ಒಂದೊಳ್ಳೆಯ ಕಲಾಪ್ರದರ್ಶನ
“Nature is the purest portal to inner-peace”
ಅಕ್ಷರಶಃ ಸತ್ಯ. ಮನಃಶಾಂತಿಗೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಲ್ಲೆಲ್ಲೋ ಅಲೆಯುತ್ತಾನೆ. ಯಾವ್ಯಾವುದೋ ಮಾರ್ಗದಲ್ಲಿ ನಡೆಯುತ್ತಾನೆ, ಓಡುತ್ತಾನೆ. ಎಲ್ಲಿಂದಲೋ ಇನ್ನೆಲ್ಲಿಗೋ ಜಿಗಿಯುತ್ತಾನೆ. ಆದರೂ ಸಮಾಧಾನವಿಲ್ಲ, ನೆಮ್ಮದಿಯಿಲ್ಲ, ತೃಪ್ತಿಕರ ಅನಿಸದಿದ್ದಾಗ ಇನ್ಯಾವುದೋ ದಾರಿಯ ಹುಡುಕಾಟ ನಡೆಸುತ್ತಾನೆ. ಇಂತಹ ಅದೆಷ್ಟೋ ಪ್ರಯತ್ನಗಳ ಬಳಿಕ ಅಂತಿಮವಾಗಿ ಬಂದು ನಿಲ್ಲುವುದು ಈ ಪ್ರಕೃತಿಯ ಮಡಿಲಲ್ಲೇ ಆಗಿರುತ್ತದೆ. ಇದರಾಚೆ ಮನುಷ್ಯನಿಗೆ ಮನಶಾಂತಿ ದಕ್ಕುತ್ತದೆನ್ನುವುದನ್ನು ಒಪ್ಪಲಾಗದು.
ಪ್ರಕೃತಿ ಮನುಷ್ಯ ನೆಮ್ಮದಿಗೆ ಬೇಕಾದ ಎಲ್ಲವನ್ನೂ ತನ್ನೊಡಲಲ್ಲೇ ಇರಿಸಿಕೊಂಡಿದೆ. ಅದನ್ನು ಹುಡುಕಿ ಬೇಕಾದುದನ್ನು ನಮ್ಮದಾಗಿಸಿಕೊಳ್ಳುವುದು ಅವರವರ ಬುದ್ಧಿಮತ್ತೆಗೆ, ಪ್ರಯತ್ನಕ್ಕೆ, ಆಯ್ಕೆಗೆ ಸಂಬಂಧಿಸಿದ್ದು.
ಬೆಂಗಳೂರಿನ ART HOUZ ಗ್ಯಾಲರಿಯಲ್ಲಿ ನಡೆಯುತ್ತಿರುವ ಮೂವರು ಕಲಾವಿದರ ” Art and Nature ” ಶಿಲ್ಪ ಕಲಾಕೃತಿಗಳ ಪ್ರದರ್ಶನ ನೋಡುಗರನ್ನು ಒಂದು ನಿರ್ದಿಷ್ಟ ಸ್ಥಾನಕ್ಕೆ (destiny) ತಂದು ನಿಲ್ಲಿಸುತ್ತದೆ. ಭಾವನಾತ್ಮಕ ಸಂಗತಿಗಳು, ಅನುಭವಗಳ ನೆನಪು ನೋಡುಗನನ್ನು ಆವರಿಸಿಕೊಳ್ಳುತ್ತದೆ. ಬಾಲ್ಯದ, ಯವ್ವನದ ಅದೆಷ್ಟೋ ಕ್ಷಣಗಳು ಎದುರಾಗುತ್ತವೆ. ಪ್ರದರ್ಶಿತ ಶಿಲ್ಪಗಳ ಒಳಹೂರಣ ಅಮೂರ್ತವಾಗಿಯೂ ಮೂರ್ತವಾಗಿಯೂ ಗೋಚರಿಸುತ್ತವೆ. ಅವರವರ ಭಾವಕ್ಕೆ ಬದಲಾಗುವುದರಲ್ಲೂ ಸಂದೇಹವಿಲ್ಲ. ಒಂದೊಳ್ಳೆಯ ಕಲಾಪ್ರದರ್ಶನ, ಮನದಾಳದಲ್ಲಿ ಬೇರೂರುವ ಪ್ರದರ್ಶನ.
ಹಿರಿಯ ಕಲಾವಿದರಾದ ಬೆಂಗಳೂರಿನ ವೆಂಕಟಾಚಲಪತಿ, ಅಹಮದಾಬಾದ್ ನ ರತಿಲಾಲ್ ಕನ್ಸೋಡಾರಿಯಾ ಮತ್ತು ಹೈದರಾಬಾದ್ ನ ಎಸ್. ಕಾಂತಾ ರೆಡ್ಡಿ ಅವರ ಆಯ್ದ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಮೂವರು ಕಲಾವಿದರ ಕಲಾಕೃತಿಗಳು ವಿಭಿನ್ನ ದೃಷ್ಟಿಕೋನದಿಂದಲೇ ನೋಡಬೇಕೆನ್ನುವುದು ಎಷ್ಟು ಸತ್ಯವೋ, ಹಾಗೇ ಅಂತರ್ಗತ ಭಾವ ಕೆದಕಿ ಅನುಸಂಧಾನಕ್ಕೆ ದಾರಿ ಮಾಡಿಕೊಡುತ್ತಾ ಹೋಗುತ್ತವೆ. ಇದು ಪ್ರದರ್ಶಿತ ಶಿಲ್ಪಗಳಲ್ಲಿ ಕಾಣಬಹುದಾದ ಕಂಪನ, ಸಂವೇದನಾ ಶಕ್ತಿ. ಪ್ರದರ್ಶನದಲ್ಲಿ ಲೋಹ ಮತ್ತು ಶಿಲೆಯಿಂದ ರಚಿಸಲ್ಪಟ್ಟ ಕಲಾಕೃತಿಗಳು ಹೆಚ್ಚಿವೆ.
ವೆಂಕಟಾಚಲಪತಿ ಅವರ ಕಲಾಕೃತಿಗಳು ಈ ಮೊದಲೇ ಉಲ್ಲೇಖಿಸಿದಂತೆ ವಿಭಿನ್ನ ಭಾವಲೋಕ ಸೃಷ್ಟಿಸುವ ಪ್ರಕೃತಿಯ ನಿಗೂಢ ಸತ್ಯಗಳನ್ನು ತೆರೆದಿಡುತ್ತವೆ. ಏಕಕಾಲದಲ್ಲಿ ಪಕೃತಿಯ ಜೊತೆಗಿನ ಸಂಬಂಧ ಕಲ್ಪಿಸುವ ಅನುಭವಗಳನ್ನು ನೋಡುಗನ ಮನದೊಳಗೆ ಮೂಡಿಸುವಂತೆ ಮಾಡುತ್ತವೆ. ವೆಂಕಟಾಚಲಪತಿ ಅವರ ಕಲಾಕೃತಿಗಳಲ್ಲಿ ಪ್ರಕೃತಿಯ ಪ್ರಭಾವ ಸಾಕಷ್ಟಿದೆ. ಬಳಕೆಯಾದ elements ಕೂಡ ಅಮೂರ್ತ ಭಾವದ ಮೂರ್ತ ರೂಪ ಒಳಗೊಂಡಿದೆ.
ರತಿಲಾಲ್ ಅವರ ಕಲಾಕೃತಿಗಳು ನೋಡುಗರಲ್ಲಿ ಅನೇಕ ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ. ಲೋಹದ ಘನತ್ವ ಗುಣವನ್ನು ಬಹಳಸೊಗಸಾಗಿ ದುಡಿಸಿಕೊಳ್ಳುವ ಅವರ ಶೈಲಿ ಗಮನಾರ್ಹ. ನಿತ್ಯ ಜೀವನದ ಅನೇಕ ಬಾಲ್ಯ ಸನ್ನಿವೇಶಗಳು ರತಿಲಾಲ್ ಅವರ ಶಿಲ್ಪದಲ್ಲಿ ಕಾಣಲು ಸಾಧ್ಯ. ಸಾಮಾನ್ಯ ನೋಡುಗನನ್ನೂ ಆಕರ್ಷಿಸಿ ಒಂದು ಕ್ಷಣ ಹಿಡಿದು ನಿಲ್ಲಿಸುತ್ತವೆ. ರತಿಲಾಲ್ ಅವರ ಕೆಲವು ಕಲಾಕೃತಿಗಳಲ್ಲಿ ಚೀನಿ ಶಿಲ್ಪಗಳ ಪ್ರಭಾವ ಇರುವುದನ್ನು ಗಮನಿಸಬಹುದು.
ಕಾಂತಾರೆಡ್ಡಿ ಅವರ ಕಲಾಕೃತಿಗಳಲ್ಲಿ ಸಮಕಾಲೀನ ಮನಸ್ಥಿತಿ ಮೇಳೈಸಿದೆ. ಆಧುನಿಕತೆ, ತಂತ್ರಜ್ಞಾನದ ಯುಗದಲ್ಲಿ ಮನುಷ್ಯ ಬದಲಾಗುವ ತೀವ್ರತೆ ಮತ್ತು ಒತ್ತಡದ ಭಾವ ಕಾಣಿಸುತ್ತವೆ. ವಿಶೇಷವಾಗಿ ಕಲಾಕೃತಿಯ ಮೇಲ್ಮೈನಲ್ಲಿ ಪ್ರಕೃತಿಯ ಸಂಬಂಧ ಕಲ್ಪಿಸುವ ಅಭಿವ್ಯಕ್ತಿ, ಲೋಹದ ನೈಜತೆ ಉಳಿಸಿಕೊಂಡಿರುವ ನಿರ್ವಹಣೆ, ಭಾವಾಭಿವ್ಯಕ್ತಿ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತವೆ. Artificial intelligence ಪ್ರಭಾವ ಸಮಾಜದಲ್ಲಿ ಹೇಗೆ ಬದಲಾಣೆ ಸೃಷ್ಟಿಸುತ್ತಿದೆ ಎನ್ನುವುದನ್ನು ಈ ಶಿಲ್ಪಗಳು ಎಚ್ಚರಿಸುವಂತಿವೆ.
ಒಂದು ಅಪರೂಪದ ಪ್ರದರ್ಶನ. ಆಯೋಜನೆ ಗಮನಾರ್ಹ. ಕಾರಣೀಕರ್ತ Art Houz ಮತ್ತು ಜಯಂತಿ ಶೇಗಾರ್ ( Jayanthi Shegar ) ಅಭಿನಂದನಾರ್ಹರು.
ಜನವರಿ 16ರ ತನಕ ಈ ಪ್ರದರ್ಶನ ವೀಕ್ಷಣೆಗೆ ಲಭ್ಯ. ಚಿತ್ರಸಂತೆ ಇರುವ ಹಿನ್ನೆಲೆಯಲ್ಲಿ ಇಂದು ಭಾನುವಾರ ಕೂಡ ವೀಕ್ಷಿಸಲು ಅನುವುಮಾಡಿಕೊಡಲಾಗಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.