• 1 ಶಾಂತಿರೋಡ್ ಗ್ಯಾಲರಿಯಲ್ಲಿ Recipes and Cookbooks ಕಲಾಪ್ರದರ್ಶನ
ಅನೇಕ ಸಂದರ್ಭಗಳಲ್ಲಿ ಕಲಾಕೃತಿಗಳು ಕ್ಷಿಪ್ರಗತಿಯಲ್ಲಿ ಅಥವಾ ಆಮೆಗತಿಯಲ್ಲಿಯಾದರೂ ಸಾಮಾನ್ಯ ವರ್ಗವನ್ನು ತಲುಪುವುದಿಲ್ಲ. ಈ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ನವ್ಯ, ಸಮಕಾಲೀನ ಕಲಾಕೃತಿಗಳ ವಿಚಾರವಾಗಿ ಹೆಚ್ಚಾಗಿ ಕೇಳಿಸಿಕೊಳ್ಳುವುದುಂಟು. ಇದಕ್ಕೆ ಪ್ರಮುಖವಾಗಿ ಹೇಳಬಹುದಾದ ಎರಡು ಕಾರಣಗಳನ್ನು ಹೇಳಬಹುದು. ಕಲಾವಿದನ ಕಲ್ಪನೆ ಅಥವಾ ಪರಿಕಲ್ಪನೆಯ ಆಲೋಚನಾ ಪ್ರಕ್ರಿಯೆಯಲ್ಲಿನ ತೊಡಕುಗಳು, ನಿಗೂಢಗಳು ಒಂದಾದರೆ, ನೋಡುಗನ ಮಾಹಿತಿ ಕೊರತೆ ಇನ್ನೊಂದು. ಈ ಎರಡೂ ವಾಸ್ತವಾಂಶಗಳು ತರ್ಕಬದ್ಧವಾದುದೆ. ಹಿಂದೆಯೂ ಇತ್ತು, ಈಗಲೂ ಇದೆ, ಮುಂದುವರಿಯಲೂಬಹುದು. ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ದೃಢವಾಗಿ ಹೇಳಲಾಗದು. ಆದರೆ ಸಾಮಾನ್ಯರಲ್ಲಿನ ಮಾಹಿತಿ ಕೊರತೆ ನೀಗಿಸಲು ಖಂಡಿತವಾಗಿ ಸಾಧ್ಯವಿದೆ!
ಹೌದು, ಈ ಪ್ರಕ್ರಿಯೆ ಕಲಾವಿದರಿಂದಲೇ ಆಗಬೇಕು. ಕಲಾ ಪ್ರಕಾರಗಳಲ್ಲಿನ ಬದಲಾವಣೆಯ ಹಂತದಲ್ಲೇ ಈ ಬಗ್ಗೆ ಹೆಚ್ಚೆಚ್ಚು ಮಾಹಿತಿಗಳು ಹಂಚಲ್ಪಟ್ಟಾಗ ಸಹಜವಾಗಿ ಸಾಮಾನ್ಯನ ಕಿವಿಗೂ ಬೀಳಲು ಸಾಧ್ಯವಾಗಲಿದೆ. ಕಲಾವಿದರು ಅದು ನನ್ನ ಕೆಲಸವಲ್ಲ ಎಂದು ಕುಳಿತರೆ ಒಂದು ವರ್ಗದ ಜನರನ್ನು ತಲುಪುವಲ್ಲಿ ಇನ್ನಷ್ಟು ಸಮಯಗಳು ಬೇಕಾದೀತು. ತನ್ನ ಜವಾಬ್ದಾರಿಯೂ ಹೌದು ಎಂದು ಅರಿತು ಮಾಹಿತಿ ನೀಡುವ ಪ್ರಯತ್ನ ಮಾಡಿದಾಗ ಫಲಿತಾಂಶ ಕಂಡುಕೊಳ್ಳಲು ಸಾಧ್ಯ.
ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ (freedom of exprestion) ಮತ್ತು ಚಿಂತನಾ ಪ್ರಕ್ರಿಯೆ (thought process) ವಿಭಿನ್ನವಾದ್ದರಿಂದ ಎಲ್ಲಾ ಕಲಾಕೃತಿಗಳಿಂದ ಎಲ್ಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಯೇ ಎಲ್ಲಾ ಕಲಾವಿದರಿಂದಲೂ ಸಾಧ್ಯವಾಗುತ್ತದೆನ್ನುವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದಾದ ಸಾಮರ್ಥ್ಯ ಭಿನ್ನತೆ, ವೈವಿಧ್ಯತೆ ದೃಶ್ಯ ಕಲೆಯಲ್ಲೂ ಇದೆ. ದೃಶ್ಯ ಕಲಾವಿದರು ಇದರಿಂದ ಹೊರತಾದವರಲ್ಲ.
ಬೆಂಗಳೂರಿನ ಶಾಂತಿ ನಗರದಲ್ಲಿರುವ ೧ ಶಾಂತಿರೋಡ್ ಗ್ಯಾಲರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ” Recipes and Cookbooks ” ಕಲಾಪ್ರದರ್ಶನ ಈ ಮೇಲೆ ಪ್ರಸ್ತಾಪಿಸಿರುವ ವಿಚಾರದ ಮೇಲೆ ಬೆಳಕು ಚೆಲ್ಲುವಂತಿತ್ತು. ಒಂದೊಳ್ಳೆಯ ಕಲಾಪ್ರದರ್ಶನ. ಪ್ರದರ್ಶನದ ಶೀರ್ಷಿಕೆ ಮತ್ತು ಪರಿಕಲ್ಪನೆ ವಿಭಿನ್ನವಾದುದು. ಇಂತಹ ಸರಳವೆನಿಸುವ ವಿಷಯವನ್ನು ಆಯ್ದು ದೃಶ್ಯ ಕಲಾಕೃತಿಯಾಗಿಸಿ ಪ್ರದರ್ಶಿಸಲು ಸಾಧ್ಯ ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆ.
ಧನ್ಯ ರಾಜಾರಾಂ ಅವರು ಈ ಕಲಾಪ್ರದರ್ಶನ ಕ್ಯುರೇಟ್ ಮಾಡಿದ್ದು, ಬಹಳ ಸೊಗಸಾದ ವಿವರಣೆ ನೀಡಿದ್ದಾರೆ. ರಾಜ್ಯದ ಹಿರಿಯ ಕಲಾವಿದೆ ಸ್ಮಿತಾ ಕಾರಿಯಪ್ಪ, ಅದ್ವಿತಿ ಎಮ್ಮಿ, ಸುರೇಶ್ ಕುಮಾರ್ ಜಿ., ಮನ್ಮೀತ್ ದೇವ್ಗನ್, ಸೀಮಾ ಜೈನ್, ಉಮೇಶ್ ಕುಮಾರ್ ಪಿ.ಎನ್., ಅಂತರ ಮುಖರ್ಜಿ, ಸುಧಾ ಬರೇಗಾರ್ ಮತ್ತು ಮಂಜುನಾಥ್ ಹೊನ್ನಪುರ ಅವರು ಪ್ರದರ್ಶನದ ಭಾಗವಾಗಿದ್ದಾರೆ. ಪರಿಕಲ್ಪನಾ ಮತ್ತು ಪ್ರತಿಷ್ಠಾಪನಾ ಕಲಾ ಪ್ರಕಾರಗಳಿಗೆ ಹತ್ತಿರವೆನಿಸುವ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದರಿಂದ ಇಡೀ ಕಲಾಪ್ರದರ್ಶನ ವಿಭಿನ್ನವೆನಿಸಿತು. ಪಾಕ ವಿಧಾನಗಳು ಮತ್ತು ಪಾಕ ಪುಸ್ತಕ ವಿಷಯಾಧಾರಿತ ಕಲಾಕೃತಿಗಳೆ ಪ್ರದರ್ಶಿಸಬೇಕೆನ್ನುವ ಪೂರ್ವಯೋಜನೆ ಇದಕ್ಕೊಂದು ಕಾರಣ ಎನ್ನುವುದೂ ಸ್ಪಷ್ಟ. ಅದೇ ಇದ್ದರೂ ಕಲಾವಿದರು ಬಹಳ ಅರ್ಥಪೂರ್ಣವೆನಿಸುವ ಕಲಾಕೃತಿಗಳನ್ನೇ ಪ್ರದರ್ಶಿಸಿದ್ದಾರೆ.
ಸ್ನೇಹಿತರೆ ಕಲಾಪ್ರದರ್ಶನ ಇಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.