‘Continuous process’!
ಬ್ರೇಕ್ ಆಗುವಂತಿಲ್ಲ. ಒಂದೊಮ್ಮೆ ಬ್ರೇಕ್ ಆದರೆ ಮತ್ತದೇ ವೇಗ ಅಥವಾ ಪ್ರಕ್ರಿಯೆಗೆ ಒಳಗೊಳ್ಳುವುದು ತುಸು ಕಷ್ಟಸಾಧ್ಯ!
ಸಾಮಾನ್ಯವಾಗಿ ಇಂತಹ ಸಂದರ್ಭ ಎದುರಾಗುವುದು ನಿರಂತರವಾಗಿ ಕಲಾಕೃತಿ ರಚನೆಯಲ್ಲಿ ತೊಡಕಿಕೊಳ್ಳುವ ಕಲಾವಿದರಿಗೆ ಮಾತ್ರ. ಅಮಾವಾಸ್ಯೆ/ಹುಣ್ಣಿಮೆಗೊಂದು ಕಲಾಕೃತಿ ರಚಿಸುವವರಿಗೆ ಈ ಸಂದರ್ಭ ಎದುರಾಗುವುದೇ ಇಲ್ಲ.
Yes, ಈ ಮಾತು ಹೇಳಲಿಕ್ಕೂ ಬಲವಾದ ಕಾರಣವಿದೆ. ಕಲಾವಿದೆ ಊರ್ಮಿಳಾ ವಿ.ಜಿ. ಅವರ woodcut ಕಲಾಕೃತಿಗಳನ್ನು ನೋಡಿದಾಗ ಈ ಬಗ್ಗೆ ಪ್ರಸ್ತಾಪಿಸುವುದರಲ್ಲಿ ಅರ್ಥವಿದೆ ಅನಿಸಿತು. ನಿರಂತರವಾಗಿ ಕಲಾಕೃತಿ ರಚನೆಯಲ್ಲಿ ತೊಡಗಿಕೊಳ್ಳುವುದರಿಂದ ಮಾತ್ರ ಈ ಪ್ರಕಾರದಲ್ಲಿ ಕಲಾವಿದ ಏನನ್ನಾದರೂ ಸಾಧಿಸಬಲ್ಲ. ಊರ್ಮಿಳಾ ಅವರು ಈ ನಿಟ್ಟಿನಲ್ಲಿ ಗಮನಾರ್ಹರು ಎನಿಸಿಕೊಳ್ಳುತ್ತಾರೆ.
ಬೆಂಗಳೂರಿನ Art Houz ಗ್ಯಾಲರಿಯಲ್ಲಿ ಊರ್ಮಿಳಾ ಅವರ ಇತ್ತೀಚಿನ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. “Closer” ಶೀರ್ಷಿಕೆಯೇ ಹೇಳುವಂತೆ ಊರ್ಮಿಳಾ ಅವರು ಮುದ್ರಣ ಕಲೆಗೆ (printmaking) ಬಹಳ ಹತ್ತಿರವಾಗಿದ್ದಾರೆ. ಮುದ್ರಣ ಕಲೆಯಲ್ಲಿ ತಲ್ಲೀನರಾಗಿದ್ದಾರೆ. ಇಲ್ಲದಿದ್ದಲ್ಲಿ ಈ ಪ್ರದರ್ಶನ ಸಾಧ್ಯವಾಗುತ್ತಿರಲಿಲ್ಲ. ಯಶಸ್ವಿ ಪ್ರಯತ್ನ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ಮುದ್ರಣಕಲೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆ. ಕಾರಣ ಇಲ್ಲಿ ಅಪ್ರಸ್ತುತ. ಆದರೆ, ಊರ್ಮಿಳಾ ಅವರು ಸ್ಥಿರತೆ ಕಾಪಾಡಿಕೊಂಡಿರುವುದು ಶ್ಲಾಘನೀಯ.
ಪ್ರದರ್ಶಿತ ಎಲ್ಲಾ ಕಲಾಕೃತಿಗಳು ‘Biotic’ ಶೀರ್ಷಿಕೆ ಇರುವಂತವೇ ಆಗಿವೆ. ವಿಭಿನ್ನ ಅಳತೆಯ woodcut ಕಲಾಕೃತಿಗಳನ್ನು ನೋಡಬಹುದಾಗಿದೆ. ಜೀವಕೋಶಗಳ ವಿನ್ಯಾಸಕ್ಕೆ ಹತ್ತಿರವೆನಿಸುವ ಈ ಕಲಾಕೃತಿಗಳು ನೋಡುಗನನ್ನು ಆಕರ್ಷಿಸುತ್ತವೆ. ತಾಂತ್ರಿಕವಾಗಿ ಕ್ಲಿಷ್ಟ ಮತ್ತು ಕಷ್ಟದಾಯಕ ಪ್ರಕ್ರಿಯೆ ಇದಾಗಿದ್ದರಿಂದ ಊರ್ಮಿಳಾ ಅವರು ನಿರ್ವಹಿಸಿದ ರೀತಿ ವಿಶೇಷ ಅನಿಸುತ್ತದೆ.