ಕಲಾಪ್ರದರ್ಶನ: ಬಿರುಬಿಸಿಲ ತಂಗಾಳಿ!

Share This

ಜಲವರ್ಣದ (watercolour) ಕಲಾಕೃತಿಗಳಲ್ಲಿ ಸಾಧ್ಯತೆಯನ್ನು ಮೀರಿದ ಹೊಸ ತಂತ್ರಗಾರಿಕೆ ( techniques ) ಅಥವಾ ದುಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಹೊಸತನ (innovation) ಕಂಡಾಗ ನೋಡುಗನನ್ನು ಕ್ಷಣಕಾಲ ಹಿಡಿದು ನಿಲ್ಲಿಸುತ್ತದೆ. ಪ್ರಯೋಗಾತ್ಮಕ ಪ್ರಕ್ರಿಯೆಯೇ ಹೊಸತೇನನ್ನೋ ಅನ್ವೇಷಿಸುವಲ್ಲಿ ನೆರವಾಗುತ್ತದೆ. ದಿಕ್ಸೂಚಿಯೂ ಆದೀತು.

ಇವೆಲ್ಲದರ ನಡುವೆ ಜಲವರ್ಣದಲ್ಲಿ ಇರಬೇಕಾದ ‘ transparence ‘ ಗುಣವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇವೆಲ್ಲದರ ಫಲವಾಗಿ ಕಲಾಕೃತಿಯಲ್ಲಿನ ಮೈವಳಿಕೆ ಹೆಚ್ಚೆಚ್ಚು ಗಮನ ಸೆಳೆಯುವಂತೆ ಮಾಡುತ್ತದೆ. ಅದೇ ಕಾರಣಕ್ಕಾಗಿ ಡಚ್ ಮೂಲದ ಅಮೆರಿಕ ಕಲಾವಿದ ವಿಲ್ಲೆಮ್ ಡಿ ಕೂನಿಂಗ್ ಅವರು “Watercolors is the first and the last thing an artist does” ಎಂದು ಹೇಳಿರಬೇಕು.

ಇಂಥದ್ದೊಂದು ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ 3ನೇ ಗ್ಯಾಲರಿಯಲ್ಲಿ ಬುಧವಾರ, ನವೆಂಬರ್ 1ರಂದು ಆರಂಭವಾಗಿದೆ. ಕಾಂತರಾಜ್ ವಾಟರ್‌ ಕಲರ್ ಫೌಂಡೇಶನ್ ಈ ಕಲಾಪ್ರದರ್ಶನವನ್ನು ಆಯೋಜಿಸಿದೆ. ಲಿಂಗರಾಜು ಎಂ.ಎಸ್.( Lingaraju M S ), ಕಾಂತರಾಜ್ ಎನ್.( Kanth Raj ), ಶಿವಕುಮಾರ್ ಜಕನಳ್ಳಿ( Shivakumar Jack ), ವೀಣಾ ಆರ್. ನಂದಿ( Veena R. nandi), ರಾಜೇಶ್ ಪಿ.( Rajesh P.), ಲೋಕೇಶ್ ಆರ್.( Lokesh Lokee Lokee ), ಭೈರವ ಬಿ.ಎಂ.( Bhyrava B.M.) ಮತ್ತು ಶಾಂತಕುಮಾರ್ ಟಿ.ಎಚ್.( Shantha Kumar T H) ಅವರ ಕಲಾಕೃತಿಗಳು ಪ್ರದರ್ಶನದಲ್ಲಿದೆ.

ಲಿಂಗರಾಜು(Lingaraju) ಅವರ ಕಲಾಕೃತಿಯಲ್ಲಿ ಕುಂಚದ ಸೆಳೆತವೇ(brush stroke) ಆಕರ್ಷಣೆ. ಬಣ್ಣವನ್ನು ಹದವಾಗಿ, ಹಿತ-ಮಿತವಾಗಿ ಇಳಿಬಿಟ್ಟು ಚದುರುವಂತೆ ನೋಡಿಕೊಳ್ಳುವ ಪಕ್ರಿಯೆ ಜಲವರ್ಣದ ಸಂಪ್ರದಾಯ ಮೀರಿದ ಪ್ರಯತ್ನ. ಅಮೂರ್ತವಾದ ಅಭಿವ್ಯಕ್ತಿಯಾಗಿ ಮೇಲ್ನೋಟಕ್ಕೆ ಕಂಡರೂ ಕುಂಚದ ಬೀಸು (brush stroke) ಹಿಡಿದು ನಿಲ್ಲಿಸುತ್ತದೆ.

“Watercolors bring dreams to life with each stroke of the brush” ಎನ್ನುವ ರೀತಿಯಲ್ಲಿ ಲಿಂಗರಾಜು ಅವರು ಜಲವರ್ಣವನ್ನು ದುಡಿಸಿಕೊಳ್ಳುತ್ತಾರೆ. ಒಂದೊಂದು stroke ಇಡೀ ಕಲಾಕೃತಿಯನ್ನು ಚಲನೆಯಲ್ಲಿಡುವಂತೆ ಮಾಡುತ್ತದೆ. ಅವರ ಬದ್ಧತೆಗೆ ಸಾಟಿ ಬೇರೊಬ್ಬರಿಲ್ಲ. ಕಲಾಕೃತಿಗೆ ಸಾಸಿವೆಯಷ್ಟೂ ಅನ್ಯಾಯವಾಗದ ರೀತಿಯಲ್ಲಿ ಏಕಾಗ್ರಚಿತ್ತರಾಗಿರುತ್ತಾರೆ. ಬಹಳ ಹತ್ತಿರದಿಂದ ಕಂಡವನಾದ್ದರಿಂದ ಇದನ್ನು ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತೇನೆ. ಜಲವರ್ಣದ ಮೇಲಿನ ಹಿಡಿತ ಮೆಚ್ಚಿಕೊಳ್ಳುವಂತದ್ದಾಗಿದೆ.

ಕಾಂತರಾಜ್(Kanthraj) ಅವರ ಕಲಾಕೃತಿಗಳು ಸಾಕಷ್ಟು ಭಿನ್ನವೆನಿಸುತ್ತವೆ. ಅಮೂರ್ತದಲ್ಲೂ ಮೂರ್ತವಾದುದನ್ನು ಸರಳ ರೇಖೆಗಳ ಮೂಲಕ ಅಭಿವ್ಯಕ್ತಗೊಳಿಸುವ ಅವರ ಶೈಲಿ ಅನೇಕರನ್ನು ನಿದ್ದೆಗೆಡಿಸಿವೆ. ಕಳೆದೊಂದು ದಶಕದಲ್ಲಿ ಅವರ ಕಲಾಕೃತಿಗಳಲ್ಲಾದ ಬದಲಾವಣೆ ಗಮನಿಸಿದಾಗ ಗಟ್ಟಿಯಾಗಿ ಜಲವರ್ಣಕ್ಕೆ ಅಂಟಿಕೊಂಡಿರುವುದರ ಪರಿಣಾಮವನ್ನು ತೋರಿಸುತ್ತದೆ. ‘ Body of work ‘ ಕುತೂಹಲ ಮೂಡಿಸುತ್ತವೆ.

ಹಾಗೇ ವರ್ಣ ಸಂಯೋಜನೆಯಲ್ಲೂ ಕಾಂತರಾಜ್ ಬೇರೆಯದೇ ನೆಲೆಯಲ್ಲಿ ನಿಲ್ಲುತ್ತಾರೆ. ಈ ಪ್ರದರ್ಶನದಲ್ಲಿ ಪ್ರದರ್ಶಿತ ಕಲಾಕೃತಿಗಳು ಅಮೂರ್ತವೂ, ಕಾಲ್ಪನಿಕ ಜಗತ್ತಿನೊಳಕ್ಕೆ ಕರೆದೊಯ್ಯುವ ಅಭಿವ್ಯಕ್ತಿಯಾಗಿ ಮೆಚ್ಚಿಕೊಳ್ಳುವಂತಿವೆ. “Watercolor painting is like breathing life into paper” ಎನ್ನುವಂತೆ ಕಾಂತರಾಜ್ ಕಲಾಕೃತಿಗಳು ಹಸಿರಾಗಿವೆ. ಇತ್ತೀಚಿನ ಅವರ ಕಲಾಕೃತಿಗಳು ಅರಳಿದ ಹೂವುಗಳ ದಳವಾಗಿ ಕಾಣಿಸುತ್ತಿವೆ.

ಶಿವಕುಮಾರ್(Shivakumar) ಅವರ ಕಲಾಕೃತಿಗಳಲ್ಲಿ ಒಂದಿಷ್ಟು ಅನಿರೀಕ್ಷಿತ ಬದಲಾವಣೆ ಕಾಣಿಸುತ್ತಿದೆ. ಓಟ, ಹುಡುಕಾಟದ ನಿರಂತರತೆ ಇದೆ. ಪರಿಸರದ ಮೇಲಿನ ಕಾಳಜಿ, ಪ್ರೀತಿ ಅನನ್ಯ. ಸ್ಫೂರ್ತಿಯೂ ಹೌದು. ‘ಹೂವಿನ ಪರಿಮಳ ಸವಿಯುವ ಮಯೂರಿ’ ಗ್ರಹಿಕೆ ಆಕರ್ಷಣೆ. ಜಲವರ್ಣ ಬಳಕೆ ಭಿನ್ನವಾಗಿದೆ. ಬಣ್ಣಗಳನ್ನು ದುಡಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಗಾಢತೆ (dark wash techniques) ಕಾಣಿಸುತ್ತದೆ. color blending, color balancing ಮೆಚ್ಚಿಕೊಳ್ಳುವಂತದ್ದು. ಅವರ ನಿರಂತರ ಅಭ್ಯಾಸದ ಬದ್ಧತೆ ಭವಿಷ್ಯಕ್ಕೆ ಮಿಂಚು.

ವೀಣಾ(Veena) ಅವರ ಕಲಾಕೃತಿಗಳು ವೈಯಕ್ತಿಕವಾಗಿ ನನಗೆ ಇಷ್ಟವಾಯಿತು. ಅವರ ಬಣ್ಣಗಳ ಬಳಕೆಯಲ್ಲಿನ ತಂತ್ರಗಾರಿಕೆ ಅರೆಕ್ಷಣ ನನ್ನನ್ನು ಕಾಲೇಜು ದಿನಗಳಲ್ಲಿ ರಚಿಸಿದ still life ಗಳನ್ನು ನೆನಪಿಸಿತು. ವೀಣಾ ಅವರು ಬಹಳ ಸೊಗಸಾಗಿ ಜಲವರ್ಣವನ್ನು ಮೈಗೂಡಿಸಿಕೊಂಡಿದ್ದಾರೆ. ಜಲವರ್ಣದ ಹಿಡಿತ (grip) ಕಂಡುಕಡಿದ್ದಾರೆ.

” Art washes away from the soul the dust of everyday life ” ಎಂದಿರುವ ಖ್ಯಾತ ಕಲಾವಿದ ಪಿಕಾಸೋ ಮಾತಿನಂತೆ ವೀಣಾ ಅವರು ತಮ್ಮ ಕಲಾಕೃತಿ ರಚನೆಯ ಪ್ರಕ್ರಿಯೆಯ ಮಧ್ಯೆ ಎದುರಾಗುವ ಧೂಳನ್ನು ಸ್ವಚ್ಛಗೊಳಿಸಿ, ಶಿಸ್ತು ಪಾಲಿಸಿದ್ದಾರೆ. ಇದು ಸ್ಫೂರ್ತಿಯೂ ಹೌದು.

ರಾಜೇಶ್(Rajesh) ಅವರ ಕಲಾಕೃತಿಗಳು ನೋಡುಗನನ್ನು ನೇರವಾಗಿ ಚಿಂತನೆಗೆ ಕರೆದೊಯ್ಯುತ್ತವೆ. ನಿತ್ಯ ಎದುರಾಗುವ ಅದೆಷ್ಟೋ ಘಟನೆಗಳನ್ನು ನೆನಪಿಸುತ್ತವೆ. ವನ್ಯಜೀವಿಗಳು ಮತ್ತು ಮಾನವ ಸಂಘರ್ಷಣೆಯ ಸಂದಿಗ್ಧತೆ, ಪ್ರೀತಿ-ವಾತ್ಸಲ್ಯ, ಅನುಬಂಧವನ್ನು ತೆರೆದಿಡುತ್ತವೆ. ಅವರ ಸಂಯೋಜನಾ ಪದ್ಧತಿ (custom composition) ಭಿನ್ನವಾಗಿದೆ. ಸಮಕಾಲೀನ ನೆಲೆಯಲ್ಲಿ ವಿಚಾರ ಮಂಡಿಸುವ ಬಗೆ ಸೊಗಸಾಗಿದೆ. ಬಣ್ಣಗಳ ಬಳಕೆಯಲ್ಲಿನ ತಂತ್ರಗಾರಿಕೆಯಲ್ಲಿ ಪ್ರೇರಣೆಯೇ ಹೂರಣ. ಬಣ್ಣಗಳ ಬಳಕೆಯಲ್ಲಿ ತೋರಿದ ಕ್ರಮ (rendering) ಗಮನಾರ್ಹ.

ಕಲಾವಿದನ ಸ್ವಾತಂತ್ರ್ಯದಿಂದಾಚೆ ನಿಂತು ಹೇಳಬಹುದಾದರೆ ಬಹುಶಃ ಇನ್ನಷ್ಟು ಸರಳಗೊಳಿಸಿದಲ್ಲಿ (simplification) ಸ್ಪಷ್ಟತೆ ಹೆಚ್ಚಬಹುದು.

ಲೋಕೇಶ್ (Lokesh) ಅವರ ಕಲಾಕೃತಿಗಳಲ್ಲಿನ ಹದವಾದ, ಮಂದ- ಶಾಂತಚಿತ್ತದ (sober) ಬಣ್ಣಗಳ ಬಳಕೆಯೇ ಚೆಂದ. ಸೌಂದರ್ಯ ಲಹರಿಗೇ ಹೊಸ ಭಾಷ್ಯ ಬರೆದಂತೆ ಎಂದರೆ ಅತಿಶಯೋಕ್ತಿ ಆದೀತು. ಅವರ ಕಲಾಕೃತಿಯಲ್ಲಿನ ವರ್ಣ ಬಳಕೆ ಒಂದರ್ಥದಲ್ಲಿ ಸಂಕೀರ್ಣ(complex). ಬದುಕಿನ ನಿತ್ಯ ಚಹರೆ(feature) ಅಥವಾ ಲಕ್ಷಣ ಎನ್ನಬಹುದೇನೊ.

” I chose sober because i wanted a better life. I stay sober because i got one ” ಹಿತ ನುಡಿಯಂತೆ ಲೋಕೇಶ್ ಅವರ ಆಯ್ಕೆ ಇರುವುದು ಕಲಾಕೃತಿಯಲ್ಲಿ ಪ್ರತಿಬಿಂಬಿಸಿವೆ.

ಭೈರವ (Bhyrava) ಅವರ ಕೆಲವು ಕಲಾಕೃತಿಗಳು ನೇರವಾಗಿ ನೋಡುಗನನ್ನು ಪೈನ್(pine) ಮರಗಳಿರುವ, ಮಂಜುಗವಿದ ವಾತಾವರಣಕ್ಕೆ ಕರೆದೊಯ್ಯುತ್ತವೆ. ಹಿತ ಮಿತವಾದ ಬಣ್ಣಗಳ ಬಳಕೆ ವಿಶೇಷ. ಮರದಡಿಯ ಪೆಟ್ಟಿಗೆ ಅಂಗಡಿಗಳೇ ವಸ್ತು ವಿಷಯ. ಒಂದು ಕಪ್ ಕಾಫಿ ಕುಡಿದು ತುಸು ಹೊತ್ತು ಕುಳಿತು ಹೋಗುವ ಸಮಯದಲ್ಲಿ ಅರಳಿರುವ ಕಲಾಕೃತಿಗಳು ಅನ್ನಿಸುವಂತಿವೆ. ಬಹಳ ಲೆಕ್ಕಾಚಾರದ(calculative) ವರ್ಣ ಬಳಕೆಯೇ ಅವರ ಧ್ಯಾನಸ್ಥ ವ್ಯಕ್ತಿತ್ವ ಹೆಳುವಂತಿವೆ. ಖಡಾಖಂಡಿತವಾಗಿ ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸುವಂತಿವೆ.

ಶಾಂತ ಕುಮಾರ್(Shantha Kumar) ಅವರ ಕಲಾಕೃತಿಗಳಲ್ಲಿ ಬದುಕು ಪ್ರತಿಬಿಂಬಿಸಿವೆ. ಸಾಮಾಜಿಕ ಕಾಳಜಿ ಕಂಡುಬರುತ್ತಿದೆ. ಸರಿಯಲಿಸ್ಟ್ (surrealist) ಧೋರಣೆಗೆ ಹತ್ತಿರದ ಅಭಿವ್ಯಕ್ತಿ ಇವರ ಕಲಾಕೃತಿಗಳಲ್ಲಿ ಕಂಡು ಬರುತ್ತವೆ. ನವ್ಯತೆಯ ಗುಣಗಳೊಂದಿಗೆ ಬದುಕಿನ ಕ್ಷಣ, ರೀತಿ ರಿವಾಜುಗಳನ್ನು ಕಲಾಕೃತಿಯಲ್ಲಿ ಹೇಳುವ ಪ್ರಯತ್ನ ಅನನ್ಯ. ತಮ್ಮ ಅನುಭವಗಳನ್ನೇ ಅಭಿವ್ಯಕ್ತಿಗೆ ವಸ್ತುವಿಷಯವಾಗಿಸಿ ನೀಗಿಸಿಕೊಳ್ಳುವ ಗುಟ್ಟು ಪ್ರಯಾಣ, ಪ್ರಯತ್ನದಲ್ಲಿದೆ. ನಿಷ್ಠೆ ಕಲಾಕೃತಿಯ ಪ್ರತಿಬಿಂಬಿವಾಗಿದೆ. ಚಿಂತನೆ ಕಲಾಕೃತಿಯಲ್ಲಿ ಅರಳಿದೆ.

ಒಟ್ಟಾರೆ ಪ್ರದರ್ಶನ ನಿರೀಕ್ಷೆ ಹುಸಿಯಾಗಿಸಲಿಲ್ಲ. ಪ್ರಯತ್ನಕ್ಕೆ ಫಲ, ಕಲಾಕೃತಿಗಳಿಗೆ ನ್ಯಾಯ ದೊರೆತಿದೆ. ಬಿರುಬಿಸಿಲಲ್ಲಿ ತಂಗಾಳಿ ಕಾಣಿಸಿದೆ. ಮತ್ತೊಮ್ಮೆ ಎಲ್ಲಾ ಕಲಾವಿದರಿಗೆ, ಆಯೋಜಕರಾದ Kanthraj watercolor Foundation ಸದಸ್ಯರಿಗೆ ಅಭಿನಂದನೆಗಳು.

Friends, ಕಲಾಪ್ರದರ್ಶನ ನವೆಂಬರ್ 5, 2023ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.


Share This

Leave a Reply

Your email address will not be published. Required fields are marked *