“ಶಾಂಭವಿ” ನೃತ್ಯೋತ್ಸವ; ನಿಷ್ಕಲ್ಮಶ ರಂಗಪ್ರವೇಶ!

Share This

ಮೃದು ಹೆಜ್ಜೆ. ಮಿತ ಭಾವ. ಅಳೆದು ತೂಗಿಯೇ ನೃತ್ತಿಸುತ್ತಿದ್ದಾಳೆನೋ ಎಂದು ಭಾವಿಸಬಹುದಾದ ಪ್ರಸ್ತುತಿ. ಗೆಜ್ಜೆಯ ಸದ್ದು ಕೂಡ ಅತಿ ಅನಿಸಬಾರದೆನ್ನುವ ಮುನ್ನೆಚ್ಚರಿಕೆ. ನವರಸಗಳಲ್ಲಿಯೂ ವರ್ಣಿಸಲಾಗದ ಮಂದಹಾಸ ಸೌಂದರ್ಯ. ನರ್ತಕಿಯ ಪ್ರಾಮಾಣಿಕ ಪ್ರಯತ್ನಕ್ಕೆ ಸಂಪೂರ್ಣ ಮೆಚ್ಚುಗೆ!
ಬೆಂಗಳೂರಿನ ಸೇವಾಸದನ ಸಭಾಂಗಣದಲ್ಲಿ ಲಯ ಧ್ವನಿ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದ ಗುರು ಸ್ನೇಹ ವೆಂಕಟರಮಣಿ ಅವರ ಶಿಷ್ಯೆ ಕುಮಾರಿ ಶಾಂಭವಿ ಶ್ರೀವಾಸ್ತವ ಅವರು ರಂಗ ಪ್ರವೇಶದೊಂದಿಗೆ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಸಂಪ್ರದಾಯದಂತೆ ಪುಷ್ಪಾಂಜಲಿ ನೃತ್ತಬಂಧದೊಂದಿಗೆ ರಂಗ ಪ್ರವೇಶಿಸಿದ ಶಾಂಭವಿ ಶ್ರೀವಾಸ್ತವ ಅವರು ಗುರುಗಳು ಹೇಳಿಕೊಟ್ಟಂತೆ ಬಹಳ ಶಿಸ್ತಿನಿಂದ ಅಚ್ಚುಕಟ್ಟಾಗಿ ಹೆಜ್ಜೆ ಇಟ್ಟು ಶುಭಾರಂಭ ಮಾಡಿದರು. ನೇರ ಸಂಗೀತದಲ್ಲಿ ವೇದಿಕೆಯ ಮೇಲೆ ನೃತ್ಯ ಪ್ರಸ್ತುತಿ ಪಡಿಸುವುದು ಕಷ್ಟದಾಯಕ. ಎಷ್ಟೇ ತಾಲೀಮು ನಡೆಸಿದ್ದರೂ ರಂಗ ಪ್ರವೇಶ ಸಂದರ್ಭದಲ್ಲಿ ಕೊಂಚ ಅಂಜಿಕೆ ಕಾಣಿಸುವುದುಂಟು. ಆದರೆ ಶಾಂಭವಿ ಇದನ್ನು ಬಹಳ ಧೈರ್ಯವಾಗಿಯೇ ನಿರ್ವಹಿಸುವಲ್ಲಿ ಯಶಸ್ವಿಯಾದರು.

ಶಾಂಭವಿ ಶ್ರೀವಾಸ್ತವ
ಶಾಂಭವಿ ಶ್ರೀವಾಸ್ತವ

ಅಲರಿಪು, ಜತಿಸ್ವರಂ, ವರ್ಣಂ ಬಳಿಕ ಕಾಲ ಭೈರವ ಅಷ್ಟಕ, ಶಬ್ದಂ, ಮೀರಾ ಭಜನ್ ಹಾಗೂ ತಿಲ್ಲಾನದೊಂದಿಗೆ ಮಂಗಳಕ್ಕೆ ಹೆಜ್ಜೆ ಹಾಕಿದರು. ಶಾಂಭವಿ ಈ ಎಲ್ಲಾ ನೃತ್ಯಬಂಧದುದ್ದಕ್ಕೂ ಒಂದೇ ಪ್ರಮಾಣದ ಎನರ್ಜಿ ನೀಡುವಲ್ಲಿ ನಿರ್ವಹಿಸಿದ ರೀತಿ ಶ್ಲಾಘನೀಯ. ಸಾಮಾನ್ಯವಾಗಿ ವರ್ಣಂ ಪ್ರಸ್ತುತಿಯ ಬಳಿಕ ನರ್ತಕಿ ಅಥವಾ ನರ್ತಕರು ಒಂದು ಹಂತದಲ್ಲಿ ಆಯಾಸದಿಂದ ಬಳಲುವುದುಂಟು. ಆದರೆ ಶಾಂಭವಿ ಎಲ್ಲಿಯೂ ತನ್ನ ಮುಖಭಾವದಲ್ಲಿ ಆಯಾಸ ತೋರಿಸಲಿಲ್ಲ. ಪ್ರತಿಯೊಂದು ನೃತ್ಯಬಂಧಕ್ಕೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದರು. ರಂಗಪ್ರವೇಶ ಎನ್ನುವುದೇ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿಕೊಳ್ಳುವ ಒಂದು ಪ್ರಕ್ರಿಯೆ. ನರ್ತಕ ಅಥವಾ ನರ್ತಕಿ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಂಡು, ಅಧಿಕೃತವಾಗಿ ನೃತ್ಯ ಕಾರ್ಯಕ್ರಮ ನೀಡಲು ಅಣಿಯಾಗುವ ಒಂದು ಪ್ರಕ್ರಿಯೆ. ಇದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಶಾಂಭವಿ ಅವರು ನೃತ್ತ ಹಾಗೂ ಆಂಗಿಕಾಭಿನಯವನ್ನು ಇನ್ನಷ್ಟು ಹರಿತ ಗೊಳಿಸಬಹುದಿತ್ತು. ಆಗ ಪ್ರದರ್ಶನ ಗುಣಮಟ್ಟ ಹೆಚ್ಚುತ್ತಿತ್ತು. ಆದರೆ ಇದರತ್ತ ಗಮನ ಹರಿಸುತ್ತಾರೆನ್ನುವ ಭರವಸೆ ಅವರ ಪ್ರಾಮಾಣಿಕ ಪ್ರಯತ್ನದಿಂದ ತೋರಿಬಂತು.
ಶಾಂಭವಿ ಭವಿಷ್ಯದಲ್ಲಿ ಒಬ್ಬ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಬೆಳೆಯುವ ವಿಶ್ವಾಸವನ್ನಂತೂ ಮೂಡಿಸಿದ್ದಾರೆ. ಆದರೆ ಭರತನಾಟ್ಯವನ್ನು ತಮ್ಮ ವೃತ್ತಿಯಾಗಿಸಿಕೊಂಡು ಎಷ್ಟು ದಿನಗಳ ಕಾಲ ಈ ಕ್ಷೇತ್ರದಲ್ಲಿ ನಿಂತುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಂಭವಿ ಒಂದಿಷ್ಟು ಎಚ್ಚರಿಕೆಗಳನ್ನೂ ಪಾಲಿಸಬೇಕಾಗಿಬರಬಹುದು. ಶಾಂಭವಿಯ ರಂಗದ ಮೇಲಿನ ಎಲ್ಲಾ ಪ್ರಸ್ತುತಿಗಳೂ ಉತ್ತಮ ಎನಿಸಿದವು. ಆದರೆ ಶಬ್ದಂ ಮತ್ತು ವರ್ಣಂ ನಿರ್ವಹಿಸಿದ ರೀತಿ ಅಭಿನಂದನಾರ್ಹ. ಶ್ರೀಮತಿ ರುಚಿ ಮತ್ತು ಅಂಕುರ್ ಶ್ರೀವಾಸ್ತವ ದಂಪತಿ ಹೆಮ್ಮೆಯಿಂದ ತಮ್ಮ ಮಗಳು ಉತ್ತಮ ಭರತನಾಟ್ಯ ಕಲಾವಿದೆ ಎಂದು ಹೇಳಿಕೊಳ್ಳಬಹುದಾದ ಪ್ರದರ್ಶನ ನೀಡಿದರು.

ಶಾಂಭವಿ ಶ್ರೀವಾಸ್ತವ
ಶಾಂಭವಿ ಶ್ರೀವಾಸ್ತವ

ಒಟ್ಟಾರೆ ಪ್ರದರ್ಶನದಲ್ಲಿ ಮೀರಾ ಭಜನ್ ಉಳಿದ ನೃತ್ಯ ಬಂಧಗಳಿಂದ ದೂರವೇ ಉಳಿಯಿತು. ಸಾಂಪ್ರದಾಯಿಕ ನೆಲೆಯಲ್ಲಿ ನೋಡಿದಾಗ ಮೀರಾ ಭಜನ್ ಉಳಿದ ನೃತ್ಯಬಂಧಗಳಿಗೆ ಪೂರಕ ಅನಿಸಲಿಲ್ಲ. ಆದರೆ ಗಾಯಕ ವಿದ್ವಾನ್ ರೋಹಿತ್ ಭಟ್ ಅವರು ಇದನ್ನು ಬಹಳ ಅದ್ಭುತವಾಗಿಯೇ ನಿರ್ವಹಿಸಿದರು. ಅನುಭವಿ ಹಾಗೂ ಖ್ಯಾತನಾಮರಾದ ರೋಹಿತ್ ಭಟ್ ಅವರ ಸಂಗೀತವು ಶಾಂಭವಿ ಅವರ ಸೌಂದರ್ಯಕ್ಕೆ ಅಲಂಕಾರ ಎಂಬಂತೆ ಇತ್ತು. ಗುರು ಸ್ನೇಹಾ ಅವರು ಬಹಳ ಸೊಗಸಾಗಿ ನಟವಾಂಗ ನಿರ್ವಹಿಸಿದರೆ, ವಿದ್ವಾನ್ ರೋಹಿತ್ ಅವರ ಸಂಗೀತ, ವಿದ್ವಾನ್ ವಿನಯ್ ನಾಗರಾಜನ್ ಮೃದಂಗ, ವಿದ್ವಾನ್ ಜಯರಾಮ್ ಕಿಕ್ಕೇರಿ ಅವರು ಕೊಳಲುವಾದನ, ವಿದ್ವಾನ್ ಶ್ರೀನಿಧಿ ಮತ್ತೂರ್ ಅವರ ವಯಲಿನ್ ವಾದನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ವಿಮಲ್ ಕಾಂತರಾಜ್ ಅವರ ಮೇಕ್ ಅಪ್ ಶಾಂಭವಿ ಅವರ ಸೌಂದರ್ಯವನ್ನು ದ್ವಿಗುಣಗೊಳಿಸಿತ್ತು.
ಶಾಂಭವಿ ಅವರಿಗೆ ಇನ್ನಷ್ಟು ಅವಕಾಶಗಳು ದೊರೆಯಲಿ ಎಂದು ಹಾರೈಸೋಣ. ಶುಭವಾಗಲಿ.


Share This

Leave a Reply

Your email address will not be published. Required fields are marked *