- ಭರವಸೆ ಹುಟ್ಟಿಸುವ ಸಮಾಧಾನದ ನಡೆ
ಬಾನಂಗಳದಿಂದ ಜಡಿ ಮಳೆ. ಮೋಡಗಳ ಮರೆಯಿಂದ ಸೂರ್ಯ ರಶ್ಮಿ ನುಸುಳಿ ಭೂಮಿಯ ಕಡೆ ಚಲಿಸುತ್ತಿವೆ. ತಣ್ಣನೆಯ ಗಾಳಿಯೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೀಸಲಾರಂಭಿಸಿದೆ!
ಈ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಇಂತಹದ್ದೊಂದು ಹವಾಮಾನ ನಮ್ಮ ಕಣ್ಮುಂದೆ ಮೂಡಿ ಬಂದರೆ ಮನಸ್ಸಿನಲ್ಲೊಂದು ಆನಂದ ಅನುಭವಿಸಿದ ಭಾವ. ಸಪ್ತ ವರ್ಣಗಳ ಕಾಮನಬಿಲ್ಲು ನೋಡಿದ್ದು ನೆನಪಿನಂಗಳದಲ್ಲಿ ತೇಲಿ ಬರುತ್ತವೆ. ಅತೀಂದ್ರಿಯ ಶಕ್ತಿ ಉಳಿಸಿಕೊಳ್ಳುವ ಏಳು ಬಣ್ಣಗಳ ಪಿರಮಿಡ್‌ಗಳು ನೆನಪಿಗೆ ಬರುತ್ತವೆ.
ಪ್ರೀತಿ ಸೂಚಿಸುವ ಕೆಂಪು, ನಿಷ್ಠೆ ಮತ್ತು ಶಾಂತತೆಯ ನೀಲಿ, ಪ್ರಕೃತಿ ಸಂಕೇತಿಸುವ ಹಸಿರು, ಹರ್ಷ ಹೆಚ್ಚಿಸುವ ಹಳದಿ, ಸೊಬಗು ಹುಟ್ಟಿಸುವ ನೇರಳೆ, ಕಿತ್ತಳೆ ಬಣ್ಣ ಸಂತೋಷವನ್ನು ಚಿಮ್ಮಿಸುತ್ತವೆ. ರಾಯಲ್ ನೀಲಿ ಬುದ್ಧಿವಂತಿಕೆ, ಶ್ರೀಮಂತಿಕೆಯ ಭಾವನೆಯನ್ನು ಮೂಡಿಸುತ್ತವೆ. ಇವೆಲ್ಲದರ ಜೊತೆಗೆ ಈ ಮಹಾಯುಗದ ಸಪ್ತ ಋಷಿಗಳೂ ನೆನಪಾಗುತ್ತಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 3ರಲ್ಲಿ ನಡೆಯುತ್ತಿರುವ ‘ಸಪ್ತ’ ಶೀರ್ಷಿಕೆಯ ಸಮೂಹ ಕಲಾಪ್ರದರ್ಶನವೂ ಇಂತಹ ಕೆಲವು ನೆನಪುಗಳಿಗೆ ಸಾಕ್ಷಿಯಾಗುವಂತಿದೆ. ಗಾಢ ವರ್ಣಗಳಿಂದ ಕೂಡಿರುವ ಕಲಾಕೃತಿಗಳು ಗಮನಸೆಳೆಯುವಂತೆ ಮಾಡುತ್ತವೆ. ನವೀನ್ ಬಿ.ಪತ್ತಾರ್, ಸುಶೀಲ್ ಐ. ತರ್ಬರ್, ಬಿ.ಎನ್.ಹರಿಪ್ರಸಾದ್, ವಿಜಯ್ ಎ. ಧೋಂಗಡಿ, ತಿಮ್ಮನಗೌಡ ಎನ್.ಪಾಟೀಲ್, ದರ್ಶನ್ ಚೌಧರಿ ಮತ್ತು ಚೇತನ್ ಕುಮಾರ್ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ವರ್ಣಚಿತ್ರಗಳು ಮತ್ತು ಶಿಲ್ಪ ಕಲಾಕೃತಿಗಳ ಸಮಾಗಮ ಇಲ್ಲಿದೆ. ಸಪ್ತ ವರ್ಣಗಳ ಏರಿಳಿತವಿದೆ.
| ಸಪ್ತ ಮುಖಗಳ ಅನಾವರಣ |
ಪ್ರದರ್ಶಿತ ಕಲಾಕೃತಿಗಳು ಭಿನ್ನವಾಗಿವೆ. ಬೇರೆ ಬೇರೆ ನೆಲೆಯಲ್ಲಿ ನಿಲ್ಲಬಹುದಾದ ಕಲಾಕೃತಿಗಳಾಗಿವೆ.
ನವೀನ್ ಪತ್ತಾರ್ ಅವರ ಕಲಾಕೃತಿಗಳು ಪ್ರಾಚೀನತೆಯ ತೆರೆದಿಡುವ ಸಮಕಾಲೀನ ನೆಲೆಯಲ್ಲಿ ನಿಲ್ಲಬಹುದಾದ ಕಲಾಕೃತಿಗಳಾಗಿ ಕಣ್ಣಿಗೆ ತಂಪು ನೀಡುತ್ತವೆ. ಚಾರ್ಕೋಲ್ ಮತ್ತು ಅಕ್ರಿಲಿಕ್ ವರ್ಣಗಳಲ್ಲಿ ಸಿಗಬಹುದಾದ ಪಾರದರ್ಶಕತೆಯ ಗುಣದೊಂದಿಗೆ ನಡೆಸಿರುವ ಪ್ರಯೋಗ ತುಸು ಆಸಕ್ತಿ ಹುಟ್ಟಿಸುತ್ತವೆ.
ಸುಶೀಲ್ ತರ್ಬರ್ ಅವರ ಕಲಾಕೃತಿಗಳು ಪ್ರಕೃತಿ ದರ್ಶನ ನೀಡುವಂತವು. ಪ್ರಕೃತಿಯ ವಿಭಿನ್ನ ಮುಖಗಳನ್ನು ತಾವು ಗ್ರಹಿಸಿರುವ ಕ್ರಮಾನುಸಾರ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ. ವಿನ್ಯಾಸ ಪ್ರಧಾನವಾಗಿಸುವ ಅಥವಾ ಅಮೂರ್ತವಾಗಿಸುವ ವಿಧಾನ ಅವರ ಕಲಾಕೃತಿಗಳಲ್ಲಿನ ಲಾವಣ್ಯತೆಯನ್ನು ಮರೆಮಾಚುವಂತೆ ಮಾಡಿದೆಯಾದರೂ, ಹುಡುಕಾಟದ ತವಕವಿದೆ.
ಬಿ.ಎನ್. ಹರಿಪ್ರಸಾದ್ ಅವರು ತಮ್ಮ ಎಂದಿನ ಶೈಲಿ ಮುಂದುವರಿಸಿದ್ದಾರೆ. ಅಲಂಕಾರಿಕ ಪ್ರಧಾನವೆನಿಸುವ, ತಾಂತ್ರಿಕ ಬದುಕಿನ ನಡುವೆಯೂ ಹಳ್ಳಿಯ ಸೊಗಡು ಉಳಿಸುವ ಪ್ರಯತ್ನವಿದೆ. ಅವರ ಇತ್ತೀಚಿನ ಕಲಾಕೃತಿಗಳು ಬಣ್ಣದ ಬದುಕಿನ ಅನುಭವ ತೆರೆದಿಡುತ್ತವೆ. ಬಣ್ಣಗಳ ಬಳಕೆಯಲ್ಲಿ ಬದಲಾವಣೆ ಇದೆ. ರೇಖೆಗಳ ಬಳಕೆ ಬಲ ಪಡೆದುಕೊಂಡಿವೆ. ಸಹಜವಾದ ಹುಡುಕಾಟದ ದಾರಿಯಲ್ಲಿ ಭರವಸೆ ಹೆಚ್ಚಿಸಿದೆ.
ವಿಜಯ್ ಧೋಂಗಡಿ ಅವರ ಕಲಾಕೃತಿಗಳು ವಿಭಿನ್ನ ದೃಷ್ಟಿಕೋನದ ಮೂಲಕ ಕಲ್ಪನಾಲೋಕಕ್ಕೆ ಕರೆದೊಯ್ಯುತ್ತವೆ. ಹೆಣ್ಣುಗಳ ಕಣ್ಣು ತೆರೆಯಿಸುವ ಕಲಾಕೃತಿಗಳು. ಬಣ್ಣಗಳ ಬಳಕೆ ಮಿತವಾಗಿ, ಅರ್ಥ ಹೇಳುವ ರೇಖೆಗಳ ಜೊತೆ ಬಲವಾಗಿ ನಿಲ್ಲುತ್ತವೆ. ಇದು ಅವರ ಕಲಾಕೃತಿಗಳಲ್ಲಿ ಕಾಣಬಹುದಾದ ಶಕ್ತಿಯೂ ಹೌದು.
ತಿಮ್ಮನಗೌಡ ಪಾಟೀಲ್ ಅವರ ಕಲಾಕೃತಿಗಳು ಚೌಕಟ್ಟು ಮೀರದೆ ನೋಡುಗರನ್ನೂ ಒಳಕ್ಕೆ ಕರೆದೊಯ್ಯುತ್ತವೆ. ಕರಾವಳಿಯ ಪ್ರಭಾವ ಬಲವಾಗಿದೆ. ಶಿಸ್ತು ಮೀರದೆ, ಅತ್ಯಂತ ಆತ್ಮವಿಶ್ವಾಸದಿಂದ ಬಣ್ಣದ ಜೊತೆ ನಡೆಸಿದ ಆಟ ನೋಟಕ್ಕೆ ಸಿಗುತ್ತವೆ. ನಂಬಿಕೆಗೆ ವಂಚನೆ ಮಾಡಿಕೊಳ್ಳದ ತಂತ್ರಗಾರಿಕೆ ಗಮನಿಸುವಂತದ್ದಾಗಿದೆ.
ದರ್ಶನ್ ಚೌಧರಿ ಅವರ ಜಲವರ್ಣ ಕಲಾಕೃತಿಗಳಲ್ಲಿ ಅವರ ಆಸಕ್ತಿ ಶಕ್ತಿಯಾಗಿ ಕಾಣಿಸುತ್ತಿದೆ. ಸೊಲ್ಲಾಪುರ ಭಾಗದ ವರ್ಣ ಬಳಕೆಗಳ ಪ್ರಭಾವ ತುಸು ಜಾಸ್ತಿ. ಸಹಜ ಕೂಡ. ಅವರ ಕರಾವಳಿ ದೃಶ್ಯಗಳ ಕಲಾಕೃತಿಗಳು ಆಪ್ತವೆನಿಸುತ್ತವೆ.
ಇನ್ನು ಚೇತನ್ ಕುಮಾರ್ ಒಬ್ಬ ಭರವಸೆಯ ಶಿಲ್ಪ ಕಲಾವಿದರಾಗಿ ಖುಷಿ ಕೊಟ್ಟರು. ಮರ ಮತ್ತು ಕಲ್ಲಿನಲ್ಲಿ ರಚಿತ ಕಲಾಕೃತಿಗಳು ಹೃದಯಕ್ಕೆ ಹತ್ತಿರವೆನಿಸಿದವು. ವಿಭಿನ್ನ ಮಾಧ್ಯಮಗಳ ಬಳಕೆ ಅವರೊಳಗಿನ ಪ್ರಯೋಗಶೀಲತೆಯನ್ನು ತೋರಿಸುತ್ತವೆ.
ಒಟ್ಟಾರೆ ಇದೊಂದು ಆಪ್ತವೆನಿಸುವ, ಅಸ್ತಿತ್ವ ಗಟ್ಟಿಗೊಳಿಸುವ ಪ್ರದರ್ಶನ ಅನಿಸಿತು. ‘ಸಪ್ತ’ ಕಲಾಪ್ರದರ್ಶನ ನಾಳೆ ಭಾನುವಾರ, ಅಕ್ಟೋಬರ್ 20ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.