“ವ್ಯಂಗ್ಯಚಿತ್ರ” “Caricature”
ಇದೇ ಒಂದು ಭಾಷೆ. ಅಕ್ಷರ ಭಾಷೆಯನ್ನೂ ಮೀರಿದ್ದು. ಇದಕ್ಕೆ ಬೇರಿನ್ನಾವ ಭಾಷೆಯ ಹಂಗಿಲ್ಲ. ಸಂದೇಶಕ್ಕೂ ಇತಿ ಮಿತಿಗಳಿಲ್ಲ. ವ್ಯಂಗ್ಯ ಚಿತ್ರಕಾರರ ಅಭಿವ್ಯಕ್ತಿ ಸ್ವತಃ ಅವರ ಊಹೆಗೂ ನಿಲುಕದ್ದು!
“ವ್ಯಂಗ್ಯಚಿತ್ರ” “Caricature” ಅಂದರೆ ವಿಡಂಬನೆಯ ಚಿತ್ರ. ಹಾಸ್ಯಚಿತ್ರ, ವಿಕಟಚಿತ್ರ, ಪ್ರಹಸನಚಿತ್ರ ಎಂಬ ಪರ್ಯಾಯ ಪದಗಳೂ ಚಾಲ್ತಿಯಲ್ಲಿವೆ. ದೊಡ್ಡದೊಂದು ಇತಿಹಾಸವಿರುವ ಕಲಾ ಪ್ರಕಾರ. ಇತ್ತೀಚಿನ ದಿನಗಳಲ್ಲಿ ವ್ಯಂಗ್ಯಚಿತ್ರ ವಿವಿಧ ರೀತಿಯ ಆಯಾಮಗಳಲ್ಲಿ ನೋಡಲು ಸಾಧ್ಯವಾಗುತ್ತಿವೆ. ವ್ಯಾಪ್ತಿ ಕೂಡ ಹೆಚ್ಚಿದೆ. ತಂತ್ರಜ್ಞಾನ ಬೆಳೆದಂತೆ ಉಳಿದೆಲ್ಲಾ ಕಲಾಪ್ರಕಾರಗಳು ಹೇಗೆ ಅನೇಕ ಸಾಧ್ಯತೆಗಳತ್ತ ಹೊರಳಿ ಕೊಂಡಿದೆಯೋ ಅದೇ ರೀತಿಯಲ್ಲಿ ವ್ಯಂಗ್ಯಚಿತ್ರ ಪ್ರಕಾರವೂ ಡಿಜಿಟಲೀಕರಣ ಆಗಿರುವುದನ್ನು ಕಾಣುತ್ತಿದ್ದೇವೆ.






ಈ ನಡುವೆ ಕಳೆದ ಎರಡು ದಶಕಗಳಿಂದ ತಮ್ಮ ಆಕರ್ಷಣೀಯ ರೇಖೆಗಳ ಮೂಲಕ ವ್ಯಂಗ್ಯಚಿತ್ರ ರಚಿಸಿಕೊಂಡು ಬಂದಿರುವ ಶಿವಮೊಗ್ಗ ಮೂಲದ ಕಲಾವಿದ ನಂಜುಂಡ ಸ್ವಾಮಿ ಅವರ “ಕುಂಚ ಕಂಡ ಕನ್ನಡ ಸಾಹಿತಿಗಳು” ಏಕವ್ಯಕ್ತಿ ಕಲಾಪ್ರದರ್ಶನ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ. 90ಕ್ಕೂ ಹೆಚ್ಚು ಸಾಹಿತಿಗಳ ವಿವಿಧ ಭಾವಗಳ Caricature ಪ್ರದರ್ಶಿಸಲ್ಪಟ್ಟಿವೆ. ವಿಭಿನ್ನ ಮಾಧ್ಯಮಗಳಲ್ಲಿ ರಚಿಸಿರುವ ಚಿತ್ರಗಳು ಪ್ರದರ್ಶನದಲ್ಲಿದೆ. ನಂಜುಂಡ ಸ್ವಾಮಿ ಅವರ ರೇಖೆಯಲ್ಲಿನ ಶಕ್ತಿ ಪ್ರತಿಯೊಂದು ಸಾಹಿತಿಗಳ ಭಾವಕ್ಕೆ ಇನ್ನಷ್ಟು ಮೆರಗು ತಂದಿದೆ. ಆಯಾ ಸಾಹಿತಿಗಳಲ್ಲಿ ಕಾಣಬಹುದಾದ ಕೆಲ ವಿಶೇಷ ಗುಣಗಳು ಕಣ್ಣೆದುರು ನಿಲ್ಲುವ ರೀತಿಯಲ್ಲಿ ರಚಿಸಿದ್ದಾರೆ.
ಸ್ನೇಹಿತರೆ, ಈ ಕಲಾಪ್ರದರ್ಶನ ನವೆಂಬರ್ 15ರ ತನಕ ವೀಕ್ಷಣೆಗೆ ಲಭ್ಯವಿದ್ದು, ಸಾಧ್ಯವಾದರೆ ಬಿಡುವು ಮಾಡಿಕೊಂಡು ಹೋಗಿ ಬನ್ನಿ.







