ಸಾಲಿ ರೇಖಾ ವೈಭವ: ಮನ ಸೆಳೆದ ಪ್ರದರ್ಶನ

Share This

 ನಾಡಿನ ಹಿರಿಯ ಕಲಾವಿದ ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ ಕಲಾಪ್ರದರ್ಶನಕ್ಕೆ ನಿನ್ನೆ ನವೆಂಬರ್ 7, 2023, ಮಂಗಳವಾರ ಚಾಲನೆ ಸಿಕ್ಕಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್.ಶಂಕರ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಎಸ್.ಎನ್. ಅವರು ದೀಪ ಬೆಳಗಿ ಉದ್ಘಾಟಿಸಿದರು.
ಸೋಮಶೇಖರ ಸಾಲಿ ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ಕಲಾವಿದರೂ ಆದ ಪಿ.ಎಸ್.ಕಡೇಮನಿ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ, ಸಾಲಿ ಅವರ ಪುತ್ರರಾದ ವಿದ್ಯಾಧರ ಸಾಲಿ ಅವರು ವೇದಿಕೆ ಹಂಚಿಕೊಂಡರು. ಸಾಲಿ ಅವರ ಕುಟುಂಬ ಸದಸ್ಯರು, ಸ್ನೇಹಿತರು, ಅಭಿಮಾನಿಗಳು, ನಾಡಿನ ಅನೇಕ ಹಿರಿಯ ಕಿರಿಯ ಕಲಾವಿದರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಕಲಾವಿದರಾದ, ಕಲಾ ಇತಿಹಾಸ ತಜ್ಞರಾದ ರಾಘವೇಂದ್ರ ರಾವ್ ಕುಲಕರ್ಣಿ ಅವರು ಬಹಳ ಸುಂದರವಾಗಿ ಕಾರ್ಯಕ್ರಮ ನಿರೂಪಿಸಿದರು.
      
‘ ಸೋಮಶೇಖರ ಸಾಲಿ ಅವರು ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಗೆ ಹತ್ತಿರದ ಸಂಬಂಧವಿದೆ. ಸಾಲಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಕಲಾವಿದರಿಗೂ, ಚಿತ್ರಕಲಾ ಪರಿಷತ್ ಸಂಸ್ಥಾಪಕರಾದ ನಂಜುಂಡ ರಾವ್ ಅವರಿಗೂ ಸಾಕಷ್ಟು ಒಡನಾಟವಿತ್ತು. ಸಾಲಿ ಅವರು ಬಹಳ ನಿಕಟವರ್ತಿ ಆಗಿದ್ದರು’ ಎಂದು ಸ್ಮರಿಸಿದರು.
‘ ಉತ್ತರ ಕರ್ನಾಟಕ ಭಾಗದ ಅನೇಕ ರಾಜಕಾರಣದ ಸ್ನೇಹಿತರು, ಕಲಾವಿದರು ಚಿತ್ರಕಲಾ ಪರಿಷತ್ ಮಾದರಿಯಲ್ಲೇ ಆ ಭಾಗದ ಕಲಾವಿದರಿಗೆ ಅನುಕೂಲ ಆಗುವಂತೆ ಕಾಲೇಜು, ಗ್ಯಾಲರಿಗಳು ಇರುವ ಸುಸಜ್ಜಿತ ವ್ಯವಸ್ಥೆಯ ಬಗ್ಗೆ ಒತ್ತಾಯಿಸುತ್ತಿದ್ದಾರೆ ‘ ಎಂದು ಹೇಳಿದರು.
ಚಿತ್ರಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ಅವರು ಮಾತನಾಡಿ, ಸೋಮಶೇಖರ ಸಾಲಿ ಅವರು ಹಾಗೂ ಚಿತ್ರಕಲಾ ಪರಿಷತ್ ಜೊತೆಗಿನ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿದರು.
ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ ಅವರು ಮಾತನಾಡಿ, ‘ ಸೋಮಶೇಖರ ಸಾಲಿ ಅವರ ಕಲಾಕೃಷಿ ನೋಡಿಯೇ ಬೆಳೆದವರು ನಾವು. ನನ್ನ ಭಾವಚಿತ್ರಗಳ ರಚನೆಗೆ ಸಾಲಿ ಅವರ ಭಾವಚಿತ್ರಗಳೇ ಸ್ಫೂರ್ತಿ. ಸಾಲಿ ಅವರು ಸಾಕಷ್ಟು ನುರಿತ ಕಲಾವಿದರಾಗಿದ್ದರು. ಅವರಲ್ಲಿ ಕಲೆಯ ಬಗ್ಗೆ ಬದ್ಧತೆ ಇತ್ತು. ಈ ಕಲಾಪ್ರದರ್ಶನ ಇಂದಿನ ಕಲಾ ವಿದ್ಯಾರ್ಥಿಗಳಿಗೆ ಸಹಕಾರಿ. ಅವರು ಬಂದು ವೀಕ್ಷಿಸಬೇಕು ‘ ಎಂದು ಹೇಳಿದರು.
ಇನ್ನು ಕಲಾಪ್ರದರ್ಶನ ಕುರಿತು ಸಂಕ್ಷಿಪ್ತವಾಗಿ ಹೇಳುವುದಾದರೆ ಅವರ ಪೆನ್ಸಿಲ್ ಸ್ಕೆಚ್ ಗಳು ಪ್ರದರ್ಶನದಲ್ಲಿ ಹೆಚ್ಚಿವೆ. ಇವು ಬಹಳ ಆಪ್ತವೆನಿಸುವಂತವು. ಜೊತೆಗೆ ಭಾವಚಿತ್ರಗಳು ಹಾಗೂ ಹೊರಾಂಗಣ ಚಿತ್ರಗಳು ನೋಡಲು ಲಭ್ಯ.
ಸೋಮಶೇಖರ ಸಾಲಿ ಅವರ ಕಲಾಕೃತಿಗಳ ಕುರಿತಾಗಿ ಮತ್ತೆ ಇಲ್ಲಿ ಬರೆಯಲಾರೆ. ಕಾರಣ ಈ ಹಿಂದೆ ಬರೆದಿದ್ದೆ. ಈ ಕೆಳಗಿನ ಲಿಂಕ್ ನಲ್ಲಿ ಓದಿಕೊಳ್ಳಬಹುದು.
ಹಿರಿಯ ಕಲಾವಿದರೊಬ್ಬರ ಇಷ್ಟೊಂದು ಕಲಾಕೃತಿಗಳು ಈ ಪ್ರಕಾರದ ಕಲಾಪ್ರದರ್ಶನದಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತದೆ. ಸ್ನೇಹಿತರೆ, ಬಿಡುವು ಮಾಡಿಕೊಂಡು ಹೋಗಿಬನ್ನಿ.
ಸಾಲಿ ಅವರ ಕುರಿತಾಗಿ ಒಂದಿಷ್ಟು ಮಾಹಿತಿ ಈ ಕೆಳಗಿನ 👇 ಲಿಂಕ್ ನಲ್ಲಿ ಲಭ್ಯ.

Share This

Leave a Reply

Your email address will not be published. Required fields are marked *