- 6ನೇ ಆವೃತ್ತಿ ದಿನಾಂಕ ಪ್ರಕಟಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಭಾರತದಲ್ಲಿ ನಡೆಯಲಿರುವ ಪ್ರತಿಷ್ಠಿತ ಕಲಾ ಪ್ರದರ್ಶನಗಳಲ್ಲಿ ಒಂದಾದ ಕೊಚ್ಚಿ ಮುಜಿರಿಸ್ ಬಿನಾಲೆ (kochi muziris biennale) 6ನೇ ಆವೃತ್ತಿಗೆ ಸಿದ್ಧತೆ ಶುರುವಾಗಿದೆ. 2025 ಡಿಸೆಂಬರ್‌ನಿಂದ 2026 ಮಾರ್ಚ್ ತನಕ ಈ ಪ್ರದರ್ಶನ ನಡೆಯಲಿದೆ. ಕೋಲ್ಕತ ಮೂಲದ ಗೋವಾ ನಿವಾಸಿ, ಕಲಾವಿದ ನಿಖಿಲ್ ಚೋಪ್ರಾ ಮತ್ತು ಅವರ ಎಚ್.ಎಚ್.ಆರ್ಟ್ ಸ್ಪೇಸಸ್ ತಂಡದ ಸದಸ್ಯರು ಈ ಆವೃತ್ತಿಯನ್ನು ಕ್ಯುರೇಟ್ ಮಾಡಲಿದ್ದಾರೆ.
ಬುಧವಾರ, ನವೆಂಬರ್ 20 ಇಂದು ತಿರುವನಂತಪುರಂನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲಾ ಪ್ರದರ್ಶನದ ಕುರಿತು ಮಾಹಿತಿ ನೀಡಿದರು. 2025, ಡಿಸೆಂಬರ್ 12ರಿಂದ 2026 ಮಾರ್ಚ್ 31ರ ತನಕ ಕೊಚ್ಚಿ ಮುಜಿರಿಸ್ ಬಿನಾಲೆ 6ನೇ ಆವೃತ್ತಿ ನಡೆಯಲಿದೆ. ಕೊಚ್ಚಿ ಮುಜರಿಸ್ ಬಿನಾಲೆ ಅಧ್ಯಕ್ಷ ಬೋಸ್ ಕೃಷ್ಣಮಾಚಾರಿ ಮಾತನಾಡಿ, 6ನೇ ಆವೃತ್ತಿಯು ನಿಖಿಲ್ ಚೋಪ್ರಾ ಅವರ ಕ್ಯುರೇಶನ್‌ನಲ್ಲಿ ಇನ್ನಷ್ಟು ಆಕರ್ಷಕವಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಕೊಚ್ಚಿ ಮುಜಿರಿಸ್ ಬಿನಾಲೆಯ ಮೊದಲ ಆವೃತ್ತಿ ಚಾಲನೆ ಪಡೆದು, ಈ ತನಕ ಐದು ಆವೃತ್ತಿಗಳು ನಡೆದಿವೆ. ಮೊದಲ ಆವೃತ್ತಿಯನ್ನು ಸಹ ಸಂಸ್ಥಾಪಕರಾದ ರಿಯಾಸ್ ಕೊಮು ಮತ್ತು ಕೃಷ್ಣಮಾಚಾರಿ ಅವರೇ ಕ್ಯುರೇಟ್ ಮಾಡಿದ್ದರು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಲಾಪ್ರದರ್ಶನದಲ್ಲಿ ದೇಶ-ವಿದೇಶಗಳ ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 2014-15ರಲ್ಲಿ ನಡೆದ 2ನೇ ಆವೃತ್ತಿಯನ್ನು ಕಲಾವಿದ ಜಿತಿಶ್ ಕಲ್ಲಟ್, 2016-17ನೇ ಆವೃತ್ತಿಯನ್ನು ಕಲಾವಿದ ಸುದರ್ಶನ ಶೆಟ್ಟಿ, 2018-19ನೇ ಆವೃತ್ತಿಯನ್ನು ಅನಿತಾ ದುಬೆ, 2022-23ರ ಆವೃತ್ತಿಯನ್ನು ಶುಬಿಗಿ ರಾವ್ ಕ್ಯುರೇಟ್ ಮಾಡಿದ್ದು, ಇದೀಗ ವಿಶ್ವದ ಗಮನ ಸೆಳೆಯುವ ಕಲಾಪ್ರದರ್ಶಗಳಲ್ಲಿ ಒಂದಾಗಿ ಬೆಳೆದಿದೆ. 100ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಕೊಚ್ಚಿ ಬಿನಾಲೆಯ ವಿಶೇಷ ಕೂಡ.
ಯಾರಿವರು ನಿಖಿಲ್ ಚೋಪ್ರಾ?
ಮೂಲತಃ ಕೊಲ್ಕತಾದ ಕಾಶ್ಮೀರಿ ಕುಟುಂಬಕ್ಕೆ ಸೇರಿದವರು. ಈಗ ಗೋವಾ ನಿವಾಸಿಯಾಗಿ, ಗೋವಾದ ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ. 50 ವರ್ಷ ಪ್ರಾಯದ ನಿಖಿಲ್ ಚೋಪ್ರಾ ಎಲ್ಲಾ ಕಲಾ ಪ್ರಕಾರಗಳಲ್ಲಿಯೂ ಅನುಭವ ಇರುವ ಕಲಾವಿದರಾಗಿದ್ದಾರೆ. ಆರಂಭದಲ್ಲಿ ಕಾಮರ್ಸ್ (commerce) ಓದಿ ಬಳಿಕ 1999ರಲ್ಲಿ ಬರೋಡಾದ ಮಹಾರಾಜ ಸಯ್ಯಾಜಿ ರಾವ್ ವಿಶ್ವವಿದ್ಯಾಲಯದಲ್ಲಿ ಬಿಎಫ್‌ಎ ಪದವಿ ಪಡೆದುಕೊಂಡರು. ತದನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. 2003ರಲ್ಲಿ ಇಲ್ಲಿನ ಒಹಿಯೊ ಸ್ಟೇಟ್ ಯುನಿವರ್ಸಿಟಿಯಲ್ಲಿ ಎಂಎಫ್‌ಎ ಪದವಿ ಪಡೆದುಕೊಂಡರು.
ದೇಹವನ್ನೇ ತಮ್ಮ ಅಭಿವ್ಯಕ್ತಿಗೆ ವಿಷಯವಾಗಿಸಿಕೊಳ್ಳುವ ನಿಖಿಲ್ ಚೋಪ್ರಾ ಅವರು, ಅನೇಕ ದೇಶಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಪ್ರದರ್ಶನ ಕಲೆ (performance art)ಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ನಿಖಿಲ್ ಚೋಪ್ರಾ ವಿದೇಶಗಳಲ್ಲಿ ಈ ಕಲಾ ಪ್ರಕಾರದ ಮೂಲಕ ಖ್ಯಾತರೆನಿಸಿದ್ದಾರೆ. ಅನೇಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಸಾಕಷ್ಟು ಸಮೂಹ ಕಲಾಪ್ರದರ್ಶನಗಳಲ್ಲಿಯೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.