“ಶ್ರೀಕೃಷ್ಣ” ಅವನೇ “ದಾಮೋದರ”!

Share This

“ಶ್ರೀಕೃಷ್ಣ” ಅವನೇ “ದಾಮೋದರ”!
‘ದಾಮ’ ಅಂದರೆ ಹಗ್ಗ, ‘ಉದರ’ ಅಂದರೆ ಹೊಟ್ಟೆಯ ಭಾಗ ಅಥವಾ ಸೊಂಟದ ಮೇಲಿನ ಭಾಗ. ಹೊಟ್ಟೆಯ ಮೇಲ್ಬಾಗದಲ್ಲಿ ಹಗ್ಗ ಕಟ್ಟಿಸಿಕೊಂಡವನು ಎಂಬರ್ಥದಲ್ಲಿ ” ದಾಮೋದರ “ನಾಗಿದ್ದಾನೆ ಶ್ರೀಕೃಷ್ಣ.
ಈ ತುಂಟ ಕೃಷ್ಣನ ಬಗ್ಗೆ ನೀವೆಲ್ಲ ಪುರಾಣಗಳಲ್ಲಿ ಓದಿರುತ್ತೀರಾ. ಚೇಷ್ಟೆ ಕುಚೇಷ್ಟೆಗಳು ಒಂದೋ ಎರಡೋ… ನೂರಾರು. ಚರಾಚರಗಳ ಬಗ್ಗೆ ಅರಿತ ಶ್ರೀಕೃಷ್ಣನೆಂಬ ಚತುರನ ತುಂಟಾಟ ಕಂಡು ಬೆಚ್ಚಿಬಿದ್ದ ಗೋಕುಲ ನಿವಾಸಿಗಳು ಶ್ರೀಕೃಷ್ಣನ ವಿರುದ್ಧವೇ ದೂರು ಹೇಳಲಾರಂಭಿಸಿಬಿಡುತ್ತಾರೆ. ಆಗ ಸಾಕು ತಾಯಿ ಯಶೋಧೆ ಇದಕ್ಕೊಂದು ಉಪಾಯ, ಪರಿಹಾರ ಕಂಡುಕೊಳ್ಳಲೇಬೇಕೆಂದು ನಿರ್ಧರಿಸುತ್ತಾಳೆ. ಹೀಗಾಗಿ ಯಶೋಧೆ ಹಗ್ಗವನ್ನು ಕಂಬವೊಂದಕ್ಕೆ ಕಟ್ಟಿ, ಇನ್ನೊಂದು ಬದಿಯಲ್ಲಿ ಶ್ರೀಕೃಷ್ಣನ ಹೊಟ್ಟೆಯ ಭಾಗಕ್ಕೆ ಕಟ್ಟಿಟ್ಟು ಹೊರ ಹೋಗಿರುತ್ತಾಳೆ.
ಗೊತ್ತಲ್ಲಾ, ಪರಮಾತ್ಮ ಶ್ರೀಕೃಷ್ಣನ ಶಕ್ತಿ. ಕಂಬದ ಸಮೇತ ಊರೆಲ್ಲಾ ಸುತ್ತಲಾರಂಭಿಸುತ್ತಾನೆ. ಉಪಟಳ ಅಷ್ಟಲ್ಲ ಇಷ್ಟಲ್ಲ. ಅಬ್ಬಬ್ಬಾ ಸಾಕೋ ಸಾಕು ಶ್ರೀಕೃಷ್ಣ… ಎಂದು ಕೈಜೋಡಿಸುವಷ್ಟು.

ಇಷ್ಟು ಸಾಲದು ಎಂದು ಆನಂತರ ಶ್ರೀಕೃಷ್ಣ ಮಾರ್ಗ ಮಧ್ಯೆ ಎರಡು ಮರಗಳ ನಡುವೆ ಸಿಲುಕಿಕೊಳ್ಳುವುದು, ಕೃಷ್ಣ ಹಗ್ಗ ಜಗ್ಗಿದ್ದರಿಂದ ಕುಬೇರನ ಇಬ್ಬರು ಮಕ್ಕಳಾದ ಗಂಧರ್ವರು ಶಾಪಗ್ರಸ್ತ ಸ್ಥಿತಿಯಿಂದ ಪಾಪ ವಿಮೋಚನೆಯಾಗಿ ಬಂಧಮುಕ್ತರಾಗುವುದು. ಇದಕ್ಕೆಲ್ಲ ಕಾರಣೀಕರ್ತನಾಗಿ ‘ದಾಮೋದರ’ ಅನಿಸಿಕೊಳ್ಳುವುದು, ಎಲ್ಲವೂ ಅಚ್ಚರಿ, ಕುತೂಹಲ ಮೂಡಿಸುವ ದೃಶ್ಯಾವಳಿಗಳು.
ಇಲ್ಲಿಂದ ನಾನಾ ಅವತಾರಗಳ ಮೂಲಕ ಜಗದ್ವಿಖ್ಯಾತ ಎನಿಸಿಕೊಳ್ಳುವ “ದಾಮೋದರ” ವಿಜಯಿ ಅನಿಸಿಕೊಳ್ಳುತ್ತಾನೆ. ಇಂಥದ್ದೊಂದು ಅದ್ಭುತ ವ್ಯಕ್ತಿತ್ವ ಇರಿಸಿಕೊಂಡು ಭರತಾಂಜಲಿ ನಾಟ್ಯ ಶಾಲೆಯ ನರ್ತಕಿಯರು ಸೆಪ್ಟೆಂಬರ್ 3/ 2023, ಭಾನುವಾರ ಮಲ್ಲೇಶ್ವರಂನ ಸೇವಾಸದನ ರಂಗಮಂದಿರದಲ್ಲಿ ಅತ್ಯಂತ ಮನೋಜ್ಞ ಅಭಿನಯದೊಂದಿಗೆ ನೃತ್ಯ ರೂಪಕ ಪ್ರದರ್ಶಿಸಿದರು. ಸಮಯ ಕಳೆದಿದ್ದೇ ಗೊತ್ತಾಗದ ರೀತಿಯಲ್ಲಿ ಸಭಿಕರನ್ನು ಹಿಡಿದು ಕುಳ್ಳಿರಿಸಿದ ಪ್ರಸ್ತುತಿ ಇದಾಗಿತ್ತು.
ದಾಮೋದರ ಸ್ತೋತ್ರ ಆಧರಿತ ಸಂಯೋಜನೆ ಇದಾಗಿರುವುದು ಹಾಗೂ ಪ್ರಸ್ತುತಿಯ ರೀತಿ ಸಭೆಯನ್ನು ತನ್ನ ಪ್ರಭೆಯೊಳಗೆ ಬಂಧಿಸಿಟ್ಟಿದೆಯೇನೋ ಎಂಬ ಭಾವ ಆವರಿಸಿತ್ತು.
ಗೋವರ್ಧನ ಗಿರಿ, ಪೂತನಾ ಮುಕ್ತಿ, ಮಾವ ಕಂಸ ಸಂಹಾರ, ರುಕ್ಮಿಣಿ ಕಲ್ಯಾಣ, ರಾಸಲೀಲೆ, ಪಾಂಡವ ಸಕತ್ವ, ಗೀತೆಯ ಕರ್ತ್ವುತ್ವ, ಕಾಳಿಂಗ ಮರ್ದನ, ದ್ರೌಪದಿಯ ಅಕ್ಷಯಪಾತ್ರ ಹಾಗೂ ಅಕ್ಷಯ ವಸ್ತ್ರ ಸನ್ನಿವೇಶಗಳನ್ನು ಒಳಗೊಂಡಿರುವ ಪ್ರಸ್ತುತಿ ಬಹಳ ಸೊಗಸಾಗಿ ಮೂಡಿಬಂತು. ಗುರು ಸೀತಾ ಗುರುಪ್ರಸಾದ್ ಅವರು ಪ್ರತಿಯೊಂದು ದೃಶ್ಯಗಳಲ್ಲಿಯೂ ಕಥಾ ಹಂದರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಂಯೋಜನೆ ಮಾಡಿರುವುದು ಅವರ ಅನುಭವಕ್ಕೆ ಹಿಡಿದ ಕನ್ನಡಿಯಂತಿತ್ತು. ವಸ್ತ್ರ ವರ್ಣಗಳ ಸಂಯೋಜನೆಯೇ ಪರಿಕಲ್ಪನೆಯ ವಿಭಿನ್ನತೆಗೆ ಸಾಕ್ಷಿಯಾಗಿತ್ತು. ಧ್ವನಿಮುದ್ರಣ ಸಂಗೀತಕ್ಕೆ ದೃಶ್ಯಗಳ ಸಂಯೋಜನೆ ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಗೌಣವೆನಿಸುವ ಬೆರಳೆಣಿಕೆಯಷ್ಟು ಸಣ್ಣಪುಟ್ಟ ಲೋಪಗಳನ್ನು ಹೊರತುಪಡಿಸಿದರೆ ಒಟ್ಟಾರೆ ಪ್ರದರ್ಶನ ಪ್ರೇಕ್ಷಕರ ಹೃದಯಕ್ಕೆ ನಾಟುವಂತೆ ಮೂಡಿಬಂತು. ಮುದ ನೀಡಿದ ಯಶಸ್ವಿ ಪ್ರದರ್ಶನವಾಗಿತ್ತು.
ಆಂಗಿಕಾಭಿನಯ ಮತ್ತು ಸಂಚಾರಿ ಭಾಗದಲ್ಲಿ ಭಾವಪೂರ್ಣ ಅಭಿನಯದ ಕೊರತೆ ಕಾಣದಂತೆ ನರ್ತಕಿಯರು/ ನರ್ತಕರು ಹೆಚ್ಚೆಚ್ಚು ಎಚ್ಚರವಹಿಸಿದರೆ ಪ್ರದರ್ಶನ ಇನ್ನಷ್ಟು ಪರಿಣಾಮಕಾರಿ ಆಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾತ್ರವೇ ನಾನು ಎಂಬ ಭಾವ ಮೂಡಿದಾಗ ಸಹಜವಾಗಿಯೇ ಉತ್ತಮ ಅಭಿನಯ ಸಾಧ್ಯವಾಗಲಿದೆ. ಇವೆಲ್ಲದರ ನಡುವೆಯೂ ಪ್ರಮುಖ ಪಾತ್ರಗಳ ನಿರ್ವಹಣೆ ಅನನ್ಯ.

ಇಡೀ ಪ್ರದರ್ಶನದ ಯಶಸ್ಸಿನ ಮತ್ತೊಂದು ಮೂಲ ಕಾರಣ ಸಂಗೀತ. ವಿದ್ವಾನ್ ಡಿ.ಎಸ್.ಶ್ರೀವತ್ಸ ಅವರ ಸಂಗೀತ ಸಂಯೋಜನೆ ಮತ್ತು ಗಾಯನ, ವಿದ್ವಾನ್ ಶ್ರೀಹರಿ ರಂಗಸ್ವಾಮಿ ಅವರ ಮೃದಂಗ ವಾದನ, ವಿದ್ವಾನ್ ಮಹೇಶ್ ಸ್ವಾಮಿ ಅವರ ಕೊಳಲು ವಾದನ, ವಿದ್ವಾನ್ ಪ್ರಾದೇಶ್ ಆಚಾರ್ ಅವರ ಪಿಟೀಲು ವಾದನ, ವಿದ್ವಾನ್ ಕಾರ್ತಿಕ್ ದಾತರ್ ಅವರ ರಿದಂಪ್ಯಾಡ್ ಮತ್ತು ಜತಿಗಳ ನಿರ್ವಹಣೆ ಹಾಗೂ ವಿದ್ವಾನ್ ವೇಣುಗೋಪಾಲ್ ಅವರ ಕೀಬೋರ್ಡ್ ವಾದನ ಪ್ರದರ್ಶನದ ತೂಕ ಹೆಚ್ಚಿಸಿತು. ಬಹುಶಃ ಧ್ವನಿಮುದ್ರಣದ ಬದಲು ವಿದ್ವಾಂಸರ ಉಪಸ್ಥಿತಿಯಲ್ಲೇ ನಡೆದಿದ್ದರೆ ಇನ್ನೂ ಪರಿಣಾಮಕಾರಿ ಪ್ರದರ್ಶನ ಆಗಿರುತ್ತಿತ್ತು.
ಅಂದಹಾಗೆ ಬಹಳ ಪ್ರಭಾವಶಾಲಿ ಅನಿಸುವ ಅಭಿನಯ ಕಾಣಿಸಿದ್ದು ಮೂರು ದೃಶ್ಯಗಳಲ್ಲಿ ಎನ್ನುವುದನ್ನು ಉಲ್ಲೇಖಿಸಲೇಬೇಕು. ರುಕ್ಮಿಣಿಯು ಶ್ರೀ ಕೃಷ್ಣನಿಗೆ ಪ್ರೇಮಪತ್ರ ಬರೆಯುವ ಕ್ಷಣ, ಪಾಂಡವರು ಮತ್ತು ಕೌರವರ ನಡುವಿನ ಪಗಡೆಯಾಡುವ ಕ್ಷಣ ಹಾಗೂ ಕಾಳಿಂಗ ಮರ್ದನದ ಕ್ಷಣ ಪ್ರತಿಯೊಬ್ಬ ನರ್ತಕಿಯರ ಅಭಿನಯ ಗಮನ ಸೆಳೆಯಿತು.
ಒಟ್ಟಾರೆ, ಭರತಾಂಜಲಿ ನಾಟ್ಯ ಶಾಲೆಯ ಪ್ರಯತ್ನ ಶ್ಲಾಘನೀಯ. ಇನ್ನಷ್ಟು ಯಶಸ್ವಿ ಪ್ರಯತ್ನಗಳು ನಡೆಯಲಿ ಎನ್ನುವುದು ಎಲ್ಲರ ಹಾರೈಕೆ.

  • ಗಣಪತಿ ಅಗ್ನಿಹೋತ್ರಿ
    www.agniprapancha.com
    agniprapancha18@gmail.com

ಚಿತ್ರ ಕೃಪೆ: ಭರತಾಂಜಲಿ ನಾಟ್ಯ ಶಾಲೆ


Share This

Leave a Reply

Your email address will not be published. Required fields are marked *