𝐒𝐩𝐞𝐚𝐤𝐢𝐧𝐠 𝐓𝐑𝐄𝐄, 𝐖𝐡𝐢𝐬𝐩𝐞𝐫𝐢𝐧𝐠 𝐓𝐑𝐔𝐍𝐊

Share This

” ನದಿಯ ದಂಡೆಯಲ್ಲೊಂದು ಮರ
ನದಿಯಲ್ಲಿ ಒಂದು ಮರ.
ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ…”
  ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ‘ ಜ್ಞಾನಪೀಠ ‘ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರರ ಕವಿತೆಯೊಂದರ ಈ ಸಾಲುಗಳು ಥಟ್ಟನೆ ನೆನಪಾದವು. ಈ ಕವಿತೆಯ ಕಡೆಯ ಸಾಲು ಓದಿ ಮುಗಿಸುವಾಗ ನಮ್ಮೆದುರು ಪ್ರಕೃತಿಯ ದೃಶ್ಯಕಾವ್ಯವೇ ತೆರೆದುಕೊಳ್ಳುತ್ತದೆ. ಪ್ರಕೃತಿಯ ಜೊತೆ ಇದ್ದು ಬದುಕುವ ಅನುಭವ ವರ್ಣನಾತೀತ(indescribable) ಎಂಬ ಭಾವ ಆವರಿಸಿಕೊಂಡಿರುತ್ತದೆ. ಬದುಕಿಗೊಂದು ಪಾಠ ಆಗಲಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ನಡೆಯುತ್ತಿರುವ ಹಿರಿಯ ಕಲಾವಿದರಾದ ಎಚ್ ಎಸ್ ವೇಣುಗೋಪಾಲ ಅವರ ” Speaking TREE, Whispering TRUNK ” ಏಕವ್ಯಕ್ತಿ ಕಲಾಪ್ರದರ್ಶನ ಅವರಲ್ಲಿ ಹುದುಗಿದ ವೃಕ್ಷಗಳ ಮೇಲಿನ ಪ್ರೀತಿ, ಕಾಳಜಿ ತೋರಿಸಿತು. ಹಿರಿಯ ಲೇಖಕ ಗಿರಿಧರ್ ಖಾಸನೀಸ್ ಅವರು ಈ ಕಲಾಪ್ರದರ್ಶನ ಕ್ಯುರೇಟ್ ಮಾಡಿದ್ದಾರೆ. ಪರಿಸರ ಪ್ರೀತಿಸುವ ಬಹಳಷ್ಟು ನೋಡುಗರು ವೇಣುಗೋಪಾಲ ಅವರ ಕಲಾಕೃತಿಗಳ ಜೊತೆ ಸಂವಾದಿಸುವುದನ್ನು ನನ್ನ ಭೇಟಿಯ ವೇಳೆ ಗಮನಿಸಿದೆ. ಅಂದರೆ ಈ ಕಲಾಕೃತಿಗಳು ಒಂದು ವರ್ಗದ ನೋಡುಗರಿಗೆ ಆಪ್ತವೆನಿಸಿದೆ ಎಂದರ್ಥ.
ವೇಣುಗೋಪಾಲ ಅವರ ನಿರ್ವಹಣೆ ಗಮನಾರ್ಹವಾಗಿದೆ. ಬಣ್ಣಗಳನ್ನು ಬಹಳ ಶಾಂತಚಿತ್ತದಲ್ಲಿ ಇರುವಂತೆ ದುಡಿಸಿಕೊಂಡಿದ್ದಾರೆ. ಅನೇಕ ಚಿತ್ರಗಳಲ್ಲಿ ಚಾರ್ಕೋಲ್ ಬಳಸಿರುವ ಬಗೆ ಭಿನ್ನವಾಗಿದೆ. ಜಲವರ್ಣದ ಜೊತೆ ಚಾರ್ಕೋಲ್ ಬಳಸಿದಾಗ ಸಿಗುವ ಮೈವಳಿಕೆಯನ್ನು ಅಲ್ಲಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಈ ಪ್ರಕ್ರಿಯೆ ಕಲಾಕೃತಿಯೊಳಗಿನ ಕುತೂಹಲವನ್ನು ಹೆಚ್ಚಿಸಿವೆ. ಕೆಲವೊಂದು ಕಡೆಗಳಲ್ಲಿ ಅವರ ತಂತ್ರಗಾರಿಕೆ ಪ್ರಯೋಗಾತ್ಮಕವಾಗಿದೆ. ಕಲಾಕೃತಿಗಳ ರಚನೆಯ ಜತೆ ಜೊತೆಗೆ ಅನುಭವ ಹೆಚ್ಚಿಸಿಕೊಳ್ಳುವುದು ಕಲಾವಿದನಿಗೆ ಎಷ್ಟು ಮುಖ್ಯವಾಗುತ್ತಾ ಹೋಗುತ್ತದೆಯೋ, ಅದೇ ಪ್ರಕಾರ ನೋಡುಗನೂ ಆ ಭಾವವನ್ನು ಅನುಭವಿಸಬಲ್ಲ.
           
ಇನ್ನೊಂದು ಆಸಕ್ತಿದಾಯಕ ಅಂಶವನ್ನು ವೇಣುಗೋಪಾಲ ಅವರ ಕಲಾಕೃತಿಗಳಲ್ಲಿ ಕಾಣಲು ಸಾಧ್ಯವಾಗಿದೆ. ಕೆಲವೊಂದು ಕಲಾಕೃತಿಗಳಲ್ಲಿ ಮರದ ಚಕ್ಕೆ/ಸಿಬುರುಗಳನ್ನೇ(bark / splinter) ಕುಂಚ(brush)ವಾಗಿ ಬಳಸಿಕೊಂಡಿದ್ದಾರೆ. ಇದು ಅವರೊಳಗಿನ ಕ್ರಿಯಾಶೀಲ ಮತ್ತು ಪ್ರಯೋಗಶೀಲ ತುಡಿತವನ್ನು ತೋರಿಸುತ್ತದೆ. ತೊಗಟೆಗಳ ವಿಭಿನ್ನ ವಿನ್ಯಾಸಗಳು ಗಮನಸೆಳೆಯುತ್ತವೆ.
ಇಂಪ್ರೆಷನಿಸ್ಟರ(impressionist)ಶೈಲಿಯ ಕುಂಚದ ಬೀಸು (brush stroke) ವೇಣುಗೋಪಾಲ ಅವರ ಮೇಲೆ ಪ್ರಭಾವ ಬೀರಿರುವುದು ಕಂಡುಬರುತ್ತದೆ.
ಕ್ಯುರೇಟರ್ ಗಿರಿಧರ್ ಖಾಸನೀಸ್ ಅವರ ನಿಲುವು ಮತ್ತು ಪ್ರಸ್ತುತಿಯ ಕ್ರಮ ಕಲಾಕೃತಿಗಳ ಸೌಂದರ್ಯ ಹೆಚ್ಚಿಸಿದೆ. ಬೃಹತ್ ಅಳತೆಯ ಕಲಾಕೃತಿಗಳು ಉಳಿದ ಕಲಾಕೃತಿಗಳಿಗೆ ಧಕ್ಕೆಯಾಗದ ರೀತಿಯಲ್ಲಿರುವುದು ಗಮನಾರ್ಹ. ಒಟ್ಟಾರೆ ಕಲಾಪ್ರದರ್ಶನ ನೋಡುಗರಿಗೆ ಆಪ್ತವೆನಿಸುವಂತಿದೆ.
   
ಡಾ. ಚಂದ್ರಶೇಖರ ಕಂಬಾರ ಅವರ ಕವಿತೆಯ ಪೂರ್ಣ ಪಾಠ ಇಲ್ಲಿದೆ 👇
ನದಿಯ ದಂಡೆಯಲ್ಲೊಂದು ಮರ
ನದಿಯಲ್ಲಿ ಒಂದು ಮರ.
ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ.
ಮ್ಯಾಲಿನ ಮರದಲ್ಲಿ ಚಿಲಿಪಿಲಿ ಪ್ರಪಂಚ
ಗೀತಂಗಳ ಕುಕಿಲುತಾ
ರೆಕ್ಕೆಯಂಚುಗಳಿಂದ ಎಲೆಗಳ ಮ್ಯಾಲೆ
ಕನಸುಗಳ ಗೀಚುತಾ ಇದ್ದರೆ –
ಕೆಳಗೆ ಬೇರುಗಳಲ್ಲಿ
ಚಿಳಿಮಿಳಿ ಮೀನು ಆಳಸುಳಿಯುತಾ
ನೆರಳುಬೆಳಕಿನ ಬಲೆಯಲೀಜುತಾ
ನೆನಪುಗಳ ಕೆರಳಿಸುತಾವೆ.
ತೆರೆ ಎದ್ದಾಗ
ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ.
ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ.
ನೀನೊಂದು ಮರ ಹತ್ತಿದರೆ
ಇನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ
ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ
ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅಂತ ತಿಳಿ.
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.
ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.
ಈ ಕಥೆಯ ದುರಂತ ದೋಷ ಯಾವುದೆಂದರೆ:
ನಿಜವಾದ ಮರ ಮತ್ತು
ನೀರಿನ ಮರ
ಇವೆರಡೂ ಒಂದಾದ ಸ್ಥಳ
ಮಾಯವಾಗಿರೋದು.
ಅದಕ್ಕೇ ಹೇಳುತ್ತೇನೆ ಗೆಳೆಯಾ –
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ,
ಮ್ಯಾಲಿಂದ ಜಿಗಿದು
ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕು.
– ಡಾ.ಚಂದ್ರಶೇಖರ ಕಂಬಾರ

Share This

Leave a Reply

Your email address will not be published. Required fields are marked *