ಭಾವಾಭಿವ್ಯಕ್ತಿಯ ರೇಖಾ ಲಾಲಿತ್ಯ

Share This

“𝗔 𝗱𝗿𝗮𝘄𝗶𝗻𝗴 𝗶𝘀 𝘀𝗶𝗺𝗽𝗹𝘆 𝗮 𝗹𝗶𝗻𝗲 𝗴𝗼𝗶𝗻𝗴 𝗳𝗼𝗿 𝗮 𝘄𝗮𝗹𝗸”
ಜರ್ಮನಿಯ ಹೆಸರಾಂತ ಕಲಾವಿದ ಪಾಲ್ ಕ್ಲೀ (Paul Klee) ಅವರ ಈ ಮಾತು ಬಹುತೇಕ ಸಂದರ್ಭಗಳಲ್ಲಿ ‘ ಪ್ರಸ್ತುತ ‘ ಅನಿಸಿದ್ದಿದೆ!
ಚಲನೆಯ(movement) ಶಕ್ತಿ ಹೊಂದಿರುವ ರೇಖೆಗಳನ್ನು ಒಳಗೊಳ್ಳುವ ಯಾವುದೇ ಚಿತ್ರವೂ ಜೀವಂತವೆನಿಸುತ್ತವೆ. ಎಷ್ಟೋ ಸಂದರ್ಭದಲ್ಲಿ ರೇಖೆ ಕಲಾವಿದನ ಸಹಜ ಗುಣಗಳುಳ್ಳ ರೇಖೆಗಿಂತ ಭಿನ್ನವಾಗಿಯೇ ಮೂಡಿದರೂ ರೇಖೆಯಲ್ಲಿ ಇರಬೇಕಾದ ಸತ್ವ, ವೇಗ ಇದ್ದಾಗ ಅಂತಹ ಚಿತ್ರಗಳು ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. ಇಂತಹ ರೇಖೆಗಳು ಪ್ರದರ್ಶಿಸಲ್ಪಟ್ಟ ಗ್ಯಾಲರಿಯ ಕಂಪನವನ್ನು(vibe) ಬದಲಾಯಿಸಿರುತ್ತದೆ. ಕಲಾವಿದ ಅನುಭವಿಸುವ ಈ ಸೂಕ್ಷ್ಮಗಳು ಬೇರಿನ್ನಾರೂ ಅನುಭವಿಸಲಾರರು. ಇತರರು ಕಲಾಕೃತಿಗಳನ್ನು ನೋಡುವ, ಅನುಭವಿಸುವ ದೃಷ್ಟಿ(vision) ಮತ್ತು ದೃಷ್ಠಿಕೋನ(perspective) ಬದಲಾಗಿರುತ್ತದೆ.
           
ಕರ್ನಾಟಕದ ಹಿರಿಯ ಕಲಾವಿದರಾದ ಪ.ಸ.ಕುಮಾರ್(P Sampath Kumar) ಅವರ 70ಕ್ಕೂ ಹೆಚ್ಚು ರೇಖಾ ಪ್ರಧಾನ ಚಿತ್ರಗಳು ಬೆಂಗಳೂರಿನ Art Houz ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಎಡಗೈನಿಂದ ರಚಿಸಿರುವ ಕಲಾಕೃತಿಗಳು ಎನ್ನುವುದು ಈ ಪ್ರದರ್ಶನದ ವಿಶೇಷತೆ.
ಪ.ಸ.ಕುಮಾರ್ ಅವರ ರೇಖೆಗಳ ಲಾಲಿತ್ಯ ವಿಭಿನ್ನ. ರೇಖೆಯನ್ನು ನೇರವಾಗಿ ಹರಿಯ ಬಿಡದೇ, ಸೌಂದರ್ಯಕ್ಕೂ ಧಕ್ಕೆಯಾಗದಂತೆ ಸರಳವಾಗಿ ಪೋಣಿಸಿ ಚಿತ್ರವಾಗಿಸುವ ಅವರ ರಚನಾ ಕ್ರಮ ಚಿಂತನೆಗೆ ಅನುವುಮಾಡಿಕೊಡುತ್ತವೆ. ಅವರು ಆಯ್ದುಕೊಳ್ಳುವ ವಸ್ತು ವಿಷಯ, ತಮ್ಮ ಅಭಿವ್ಯಕ್ತಿಗೆ ಬಳಸಿಕೊಳ್ಳುವ ವಿಚಾರ ಮತ್ತು ಅದರೊಟ್ಟಿಗಿನ ಅನುಸಂಧಾನ, ಅವರು ನೋಡುವ ಬಗೆ ಗಮನ ಸೆಳೆಯುತ್ತವೆ. ಕುತೂಹಲ ಸೃಷ್ಟಿಸುತ್ತವೆ.
ಪ್ರದರ್ಶಿತ ಹೆಚ್ಚಿನ ಕಲಾಕೃತಿಗಳಲ್ಲಿ ಪ.ಸ.ಕುಮಾರ್ ಅವರ ಕೈಚಳಕ(legerdemain) ಎಂದಿನ ಏರಿಳಿತಗಳಿಂದಲೇ ಕೂಡಿವೆ. ಎಲ್ಲಿಯೂ ಬದಲಾಗಬಹುದಾದ ಸಾಧ್ಯತೆಗೂ ಅವರು ಅವಕಾಶವನ್ನೇ ನೀಡಿಲ್ಲ. ಕೆಲ ಕಲಾಕೃತಿಗಳು ಈ ಪರಿಧಿಯಲ್ಲಿ ಇಲ್ಲದಿದ್ದರೂ, ಅವರ ಶೈಲಿಯಿಂದ ಹೊರತಾದುದು ಅನಿಸುವುದಿಲ್ಲ. ವಾಸ್ತವ ಬದುಕಿನಿಂದಾಚೆ ಕಲಾವಿದನಿಗೆ ಸಿಗಬಹುದಾದ ವಿಷಯಗಳು ಪ.ಸ.ಕುಮಾರ್ ಅವರ ಚಿತ್ರಗಳಲ್ಲಿ ನುಸುಳುವುದು ಬಹಳ ವಿರಳ. ಹೀಗಾಗಿ ಅವರ ರೇಖಾ ಚಿತ್ರಗಳು ಬಲು ಬೇಗ ನೋಡುಗರನ್ನು ತಲುಪುವಲ್ಲಿ ಯಶಸ್ವಿ ಅನಿಸುತ್ತವೆ. ಹಿತ ಮಿತವಾದ ರೇಖೆಗಳ ಬಳಕೆ ಅನನ್ಯ. ಕೆಲವು ಕಡೆ ಗಾಢವಾದ ರೇಖೆಗಳನ್ನೂ ನೋಡಬಹುದು. ಅಂದಹಾಗೆ ರೇಖೆಗಳಲ್ಲಿನ ಬಿರುಸು(force) ವಿಭಿನ್ನವೆನಿಸಿತು.
ಪ.ಸ.ಕುಮಾರ್ ಅವರ ಭಾವಾಭಿವ್ಯಕ್ತಿ (expression) ಮತ್ತು illustration (visual explanation of a text) ನಡುವಿನ ತೆಳುವಾದ, ನವಿರಾದ ಭಾವ ಭಿನ್ನತೆಯನ್ನು ಮೊದಲ ನೋಟದಲ್ಲಿ ಗುರುತಿಸುವುದು ಕಷ್ಟಸಾಧ್ಯ. ಹೆಚ್ಚಿನವರು ಭಾವಾಭಿವ್ಯಕ್ತಿಯ ಕಲಾಕೃತಿಗಳನ್ನೇ illustration ಅಂದುಕೊಳ್ಳುವ ಸಾಧ್ಯತೆ ಇದ್ದಿರಲೂಬಹುದು. ಆದರೆ, ಪ್ರದರ್ಶಿತ ರೇಖಾಚಿತ್ರಗಳೆಲ್ಲವೂ ಅವರ ಮನದಾಳದ ಮಾತು, ತುಡಿತ, ಸಂತೋಷ, ದುಃಖ ಇತ್ಯಾದಿ. ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆ ಇವೆಲ್ಲವೂ ಅವರ freedom of expression. ಯಾವುದೋ ಕಥೆ, ಕಾದಂಬರಿ, ಕಾವ್ಯ, ಪ್ರಬಂಧಕ್ಕೆ ರಚಿಸಲಾದ ರೇಖಾಚಿತ್ರಗಳಲ್ಲ.
ಉಳಿದಂತೆ ರೇಖೆಗಳಲ್ಲಿ ಆಧುನಿಕತೆಯ ಸ್ಪರ್ಶವಿದೆ. ಸಮಕಾಲೀನ ಕಲಾ ಲಕ್ಷಣಗಳಿವೆ. ನವ್ಯ ಭಾವ, ರೇಖೆ ಮತ್ತು ಬಣ್ಣಗಳ ಮೇಲಿನ ಹಿಡಿತ, ವಿಚಾರ ಸ್ಪಷ್ಟತೆಯನ್ನು ಕಾಣಲುಸಾಧ್ಯವಿದೆ. ಇನ್ನೊಂದು ಗಮನಿಸಲೇಬೇಕಾದ ಅಂಶವೇನೆಂದರೆ ಕಲಾಕೃತಿಗಳ ಮೇಲಿನ ಅವರ ಸಹಿ(signature). ಕಲಾಕೃತಿಯ ಯಾವ ಭಾಗಕ್ಕೂ ಧಕ್ಕೆಯಾಗದಂತೆ ಮುತುವರ್ಜಿ ವಹಿಸಿ ಸಹಿ ಮಾಡಿರುತ್ತಾರೆ.
ಕ್ಯುರೇಟರ್ ಡಾ.ಪ್ರಮಿಳಾ ಲೋಚನ್( Lochan Pramila) ಅವರು ಬಹಳ ಅಳೆದು ತೂಗಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದ್ದಾರೆನ್ನುವುದು ಸ್ಪಷ್ಟ. ಬಹಳ ಮುಖ್ಯವಾಗಿ ಗ್ಯಾಲರಿಯ ಕಂಪನ ಕಾಪಾಡಿಕೊಳ್ಳುವಲ್ಲಿ ಗಮನಾರ್ಹ ನಿರ್ವಹಣೆ ಆಗಿದೆ. ಗ್ಯಾಲರಿಯ ಸ್ಥಳಾವಕಾಶಕ್ಕೆ ಅನುಗುಣವಾದ ನಿರ್ವಹಣೆ ಬಲು ಪ್ರಯಾಸದ ಕೆಲಸ. ಹಾಗೇ art houz ಗ್ಯಾಲರಿಯ ರೂವಾರಿ ಜಯಂತಿ ಶೇಗಾರ್( Jayanthi Shegar) ಅವರ ಸಹಭಾಗಿತ್ವ ಇಂದಿನ ಯುವ ಕಲಾಸಮುದಾಯದ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಇಂತಹ ಇನ್ನಷ್ಟು ಕಲಾಪ್ರದರ್ಶನಗಳು ಆಯೋಜನೆಗೊಳ್ಳಲಿ ಎನ್ನುವುದು ನಮ್ಮೆಲ್ಲರ ಸದಾಶಯವೂ ಹೌದು. ಕಾರಣೀಕರ್ತರೆಲ್ಲರಿಗೂ ಅಭಿನಂದನೆಗಳು.
       

Share This

Leave a Reply

Your email address will not be published. Required fields are marked *