• ಕಿಚ್ಚು ಹಚ್ಚಿ ದಾಹ ಹೆಚ್ಚಿಸುವ ‘Together 2025’
• ದೆಹಲಿ ಕಲಾವಿದ ಮಿತ್ರರ ಸಮೂಹ ಕಲಾಪ್ರದರ್ಶನ
ವಿವಿಧ ಪ್ರಕಾರದ ಕಲಾಕೃತಿಗಳ ಸಮೂಹ ಕಲಾಪ್ರದರ್ಶನ ‘Together 2025’ ಇತ್ತೀಚಿಗೆ ನವದೆಹಲಿಯ ಲಲಿತಕಲಾ ಅಕಾಡೆಮಿ ಗ್ಯಾಲರಿಯಲ್ಲಿ ಆಯೋಜನೆಯಾಗಿತ್ತು. ಹೆಚ್ಚಿನ ಕಲಾಕೃತಿಗಳು ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಷ್ಟು ವಿಶೇಷತೆಯಿಂದ ಕೂಡಿದ್ದವು. ಭಾವನೆಗಳ ಸಾಗರವೇನೋ ಅನ್ನುವಷ್ಟು ಕ್ರಿಯಾತ್ಮಕವಾದ ಪ್ರಕ್ರಿಯೆಯನ್ನು ಪ್ರತಿಯೊಂದು ಕಲಾಕೃತಿಯಲ್ಲಿ ನೋಡಲು ಸಾಧ್ಯವಾಯಿತು. ಅತ್ಯಂತ ಅರ್ಥಪೂರ್ಣವಾದ ಕಲಾಪ್ರದರ್ಶನ ಇದಾಗಿತ್ತು.
ದೆಹಲಿಯ ಕಲಾವಿದ ಮಿತ್ರರ ಕಲಾಕೃತಿಗಳು ಈ ಕಲಾಪ್ರದರ್ಶನದಲ್ಲಿ ಇದ್ದವು. ಸಾಕಷ್ಟು ಗ್ಯಾಲರಿಗಳನ್ನು ಹೊಂದಿರುವ ರಾಜಧಾನಿ ನವದೆಹಲಿಗೆ ಬಂದು ದೇಶ ವಿದೇಶಗಳ ಕಲಾವಿದರು ಪ್ರದರ್ಶನ ನಡೆಸುವ ಸಂದರ್ಭ ಇರುವಾಗ ಕಲಾಪ್ರದರ್ಶನ ಆಯೋಜಿಸಿ ಯಶಸ್ವಿಯಾಗಿಸುವುದು ಕಷ್ಟಸಾಧ್ಯ. ಆದರೆ ‘Together 2025’ ಹತ್ತರಲ್ಲೊಂದು ಕಲಾಪ್ರದರ್ಶನ ಅನಿಸಲೇ ಇಲ್ಲ. ಅಷ್ಟರಮಟ್ಟಿಗೆ ಭಿನ್ನವಾಗಿತ್ತು ಸಮಕಾಲೀನ ನೆಲೆಯಲ್ಲಿ, ಆಧುನಿಕ ವೈಚಾರಿಕತೆಯಿಂದ ಕೂಡಿದ ಕಲಾಕೃತಿಗಳು ನೋಡುಗರನ್ನು ಚಿಂತನೆಗೆ ನಿಲ್ಲುವಂತೆ ಮಾಡುತ್ತಿದ್ದವು.
ಪ್ರದರ್ಶಿತ ಕಲಾಕೃತಿಗಳಲ್ಲಿ ವಿಶೇಷ ಮತ್ತು ವಿಭಿನ್ನವೆನಿಸಿದ್ದು ಶಿಲ್ಪಗಳು. ಒಂದಕ್ಕಿಂತ ಒಂದು ಆಕರ್ಷಕ ಅನಿಸಿತು. ಬಹಳ ಪಕ್ವತೆಯಿಂದ ಕೂಡಿರುವ ಕಲಾಕೃತಿಗಳು ಗ್ಯಾಲರಿಯ ಕಾಂತೀಯ ಗುಣವನ್ನು ಉಲ್ಬಣಿಸಿತ್ತು. ಕೆಲ ಮುದ್ರಣ ಕಲಾಕೃತಿಗಳು ಗಮನಸೆಳೆದವು. ಕಲಾಕೃತಿಗಳನ್ನು ಪ್ರಸ್ತುತ ಪಡಿಸಿದ್ದೂ ಅತ್ಯಂತ ಶಿಸ್ತಿನಿಂದ ಕೂಡಿತ್ತು.
ಇಂತಹ ಕಲಾಪ್ರದರ್ಶನಗಳು ಕಲಾವಿದ್ಯಾರ್ಥಿಗಳ ಗಣನೀಯ ಪರಿಣಾಮ ಬೀರಬಲ್ಲವು. ವೃತ್ತಿಪರತೆಯ ಪೂರ್ಣಪಾಠ ನೀಡಬಲ್ಲವು. ಈ ಕಾಲಘಟ್ಟದ ಕಲಾವಿದ್ಯಾರ್ಥಿಗಳಿಗೆ, ಯುವ ಕಲಾವಿದರಿಗೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮಾರ್ಗದರ್ಶಿ ಅನಿಸಬಲ್ಲವು. ಒಂದಂತೂ ಖರೆ, ಒಂದೊಳ್ಳೆಯ ಕಲಾಪ್ರದರ್ಶನ ಇದಾಗಿತ್ತು.