9 ಅಡಿ ಉದ್ದದ ಬಿಳಿ ಹೆಬ್ಬಾವೊಂದು ಉತ್ತರ ಕನ್ನಡ ಕುಮಟಾದ ಹೆಗಡೆ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ಕಾಣಿಸಿಕೊಂಡಿತ್ತು. ಸ್ಥಳೀಯ ವ್ಯಕ್ತಿ ಪವನ್ ಎನ್ನುವವರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿತ್ತು. ಸದ್ಯ ಈ ಹಾವು ಮೈಸೂರು ಮೃಗಾಲಯದಲ್ಲಿದೆ.
ಬಿಳಿ ಹಾವು ಎಂಬ ಕಾರಣಕ್ಕೆ ಸುದ್ದಿಯಾಗಿ, ಸದ್ದು ಮಾಡಿದೆ. ಬಿಳಿ ಹೆಬ್ಬಾವು ಅಪರೂಪ ಆದ್ದರಿಂದ ವಿಡಿಯೋ, ಸುದ್ದಿ ವೈರಲ್ ಆಗಿದೆ. ಜನರಲ್ಲಿ ಕುತೂಹಲ ಮೂಡಿಸಿದೆ.
ಹೆಬ್ಬಾವು ಬಿಳಿಯಾಗಿ ಇರುವುದೇಕೆ? ಯಾವ ಕಾರಣಕ್ಕಾಗಿ ಬಿಳಿಯಾಗಿದೆ? ಇಂತಹ ಸಾಕಷ್ಟು ಪ್ರಶ್ನೆಗಳು ಮೂಡಬಹುದು. ಕೆಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ಹೆಬ್ಬಾವು ಬೂದುಗಪ್ಪು ಬಣ್ಣದಿಂದ ಕೂಡಿರುತ್ತದೆ. ಕೆಳಭಾಗದಲ್ಲಿ ಹಳದಿ ಮಿಶ್ರಿತ ಬಿಳಿ ಬಣ್ಣ ಇರುತ್ತದೆ. ಭಾರತದ ಬಹುತೇಕ ಪ್ರದೇಶಗಳಲ್ಲಿ ಈ ವರ್ಣ ಸಂಯೋಜನೆಯ ಹಾವುಗಳು ಇವೆ. ಬಿಳಿ ಹೆಬ್ಬಾವು ಬಹಳ ಅಪರೂಪ.
ಬಿಳಿ ಹೆಬ್ಬಾವು ಈ ಹಿಂದೆಯೂ ಕಾಣಿಸಿಕೊಂಡಿವೆ. ವರ್ಷದ ಹಿಂದೆ ಕುಮಟಾದ ಮಿರ್ಜಾನ್ ಎಂಬಲ್ಲಿ ಕಾಣಿಸಿತ್ತು. ದಕ್ಷಿಣ ಕನ್ನಡದ ಬಂಟ್ವಾಳ, ಹಿಮಾಚಲ ಪ್ರದೇಶದ ಛಂಬಾ ಪಟ್ಟಣದಲ್ಲಿಯೂ ಕಾಣಿಸಿಕೊಂಡಿತ್ತು. ಆದರೆ ಇಷ್ಟು ಉದ್ದದ ಬಿಳಿ ಹೆಬ್ಬಾವು ಇದೇ ಮೊದಲಬಾರಿಗೆ ಕಾಣಿಸಿಕೊಂಡಿದೆ ಎನ್ನುವುದು ವಿಶೇಷ.
| ಹೆಬ್ಬಾವು ಬಿಳಿ ಯಾಕೆ? |
ಪ್ರತಿಯೊಂದು ಜೀವಿಯಲ್ಲೂ ಚರ್ಮದ ಬಣ್ಣಕ್ಕೆ ಸಂಬಂಧಿಸಿ ವರ್ಣದ್ರವ್ಯ (Melanin/ ಮೆಲನಿನ್) ಇರುತ್ತದೆ. ಈ ವರ್ಣದ್ರವ್ಯ ಕೊರತೆ ಆದಲ್ಲಿ ಆ ಜೀವಿ ಬಿಳಿಯ ಬಣ್ಣಕ್ಕೆ ತಿರುಗಿಕೊಳ್ಳುತ್ತದೆ. ಇಂತಹ ಸಾಧ್ಯತೆಗಳಿಂದ ಮನುಷ್ಯನೂ ಹೊರತಲ್ಲ. ಮನುಷ್ಯನ ಚರ್ಮದ ಬಣ್ಣದಲ್ಲೂ ಈ ಪ್ರಕ್ರಿಯೆ ನಡೆಯುತ್ತದೆ.
| ಏನಿದು ಮೆಲನಿನ್ ? |
ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಮೆಲನಿನ್ ವರ್ಣದ್ರವ್ಯಗಳು ಅಮೈನೋ ಆಮ್ಲದ ಟೈರೋಸಿನ್ ನಿಂದ ಜನ್ಯವಾಗುತ್ತವೆ. ಜೀವವಿಜ್ಞಾನದ ಮೆಲನಿನ್ ನಲ್ಲಿ ಅತ್ಯಂತ ಕಡಿಮೆ ಸಾಮಾನ್ಯ ರಚನೆಯೆಂದರೆ ಯುಮೆಲನಿನ್. ಇದು ಡೈಹೈಡ್ರಾಕ್ಸಿ ಇಂಡೋಲ್ಕಾರ್ಬಾಕ್ಸಿಲಿಕ್ ಆಮ್ಲಗಳು ಹಾಗೂ ಅವುಗಳ ಅಪಕರ್ಷಿತ ರೂಪಗಳ ಕಂದು-ಕಪ್ಪು ಪಾಲಿಮರ್ ಗಳನ್ನು ಒಳಗೊಂಡಿದೆ.
ತಾಂತ್ರಿಕವಾಗಿ ಎಲ್ಲ ಮೆಲನಿನ್ ಗಳು ಪಾಲ್ಯಸೆಟಿಲಿನ್ ನ ಜನ್ಯ ರೂಪಗಳಾಗಿವೆ. ಅತ್ಯಂತ ಸಾಮಾನ್ಯ ಮೆಲನಿನ್ ಎಂದರೆ ಡೋಪಮೆಲನಿನ್. ಇದು ಪಾಲ್ಯಸೆಟಿಲಿನ್, ಪಾಲ್ಯನಿಲಿನ್ ಹಾಗೂ ಪಾಲ್ಯಪೈರ್ರೋಲ್ ನ ಮಿಶ್ರಿತ ಸಹಪಾಲಿಮರ್. ಮತ್ತೊಂದು ಸಾಮಾನ್ಯ ರೂಪದ ಮೆಲನಿನ್ ಎಂದರೆ ಫಿಯೋಮೆಲನಿನ್. ಬೆಂಜೋಥಿಯಾಜಿನ್ ನ ಏಕಾಂಶವಾದ ಈ ಕೆಂಪು-ಕಂದು ಪಾಲಿಮರ್ ಗಳು ಕೆಂಪು ಕೂದಲು ಹಾಗೂ ಚರ್ಮದ ಮೇಲಿನ ನಸುಕಂದು ಮಚ್ಚೆಗೆ ಕಾರಣವಾಗಿರುತ್ತವೆ.
ಆರ್ಕಿಯ ಹಾಗೂ ಬ್ಯಾಕ್ಟೀರಿಯ ಜಗತ್ತಿನಲ್ಲಿ ಮೆಲನಿನ್ ನ ಉಪಸ್ಥಿತಿ ಬಗ್ಗೆ ಚರ್ಚೆ ಮುಂದುವರಿದಿದೆ ಎನ್ನುವುದು ತಜ್ಞರ ಅಂಬೋಣ.
| ಭಾರತದ ಹೆಬ್ಬಾವು (Indian Pythan) |
ಹೆಸರಲ್ಲೇ ಇರುವಂತೆ ದೊಡ್ಡದಾಗಿರುವ ಹಾವು ಇದು. ಶ್ವಯು, ಅಜಗರ ಎಂದೂ ಕರೆಯಲಾಗುತ್ತದೆ. ಭಾರತದ ಹೆಬ್ಬಾವು ವಿಶ್ವದ ಸರೀಸೃಪಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿದೆ.
ಹೆಬ್ಬಾವುಗಳು ಭಾರತದಲ್ಲಷ್ಟೇ ಅಲ್ಲ ದಕ್ಷಿಣ ಏಷ್ಯಾದ ಕಾಡುಗಳಲ್ಲಿಯೂ, ಬರ್ಮಾದ ಕಾಡುಗಳಲ್ಲಿಯೂ ಇವೆ. ಭಾರತದಲ್ಲಿ ಕಂಡುಬರುವ ಹೆಬ್ಬಾವುಗಳು ಕನಿಷ್ಟ 6 ಅಡಿಯಷ್ಟು, ಗರಿಷ್ಠ 9ರಿಂದ 12 ಅಡಿಯಷ್ಟು ಉದ್ದ ಬೆಳೆಯುತ್ತದೆ. 16 ಅಡಿಯಷ್ಟು ಬೆಳೆದ ಉದಾಹರಣೆಯೂ ಇವೆ. ಆದರೆ ಬಹಳ ಅಪರೂಪ.
ಮಳೆಗಾಲದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತವೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ನಾಯಿ, ಹಸುಗರು, ಕೋಳಿ, ಮೇಕೆ ಇತ್ಯಾದಿ ಸಾಕುಪ್ರಾಣಿಗಳನ್ನು ನುಂಗಿರುವ ನೂರಾರು ಉದಾಹರಣೆಗಳು ಸಿಗುತ್ತವೆ. ಪ್ರಾಣಿಗಳನ್ನು ತನ್ನ ದೇಹದಲ್ಲಿಯೇ ಸುತ್ತಿ, ನುಣುಚಿಕೊಳ್ಳಲಾಗದ ರೀತಿಯಲ್ಲಿ ಹಿಡಿದು ನುಂಗುತ್ತವೆ. ಬಳಿಕ ಮರಕ್ಕೆ ಸುತ್ತಿಕೊಂಡು ಕಡೆದು ಕಡೆದು ಜೀರ್ಣಿಸಿಕೊಳ್ಳುವುದು ಸ್ವಭಾವ.
ಚಿತ್ರ, ವಿಡಿಯೋ ಕೃಪೆ: ಗೋಪಿ ಜಾಲಿ.
ಇಲ್ಲಿದೆ ನೋಡಿ ಭಯಾನಕ ವಿಡಿಯೋ : https://fb.watch/mNc1pMG2wm/?mibextid=2JQ9oc