ಸಂಸ್ಕಾರ ಭಾರತೀ ಕರ್ನಾಟಕ “ಕಲಾವಿದರ ನುಡಿ” ಹೊಸ ಮೈಲಿಗಲ್ಲು

Share This

ಕೊರೋನಾ ಸೋಂಕಿಗೆ ಇಡೀ ವಿಶ್ವವೇ ನಲುಗಿದೆ. ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯೇ ಬುಡಮೇಲಾಗಿದೆ. ಕೋಟ್ಯಂತರ ಜನರ ಜೀವನವೇ ಅಲ್ಲೋಲ ಕಲ್ಲೋಲವಾಗಿದೆ. ಈ ಮಹಾಮಾರಿ ಸೋಂಕಿಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಆಸ್ಪತ್ರೆಗಳಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಲಕ್ಷಾಂತರ ಮಂದಿ ಮನೆಯಿಂದ ಆಚೆ ಹೋಗಲಾಗದೇ ಜಿಡ್ಡುಗಟ್ಟುತ್ತಿರುವ ಬದುಕಿನಿಂದ ಖಿನ್ನತೆಗೊಳಗಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಿ ಗುಣಮುಖರಾದವರು ಕೋಟ್ಯಂತರ ಮಂದಿ ಇದ್ದಾರೆ. ಕೇರಳದ ೧೧೦ ವರ್ಷದ ಮಹಿಳೆಯಿಂದ ಹಿಡಿದು ಆತ ತಾನೆ ಜನಿಸಿ ದಿನ ಕಳೆಯದ ಶಿಶುಗೂಸು ಕೂಡ ಕೊರೋನಾ ಗೆದ್ದು ಬಂದಿರುವ ಉದಾಹರಣೆ ಈಗ ನಮ್ಮ ಮುಂದಿದೆ. ಹೀಗಾಗಿ ಕೊರೋನಾಕ್ಕೆ ಹೆದರಿ ಕುಳಿತಿರಬೇಕಾಗಿಲ್ಲ. ಜತೆ ಜೊತೆಗೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತ ಕೊರೋನಾವನ್ನು ಗೆಲ್ಲಬೇಕಿದೆ.
ಕಲಾ ಕ್ಷೇತ್ರದ ಸನ್ಮಿತ್ರರೇ ಈ ಎಲ್ಲಾ ಸವಾಲುಗಳಿಂದ ನಾವೇನು ಹೊರತಾದವರಲ್ಲ. ವಿಶ್ವದ ಅನೇಕ ಕಲಾ ಸಾಧಕರು, ಸಾಧನೆಯ ದಾರಿಯಲ್ಲಿದ್ದವರು, ಸಾಧನೆಯ ಶಿಖರವೇರಬೇಕಾದವರೂ ಈ ಕೊರೋನಾಕ್ಕೆ ಬಲಿಯಾಗಿದ್ದಾರೆ. ಇವನ್ನೆಲ್ಲಾ ಗಮನಿಸಿದಾಗ ಕೊರೋನಾ ಗೆಲ್ಲುವ ಬಗೆ ಅಷ್ಟು ಸುಲಭವೂ ಅಲ್ಲ ಎನ್ನುವುದು ದಿನದಿಂದ ದಿನಕ್ಕೆ ಸಾಬೀತಾಗುತ್ತಲೇ ಇದೆ. ಹಾಗಂತ ಮುಂದೇನಪ್ಪಾ… ಎಂದು ಕೈಕಟ್ಟಿ ಕುಳಿತಿರಬೇಕಾಗಿಲ್ಲ.
ಸರ್ಕಾರ ಕೊರೋನಾದಿಂದ ಪಾರಾಗಲು ಘೋಷಿಸಿದ್ದ ಲಾಕ್‌ಡೌನ್ ಎಷ್ಟು ಅಗತ್ಯವೋ, ಅದರಿಂದ ಎದುರಿಸಬೇಕಾದ ಸವಾಲುಗಳೂ ಹತ್ತಾರು. ಆದರೂ ಲಾಕ್‌ಡೌನ್ ಅನಿವಾರ್ಯ ಕೂಡ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಲಾವಿದ ಮಿತ್ರರಿಗೆ ಒಂದು ಸಮಯೋಚಿತ, ಸೂಕ್ತ ವೇದಿಕೆ ಕಲ್ಪಿಸಿ, ಕಳೆದ 50 ದಿನಗಳಿಂದ ಕಲಾಚಟುವಟಿಕೆಯೊಂದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಸಂಸ್ಕಾರ ಭಾರತೀ ಕರ್ನಾಟಕ ಆಯೋಜಿತ “ಚಿತ್ರಕಲಾವಿದರ ನುಡಿ” ಆನ್‌ಲೈನ್ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ, ಕ್ರಿಯಾಶೀಲ ಕಾರ್ಯಕ್ರಮ.
ಮನೆಯಿಂದ ಆಚೆ ಹೋಗಿ ಹೆಚ್ಚಿನ ಸಮಯ ಕಳೆಯಲಾಗದ, ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗದ ಅಥವಾ ಚಿತ್ರಕಲೆಯಂತಹ ಇನ್ನಾವುದೇ ಸಾರ್ವಜನಿಕವಾಗಿ ಗುಂಪುಗೂಡಿ ಆಯೋಜಿಸಲಾಗದ ಈ ಸಂದರ್ಭದಲ್ಲಿ ಆನ್‌ಲೈನ್‌ನಲ್ಲೇ ನೂರಾರು ಕಲಾವಿದರನ್ನು, ಕಲಾಪ್ರಿಯರನ್ನು ಒಗ್ಗೂಡಿಸುವುದು ಅಷ್ಟು ಸುಲಭದ ಮಾತಲ್ಲ. ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಒಬ್ಬ ಕಲಾವಿದರನ್ನು ಪರಿಚಯಿಸಿ, ಅವರ ಕಲಾಕೃತಿಗಳನ್ನು ಶಿಸ್ತುಬದ್ಧವಾಗಿ ಪ್ರದರ್ಶಿಸಿ, ಬಳಿಕ ಆ ಕಲಾವಿದನ ಅಭಿಪ್ರಾಯವನ್ನೂ ಕೇಳಿಸಿಕೊಂಡು ಸಮತೋಲನ ಕಾಯ್ದುಕೊಂಡು ಹೋಗುವ ಕೆಲಸ ಊಹಿಸಿದಷ್ಟು ಸುಲಭವಾದುದಲ್ಲ. ಇವೆಲ್ಲದಕ್ಕೂ ಸಂಘಟನೆಯ, ನಾಯಕತ್ವದ ಗುಣಗಳನ್ನು ಹೊಂದಿರುವ, ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಕಾರ ಪಡೆದವರಿಂದ ಮಾತ್ರ ಸಾಧ್ಯ. ಈ ಎಲ್ಲಾ ಸಾಮರ್ಥ್ಯದ ಜೊತೆಗೆ ಒಂದು ಸುಂದರ ತಂಡವನ್ನು ಹೊಂದಿರುವ, ಉತ್ಸಾಹಿ ಯುವಕರನ್ನು, ಅನುಭವಿಗಳನ್ನೂ ಹೊಂದಿರುವ ಸಂಸ್ಕಾರ ಭಾರತೀ ಕರ್ನಾಟಕ ಈಗ ೫೦ನೇ ಸಂಚಿಕೆಯ ಮೈಲಿಗಲ್ಲು ತಲುಪಿದೆ. ಇದು ಖಂಡಿತವಾಗಿಯೂ ಒಂದು ಯಶಸ್ಸು. ಆದರೆ, ಈ ಯಶಸ್ಸು ಮುಂದಿನ ಮತ್ತೊಂದು ಸಾಧನೆಗೆ ಸಿಕ್ಕ ಹುಮ್ಮಸ್ಸು ಎಂದು ಭಾವಿಸಿ ಪ್ರತಿಯೊಬ್ಬ ಕಲಾವಿದ, ಕಲಾಭಿಮಾನಿ ಸಹಕಾರ ನೀಡಬೇಕಾಗಿದೆ. 50ರಿಂದ 100, 100ರಿಂದ 1000ದ ಮೈಲುಗಲ್ಲು ತಲುಪುವ ಅವಕಾಶ ನಮ್ಮ ಮುಂದಿದೆ ಎನ್ನುವುದನ್ನೂ ಅರಿತು ಹೆಜ್ಜೆ ಇಡಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಸ್ಕಾರ ಭಾರತಿಗೆ ಕೈ ಜೋಡಿಸಬೇಕಿದೆ.

ಇದೊಂದು ಇತಿಹಾಸ

ಹೌದು, ಇದೊಂದು ಇತಿಹಾಸ ಎಂದು ಘಂಟಾಘೋಷವಾಗಿ ಹೇಳಿಕೊಳ್ಳಬಹುದು. ಇದು ಕರ್ನಾಟಕದ, ಅಷ್ಟೇ ಅಲ್ಲ ಭಾರತದ ಕಲಾಕ್ಷೇತ್ರದಲ್ಲೇ ಇದೊಂದು ಹೊಸ ಅಧ್ಯಾಯ. ಕಳೆದೆರಡು ತಿಂಗಳಿಂದ ನಿರಂತರವಾಗಿ ನಿತ್ಯವೂ ಸಮಯ ನೀಡಿ, ಆಲ್‌ಲೈನ್ ಮೂಲಕ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿರುವ ಉದಾಹರಣೆ ಇಲ್ಲ. ಅದರಲ್ಲೂ ಪ್ರತಿ ಸಂಚಿಕೆಯಲ್ಲಿ ಕಡಿಮೆ ಎಂದರೂ 50 ಕಲಾಕೃತಿಗಳು ಪ್ರದರ್ಶನ ಗೊಂಡಿವೆ. ಗರಿಷ್ಠ 200ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದ ಉದಾಹರಣೆಯೂ ಇದೆ. ಕನಿಷ್ಠ ಲೆಕ್ಕಾಚಾರದಲ್ಲೇ ಹೇಳಬಹುದಾದರೆ ಹೆಚ್ಚುಕಡಿಮೆ 2500ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿವೆ. ಊಹಿಸಿಕೊಳ್ಳಿ, ಇಂತಹ ಪ್ರದರ್ಶನ ವೀಕ್ಷಣೆಯ ಅವಕಾಶ ನಿಜಕ್ಕೂ ಅಪರೂಪ. ನಿತ್ಯವೂ ವಿಭಿನ್ನ ಶೈಲಿಯ, ವಿಭಿನ್ನ ಆಲೋಚನೆಯಿಂದ ಒಳಗೊಂಡ ವಿಭಿನ್ನ ಅಭಿವ್ಯಕ್ತಿಯ ಪ್ರಕಾರಗಳನ್ನು ನೋಡಲು ಈ ಕಾರ್ಯಕ್ರಮದಲ್ಲಿ ಸಾಧ್ಯವಾಗಿವೆ. ಹೀಗಾಗಿ ಇದೊಂದು ಇತಿಹಾಸ. ಕೊರೋನಾ ಸೋಂಕನ್ನು ಗೆದ್ದು ಬಂದಷ್ಟೇ ಖುಷಿ ಮೂಡಿದೆ.
ಸಂಸ್ಕಾರ ಭಾರತೀ ಇನ್ನಷ್ಟು ಕಾರ್ಯಕ್ರಮಗಳೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸುವ, ಅವರಲ್ಲಿ ಆತ್ಮವಿಶ್ವಾಸದ ಬಲ ತುಂಬುವ ಕಾರ್ಯ ಮಾಡಲಿ, ಅದರ ಪ್ರಯೋಜನ ರಾಜ್ಯ, ದೇಶದ ಕಲಾವಿದರು ಪಡೆದುಕೊಳ್ಳಲಿ, ಸಂಸ್ಕಾರ ಭಾರತಿಯ ಕಾರ್ಯ ಚಟುವಟಿಕೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ.

50ನೇ ಸಂಚಿಕೆಯ ವಿಶೇಷ

ರ್ನಾಟಕ ಮೂಲದವರೇ ಆದ, ಮುಂಬೈ ನಿವಾಸಿ, ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷ, ಖ್ಯಾತ ಕಲಾವಿದ ವಾಸುದೇವ್ ಕಾಮತ್ ಅವರು ತಮ್ಮ ನೂರಾರು ಕಲಾಕೃತಿಗಳೊಂದಿಗೆ “ಚಿತ್ರಕಲಾವಿದರ ನುಡಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಲಾ ಪರಂಪರೆಯ ಈ ತಲೆಮಾರಿನ ಮೇರು ಪಂಕ್ತಿಯಲ್ಲಿ ನಿಲ್ಲುವ ಕಲಾವಿದರಲ್ಲಿ ಒಬ್ಬರಾದ ವಾಸುದೇವ್ ಕಾಮತ್ ಅವರ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಸದಾವಕಾಶ ಇದಾಗಿರಲಿದೆ.


Share This

Leave a Reply

Your email address will not be published. Required fields are marked *