• ಚಿತ್ರಸಂತೆಯ ಯಶಸ್ಸಿನ ಬಳಿಕ ಹೊಸ ಹೆಜ್ಜೆ
ಕರ್ನಾಟಕ ಚಿತ್ರಕಲಾ ಪರಿಷತ್ ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಚಿತ್ರಸಂತೆಯ ಅಭೂತಪೂರ್ವ ಯಶಸ್ಸಿನ ಬಳಿಕ ಮಗದೊಂದು ಕಲಾಮೇಳಕ್ಕೆ ಅಣಿಯಾಗಿದೆ. ಮಾರ್ಚ್ 5ರಿಂದ 9ರ ತನಕ ನ್ಯಾಷನಲ್ ಆರ್ಟ್ ಫೇರ್ (National Art Fair) ನಡೆಸುವುದಾಗಿ ಪ್ರಕಟಿಸಿದೆ.
ಸ್ವಾಗತಾರ್ಹ ಬೆಳವಣಿಗೆ. ಆದರೆ, ಈ ವೇದಿಕೆಯ ಸ್ವರೂಪ ಹೇಗಿರಲಿದೆ? ಯಶಸ್ಸಿನ ಹಾದಿ ಹೇಗೆ? ಎನ್ನುವ ಕುತೂಹಲ ಸಹಜವಾಗಿ ಕಲಾವಲಯದಲ್ಲಿ ಮೂಡಿದೆ. ಚಿತ್ರಸಂತೆ ಯಶಸ್ಸು, ಮತ್ತದರ ಇನ್ನೊಂದು ಮಗ್ಗುಲಿನ ಅಭಿಪ್ರಾಯಗಳ ನಡುವೆ ಪರಿಷತ್ ಈಗಿಟ್ಟಿರುವ ಹೆಜ್ಜೆ ಖಂಡಿತವಾಗಿಯೂ ಬಹಳ ಗಾಂಭೀರ್ಯವಾದದ್ದು. ಈ ನಿರ್ಧಾರಕ್ಕೆ ಬರುವಾಗ ಪರಿಷತ್ ಎಲ್ಲಾ ಆಗು-ಹೋಗುಗಳನ್ನು ಯೋಚಿಸಿರುತ್ತದೆ ಎಂದು ನಂಬಿದ್ದೇನೆ. ಸಭ್ಯ ರಾಜಕಾರಣ ಮತ್ತು ಆಡಳಿತದ ಎಲ್ಲಾ ಮಜಲುಗಳನ್ನು ಬಲ್ಲವರಾದ, ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಅವರು ಇಂತಹ ವಿಚಾರಗಳಲ್ಲಿ ಯೋಚಿಸಬಲ್ಲವರು. ಅವರ ರಾಜಕಾರಣದ ನಡೆಯನ್ನು ನಾನು ಪತ್ರಕರ್ತನಾಗಿ ಕಂಡಿದ್ದೇನೆ. ಅವರು ಚಿತ್ರಕಲಾ ಪರಿಷತ್ತನ್ನು ಮುನ್ನಡೆಸಿದ ರೀತಿಯನ್ನು ಕಲಾವಿದನಾಗಿ ಗಮನಿಸಿದ್ದೇನೆ. ಯಾರನ್ನೂ ನೋಡಿಸದೆ, ಅತ್ಯಂತ ಸೌಹಾರ್ದಯುತವಾಗಿ ನಿಭಾಯಿಸುವ ಜ್ಞಾನಿ ಮತ್ತು ಜಾಣರು. ಹೀಗಾಗಿ National Art Fair ಇನ್ನೊಂದು ಯಶಸ್ಸಿನ ಕಲಾಮೇಳ ಅನಿಸಿಕೊಳ್ಳಲಿದೆ ಎಂಬ ಭರವಸೆ ಇದೆ.
ಕರ್ನಾಟಕ ಕಲಾಕ್ಷೇತ್ರಕ್ಕೆ ವೃತ್ತಿಪರ ಕಲಾವಿದರಿಗಾಗಿ ಅತ್ಯಂತ genuine ಅನಿಸುವ ವೇದಿಕೆಯೊಂದರ ಅಗತ್ಯವಂತೂ ಇದೆ. ದೆಹಲಿ, ಮುಂಬೈ ಮತ್ತು ಕೊಚ್ಚಿಯಲ್ಲಿ ನಡೆಯುವ ಪ್ರಮುಖ ಮೂರು ಕಲಾಪ್ರದರ್ಶನಗಳಾದ India Art Fair, Art Mumbai ಮತ್ತು Kochi-Muziris Biennale (KMB) ಮಾದರಿ ಅಥವಾ ಅದರಾಚೆಗಿನ ವೃತ್ತಿಪರ ಪ್ರದರ್ಶನವಾಗಿಸುವ ಜವಾಬ್ದಾರಿಯುತ ಪ್ರಯತ್ನ ಆಗಬೇಕಿದೆ. ಇಡೀ ಕಲಾವಲಯ ಈ ನಿರೀಕ್ಷೆಯನ್ನಂತೂ ಹೊಂದಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಈ ಬಗ್ಗೆ ನಾನಾ ರೀತಿಯ ಸುದ್ದಿಗಳೂ ಹರಿದಾಡಿದ್ದವು, ಚರ್ಚೆಗಳೂ ನಡೆದಿವೆ. ಬೇಕು, ಬೇಡಗಳ ಬಗ್ಗೆ ತರಾವರಿಯ ಅಭಿಪ್ರಾಯಗಳು ಕೇಳಿಬಂದಿವೆ. ಇವೆಲ್ಲದರ ಪರಿವೆ, ಅರಿವು ಇರಿಸಿಕೊಂಡೇ ಚಿತ್ರಕಲಾ ಪರಿಷತ್ National Art Fair ನಡೆಸಲು ಮುಂದಾಗಿದೆ ಎನ್ನುವ ಭಾವ, ವಿಶ್ವಾಸವಿದೆ. ಕಲಾ ಸಮುದಾಯದ ಕೊರತೆಯನ್ನು ಈ ಮೇಳ ನೀಗಿಸಲಿ ಅನ್ನೋದು ಎಲ್ಲರ ಆಶಯವಾಗಲಿ.