ಶತಮಾನದ ಇತಿಹಾಸ ಹೇಳುವ ಕಲಾಕೃತಿಗಳು!

Share This

  • ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ
  • ಅಕ್ಟೋಬರ್ 30ರಂದು ಸಂಪನ್ನ

“Success is not measured by the position you hold, but by the impact you have on others.” 
ಮೊನ್ನೆ ಮೊನ್ನೆಯಷ್ಟೇ ನಮ್ಮನ್ನಗಲಿದ ಯಶಸ್ವಿ ಉದ್ಯಮಿ ರತನ್ ಟಾಟಾ ಅವರ ಮಾತಿದು. ಅರ್ಥ ಗರ್ಭಿತವಾಗಿದೆ. “ನೀವು ಏನಾಗಿದ್ದೀರಿ, ಯಾವ ಸ್ಥಾನದಲ್ಲಿದ್ದೀರಿ ಎನ್ನುವುದರ ಮೇಲೆ ಯಶಸ್ಸನ್ನು ಅಳೆಯಲಾಗದು. ಆದರೆ, ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತೀರಿ ಎನ್ನುವುದು ಮುಖ್ಯವಾಗುತ್ತದೆ” ಎನ್ನುವ ರತನ್ ಟಾಟಾ ಅವರ ಈ ಹೇಳಿಕೆ ಸದಾಕಾಲ ಜಾಗೃತರಾಗಿರುವಂತೆ ಮಾಡುತ್ತದೆ.

ಯಶಸ್ವಿ ಉದ್ಯಮಿಯಾಗಿ ಅಥವಾ ಇನ್ನಾವುದೆ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರ ಬಗ್ಗೆ ಕೇಳಿಸಿಕೊಂಡಾಗಲೆಲ್ಲ ರತನ್ ಟಾಟಾ ಅವರ ಈ ಮಾತು ನೆನಪಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಪೂರ್ವಜರ ಸಾಧನೆ ನೆನಪಿಸಿಕೊಳ್ಳುತ್ತಿದ್ದೇವೆ ಎಂದಾದರೆ ಅದು ನಿಜವಾದ ಯಶಸ್ಸು. ಇಂತಹ ಸಾಧಕರಲ್ಲಿ 20ನೇ ಶತಮಾನದ ದೃಶ್ಯ ಕಲಾವಿದರು ಅನೇಕರಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವೇರಿದ್ದಾರೆ.

ಆದರೆ, ಜನಸಾಮಾನ್ಯರಿಗೆ ಇವರ ಪರಿಚಯ ಆಗಿರುವುದಿಲ್ಲ.  ಇಂದಿನ ತಲೆಮಾರಿನವರಿಗೆ ಮತ್ತು ಮುಂದಿನ ತಲೆಮಾರಿನವರಿಗೆ ಇಂತಹ ಯಶಸ್ಸು ಕಂಡಿರುವ ವ್ಯಕ್ತಿಗಳ ಪರಿಚಯ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಲ ಕಾಲಕ್ಕೆ ಮೆಲುಕು ಹಾಕುವ ಸಂಪ್ರದಾಯಗಳು ವಿರಳವಾಗುತ್ತಿರುವ ಕಾರಣ ಈ ತಲೆಮಾರಿನ ಅನೇಕರಿಗೆ ಹಿಂದಿನ ತಲೆಮಾರಿನ ಯಶಸ್ಸಿನ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದನ್ನು ಗೊತ್ತು ಮಾಡಿಕೊಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.

 

 

ಕರ್ನಾಟಕ ಚಿತ್ರಕಲಾ ಪರಿಷತ್ ಈ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವೊಂದನ್ನು ಮಾಡಿದೆ. ಕಳೆದೊಂದು ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ಕಲಾವಿದರಾಗಿ, ಯಶಸ್ಸಿನ ದಡ ಮುಟ್ಟಿ ಸಮಾಜದ ಗೌರವ ಸಂಪಾದಿಸಿದ್ದ ಕಲಾವಿದರ ಕಲಾಕೃತಿಗಳನ್ನು ಈ ತಲೆಮಾರಿನವರಿಗೆ ಪರಿಚಯಿಸುವ ಕೆಲಸವಾಗಿದೆ. ‘Timeless treasures: A Tribute to Artistic Journey’ ಶೀರ್ಷಿಕೆಯಡಿ ನಡೆಯುತ್ತಿರುವ ಸಮೂಹ ಕಲಾಪ್ರದರ್ಶನದಲ್ಲಿ ರಾಜ್ಯದ 60ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ಸೇರಿದಂತೆ ಕಲಾವಿದರ ರಕ್ತ ಸಂಬಂಧಿ, ಸ್ನೇಹಿತರ ಬಳಿ ಹಾಗೂ ಕೆಲ ಸಂಸ್ಥೆಗಳಲ್ಲಿ ಸಂಗ್ರಹಿಸಲಾಗಿದ್ದ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ರಚಿಸಲಾಗಿರುವ ಕಲಾಕೃತಿಗಳು ಪ್ರದರ್ಶನದಲ್ಲಿರುವುದು ಸಹಜವಾಗಿ ಆಸಕ್ತಿ ಹೆಚ್ಚಿಸುತ್ತವೆ. ಬಹುಶಃ ಯಾವ ಕಾಲಘಟ್ಟದಲ್ಲಿ ಅರ್ಥಾತ್ ಯಾವ ಇಸವಿಯಲ್ಲಿ ರಚಿಸಲ್ಪಟ್ಟ ಕಲಾಕೃತಿಗಳು ಎನ್ನುವ ಕಾಲಾನುಕ್ರಮದ ಮಾಹಿತಿ ತಿಳಿದುಕೊಳ್ಳುವಂತೆ ಇದ್ದಿದ್ದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು. ಅಂದಹಾಗೆ, ಇದಕ್ಕೆಲ್ಲ ಸಮಯಾವಕಾಶ ಬೇಕೆನ್ನುವುದು ನಿಜ. ಇಂತಹದ್ದೊಂದು ಮಹತ್ವದ ಪ್ರದರ್ಶನ ಆಯೋಜನೆ ಆಗುವುದಕ್ಕಿಂತ ಮೊದಲೆ ಇದಕ್ಕೊಂದು ಯೋಜನೆ ಆಗಿರುತ್ತದೆ. ಈ ನಿಟ್ಟಿನಲ್ಲಿಯೂ ಚಿಂತಿಸಿ ಅನುಷ್ಠಾನಗೊಳಿಸಿ ನೋಡುಗರ ಕುತೂಹಲಕ್ಕೆ ಉತ್ತರ ಒದಗಿಸಿಕೊಡಬಹುದಾಗಿತ್ತು. ಹಿರಿಯ ಕಲಾವಿದರ ಕಲಾಕೃತಿಗಳು ಎನ್ನುವುದಷ್ಟೆ ಮುಖ್ಯವಾಗುವುದಿಲ್ಲ. ಯಾವ ಕಾಲಘಟ್ಟದ ಕಲಾವಿದರು, ಯಾವ ಕಾಲಘಟ್ಟದಲ್ಲಿ ರಚಿಸಿದ ಕಲಾಕೃತಿಗಳು ಎನ್ನುವುದೂ ಕೂಡ ಮುಖ್ಯವಾಗುವುದರಿಂದ ಅಪೇಕ್ಷೆ ಅಥವಾ ನಿರೀಕ್ಷೆ ಹೆಚ್ಚಿರುತ್ತದೆ. ಅಧ್ಯಯನಕ್ಕೂ ಹೆಚ್ಚಿನ ಮಾಹಿತಿ ಒದಗಿಸಿಕೊಡುತ್ತದೆ. ಈ ಸೂಕ್ಷ್ಮವನ್ನು ಪ್ರಸ್ತಾಪಿಸದೇ ಇದ್ದರೆ, ವೀಕ್ಷಕನೊಳಗಿನ ಪ್ರಾಮಾಣಿಕ ಅಭಿಪ್ರಾಯಕ್ಕೆ ನ್ಯಾಯಸಿಗದಿರಬಹುದು ಎನ್ನುವ ಕಳಕಳಿಯೂ ಇದೆ.

”A chronological display is an exhibition strategy that arranges objects, artworks, or artifacts in a sequential order based on the time of their creation or the historical events they represent. This method allows viewers to understand the progression and context of artistic movements or historical narratives over time, making connections between different periods and styles more apparent” ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿಯೂ ಈ ಅಪೇಕ್ಷೆ ಅಥವಾ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗದಿರಬಹುದು. ಆದರೆ, ಈ ಕಲಾಪ್ರದರ್ಶನದಲ್ಲಿ ಇದಕ್ಕೆ ಅವಕಾಶವಿತ್ತು. ಈ ತನಕ ಹೆಚ್ಚೆಚ್ಚು ಪ್ರಚಲಿತದಲ್ಲಿರದ ಅಥವಾ ಮರೆತು ಬಿಡುತ್ತಿದ್ದೆವೇನೋ ಎನ್ನುವ ಕೆಲವು ಕಲಾವಿದರನ್ನು ಕನ್ನಡಿಗರಿಗೆ ಮತ್ತೆ ನೆನಪಿಸುವ ಕಾರ್ಯ ಈ ಕಲಾಪ್ರದರ್ಶನದಿಂದ ಸಾಧ್ಯವಾಗಿದೆ ಎನ್ನುವುದೇ ಸಮಾಧಾನದ ಸಂಗತಿ.

 

ಪ್ರದರ್ಶಿತ ಕಲಾಕೃತಿಗಳಲ್ಲಿ ಕೆಲವು ಅಂಶಗಳು ಗಮನ ಸೆಳೆಯುತ್ತವೆ. ಮೈಸೂರು ಸಂಸ್ಥಾನದ ನಂಟು ಬೆಳೆಸಿಕೊಂಡಿದ್ದ ಕುಟುಂಬವೊಂದರ ಸೇವೆ ಸ್ಮರಿಸಬೇಕು. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಯುವ ಕಲಾವಿದರಾಗಿ ಬೆಳೆದು, ಅವಕಾಶ ಸದುಪಯೋಗ ಪಡಿಸಿಕೊಂಡ ವೈ. ಸುಬ್ರಹ್ಮಣ್ಯ ರಾಜು ಪ್ರಮುಖರು. ಇವರ ಅಜ್ಜ ಸುಂದರಯ್ಯ ಎಂಬವರೂ ಅರಮನೆಯ ಕಲಾವಿದರಾಗಿದ್ದರು. ತಂದೆ ಯಲ್ಲಪ್ಪ ಅವರೂ ಅರಮನೆಯ ಉದ್ಯೋಗಿಯಾಗಿದ್ದರು. ತಮ್ಮ ಕಲಾ ಪ್ರತಿಭೆಯ ಮೂಲಕವೆ ರಾಜರ ಗಮನ ಸೆಳೆದಿದ್ದರು ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತದ್ದು. ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಗೆ ಒಂದು ಹೊಳಪು ನೀಡಿರುವ ಕಲಾವಿದರಲ್ಲಿ ಸುಬ್ರಹ್ಮಣ್ಯರಾಜು ಅವರು ಪ್ರಮುಖರೆನಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ ಸುಬ್ರಹ್ಮಣ್ಯರಾಜು ಅವರು ರಚಿಸಿರುವ ಮತ್ತು ಅವರ ಸಹೋದರ ವೈ.ನಾಗರಾಜು ಅವರು ರಚಿಸಿರುವ ಭಾವಚಿತ್ರವೂ ಈ ಪ್ರದರ್ಶನದಲ್ಲಿ ನೋಡಲು ಸಾಧ್ಯವಿದೆ. ಸುಬ್ರಹ್ಮಣ್ಯರಾಜು ಅವರ ರಕ್ತ ಸಂಬಂಧಿ ಶಂಕರ ರಾಜು ಅವರೂ ಅರಮನೆಯ ಕಲಾವಿದರಾಗಿದ್ದರು. ಇದೇ ಕಾಲಘಟ್ಟದಲ್ಲಿ ಖ್ಯಾತರಾಗಿದ್ದ ಎಂ. ರಾಮನರಸಯ್ಯ ಅವರ ಕಲಾಕೃತಿಯೂ ಪ್ರದರ್ಶಿಸಲ್ಪಟ್ಟಿದೆ. ಪ್ರಾಣಿ, ಪಕ್ಷಿಗಳ ಕಲಾಕೃತಿಗಳನ್ನು ರಚಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಎಫ್.ಎಂ.ಸೂಫಿ ಅವರ ಕಲಾಕೃತಿಗಳನ್ನು ನೋಡುವ ಅವಕಾಶ ಈ ಪ್ರದರ್ಶನದಿಂದ ಸಿಗಲಿದೆ.

ಇನ್ನೊಂದು ಆಸಕ್ತಿದಾಯಕ ಅಂಶವೇನೆಂದರೆ ಚಿತ್ರಕಲಾ ಪರಿಷತ್ನ ಸಂಸ್ಥಾಪಕರಾದ ದಿವಂಗತ ಎಂ.ಎಸ್. ನಂಜುಂಡರಾವ್, ಅವರ ಸ್ನೇಹಿತರಾದ ಎಸ್.ಎಸ್.ಕುಕ್ಕೆ ಅವರ ಕಲಾಕೃತಿಗಳು ಅವರ ಅಂದಿನ ಒಡನಾಟಗಳನ್ನೆಲ್ಲಾ ನೆನಪಿಸುತ್ತವೆ. ಪರಿಷತ್ನ ಇನ್ನೊಬ್ಬರು ಸಂಸ್ಥಾಪಕರಾದ, ನಂಜುಂಡರಾವ್ ಅವರ ಆತ್ಮೀಯರಾದ ಎಂ.ಆರ್ಯ ಮೂರ್ತಿ ಅವರ ಭಾವಚಿತ್ರವೊಂದು ಪ್ರದರ್ಶಿಸಲ್ಪಟ್ಟಿದೆ, ಬಹಳ ಅಪರೂಪದ ಕಲಾಕೃತಿ ಕೂಡ. ಎಂ. ಆರ್ಯಮೂರ್ತಿ ಅವರೆ, ನಂಜುಂಡರಾವ್ ಅವರಿಗೆ ತೊಗಲುಗೊಂಬೆಗಳ ಮೇಲಿನ ಆಸಕ್ತಿ ಹೆಚ್ಚಿಸಿದ್ದು ಎನ್ನುವುದನ್ನು ಕೇಳ್ಪಟ್ಟಿದ್ದೇವೆ. ಹೀಗೆ ಇಂತಹ ಅನೇಕ ಸಣ್ಣ ಸಣ್ಣ ಅನುಭವದ ಕಥೆಗಳನ್ನು ಈ ಕಲಾಪ್ರದರ್ಶನ ಮೆಲುಕು ಹಾಕುವಂತೆ ಮಾಡಿದೆ.

 

 

ಭಾವ ಚಿತ್ರ, ನಿಸರ್ಗ ಚಿತ್ರಗಳ ಮೆರವಣಿಗೆ:
ಕಲಾಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟಿರುವ ಜಲವರ್ಣ ಮತ್ತು ತೈಲವರ್ಣಗಳ ಅನೇಕ ಭಾವಚಿತ್ರಗಳು ಮತ್ತು ನಿಸರ್ಗ ಚಿತ್ರಗಳು ಕಳೆದ ಏಳೆಂಟು ದಶಕಗಳಲ್ಲಿನ ಪ್ರಭಾವವನ್ನು ಹೇಳುತ್ತವೆ. ಕೆಲ ಕಲಾವಿದರ ಭಾವ ಚಿತ್ರಗಳಲ್ಲಿ ವಿದೇಶಿ ಬಣ್ಣಗಳ ಹೊಳಹು ಕಂಡುಬಂದರೆ, ಇನ್ನು ಕೆಲ ಭಾವಚಿತ್ರಗಲ್ಲಿ ಟಿಪಿಕಲ್ ಭಾರತೀಯರ ಬಣ್ಣಗಳು ಮೇಳೈಸಿರುವುದನ್ನು ಗುರುತಿಸಬಹುದು. ಹೀಗೆ ಒಬ್ಬೊಬ್ಬರ ಭಾವಚಿತ್ರದಲ್ಲಿನ ಬಣ್ಣಗಳ ಬಳಕೆ, ಬ್ರಶ್ ಸ್ಟ್ರೋಕ್ ಭಿನ್ನವೆನಿಸುತ್ತವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದ ಕಲಾವಿದರ ಭಾವಚಿತ್ರಗಳು ಮತ್ತು ನಿಸರ್ಗ ಚಿತ್ರಗಳಲ್ಲಿಯೂ ವ್ಯತ್ಯಾಸವನ್ನು ಗುರುತಿಸಬಹುದು. ಇದು ಇರಬಾರದು ಎನ್ನುವ ನಿಯಮವೇನಿಲ್ಲ. ಆದರೆ, ಯಾವ ಕಾರಣಕ್ಕಾಗಿ ಎನ್ನುವುದು ಅಧ್ಯಯನ ಯೋಗ್ಯವೆನಿಸುತ್ತವೆ. ಆ ಕಾಲಘಟ್ಟದ ಅಥವಾ ಅದಕ್ಕೂ ಪೂರ್ವದ ಕಲಾವಿದರ ಪ್ರಭಾವವೂ ಇದಕ್ಕೊಂದು ಮುಖ್ಯ ಕಾರಣವಾಗಬಹುದು.

ಇನ್ನು ನಿಸರ್ಗ ಚಿತ್ರಗಳಿಗೆ ಅಂಟಿಕೊಂಡಿದ್ದ ಕೆಲವೊಂದಿಷ್ಟು ಕಲಾವಿದರ ಕಲಾಕೃತಿಗಳನ್ನು ಗಮನಿಸಿದಾಗ ಇಂಪ್ರೇಷನಿಸಮ್ (Impressionism) ಬಲವಾಗಿಯೇ ಪ್ರಭಾವ ಬೀರಿತ್ತೆನ್ನುವುದು ಗಮನಾರ್ಹ. ಅಷ್ಟೇ ಅಲ್ಲ, ಬಣ್ಣಗಳನ್ನು ಬಳಸುವ ಕ್ರಮ ಅಥವಾ ವಿಧಾನದಲ್ಲಿ ಇಂಪ್ರೇಷನಿಸ್ಟರ್ ತಂತ್ರಗಾರಿಕೆಯನ್ನೆ ಅನುಸರಿಸಿರುವುದನ್ನು ನೋಡಬಹುದಾಗಿದೆ. ಅಲ್ಲಲ್ಲಿ ಕೆಲವರು ಸರಿಯಲಿಸಂ ಪ್ರಭಾವಕ್ಕೆ ಒಳಗಾಗಿರುವವರೂ ಇದ್ದಾರೆ.

 

ನವ್ಯ ಚಿತ್ರಗಳ ಪ್ರಭಾವ
ಬೇರೆ ಬೇರೆ ಪ್ರಕಾರದ ಕಲಾಕೃತಿಗಳೂ ಸೇರಿದಂತೆ ನವ್ಯ ಕಲಾಕೃತಿಗಳೂ ಪ್ರದರ್ಶನದ ಭಾಗವಾಗಿವೆ. ಕೆ.ಕೆ. ಹೆಬ್ಬಾರ್, ಆರ್.ಎಂ.ಹಡಪದ್, ಎಂ.ಬಿ.ಪಾಟೀಲ್, ಯೂಸಿಫ್ ಅರಕ್ಕಲ್, ಜಿ.ಎಸ್.ಶೆಣೈ ಸೇರಿದಂತೆ ಇನ್ನೂ ಅನೇಕ ಕಲಾವಿದರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಕರ್ನಾಟಕ ಕಲಾಕ್ಷೇತ್ರದಲ್ಲಿ ನವ್ಯ ಕಲಾಕೃತಿಗಳ ಬಗ್ಗೆ ಬಹುದೊಡ್ಡ ಜಾಗೃತಿ ಮೂಡಿಸಿರುವ ಕಲಾವಿದರ ಕಲಾಕೃತಿಗಳನ್ನು ಗಮನಿಸಿದಾಗ ಅವು ಈಗಲೂ ಪ್ರಸ್ತುತ ಅನಿಸುತ್ತವೆ.

ಒಟ್ಟಾರೆ ಈ ಕಲಾಪ್ರದರ್ಶನ ಒಂದು ಹಿನ್ನೋಟವನ್ನಂತೂ ನೀಡುವುದರಲ್ಲಿ ಯಾವ ಸಂದೇಹವಿಲ್ಲ. ಇನ್ನೂ ಅನೇಕ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿಲ್ಲ. ಆದರೆ ಇದು ಮೊದಲ ಸಂಪುಟ ಎನ್ನುವುದನ್ನು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಸಂಪುಟ 2ನ್ನು ನಿರೀಕ್ಷಿಸಿ ಎಂಬ ಸಂದೇಶವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ನೀಡಿದೆ. ಮುಂದಿನ ಪ್ರದರ್ಶನ ಇನ್ನಷ್ಟು ಅರ್ಥಪೂರ್ಣವಾಗಿ ಮೂಡಿಬರಲಿ ಎನ್ನುವುದು ಎಲ್ಲರ ಆಶಯವು ಆಗಿದೆ.

 

 

 

 

 

 

 

 

 

 

 

 

 

 

 


Share This

Leave a Reply

Your email address will not be published. Required fields are marked *