- Ganapathi Agnihothri
ಯಾವುದೇ ಪ್ರಕಾರದ ‘ಕಲೆ’ ವ್ಯಕ್ತಿಯ ಜೀವನ ಶೈಲಿಯ ಮೇಲೆ ಗಂಭೀರವಾದ ಪರಿಣಾಮ ಬೀರಬಲ್ಲದು. ಅದರಲ್ಲೂ ಲಲಿತಕಲೆಗಳ ಪ್ರಭಾವ ವಿಧಾನ ಅತ್ಯಂತ ಪ್ರಭಾವಶಾಲಿ.
ಸಣ್ಣದೊಂದು ಉದಾಹರಣೆ ಕೊಡಬಹುದಾದರೆ, ಶತ ಶತಮಾನಗಳ ವಿವಿಧ ಕಲೆ-ಕಲಾ ಪ್ರಕಾರಗಳು ಆಧುನಿಕ ಯುಗದ ಫ್ಯಾಶನ್, ಜಾಹೀರಾತು ಸೇರಿದಂತೆ ಇನ್ನೂ ಅನೇಕ ಉದ್ಯಮಗಳ ಜೊತೆ ಹೆಣೆದುಕೊಂಡಿದೆ. ಅದೆಷ್ಟೋ ಹೊಸ ಹೊಸ ಹುಟ್ಟಿಗೆ ಕಾರಣವಾಗುತ್ತಿವೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯ ಇರಬಹುದು. ಸಾಧಕ-ಬಾಧಕಗಳೂ ಇರಬಹುದು. ಆದರೆ ‘ಕಲೆ’ಯ ಪ್ರಭೆ ಅದೆಷ್ಟು ನಿಗೂಢ ಅನಿಸುವಷ್ಟರ ಮಟ್ಟಿಗೆ, ಜೀವನಶೈಲಿ ಬದಲಾವಣೆಗೆ ಕಾರಣವಾಗುವ ರೀತಿಯಲ್ಲಿ ಹಾಸುಹೊಕ್ಕಿದೆ.
ಇಂತಹ ಅನೇಕ ನಿಗೂಢ ಪ್ರಭಾವಶಾಲಿ, ಪರಿಣಾಮಕಾರಿ ಸಂಗತಿಗಳನ್ನು ಕಣ್ತುಂಬಿಕೊಳ್ಳಲು ಸಹಕಾರಿಯಾದ, ದಕ್ಷಿಣ ಏಷ್ಯಾದ ಅತಿದೊಡ್ಡ ಕಲಾಪ್ರದರ್ಶನಕ್ಕೆ ರಾಷ್ಟ ರಾಜಧಾನಿ ನವದೆಹಲಿ ಸಜ್ಜಾಗಿದೆ. ಆಧುನಿಕ(modern), ಸಮಕಾಲೀನ(contemporary) ಕಲಾಕೃತಿಗಳ ಸಮ್ಮೋಹನ, ಸೆಳೆತ, ಪ್ರಚೋದಿತ ಭಾವ ಮೂಡಿಸುವ ಇಂಡಿಯಾ ಆರ್ಟ್ ಫೇರ್ (India Art Fair) ಫೆಬ್ರವರಿ 1 ರಿಂದ 4 ರವರೆಗೆ NSIC ಮೈದಾನದಲ್ಲಿ ನಡೆಯಲಿದೆ. ಈ ಬೃಹತ್ ಕಲಾಪ್ರದರ್ಶನಕ್ಕೆ ಆಯೋಜಕರು ಬಿಎಂಡಬ್ಲ್ಯೂ ಇಂಡಿಯಾ (BMW india) ಸಹಯೋಗದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಾರುಕಟ್ಟೆ ವಿಶ್ವವ್ಯಾಪಿ
ಸಾಮಾನ್ಯವಾಗಿ ಆರ್ಟ್ ಮಾರ್ಕೆಟ್ ವ್ಯಾಪ್ತಿ ಆಯಾ ಪ್ರದೇಶ, ಆಯೋಜನೆಯ ಗುಣಮಟ್ಟ ಹಾಗೂ ಆಯೋಜಕರು ಯಾವ ವರ್ಗದ ಜನರನ್ನು ತಲುಪಬಲ್ಲರು ಎನ್ನುವುದನ್ನು ಅವಲಂಬಿಸಿರುತ್ತದೆ. ಇಂಡಿಯಾ ಆರ್ಟ್ ಫೇರ್ ಆರಂಭದ ಆವೃತ್ತಿ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ಆನಂತರದ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ವಿಶ್ವದ ಪ್ರತಿಷ್ಠಿತ ಕಲಾಪ್ರದರ್ಶನಗಳ ಸಾಲಿನಲ್ಲಿ ಇದೂ ಒಂದೆನಿಸಿಕೊಂಡಿದೆ. ಇಂದಿನ ತಂತ್ರಜ್ಞಾನ ಪ್ರೇರಿತ ಡಿಜಿಟಲ್ (digital) ಕಲೆಯೂ ಸೇರಿದಂತೆ ಎಲ್ಲಾ ಪ್ರಕಾರದ ಕಲಾಕೃತಿಗಳು ಈ ಪ್ರದರ್ಶನದಲ್ಲಿ ಇರಲಿದೆ. ವಿಶ್ವ ಮಟ್ಟದಲ್ಲಿ ತೊಡಗಿಸಿಕೊಂಡಿರುವ, ಬೆಳೆದಿರುವ ಕಲಾವಿದರು, ಕಲಾ ಆಯೋಜಕರು, ಕಲಾಸಂಗ್ರಹಕಾರರು, ಕಲಾಪ್ರದರ್ಶನ ನಿಯೋಜಕರು ಅಷ್ಟೇ ಅಲ್ಲ ‘ಕಲಾ ಉದ್ಯಮಿ’ಗಳೂ ಪಾಲ್ಗೊಳ್ಳುತ್ತಾರೆ. ಘಟಾನುಘಟಿ ಒಳಾಂಗಣ ವಿನ್ಯಾಸಕಾರರು (interior designer’s), ವಿಶ್ವ ಮಟ್ಟದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಗ್ಯಾಲರಿಗಳ ಪ್ರತಿನಿಧಿಗಳು ಭೇಟಿ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಪ್ರತಿಷ್ಠಿತ ಕಲಾಪ್ರದರ್ಶನವಾಗಿ ಬಿಂಬಿಸಲ್ಪಟ್ಟಿದೆ.
100ಕ್ಕೂ ಹೆಚ್ಚು ಪ್ರದರ್ಶಕರು!
ಇಂಡಿಯಾ ಆರ್ಟ್ ಫೇರ್ ನಿರ್ದೇಶಕರಾದ ಜಯಾ ಅಶೋಕನ್ (Jaya Asokan) 15ನೇ ಆವೃತ್ತಿಯ(15th edition) ಕುರಿತು ಸವಿಸ್ತಾರವಾದ ಮಾಹಿತಿ ನೀಡಿದ್ದಾರೆ.
ಈ ವರ್ಷದ ಕಲಾಪ್ರದರ್ಶನದಲ್ಲಿ 71 ಗ್ಯಾಲರಿಗಳು, 7 ವಿನ್ಯಾಸ ಸ್ಟುಡಿಯೋಗಳು(design studio’s) ಮತ್ತು ಪ್ರಮುಖ ಪ್ರಾದೇಶಿಕ ಕಲಾ ಸಂಸ್ಥೆಗಳೂ ಸೇರಿ 100 ಪ್ರದರ್ಶಕರು ಇರಲಿದ್ದಾರೆ. ಇವರಲ್ಲಿ 26 ಪ್ರದರ್ಶಕರು ಇದೇ ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ 10 ಪ್ರದರ್ಶಕರು ಏಷ್ಯಾದಲ್ಲೆ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 18 ಅಂತಾರಾಷ್ಟ್ರೀಯ ಗ್ಯಾಲರಿಗಳು ಮತ್ತು ವಿಭಿನ್ನ ಕಲಾ ಸಂಸ್ಥೆಗಳು ಪ್ರದರ್ಶನದ ಭಾಗವಾಗಿವೆ. ಈ ಹಿಂದಿನ ಆವೃತ್ತಿಗಳಿಗಿಂತಲೂ ಈ ಆವೃತ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಭಾಗವಹಿಸುವಿಕೆ ಮತ್ತು ಗುಣಮಟ್ಟ ಅತ್ಯುತ್ತಮ ಎಂದು ತಿಳಿಸಿದ್ದಾರೆ.
ಅಲ್ಲದೆ, ಜಾಗತಿಕ ಕಲಾ ಸಂಸ್ಥೆಗಳ ಹಲವಾರು ಗಣ್ಯರು, ಕಲಾವಿದರು, ಲೇಖಕರು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಜಯಾ ಅಶೋಕನ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಆವೃತ್ತಿಯು ಹೊಸ ಭರವಸೆ ಮೂಡಿಸಿದೆ ಎಂದಿದ್ದಾರೆ.
ಚಿತ್ರ ಕೃಪೆ: India Art Fair
(2023ರಲ್ಲಿ ನಡೆದ ಆವೃತ್ತಿಯ ಸಂಗ್ರಹ ಫೋಟೊಗಳಾಗಿವೆ.)