇಲ್ಲಿ ಅಪ್ರಸ್ತುತ. ಇತಿಹಾಸ ತಜ್ಞರು ಇದನ್ನು ನಿರ್ಧರಿಸಿದ್ದು. ಸರಿಯೂ ಇರಬಹುದು, ತಪ್ಪೂ ಇರಬಹುದು. ಮೇಲ್ನೋಟಕ್ಕಂತೂ ಇದು ಸರಿಯಾದ ಉತ್ತರವಾಗಿಯೇ ಕಾಣಿಸುತ್ತದೆ.
ಕಳೆದೊಂದು ಶತಮಾನದ ಅಥವಾ 50 ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮೆಲುಕು ಹಾಕಿದರೆ ಮೈನವಿರೇಳಿಸುವ ಸಂಗತಿಗಳು ಕಣ್ಣೆದುರಾಗುತ್ತವೆ. ‘ ಬದಲಾವಣೆ ಜಗದ ನಿಯಮ ‘ ಎನ್ನುವಂತೆ ಮನುಷ್ಯ ಅಥವಾ ಜೀವಿ ತನ್ನ ಸುತ್ತ ನಡೆಯುವ ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಸಾಗಬೇಕು. ಇದು ಅನಿವಾರ್ಯ ಎನ್ನುವ ಪರಿಸ್ಥಿತಿಯಲ್ಲಿ ಇರಬೇಕಾಗುತ್ತದೆ. ಒಗ್ಗಿಕೊಳ್ಳದಿದ್ದಲ್ಲಿ ಒಂದಿಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲವೊಮ್ಮೆ ಬದಲಾವಣೆ ನಿರಾಕರಿಸುತ್ತ ಅದನ್ನೇ ಒಪ್ಪಿ ಅಪ್ಪಿಕೊಳ್ಳುವ ಸಂದರ್ಭ ಎದುರಾಗಬಹುದು.
| ‘ ಒಂದೆಜ್ಜೆ ಮುಂದಕ್ಕೆ ‘ ಪ್ರದರ್ಶನ |
ಬೆಂಗಳೂರು ಎನ್ನುವ ಪ್ರದೇಶ ಹೇಗೆ ನಗರವಾಗಿ, ಮಹಾನಗರವಾಗಿ ಬದಲಾಯಿತು ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ನೋಡನೋಡುತ್ತಲೇ ಅರಿವಿಗೆ ಬಾರದೇ ಅದೆಷ್ಟೋ ಬದಲಾವಣೆ ಕಂಡಿದ್ದೇವೆ. ನಗರೀಕರಣ ಮತ್ತು ಇದರಿಂದಾದ, ಆಗಬಹುದಾದ ಪರಿಣಾಮ ಪ್ರತಿಬಿಂಬಿಸುವ ಕಲಾಕೃತಿಗಳ “ONE FOOT FORWARD” ಕಲಾಪ್ರದರ್ಶನ ಬೆಂಗಳೂರಿನ ಎಂಕೆಎಫ್ ಮ್ಯೂಸಿಯಂ ಆಫ್ ಆರ್ಟ್ (MKF Museum of Art) ಗ್ಯಾಲರಿಯಲ್ಲಿ ನಡೆಯುತ್ತಿದೆ. ಮಹಾನಗರದ ಕಲಾವಿದರಾದ ನಂದೇಶ ಶಾಂತಿ ಪ್ರಕಾಶ್ (Nandesha Shanti Prakash), ರಾಣಿ ರೇಖಾ (Rani Rekha), ವೇಣುಗೋಪಾಲ ವಿ.ಜಿ. (Venugopal V.G.) ಮತ್ತು ಹೇಮಂತ್ ಕುಮಾರ್ (Hemant Kumar) ಅವರ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಶೀರ್ಲೆ ಮ್ಯಾಥೆವ್ (Shirley Mathew) ಅವರು ಈ ಪ್ರದರ್ಶನವನ್ನು ಕ್ಯುರೇಟ್ ಮಾಡಿದ್ದಾರೆ.
ಪ್ರದರ್ಶನದ ಶೀರ್ಷಿಕೆಯೇ ಹೇಳುವಂತೆ ಕಲಾಕೃತಿಗಳು ನೋಡುಗರನ್ನು ಒಂದೆಜ್ಜೆ ಮುಂದಕ್ಕಿಟ್ಟು ನೋಡುವಂತೆ ಮಾಡುತ್ತವೆ. ಎಲ್ಲಾ ಕಲಾವಿದರೂ ಒಂದು ಚದರ (12inch X 12inch) ಅಳತೆಯ ಕ್ಯಾನ್ವಾಸ್ ಆಯ್ಕೆ ಮಾಡಿಕೊಂಡಿದ್ದರಿಂದಲೂ, ಅಳತೆಗನುಗುಣವಾದ ವಸ್ತುವಿಷಯ, ಸಂಯೋಜನೆ ಇರುವ ಕಾರಣ ನೋಡುಗನನ್ನು ಹತ್ತಿರಕ್ಕೆ ನಿಲ್ಲುವಂತೆ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಲ್ವರೂ ಕಲಾವಿದರ ಸಮಕಾಲೀನ (contemporary) ಆಲೋಚನಾ ಲಹರಿ (thought process) ಭಿನ್ನವೆನಿಸುವಂತಿದೆ.
ನಂದೇಶ್ ಅವರ ‘Peace’ ಶೀರ್ಷಿಕೆಯ ಕಲಾಕೃತಿ ಗಾಢ ವರ್ಣಗಳಿಂದ ಕೂಡಿದ್ದು, ಬದುಕಿನ ಸಂಕೀರ್ಣತೆಯನ್ನು ಹೇಳುವಂತಿದೆ. ಮೂರ್ತದಲ್ಲೂ ಅಮೂರ್ತ ಭಾವ ಮೂಡಿಸುತ್ತವೆ. ಬಣ್ಣಗಳ ಬಳಕೆಯಲ್ಲಿ ಕುತೂಹಲ ಉಳಿಸಿದ್ದು ವಿಶೇಷ. ಕತ್ತಲಲ್ಲಿ ಮಿನುಗುವ ದೀಪ್ತಿಶೀಲ ವರ್ಣ (Luminescent color) ಬಳಸಿ ನೋಡುಗರ ವಿಭಿನ್ನ ಅನುಭವಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವೇಣುಗೋಪಾಲ ಅವರ ಕಲಾಕೃತಿಗಳಲ್ಲಿ ಎಂದಿನಂತೆ ಮಾರ್ಮಿಕವಾದ ಸಂದೇಶವಿದೆ. ನಗರದ ಮೇಳಗೀತೆ ಎನ್ನುವ ಸರಣಿ ಕಲಾಕೃತಿಗಳು ಗಮನ ಸೆಳೆಯುತ್ತವೆ. ‘ An Ode to the City ‘ ಎಂದು ಹೇಳುವ ಮೂಲಕ Advance, Esperance, Fragrance, Resonance, Reverence ಮತ್ತು Expense ಶೀರ್ಷಿಕೆಯ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯ ಯಾವುದೇ ಪ್ರದೇಶ ಸುತ್ತಿಬಂದರೂ ಈ ಅನುಭವ ಸಾಧ್ಯ ಎಂದಂತಿದೆ. ಮೇಲ್ನೋಟಕ್ಕೆ ಕಾಲ್ಪನಿಕ ಅನಿಸಬಹುದು. ಆದರೆ, ಮರ್ಮವರಿಯಲು ಆಳಕ್ಕಿಳಿಯಬೇಕಷ್ಟೆ.
ಹೇಮಂತ್ ಕುಮಾರ್ ಅವರ ‘Fading Reality’ ಶೀರ್ಷಿಕೆಯ ಸರಣಿ ಕಲಾಕೃತಿಗಳು ನೋಡುಗರನ್ನು ಅನುಕಂಪದ ಅಲೆಯಲ್ಲಿ ನಿಲ್ಲಿಸುತ್ತವೆ. ಕಾರಣ ನಗರೀಕರಣ. ಪಕ್ಷಿಗಳ ಅಕ್ಷಿ ಕಾಣದು ಎನ್ನುವ ಪರಿಸ್ಥಿತಿ ಎದುರಾಗಿದೆ. ಮನುಷ್ಯನ ಜೊತೆ ಜೊತೆಯಲ್ಲೆ ಬದುಕು ಸಾಗಿಸಬೇಕಾದ ಗುಬ್ಬಿ ಸೇರಿದಂತೆ ಇನ್ನಿತರ ಪಕ್ಷಿಗಳು ಕಂಗೆಟ್ಟಿವೆ. ಬದಲಾದ ಪರಿಸ್ಥಿತಿಗೆ ಒಗ್ಗಿಕೊಳ್ಳಬೇಕಿದೆ. ಗಾಢ ಬಣ್ಣಗಳ ನಿಗೂಢ ಜಗತ್ತು ಕಣ್ಮರೆ ಆದೀತು ಎನ್ನುವ ಕಳಕಳಿ ತೋರಿದ್ದಾರೆ.
ರಾಣಿ ರೇಖಾ ಅವರ ಕಲಾಕೃತಿಗಳಲ್ಲಿ ಬೆಂಗಳೂರು ಮತ್ತು ಬೆಂಗಳೂರಿಗರ ತಲ್ಲಣಗಳು ಮೇಳೈಸಿವೆ. ಭಾವಪೂರ್ಣ ಸ್ವಗತ ಅನಿಸುವಂತಹ ಅಭಿವ್ಯಕ್ತಿ ಕಾಣಬಹುದು. ನಗರೀಕರಣ, ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಹಸಿರು ಸಂಹಾರದಿಂದ ತತ್ತರಿಸಿದ್ದೇವೆ ಎನ್ನುವ ಸಂದೇಶವಿದೆ. ಗಾಬರಿ ಹುಟ್ಟಿಸುವ ಹರಿಬಿರಿಯ ಜಗತ್ತಿನಲ್ಲಿ ಅದೆಷ್ಟೋ ಭಾವ, ಜೀವವಗಳು ಕಮರಿಹೋಗುತ್ತಿವೆ ಎನ್ನುವ ಆತಂಕ ತೋರಿದ್ದಾರೆ.
Friends, ಒಂದೊಳ್ಳೆಯ ಪ್ರದರ್ಶನ “ONE FOOT FORWARD” ಜೂನ್ 2, ಭಾನುವಾರ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.