ಚುಕ್ಕೆಚಿತ್ರಗಳಿವು…
ಎಲ್ಲವೂ ಮೇರು ನಟ ಡಾ.ರಾಜ್ಕುಮಾರ್ ಅವರದ್ದು. ಅವರು ನಟಿಸಿರುವ ಸಿನಿಮಾಗಳದ್ದು!
ಡಾ. ರಾಜ್ಕುಮಾರ್ ಅವರು ನಟಿಸಿರುವ ಅನೇಕ ಸಿನಿಮಾಗಳಲ್ಲಿನ ದ್ರಶ್ಯಾವಳಿಗಳನ್ನೇ ಚುಕ್ಕೆಗಳ ಮೂಲಕ ಕಲಾಕೃತಿಯಾಗಿಸಿರುವ ರಾಯಚೂರಿನ ಹಿರಿಯ ಕಲಾವಿದರಾದ ಎಚ್.ಎಚ್.ಮ್ಯಾದಾರ್ ಅವರು ಭಿನ್ನವಾಗಿ ಗಮನ ಸೆಳೆಯುತ್ತಾರೆ. ಕೇವಲ ಚುಕ್ಕೆಗಳ ಮೂಲಕವೇ ಡಾ.ರಾಜ್ ಅವರನ್ನು ತಮ್ಮ ಕಲಾಕೃತಿಗಳಲ್ಲಿ ಕಂಡು ಆನಂದಿಸುವ, ಅಭಿಮಾನ ವ್ಯಕ್ತಪಡಿಸುವ ಪ್ರಯತ್ನ ಬೇರೆಯದೇ ಆದ ನೆಲೆಯಲ್ಲಿ ನಿಲ್ಲುವಂತದ್ದಾಗಿವೆ. ಭಾವನಾತ್ಮಕ ನೆಲೆಯಲ್ಲಿ ನೋಡಬೇಕಾದ ಕಲಾಪ್ರದರ್ಶನ ಇದಾಗಿದೆ.
ಫ್ರೆಂಡ್ಸ್, ಅಪರೂಪದ ಕಲಾಪ್ರದರ್ಶನವೊಂದು ಕರ್ನಾಟಕ ಚಿತ್ರಕಲಾ ಪರಿಷತ್ನ ಎರಡು ಮತ್ತು ಮೂರನೇ ಗ್ಯಾಲರಿಯಲ್ಲಿ ನಡೆಯುತ್ತಿವೆ. ಕೊಪ್ಪಳದ ಗಂಗಾವತಿ ಮೂಲದವರಾದ ಮ್ಯಾದಾರ್ ಅವರು ಅನೇಕ ವರ್ಷಗಳ ಕಾಲ ರಾಯಚೂರಿನಲ್ಲಿ ಕಲಾಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಗದುಗಿನ ವಿಜಯ ಕಲಾಮಂದಿರದಿAದ ಪದವಿ ಪಡೆದುಕೊಂಡಿರುವ ಮ್ಯಾದರ್ ಅವರು ಈಗಲೂ ಯುವಕರಂತೆ ಕುಳಿತು ಕಲಾಕೃತಿ ರಚಿಸಬಲ್ಲರು. ಮ್ಯಾದಾರ್ ಅವರ 100ಕ್ಕೂ ಹೆಚ್ಚು ಚುಕ್ಕೆ ಚಿತ್ರಗಳು ಪ್ರದರ್ಶನ ಗೊಂಡಿವೆ. ಐದು ವರ್ಷಗಳ ಕಾಲ ನಿರಂತರವಾಗಿ ತಮ್ಮ ನೆಚ್ಚಿನ ನಟ ಡಾ.ರಾಜ್ಕುಮಾರ್ ಅವರನ್ನೇ ವಸ್ತುವಾಗಿಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. 1998ರಿಂದ 2001ರ ತನಕ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದ ಮ್ಯಾದಾರ್ ಅವರು ಅಕಾಡೆಮಿಯ ಫೆಲೋಶಿಪ್ ಕೂಡ ಪಡೆದುಕೊಂಡಿದ್ದಾರೆ.
ಡಾ.ರಾಜ್ ಕುಟುಂಬ ಬಲ ತುಂಬಲಿ
ಇದು ನನ್ನ ಕಳಕಳಿಯ ಮನವಿ. ಮ್ಯಾದಾರ್ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ವಿಶೇಷವಾಗಿ ಡಾ.ರಾಜ್ ಅವರನ್ನೇ ಚಿತ್ರ ರಚನೆಗೆ ವಸ್ತುವಾಗಿಸಿಕೊಂಡಿರುವ ಮ್ಯಾದಾರ್ ಅವರ ಕಲಾಕೃತಿಗಳನ್ನು ಕೊಂಡುಕೊಳ್ಳುವ ಮೂಲಕ ಪ್ರೀತಿಯನ್ನು ಗೌರವಿಸಬೇಕಿದೆ. ಸ್ವತಃ ಡಾ.ರಾಘವೇಂದ್ರ ರಾಜ್ಕುಮಾರ್ ಅವರೇ ಈ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ಕಲಾಪ್ರದರ್ಶನವು ಜನವರಿ ೦೨ರ ತನಕ ನಡೆಯಲಿದೆ. ಬಿಡುವು ಮಾಡಿಕೊಂಡು ಕಲಾಪ್ರದರ್ಶನಕ್ಕೆ ಭೇಟಿ ನೀಡಿ.