ದೇವರಾಜ್ ದಾಕೋಜಿ ಕಲಾ’ಯಾನ’!

Share This

ಕೊರೋನಾ ಲಾಕ್‌ಡೌನ್ ಸಂದರ್ಭ. ಇದ್ದಕ್ಕಿದ್ದಂತೆ ಮಿತ್ರರೊಬ್ಬರಿಂದ ಮೊಬೈಲ್ ಕರೆ ಬಂತು. ಬಿಡುವಿದ್ದರೆ ಕಲೆಯಲ್ಲಿ ಸಕ್ರೀಯರಾಗಿರುವ ದೇಶದ ಹಿರಿಯ ಕಲಾವಿದರ ಕುರಿತು ಒಂದಿಷ್ಟು ಮಾಹಿತಿ ಸಂಗ್ರಹಿಸಿಕೊಡಬಹುದಾ ಅಂದರು. ಆಯ್ತು ಎಂದು ಒಪ್ಪಿಕೊಂಡೆ. ಆ ಸಂದರ್ಭದಲ್ಲಿ ಒಂದಿಷ್ಟು ಕಲಾವಿದರ ಅಭಿಪ್ರಾಯ, ಜಾಲತಾಣಗಳಲ್ಲಿ ದಾಖಲಾಗಿರುವ ಹೇಳಿಕೆಗಳು ನನ್ನ ಗಮನ ಸೆಳೆದಿದ್ದವು. ಚಿಂತನೆಗೆ ದಾರಿ ಮಾಡಿಕೊಟ್ಟಿದ್ದವು. ಒಂದಿಷ್ಟು ಅಭಿಪ್ರಾಯಗಳು ಕಲಾವಿದರ ಜೀವನ ಕುರಿತು ತಿಳಿದುಕೊಳ್ಳಲು ಸ್ಫೂರ್ತಿಯಾಯ್ತು.

“the good thing with a print is that you can reach out to a larger audience, as Raja Ravi Varma and Rembrandt did”
ಭಾರತದ ಹಿರಿಯ ಕಲಾವಿದ ದೇವರಾಜ್ ದಾಕೋಜಿ ಅವರ ಈ ಮೇಲಿನ ಮಾತು ಗಮನ ಸೆಳೆದಿತ್ತು. ಯಾವ ಸಂದರ್ಭವನ್ನು ಉದ್ದೇಶಿಸಿ ಹೇಳಿದ್ದಿರಬಹುದು ಎಂದು ಪ್ರಶ್ನಿಸಿಕೊಂಡಿದ್ದೆ. ಉತ್ತರಕ್ಕಾಗಿ ಹುಡುಕಾಟ ನಡೆಸಿದ್ದೆ. ಅವರ ಕುರಿತಾದ ಒಂದಿಷ್ಟು ಲೇಖನಗಳಿಗಾಗಿ ಜಾಲಾಡಿದ್ದೆ.

ಮನಸ್ಸಿನಂಗಳದಲ್ಲಿ ಸದಾಕಾಲ ಹರಿದಾಡುವ ಹಿರಿಯ ಕಲಾವಿದರಲ್ಲಿ ಒಬ್ಬರಾದ ದೇವರಾಜ್ ದಾಕೋಜಿ ಅವರ ಕಲಾಜೀವನ ಪ್ರತಿಬಿಂಬಿಸುವ (retrospective Exhibition) ಕಲಾಪ್ರದರ್ಶನವು ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA)ನಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬ ಕಲಾವಿದರಿಗೆ ಸ್ಫೂರ್ತಿಯಾಬಲ್ಲ ಕಲಾಪ್ರದರ್ಶನ ಇದಾಗಿದೆ. ಹೊಸ ಹೊಸ ಆಯಾಮಗಳಲ್ಲಿ ನೋಡಬಹುದಾದ ನೂರಾರು ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ. ಕಲಾವಿದನೊಬ್ಬ ಜೀವನದ ಅನುಭವಗಳನ್ನು ತನಗಿಷ್ಟವಾದ ಅಥವಾ ತನಗೆ ಸುಲಭವೆನಿಸುವ ಮಾಧ್ಯಮ ಮುಖೇನ ಹೇಗೆಲ್ಲಾ ಅಭಿವ್ಯಕ್ತಿಗೊಳಿಸಬಲ್ಲ ಎನ್ನುವುದಕ್ಕೆ ಈ ಕಲಾಪ್ರದರ್ಶನ ಅತ್ಯುತ್ತಮ ನಿದರ್ಶನ.

“There is No Failure. It’s Only Un-Finished Success.”
ಪ್ರಸಿದ್ಧ ಕಲಾವಿದ ರಾಜಾ ರವಿ ವರ್ಮ ಅವರ ಈ ಮಾತನ್ನು ಇಲ್ಲಿ ಪ್ರಸ್ತಾಪಿಸಬೇಕು ಅನಿಸುತ್ತಿದೆ. ಜೀವನದಲ್ಲಿ ಯಾವುದನ್ನೂ ವಿಫಲ, ಸೋಲು ಅಂದುಕೊಳ್ಳಬೇಕಿಲ್ಲ. ಅವು ಪೂರ್ಣಗೊಳ್ಳದ ಯಶಸ್ಸು ಮಾತ್ರ.

ನಿರಂತರ ಪ್ರಯೋಗಶೀಲನಾಗಿ ಇರಬೇಕೆನ್ನುವ ಧೋರಣೆ, ತುಡಿತದಲ್ಲಿರುವ ಕಲಾವಿದನಿಗೆ ಆತ ರಚಿಸಿದ ಕಲಾಕೃತಿಗಳು ಹೊಸ ಮತ್ತು ವಿಭಿನ್ನ ಅನುಭವವನ್ನೇ ಕಟ್ಟಿಕೊಡುತ್ತದೆ. ನೋಡುಗನೂ ಇದರಿಂದ ಹೊರತಾಗಿರಲು ಸಾಧ್ಯವಿಲ್ಲ ಅಥವಾ ಬೇರೆ ದೃಷ್ಟಿಕೋನದಲ್ಲಿ ನೋಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.

ದೇವರಾಜ್ ದಾಕೋಜಿ ಅವರ ಅನೇಕ ಕಲಾಕೃತಿಗಳು ಪ್ರಯೋಗಶೀಲ ನೆಲೆಯಲ್ಲಿ ನಿಲ್ಲುವಂತವು. ಅನೇಕ ಕಲಾಕೃತಿಗಳಲ್ಲಿ ಇಂತಹ ಸೂಕ್ಷ್ಮ ಗಳನ್ನು ನೋಡಲು ಸಾಧ್ಯವಿದೆ. ಪ್ರಯೋಗಶೀಲತೆಯ ಜೊತೆಯಲ್ಲೇ ಬದ್ಧತೆ, ಪರಿಪಕ್ವತೆ, ಶಿಸ್ತು, ತಾಳ್ಮೆ, ತುಡಿತ, ವೇಗ, ಅಧ್ಯಯನಶೀಲತೆ ಹಾಗೂ ಅಭಿವ್ಯಕ್ತಿಯಲ್ಲಿನ ಭಿನ್ನತೆಯನ್ನು ಪ್ರತಿಬಿಂಬಿಸುತ್ತವೆ. ದೇವರಾಜ್ ದಾಕೋಜಿ ಅವರ ವ್ಯಕ್ತಿತ್ವವನ್ನೂ ಕಾಣಬಹುದಾಗಿದೆ.

ಕಲಾಕ್ಷೇತ್ರದ ಅಲಿಖಿತ ನಿಯಮವೊಂದನ್ನು ಉಲ್ಲೇಖಿಸಬಹುದಾದರೆ, ಯಾವುದೇ ಕಲಾವಿದ ಮುದ್ರಣ ಕಲೆಯಲ್ಲಿ ಎರಡಂಕಿ ಮೀರಿದ ಕಲಾಕೃತಿಗಳನ್ನು ರಚಿಸಿದ್ದಾರೆಂದರೆ ಅದುವೇ ಅವರ ಪರಿಶ್ರಮದ ಕೈಗನ್ನಡಿ. ಕಠಿಣ ಪರಿಶ್ರಮವಿಲ್ಲದೇ ಅಷ್ಟೊಂದು ಕಲಾಕೃತಿಗಳ ರಚನೆಯೂ ಸಾಧ್ಯವಿಲ್ಲ ಎನ್ನುವುದಕ್ಕೆ ದೇವರಾಜ್ ದಾಕೋಜಿ ಅವರ ಕಲಾಪಯಣ ಪ್ರತ್ಯಕ್ಷ ಸಾಕ್ಷಿ.

ಮುದ್ರಣ ಕಲೆಯ ಪ್ರಮುಖ ಪ್ರಕಾರಗಳೆಂದು ಪರಿಗಣಿಸಬಹುದಾದ ಎಚ್ಚಿಂಗ್, ಲಿಥೋಗ್ರಫಿ, ಲಿನೋಕಟ್, ವುಡ್‌ಕಟ್ ಮಾಧ್ಯಮದಲ್ಲಿ ರಚಿತ ಕಲಾಕೃತಿಗಳು ವಿಶೇಷವಾಗಿ ಗಮನ ಸೆಳೆಯುವಂತವು. ಈ ಎಲ್ಲಾ ಪ್ರಕಾರಗಳ ತಾಂತ್ರಿಕ ಅಂಶಗಳನ್ನು ಬಲ್ಲವರು ಕಲಾಕೃತಿಗಳನ್ನು ನೋಡಿ ಪ್ರತಿಕ್ರಿಸಿಸುವ ರೀತಿಗೂ, ಕೇವಲ ಶೃಂಗಾರ ಭಾವದಿಂದ ಗ್ರಹಿಸಿ ಪ್ರತಿಕ್ರಿಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ದೇವರಾಜ್ ದಾಕೋಜಿ ಅವರ ಒಂದಿಷ್ಟು ಕಲಾಕೃತಿಗಳು ತಕ್ಷಣಕ್ಕೆ ಒಂದು ವರ್ಗದ ನೋಡುಗರಿಂದ ದೂರವೇ ಉಳಿಯಬಹುದು. ಆದರೆ, ಮುದ್ರಣ ಕಲಾಪ್ರಕಾರಗಳ ತಂತ್ರಗಾರಿಕೆಯನ್ನು ಅರಿತವರು ಇಂತಹ ಕಲಾಕೃತಿಗಳಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಒಂದಿಷ್ಟು ಹೊತ್ತು ಎದುರುನಿಂತು ಕಲಾಕೃತಿಯ ಆಳಕ್ಕೆ ಇಳಿದು, ಕಳೆದುಹೋಗಬಹುದು. ಅಂದರೆ ಕಲಾಕೃತಿಗಳಲ್ಲಿನ ತಂತ್ರಗಾರಿಕೆ ವೃತ್ತಿಪರರನ್ನು ಸೆಳೆದು ನಿಲ್ಲಿಸುತ್ತವೆ ಎನ್ನುವುದು ಸ್ಪಷ್ಟ.

ಪ್ರಣಮು (Pranamu, or life force) ಶೀರ್ಷಿಕೆಯ ಎಚ್ಚಿಂಗ್ ಮತ್ತು ಲಿಥೋ ಮಾಧ್ಯಮದ ಸರಣಿ ಕಲಾಕೃತಿಗಳಲ್ಲಿನ ಮೈವಳಿಕೆಯ(texture) ಸೃಷ್ಟಿ ಅನನ್ಯ. ಮುದ್ರಣದ ಗುಣಮಟ್ಟ (quality) ಕಾಯ್ದುಕೊಳ್ಳುವ ಮತ್ತು ತಂತ್ರಗಾರಿಕೆ (teqnic) ಕುತೂಹಲ ಮೂಡಿಸುತ್ತವೆ. ವಿಶೇಷವಾಗಿ ಈ ಪ್ರಕಾರದ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವ ಉಳ್ಳವರು ಬೇಗ ಗ್ರಹಿಸಬಹುದು.

ಇವೆಲ್ಲದರ ಜೊತೆ ಒಂದಿಷ್ಟು ವರ್ಣಚಿತ್ರಗಳು, ರೇಖಾಚಿತ್ರಗಳು ನೋಡಗರ ಮನದಾಳದಲ್ಲಿ ಉಳಿಯುತ್ತವೆ. Rock, Organic ಶೀರ್ಷಿಕೆಯ ಸರಣಿ ಕಲಾಕೃತಿಗಳು, ರೇಖಾಚಿತ್ರಗಳು, ಜಲವರ್ಣದ ನಿಸರ್ಗ ಕಲಾಕೃತಿಗಳೂ ವೀಕ್ಷಕರನ್ನು ಹಿಡಿದು ನಿಲ್ಲಿಸುತ್ತವೆ. ಸಂಯೋಜನೆ(composition), ತೀವ್ರತೆ(intensity), ವರ್ಣಗಳ ಸಮತೋಲನ(colour balancing)ಗಳ ಜೊತೆಗೆ ತಾವು ಹೆಳಬೇಕಾದ ವಿಚಾರಕ್ಕೆ ನೀಡುವ ಒತ್ತು (Emphasis) ವಿಶೇಷ ಅನಿಸುವಂತದ್ದಾಗಿದೆ. Rock ಸರಣಿಯ ಕಲಾಕೃತಿಗಳಲ್ಲಿನ ಸರಳ ನಿರ್ವಹಣೆ, ಕಲ್ಲುಗಳನ್ನು ಬಳಸಿಕೊಂಡಿರುವ ರೀತಿಯಲ್ಲೇ ದಾಕೋಜಿ ಅವರ ಅಧ್ಯಯನದ ಆಳ ತಿಳಿಯಲು ಸಾಧ್ಯ.

••• ಕಳಕಳಿಯ ಮನವಿ •••
ಕಲಾಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ನೋಡಲೇಬೇಕಾದ ಕಲಾಪ್ರದರ್ಶನ. ಅದರಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳು, ಈಗ ಮಾಸ್ಟರ್ಸ್ ಅಧ್ಯಯನದಲ್ಲಿರುವ ವಿದ್ಯಾರ್ಥಿಗಳು ಹಾಗೂ ಮುದ್ರಣ ಕಲೆಯಲ್ಲಿ ಆಸಕ್ತಿ ಇರುವ ಕಲಾವಿದರು ನೋಡಲೇಬೇಕಾದ ಕಲಾಪ್ರದರ್ಶನ ಇದು.

Friends, ಈ ಕಲಾಪ್ರದರ್ಶನ ಅಕ್ಟೋಬರ್ 12, 2023ರ ವರೆಗೆ ನಡೆಯಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.


Share This

Leave a Reply

Your email address will not be published. Required fields are marked *