ಮೈಸೂರು ರಾಜರನ್ನು ನೆನಪಿಸಿದ ಪ್ರದರ್ಶನ

Share This

  ಮೈಸೂರು ಸಾಂಪ್ರದಾಯಿಕ ಚಿತ್ರಕಲಾ ಶೈಲಿಯ (Mysore Style Traditional Art) ಯಾವುದೇ ಕಲಾಕೃತಿ ಕಣ್ಣೆದುರಾದಾಗ ಮೈಸೂರು ಮಹಾರಾಜರು ನೆನಪಿಗೆ ಬರುತ್ತಾರೆ. ಈ ನೆಲದ ಅಪ್ಪಟ ಕಲಾಶೈಲಿಯನ್ನು ಉಳಿಸಿ, ಬೆಳೆಸಿದ ಕೀರ್ತಿ ಮೈಸೂರು ಮಹಾರಾಜ ಮನೆತನಕ್ಕೆ ಸಲ್ಲಲೇಬೇಕು. ಈ ಇತಿಹಾಸ ನೆನಪಿಸಿಕೊಂಡು ವಿಚಾರಕ್ಕೆ ಬರುತ್ತೇನೆ.
ಕೃಷ್ಣ ರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಮೈಸೂರು ಚಿತ್ರಕಲಾ(Mysore Painting) ಶಾಲೆಯ ಜನಪ್ರಿಯತೆ ಉತ್ತುಂಗಕ್ಕೆ ಸ್ಥಾನಕ್ಕೇರಿತು. ಆದರೆ, ಇತಿಹಾಸದ ದಾಖಲೆ ಹೇಳುವಂತೆ 1868ರ ಬಳಿಕ ಮೈಸೂರು ಸಾಂಪ್ರದಾಯಿಕ ಶೈಲಿ ಸೇರಿದಂತೆ ಇನ್ನೂ ಕೆಲವು ಕಲೆಗಳಿಗೆ ಸಂಬಂಧಿಸಿದ ಕಲಾವಿದರು ಮೈಸೂರು ಭಾಗದಿಂದ ಚದುರಲಾರಂಭಿಸುತ್ತಾರೆ. ಶಾಲೆಯೂ ಅಳಿವಿನಂಚಿಗೆ ತಲುಪುತ್ತದೆ.
ಈ ಬೆಳವಣಿಗೆಯ ನಂತರದಲ್ಲಿ ಮೈಸೂರು ಚಿತ್ರಕಲೆ ಮಹತ್ವ ಪಡೆದುಕೊಂಡಿದ್ದು1875 ರಲ್ಲಿ. ಮತ್ತೆ ರಾಜಾಶ್ರಯ ದೊರಕುತ್ತದೆ. ಜಗನ್ ಮೋಹನ ಅರಮನೆ ಮತ್ತು ಕಲಾ ಶಾಲೆ ಮರು ಸ್ಥಾಪಿಸಲಾಯಿತು. ಇದರಿಂದ ಮೈಸೂರು ಸಾಂಪ್ರದಾಯಿಕ ಕಲೆ ಮತ್ತೆ ಮುನ್ನೆಲೆಗೆ ಬಂತು. ಹೀಗೆ ಈ ಕಲಾಶೈಲಿ ಅನೇಕರ ಸಹಕಾರದಿಂದ ಇಂದಿಗೂ ಉಳಿದುಕೊಳ್ಳಲು ಸಾಧ್ಯವಾಯಿತು.
ದಿವಂಗತ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮತ್ತು ದಿವಂಗತ ಶ್ರೀ ವೈ.ಸುಬ್ರಹ್ಮಣ್ಯ ರಾಜು ಅವರು ಕೂಡ ಅಪಾರ ಕೊಡುಗೆ ನೀಡಿದ್ದಾರೆ. ಈ ಸಾಲಿನಲ್ಲಿ ಇನ್ನೂ ಅನೇಕರಿದ್ದಾರೆ. ಕಳೆದ ನಾಲ್ಕಾರು ದಶಕದಿಂದ ಸತತವಾಗಿ ಪ್ರಚುರಪಡಿಸುತ್ತಾ ಬಂದರು.
ಇತ್ತೀಚಿನ ದಿನಗಳಲ್ಲಿ ಮೈಸೂರು ಸಾಂಪ್ರದಾಯಿಕ ಕಲಾಶೈಲಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಪ್ರಯತ್ನಗಳು ಬಹಳ ಪ್ರಾಮಾಣಿಕವಾಗಿ ನಡೆಯುತ್ತಿವೆ. ಆದರೆ, ಮುಂದುವರಿಸಿಕೊಂಡು ಹೋಗುವವರು ವಿರಳ ಅಂದುಕೊಳ್ಳುತ್ತಿರುವ ಸಂದರ್ಭದಲ್ಲೇ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆದ ಶಾಂತಿ ಸೂರಜ್ ಮತ್ತು ಜೋಶೀಲಾ ಎಸ್.ವಿ. ಅವರ ಕಲಾಪ್ರದರ್ಶನ ಭರವಸೆ ಮೂಡಿಸಿತು.
ಕಳೆದ ಇಪ್ಪತ್ತು ವರ್ಷಗಳಿಂದ ಮೈಸೂರು ಸಾಂಪ್ರದಾಯಿಕ ಚಿತ್ರಗಳ ರಚನೆಯಲ್ಲಿ ತೊಡಗಿಕೊಂಡಿರುವ ಶಾಂತಿ ಅವರ ಬದ್ಧತೆ ಹಾಗೂ ಕಳೆದ ಹತ್ತದಿನೈದು ವರ್ಷಗಳಿಂದ ಅಧ್ಯಯನ ಮತ್ತು ಕಲಾಕೃತಿ ರಚನೆಯಲ್ಲಿ ತೊಡಗಿಕೊಂಡಿರುವ ಜೋಶೀಲಾ ಅವರ ಬದ್ಧತೆ ನೆಚ್ಚಿಕೊಳ್ಳುವಂತಿದೆ. ಇಬ್ಬರೂ ಈ ಕಲಾಶೈಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿವವರ ಸಾಲಿನಲ್ಲಿ ನಿಲ್ಲುತ್ತಾರೆ.
ಜೋಶೀಲಾ ಅವರ ಕೆಲವು ಕಲಾಕೃತಿಗಳು ಪ್ರಯೋಶೀಲವಾಗಿವೆ ಅನಿಸಿತು. ಕಲಾಕೃತಿಯಲ್ಲಿ ದೃಶ್ಯದ ಸಾರ ಹೇಳುವ ದೇವರಿಗಷ್ಟೇ ವರ್ಣದ ಸ್ಪರ್ಶನೀಡಿ, ಹಿಂಬದಿಯನ್ನು(background) ಹಾಗೇ ಬಿಡುವುದು ಹಾಗೂ ಕೆಲ ಕಲಾಕೃತಿಗಳಲ್ಲಿ ಉತ್ತರ ಭಾರತದ ಕೆಲ ಸಾಂಪ್ರದಾಯಿಕ ಶೈಲಿಗಳಲ್ಲಿನ ಅಂಶಗಳ ಸ್ಪರ್ಶ ನೀಡಿದ್ದಾರೆ. ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳ ರಚನೆಯಲ್ಲಿ ಹೊಸತನದ ಹುಡುಕಾಟ ಸ್ವಾಗತಾರ್ಹ.
ಶಾಂತಿ ಸೂರಜ್ ಮತ್ತು ಜೋಶೀಲಾ ಎಸ್.ವಿ. ಅವರಿಗೆ ಅಭಿನಂದನೆಗಳು. 💐💐 ಇನ್ನಷ್ಟು ಉತ್ತಮ ಕಲಾಕೃತಿಗಳು ನಿಮ್ಮಿಂದ ಮೂಡಿಬರಲಿ.

Share This

Leave a Reply

Your email address will not be published. Required fields are marked *