“ Bharatanatyam is a celebration of life, an ode to the divine, the ultimate expression of the body, mind and soul. ”
ಭರತನಾಟ್ಯ ಕ್ಷೇತ್ರದ ಶ್ರೇಷ್ಠ ಗುರುಗಳು, ವಿದ್ವಾಂಸರು, ಲೇಖರು ಆಗಿರುವ ಪದ್ಮಶ್ರೀ, ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಈ ಮಾತು ಸಭಾಂಗಣದಲ್ಲಿ ಕುಳಿತು ಭರತನಾಟ್ಯ ಕಾರ್ಯಕ್ರಮ ವೀಕ್ಷಿಸುವಾಗಲೆಲ್ಲ ನೆನಪಿಗೆ ಬರುತ್ತದೆ. ನರ್ತಕಿ ಅಥವಾ ನರ್ತಕ ಒಂದೊಂದು ಹೆಜ್ಜೆಯನ್ನೂ ಸಂಭ್ರಮಿಸಬೇಕು. ದೇಹ, ಮನಸ್ಸು ಮತ್ತು ಆತ್ಮದ ಅತ್ಯಂತ ಅಂತಿಮದ ಅಭಿವ್ಯಕ್ತಿ ಆಗಿರುವುದರ ಜೊತೆಗೆ ದೈವಿಕತೆಯ ದ್ಯೋತಕವದು ಎನ್ನುತ್ತಾರೆ. ಅದರರ್ಥ ಭಾರತೀಯ ಕಲಾಪ್ರಕಾರವೊಂದರ ಶಕ್ತಿ ಎಂಥದ್ದಿರಬೇಕೆನ್ನುವುದನ್ನು ಸಭೆಯಲ್ಲಿ ಕುಳಿತು ವೀಕ್ಷಿಸುವ ಪ್ರೇಕ್ಷಕ ಕೂಡ ಅರಿತಿದ್ದರೆ ಸಿಗುವ ಪರಮಾನಂದವೇ ಬೇರೆಯಾಗಿರುತ್ತದೆ. ವೇದಿಕೆಯಲ್ಲಿ ನರ್ತಕಿ ಅಥವಾ ನರ್ತಕ ಉತ್ಸಾಹದಿಂದ ಸಂಭ್ರಮಿಸುವಾಗ ಪ್ರೇಕ್ಷಕ ಕೂಡ ಭಾವಪರವಶರಾಗಿ ಮೈಮರೆಯುವುದುಂಟು.
ಸೆಪ್ಟೆಂಬರ್ 17ರಂದು ಮಲ್ಲೇಶ್ವರಂ ಸೇವಾಸದನ ಸಭಾಂಗಣದಲ್ಲಿ ಕುಳಿತ ಪ್ರೇಕ್ಷಕರನ್ನು ಭಾವಪರವಶರಾಗಿಸಿ ಶಹಬ್ಬಾಸ್ ಎನಿಸಿಕೊಂಡಿದ್ದು ಕುಮಾರಿ ಕೋಟಾ ಶ್ರೀಕರಿ. ನೃತ್ಯೋಮಾ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನ (Nrityoma Academy of Performing Arts) ಗುರು ನಾಟ್ಯ ಮಯೂರಿ ಶ್ರೀಮತಿ ರಾಧಿಕಾ ಎಂ.ಕೆ.ಸ್ವಾಮಿ ಅವರ ಶಿಷ್ಯೆ ಕೋಟಾ ಶ್ರೀಕರಿ ವಯಸ್ಸಿನಲ್ಲಿ ಚಿಕ್ಕವರಾದರೂ ಸಾಕಷ್ಟು ಪ್ರೌಢ ಪ್ರದರ್ಶನ ನೀಡಿ ರಂಜಿಸಿದರು. ನೃತ್ಯ ಪರಂಪರೆಗೆ ಅನುಸಾರವಾಗಿ ರಂಗ ಪ್ರವೇಶಕ್ಕೂ ಮೊದಲು ನಡೆಸಲಾಗುವ “ರಂಗಾಭಿವಂದನೆ” ನೆರವೇರಿಸಿ ವಿಘ್ನನಿವಾರಕನಿಗೆ ಪುಷ್ಪಾರ್ಜನೆ ಮಾಡಿ ಗೆಜ್ಜೆ ಧರಿಸಿ ಹೆಜ್ಜೆ ಇಟ್ಟರು. ಗುರು ಡಾ. ಸಂಜಯ್ ಶಾಂತಾರಾಂ ಅವರು ಸಂಯೋಜಿಸಿದ ರಾಗ ಸರಸ್ವತಿ, ಆದಿ ತಾಳದಲ್ಲಿರುವ ಪುಷ್ಪಾಂಜಲಿಗೆ ಅತ್ಯಂತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದರು. ಶ್ರೀಕರಿಯ ಪ್ರವೇಶ ಓಜಸ್ವಿ(energetic) ಅನಿಸುವಂತಿತ್ತು. ಕಾಂತಿ, ಚೈತನ್ಯ ಪೂರ್ಣವಾದ ಆರಂಭದೊಂದಿಗೆ ಚಪ್ಪಾಳೆ ಗಿಟ್ಟಿಸಿಕೊಂಡ ಶ್ರೀಕರಿ ಅಷ್ಟೇ ಸಲೀಸಾಗಿ “ಜತಿಸ್ವರ” ಪೂರ್ಣಗೊಳಿಸಿ ಮೆಚ್ಚುಗೆ ಗಿಟ್ಟಿಸಿಕೊಂಡರು. ಅಡವುಗಳ ನಿರ್ವಹಣೆಯಲ್ಲಿ ಎಲ್ಲಿಯೂ ಗಂಭೀರ ಲೋಪ ಕಾಣಿಸಲಿಲ್ಲ. ಜನ್ಯ ರಾಗ ಆರಭಿ, ಆದಿ ತಾಳವನ್ನು ಮನನ ಮಾಡಿಕೊಂಡು ನಿರ್ವಹಿಸಿದ ರೀತಿ ಭವಿಷ್ಯದಲ್ಲಿ ಒಬ್ಬ ಉತ್ತಮ ನರ್ತಕಿಯಾಗಿ ಬೆಳೆಯುವ ಭರವಸೆ ಮೂಡಿಸುವಂತಿತ್ತು.
ಪ್ರಥಮಾರ್ಧದ ಅಂತ್ಯದಲ್ಲಿ ರಾಗ ಷಣ್ಮುಖಪ್ರಿಯ, ಖಂಡ ಆದಿ ತಾಳದಲ್ಲಿರುವ ವಿದ್ವಾನ್ ಜಿ.ಗುರುಮೂರ್ತಿ ಸಂಯೋಜನೆಯ ಕೌತ್ವಂ ಆಯ್ದುಕೊಂಡು ಭಾವಪೂರ್ಣವಾಗಿ ಹೆಜ್ಜೆಹಾಕುವಲ್ಲಿ ಯಶಸ್ವಿಯಾದರು. ಅಭಿನಯ, ನೃತ್ತವನ್ನು ಗತಿ ಕಾಯ್ದುಕೊಂಡು ಸಮರ್ಪಕವಾಗಿ ನಿರ್ವಹಿಸಿದ ಶ್ರೀಕರಿ ಅರ್ಥಪೂರ್ಣವಾಗಿ ಅಭಿನಯ ಪ್ರದರ್ಶಿಸುವ ಪ್ರಯತ್ನದಲ್ಲಿ ಯಶಸ್ವಿಯಾದರು. ಹಸ್ತಮುದ್ರೆಗಳ ಶುದ್ಧತೆ, ಆಂಗಿಕಾಭಿನಯ ಪ್ರಶಂಸನೀಯವಾಗಿತ್ತು. ಸಂಚಾರಿ ನಿರ್ವಹಣೆಯಲ್ಲಿ ಹಾಡಿನಲ್ಲಿಡಗಿರುವ ಭಾವಗಳನ್ನು ತೋರ್ಪಡಿಸುವುದು ಬಹಳ ಪ್ರಾಮುಖ್ಯವಾದುದು. ಇದಕ್ಕೆ ಎಲ್ಲಿಯೂ ಕೊರತೆಯಾಗದ ರೀತಿಯಲ್ಲಿ ಪ್ರದರ್ಶನ ನೀಡಿದರು.
ದ್ವಿತೀಯಾರ್ಧದ ಆರಂಭದಲ್ಲಿ ಬಹಳ ಕ್ಲಿಷ್ಟಕರವಾದ ಸಂಯೋಜನೆ “ಭೋ ಶಂಭೋ” ಆಯ್ದುಕೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ರೇವತಿ ರಾಗ, ಆದಿ ತಾಳದಲ್ಲಿ ರಚಿತ ಸ್ವಾಮಿ ದಯಾನಂದ ಸರಸ್ವತಿ ಸಂಯೋಜನೆಗೆ ಎಲ್ಲಿಯೂ ಚೈತನ್ಯ ಕಳೆದುಕೊಳ್ಳದೇ, ಲಯಬದ್ಧವಾಗಿ ದೇಹದ ಕ್ಷಮತೆ ಕಾಪಾಡಿಕೊಂಡು ಹೆಜ್ಜೆ ಹಾಕಿದರು. ಸಾಮಾನ್ಯವಾಗಿ ಈ ಹಾಡಿಗೆ ಶಿವ ತಾಂಡವಕ್ಕೆ ಇರಬೇಕಾದ ಗಾಂಭೀರ್ಯ, ದೈಹಿಕ ಸಾಮರ್ಥ್ಯ ಇಲ್ಲದಿದ್ದಲ್ಲಿ ಕೊಂಚ ಸಪ್ಪೆ ಅನಿಸುವ ಸಾಧ್ಯತೆ ಇರುತ್ತದೆ. ಆದರೆ ಶ್ರೀಕರಿ ಸಮರ್ಥವಾಗಿ ನಿಭಾಯಿಸಿದರು. ವಯಸ್ಸಿಗನುಗುಣವಾದ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದುಕೊಂಡರು. ಈ ಬೆನ್ನಿಗೇ ದೇವಿಸ್ತುತಿ ಆಯ್ದುಕೊಂಡು ಆಯಾಸದ ಛಾಯೆಯನ್ನು ಮೊಗದಲ್ಲಿ ಸ್ವಲ್ಪವೂ ವ್ಯಕ್ತವಾಗದ ರೀತಿಯಲ್ಲಿ ಎಚ್ಚರ ವಹಿಸಿದರು. ರಾಗ ಮಾಲಿಕಾ, ಆದಿ ತಾಳದಲ್ಲಿರುವ ಆದಿ ಶಂಕರಾಚಾರ್ಯ ವಿರಚಿತ “ಅಂಭಾ ಶಾಂಭವಿ” ಹಾಡಿಗೆ ಪ್ರೇಕ್ಷಕರ ಕಣ್ಣುಗಳಲ್ಲಿ ಆನಂದ ಭಾಷ್ಪ ಜಿನುಗುವಂತೆ ಪ್ರದರ್ಶನ ನೀಡಿದರು. ನಿರೀಕ್ಷೆಗೂ ಮೀರಿದ ಪ್ರದರ್ಶನ ಶ್ರೀಕರಿ ನೀಡಿ, ಬಳಿಕ ತಿಲ್ಲಾನ, ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಿದರು.
ಸಂದರ್ಭೋಚಿತ ನಗು, ದೇಹ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ನರ್ತಕಿಯಾಗಿ ಶ್ರೀಕರಿ ಇನ್ನಷ್ಟು ಗಮನ ಕೊಡಬೇಕೆನ್ನುವುದು ಸ್ಪಷ್ಟ ಮತ್ತು ನಿಷ್ಠುರ ಅಭಿಪ್ರಾಯ. ಜೊತೆಗೆ ಈಗಷ್ಟೇ ಹೆಜ್ಜೆ ಇಟ್ಟಿದ್ದೇನೆ ಎಂಬ ಶರಣಾಗತ ಭಾವದಿಂದ ಗುರು ಆಶೀರ್ವಾದ ಪಡೆದು ನಾಟ್ಯ ಕಲಿಕೆ ಮುಂದುವರಿಸುವತ್ತ ದೃಷ್ಟಿ ಹರಿಸಬೇಕಿದೆ.
ಶ್ರೀಕರಿ “ರಂಗಾಭಿವಂದನೆ”ಗೆ ಕಲಾ ಆರತಿ ರತ್ನ ಡಾ. ಸಂಜಯ್ ಅವರ ಗಾಯನ, ವಿದ್ವಾನ್ ಕಾರ್ತಿಕ್ ವ್ಯಾಧಾತ್ರಿ ಅವರ ಮೃದಂಗ ವಾದನ, ವಿದ್ವಾನ್ ಗೋಪಾಲ ವೆಂಕಟರಮಣ ಅವರ ವೀಣಾ ವಾದನ ಹಾಗೂ ವಿದ್ವಾನ್ ಧನುಷ್ ಅವರ ರಿದಂ ಪ್ಯಾಡ್ ನಿರ್ವಹಣೆ ಹೆಚ್ಚಿನ ಬಲ ನೀಡಿತು. ಗುರು ಶ್ರೀಮತಿ ರಾಧಿಕಾ ಅವರು ನಟವಾಂಗ ನಿರ್ವಹಿಸಿ ಶಿಷ್ಯೆಯ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.