” ಆದೌ ರಾಮ ತಪೋವನಾದಿಗಮನಂ
ಹತ್ವಾ ಮೃಗಂ ಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ
ಸುಗ್ರೀವ ಸಂಭಾಣಷಮ್ |
ವಾಲೀ ನಿಗ್ರಹಣಂ ಸಮುದ್ರತರಣಂ
ಲಂಕಾಪುರೀದಾಹನಂ
ಪಶ್ಚಾದ್ರಾವಣಕುಂಭಕರ್ಣಹನನಂ
ಹ್ಯೇತದ್ವಿ ರಾಮಾಯಣಮ್ ||
24000 ಸ್ತೋತ್ರಗಳಿಂದ ಕೂಡಿರುವ ವಾಲ್ಮೀಕಿ ರಾಮಾಯಣವನ್ನು ಒಂದೇ ಸ್ತ್ರೋತ್ರದಲ್ಲಿ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ.
ಒಂದು ಚಿತ್ರ ಹತ್ತು ಕಥೆ ಹೇಳುತ್ತದಂತೆ. ಹಾಗೇ, ಒಂದು ಶ್ಲೋಕ ಇಡೀ ರಾಮಾಯಣವನ್ನು ತೆರೆದಿಡುತ್ತದೆನ್ನುವುದಕ್ಕೆ ಬೇರಿನ್ನೇನು ಉದಾಹರಣೆ ಬೇಕಿಲ್ಲ. ಇಂತಹ ಅನೇಕ ಶ್ಲೋಕಗಳು ನಮ್ಮ ಜನಮಾನಸದಲ್ಲಿವೆ. ಏಕ ಶ್ಲೋಕಿ ರಾಮಾಯಣದಂತೆ ‘ಮಹಾಭಾರತ, ಭಾಗವತ’ವನ್ನೂ ಏಕ ಶ್ಲೋಕದಲ್ಲಿ ಹೆಣೆಯಲಾಗಿದೆ.
ಆಸಕ್ತಿಗಾಗಿ ಒಂದು ಸಣ್ಣದೊಂದು ಕಥೆ ಹೇಳಿ ವಿಷಯಕ್ಕೆ ಬರುತ್ತೇನೆ. ಈ ಏಕ ಶ್ಲೋಕಿ ರಾಮಾಯಣವನ್ನು “ಮಜ್ಜಿಗೆ ರಾಮಾಯಣ” ಎಂದೂ ಕರೆಯಲಾಗುತ್ತದೆಯಂತೆ. ಕಾರಣ ಏನೆಂದು ಹುಡುತ್ತಿದ್ದೆ. ಆಗ ಸಿಕ್ಕ ಸಣ್ಣ ಕಥೆ ಇದು.
ಪಂಡಿತರೊಬ್ಬರು ಬಿಸಿಲಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಬಹಳ ದಣಿದು ನೀರು ಕುಡಿಯಲು ಬಯಸಿದರಂತೆ. ಹಾಗೇ ಮುಂದೆ ಸಾಗುವಾಗ ಮನೆಯೊಂದರ ಮುಂದೆ ಒಬ್ಬ ಬಾಲಕಿ ನಿಂತಿರುವುದನ್ನು ಕಂಡು ನೀರು ಕೇಳಿದರಂತೆ. ತಕ್ಷಣ ಬಾಲಕಿ ಕುಳಿತಿರಲು ಹೇಳಿ ‘ ದಣಿದು ಬಂದಿದ್ದೀರಾ, ಮಜ್ಜಿಗೆಯನ್ನೇ ನೀಡುತ್ತೇನೆ. ಆದರೆ ಒಂದು ಮನವಿ ಇದೆ. ಮಜ್ಜಿಗೆ ಕುಡಿದು, ಬಳಿಕ ನನಗೆ ರಾಮಾಯಣ ಕಥೆಯನ್ನು ಹೇಳಿ ಹೋಗಬೇಕು ‘ ಎಂಬ ಕೋರಿಕೆ ಮುಂದಿಟ್ಟಳಂತೆ. ಪಂಡಿತರು ತಲೆ ತೂಗಿದ್ದಕ್ಕೆ ಬಾಲಕಿ ಮಜ್ಜಿಗೆ ಕೊಟ್ಟಳಂತೆ. ಬಾಲಕಿಯ ಕೋರಿಕೆಯಂತೆ ಪಂಡಿತರು ಈ ಮೇಲಿನ ಏಕ ಶ್ಲೋಕಿ ರಾಮಾಯಣ ಪಠಿಸಿ ಇದೇ ರಾಮಾಯಣದ ಕಥೆ ಎಂದರಂತೆ!
ಕಾರಣ ಇದಕ್ಕೆ ಮಜ್ಜಿಗೆ ರಾಮಾಯಣ ಎಂದೂ ಕರೆಯಲಾಗುತ್ತದಂತೆ.
ಸ್ನೇಹಿತರೆ, ಇಷ್ಟೆಲ್ಲಾ ವಿಚಾರ ಪ್ರಸ್ತಾಪಿಸಲು ಕಾರಣ ಇಷ್ಟೆ. ಕರ್ನಾಟಕ ಚಿತ್ರಕಲಾ ಪರಿಷತ್ 3 ಮತ್ತು 4ನೇ ಗ್ಯಾಲರಿಯಲ್ಲಿ ” RAMAYANA IMAGES AND CONCEPT ” ಶೀರ್ಷಿಕೆಯಡಿ ರಾಮಾಯಣ ಕಥೆಯಾಧಾರಿತ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಕೋಲ್ಕತಾದ Arts Acre Foundation ಸಂಸ್ಥಾಪಕರು, ಹಿರಿಯ ಕಲಾವಿದರಾದ ಶುವಪ್ರಸನ್ನ (Shuvaprasanna) ಅವರ ಕಲಾಕೃತಿಗಳು ವೀಕ್ಷಣೆಗೆ ಲಭ್ಯವಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ಸಹಭಾಗಿತ್ವದಲ್ಲಿ ಈ ಪ್ರದರ್ಶನ ನಡೆಯುತ್ತಿದೆ.
ಶುವಪ್ರಸನ್ನ ಅವರ ರಾಮಾಯಣ ಕಥಾ ಹಂದರವನ್ನು ಒಳಗೊಂಡಿರುವ ಕಲಾಕೃತಿಗಳು ಸಹಜವಾಗಿ ಅನೇಕ ಕಥೆಗಳನ್ನು, ಉಪಕಥೆಗಳನ್ನು ನೆನಪಿಸಿದವು. ಸರಳ ರೇಖೆಗಳು, ತೆಳುಹಾಸಿನ ವರ್ಣ ಬಳಕೆ, ಖಚಿತ ಲಕ್ಷಣ, ಮೃದು ಮೈವಳಿಕೆ ಕಲಾಕೃತಿಗಳಲ್ಲಿ ಕಾಣಿಸಿದವು. ಆಧುನಿಕ ಸಂದರ್ಭದಲ್ಲಿ ನಮ್ಮ ಪುರಾಣಗಳಲ್ಲಿನ ಪಾತ್ರಗಳು ಹೇಗೆ ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತ (relevant) ಅನಿಸಲು ಸಾಧ್ಯವಿದೆ ಎಂಬ ಸೂಕ್ಷ್ಮ ಗ್ರಹಿಕೆಗೆ ಈ ಪ್ರದರ್ಶನ ಸಾಕ್ಷಿಯಾಗಿ ನಿಲ್ಲಲಿದೆ.
ರಾಮಾಯಣ ಕಥೆಯಾಧಾರಿತ ಕಲಾಕೃತಿಗಳು ಅಂದಾಗ ನಮಗೆ ಥಟ್ಟನೆ ಕಣ್ಣೆದುರಾಗುವುದು ಸಾಂಪ್ರದಾಯಿಕ (traditional) ಅಥವಾ ವಾಸ್ತವ (realists, super realistic) ಕಲಾಕೃತಿಗಳು. ಅದರಾಚೆಗಿನ ಸಾಧ್ಯತೆಗಳ ಬಗ್ಗೆ ಹೆಚ್ಚಿನದಾಗಿ ಯೋಚಿಸಿರುವುದಿಲ್ಲ. ಆದರೆ ಈ ಪ್ರದರ್ಶನದಲ್ಲಿನ ಕಲಾಕೃತಿಗಳು ಈ ನಿರೀಕ್ಷೆಗಳನ್ನು ಬ್ರೇಕ್ ಮಾಡಬಲ್ಲವು.
Friends, ಕಲಾಪ್ರದರ್ಶನ ಜ.30 ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ನೋಡ ಬನ್ನಿ.