ಹಿರಿಯ ಕಲಾವಿದೆ, ಕಲಾ ಸಂಘಟಕಿ ಎಂಜೆಕೆ ಇನ್ನಿಲ್ಲ

Share This

  • ಹಿರಿಯ ಕಲಾವಿದೆ, ವೆಂಕಟಪ್ಪ ಪ್ರಶಸ್ತಿ ಪುರಸ್ಕೃತೆ ಎಂ.ಜೆ.ಕಮಲಾಕ್ಷಿ ವಿಧಿವಶ

ಹಿರಿಯ ಕಲಾವಿದೆ, ಕಲಾ ಸಂಘಟಕಿಯಾಗಿಯೂ ಗುರುತಿಸಿಕೊಂಡಿದ್ದ ವರ್ಣಶಿಲ್ಪಿ ಕೆ. ವೆಂಕಟಪ್ಪ ಪ್ರಶಸ್ತಿ ಪುರಸ್ಕೃತೆ ಪ್ರೋ. ಎಂ.ಜೆ.ಕಮಲಾಕ್ಷಿ ಅವರು ವಿಧಿವಶರಾಗಿದ್ದಾರೆ. 30-12-2025ರಂದು ಮಧ್ಯಾಹ್ನ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಕಲಾಬಳಗವನ್ನು ಅಗಲಿದ್ದಾರೆ ಎನ್ನುವ ಸುದ್ದಿ ಬಂದಾಗ ಆಘಾತವಾಯಿತು.

ಅಯ್ಯೋ ದೇವರೆ, ನಾಲ್ಕಾರು ದಿನಗಳ ಹಿಂದಷ್ಟೇ ಮಾತನಾಡಿಸಿದ್ದೆನಲ್ಲ ಅನಿಸುವಾಗಲೇ ಕಣ್ಣುಗಳಿಂದ ಹನಿ ನೀರು ಉದುರಿದವು. ಆರೋಗ್ಯವಾಗಿದ್ದೀರಾ ಎಂದಾಗಲೆಲ್ಲ, ನೋಡ್ರಿ ಹೀಗಿದ್ದೇನೆ… ಎಂದು ನಗು ಬೀರಿ ತಲೆಯ ಮೇಲೆ ಕೈಸವರಿ ಆಶೀರ್ವಾದ ಮಾಡುತ್ತಿದ್ದ ಕಮಲಾಕ್ಷಿ ಮೇಡಂ ಇನ್ನಿಲ್ಲ ಎನ್ನುವುದನ್ನು ನಿಜಕ್ಕೂ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ನಿಧನ ಸುದ್ದಿ ತಿಳಿದು ಆದರಿಸಿಕೊಳ್ಳಲು ಕೊಂಚ ಸಮಯ ಬೇಕಾಯಿತು. ಕಾರಣ ಇಷ್ಟೆ, ಸಾಂಪ್ರದಾಯಿಕ ಚಿತ್ರಕಲೆಗೆ ಸಂಬAಧಿಸಿ ೨೦ ವರ್ಷಗಳ ಹಿಂದೆ ಮಾಹಿತಿಗಾಗಿ ಅವರನ್ನೊಮ್ಮೆ ಮಾತನಾಡಿಸಿದ ಸಂದರ್ಭದಲ್ಲಿ ಕಿವಿ ಮಾತೊಂದನ್ನು ಹೇಳಿದ್ದು ನೆನಪಿಗೆ ಬಂತು. “ಚಿತ್ರಕಲೆ ವ್ಯಾಸಂಗ ಮಾಡಿ ಇನ್ನೇನೋ ಮಾಡುತ್ತಿದ್ದೀಯಲ್ಲ. ಪೇಂಟಿAಗ್ ಮಾಡುವುದನ್ನು ಬಿಡಬೇಡ. ಕಡೇ ಪಕ್ಷ ಸ್ಕೆಚ್ ಮಾಡುತ್ತಿರು” ಎಂದು ನನ್ನ ಕಾಲೇಜು ದಿನಗಳ ಕಲಾಕೃತಿಗಳನ್ನು ನೋಡಿ ಹೇಳಿದ್ದರು. ಅದಾದ ಬಳಿಕ ಕಳೆದ ಆರೇಳು ವರ್ಷಗಳಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನನ್ನ ಕಲಾಕೃತಿಗಳು ಪ್ರದರ್ಶನವಾದಾಗಲೆಲ್ಲ ಹೀಗೆ ಮುಂದುವರಿಸು ಎಂದು ತಲೆ ಸವರಿ ಹೋಗುತ್ತಿದ್ದರು.

ಕಮಲಾಕ್ಷಿ ಮೇಡಂ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪ್ರೀತಿ ಅಜರಾಮರ. ಹೋಗಿ ಬನ್ನಿ.

 

| ನಾಡಿನ ಹೆಮ್ಮೆಯ ಕಲಾವಿದೆ |

ಪ್ರೋ. ಎಂ.ಜೆ.ಕಮಲಾಕ್ಷಿ ಅವರು ಚಿರಪರಿಚಿತರು. ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹೆಚ್ಚಿನವರು ಕಮಲಾಕ್ಷಿ ಮೇಡಂ ಅವರನ್ನು ಬಲ್ಲರು. ಕರ್ನಾಟಕ ಚಿತ್ರಕಲಾ ಪರಿಷತ್ ಕಲಾಕಾಲೇಜಿನ ಪ್ರಾಂಶುಪಾಲೆಯಾಗಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಸಂಸ್ಥಾಪಕ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದವರು. ಅಷ್ಟೇ ಅಲ್ಲ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದವರು. ಅನೇಕ ಸಂದರ್ಭಗಳಲ್ಲಿ ಕಲಾ ಸಂಘಟಕಿಯಾಗಿ ಮುಂದೆ ನಿಂತು ಕಲಾವಿದರ ಪರವಾದ ಧ್ವನಿ ಮೊಳಗಿಸಿದವರು.

ತಮ್ಮ ಸಮಕಾಲೀನರ ಬಳಗದಲ್ಲಿ ಎಂಜೆಕೆ ಎಂದೇ ಪರಿಚಿತರಾಗಿದ್ದ ಎಂ.ಜೆ.ಕಮಲಾಕ್ಷಿ ಅವರು ಬಾಲ್ಯದಲ್ಲೇ ಚಿತ್ರಕಲೆಯ ಬಗ್ಗೆ ಒಲವು ಹೊಂದಿದ್ದವರು. ಮಲ್ಲೇಶ್ವರಂನ ತಮ್ಮ ಮನೆಯ ಬಳಿಯೇ ನಡೆದ ಕಲಾಶಿಬಿರವೊಂದಕ್ಕೆ ಹೋಗಿ ಮುಂದೆ ಕಲಾವಿದೆಯಾಗಿಯೇ ಬೆಳೆದುನಿಂತ, ಅನೇಕ ಸವಾಲುಗಳನ್ನು ಎದುರಿಸಿ ನಾಡಿನ ಪ್ರತಿಷ್ಠಿತ ಪ್ರಶಸ್ತಿಯಾದ ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿಗೂ ಭಾಜನರಾದ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್‌ನ ಆರಂಭದ ದಿನದಿಂದಲೂ ಪ್ರೋ.ನಂಜುರಾವ್ ಅವರ ಜತೆ ಜೊತೆಯಾಗಿ ಹೆಜ್ಜೆ ಇಟ್ಟವರು. ಕಲಾಭ್ಯಾಸವನ್ನು ಮುಂದುವರಿಸಿ ಬಳಿಕ ಪರಿಷತ್‌ನ ಕಲಾ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ ಅನುಭವಿ ಕಲಾವಿದರು. 1966ರಲ್ಲಿ ಕಲಾ ಶಿಬಿರದ ಮೂಲಕ ಕಲಾವಿದೆಯಾಗುವ ಕನಸು ಕಂಡ ಕಮಲಾಕ್ಷಿ ಮೇಡಂ ಮುಂದೆ ಕಲೆಯಲ್ಲೇ ಡಿಪ್ಲೋಮಾ ಪದವಿ ಪಡೆದು 1971ರಲ್ಲಿ ಬೋಧನಾ ಸೇವೆಯನ್ನೇ ಆಯ್ದುಕೊಂಡರು. ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.

ಕರ್ನಾಟಕ ಚಿತ್ರಕಲಾ ಕ್ಷೇತ್ರದ ಕುರಿತು ಮಾತು ಹೊರಳಿಸುವಾಗಲೆಲ್ಲ ಸಾಂಪ್ರದಾಯಿಕ ಕಲೆಯಾಗಿರುವ ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳನ್ನು ಸಂಗ್ರಹಿಸಿ ಇಡುವುದರಲ್ಲಿ ಅವರ ಪಾತ್ರ ಅತ್ಯಂತ ಮೇಲ್ದರ್ಜೆಯದು. ಅಷ್ಟೇ ಅಲ್ಲ, ಅನೇಕ ಕಡೆಗಳಲ್ಲಿ ಸುತ್ತಾಟವನ್ನೂ ನಡೆಸಿ, ಕಾರ್ಯಾಗಾರಗಳನ್ನು ನಡೆಸಿ ಕರ್ನಾಟಕದಲ್ಲಲಿ ಸಾಂಪ್ರದಾಯಿಕ ಕಲೆ ವ್ಯಾಪಿಸಿಕೊಂಡಿರುವುದರ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಅದೇ ಕಾರಣಕ್ಕಾಗಿಯೋ ಏನೋ ಅವರ ಆಧುನಿಕ ಕಲಾ ಚಿತಂನೆಗಳಿಂದ ಮೂಡಿ ಬಂದಿರುವ ಕಲಾಕೃತಿಗಳಲ್ಲೂ ಸಾಂಪ್ರದಾಯಿಕ ಕಲಾಶೈಲಿಗಳಲ್ಲಿನ ಪ್ರಭಾವನ್ನು ಕಾಣಬಹುದಾಗಿತ್ತು. ಕರ್ನಾಟಕ ಸೇರಿದಂತೆ ದೇಶದ ಅನೇಕ ಹಿರಿಯ ಕಲಾವಿದರಿಗೆ ನಿಕಟವರ್ತಿಯಾಗಿದ್ದ ಕಮಲಾಕ್ಷಿ ಅವರು ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಂಬಂಧ ವರ್ಣಿಸಲು ಸಾಧ್ಯವಿಲ್ಲ. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೊಡುಗೆಯೂ ಬಲು ದೊಡ್ಡದಿದೆ.

ಕಮಲಾಕ್ಷಿ ಮೇಡಂ ಅವರ ಕಲಾ ಸಾಧನೆಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ(2015ರಲ್ಲಿ), ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ(1986)  ಸೇರಿದಂತೆ  ಅನೇಕ ಪ್ರಶಸ್ತಿಗಳು ಮುಡಿಗೇರಿವೆ.

 

 

 

 


Share This

Leave a Reply

Your email address will not be published. Required fields are marked *