India Art Fair 2024. | ಗಮನ ಸೆಳೆದ ಕಲಾಕೃತಿ
- Ganapathi Agnihothri
ನಿತ್ಯ ಜೀವನದ ಅನೇಕ ಸನ್ನಿವೇಶಗಳು ನಾನಾ ಕಾರಣಗಳಿಂದ ಸ್ಫೂರ್ತಿಯಾಗಬಲ್ಲವು. ಮನುಷ್ಯನ ಚಟುವಟಿಕೆಗಳೇ ಒಬ್ಬರಿಂದೊಬ್ಬರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿಬಿಡುತ್ತವೆ. ಕೆಲ ಸಮಯ ಕಣ್ಣೀರಿಗೂ, ನಗುವಿಗೂ, ಆನಂದಕ್ಕೂ, ವಿಡಂಬನೆಗೂ ಹಾಗೂ ಭಿನ್ನವೆನಿಸುವ ಅನುಭವಕ್ಕೂ ಕಾರಣವಾಗಿಬಿಡುತ್ತವೆ. ಕೆಲ ಸಂದರ್ಭಗಳಲ್ಲಿ ಹೇಳಿಕೊಳ್ಳಲಾಗದ ಅನುಭವವೊಂದು ಮನುಷ್ಯನಿಗೆ ಮನರಂಜನೆ ಆಗಿಯೂ ಕಾಡುತ್ತಲೇ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಅಮೆರಿಕದ ಫಿಸಿಯೋಲಾಜಿಸ್ಟ್, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪ್ರೊಫೇಸರ್ ಫಿಲಿಪ್ ಜಾರ್ಜ್ ಜಿಂಬಾರ್ಡೋ ಮನುಷ್ಯನ ನಡವಳಿಕೆ ಬಗ್ಗೆ ಹೀಗೊಂದು ಹೇಳಿಕೆ ದಾಖಲಿಸಿದ್ದಾರೆ.
” That human behavior is more influenced by things outside of us than inside. The ‘situation’ is the external environment. The inner environment is genes, moral history, religious training.” ಎನ್ನುತ್ತಾರೆ.
ಮನುಷ್ಯ ನಡವಳಿಕೆ ಕುರಿತಾದ ಈ ಹೇಳಿಕೆ ನೆನಪಿಸಿಕೊಳ್ಳಲಿಕ್ಕೂ ಕಾರಣವಿದೆ. 15ನೇ ಆವೃತ್ತಿಯ ಇಂಡಿಯಾ ಆರ್ಟ್ ಫೇರ್ (India Art Fair)ನಲ್ಲಿ ರಾಜ್ಯದ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದ ಶಿವಾನಂದ ಶಾಗೋಟಿ ಅವರ ಕಲಾಕೃತಿಗಳೂ ಪ್ರದರ್ಶನವಾಗಿದ್ದವು. Art District Xlll ಗ್ಯಾಲರಿಯು ಶಿವಾನಂದ ಅವರೂ ಸೇರಿದಂತೆ ಇನ್ನೂ ಕೆಲ ಕಲಾವಿದರ ಕಲಾಕೃತಿಗಳನ್ನು “The Untold Stores” ಶೀರ್ಷಿಕೆಯಡಿ ಪ್ರದರ್ಶಿಸಿತ್ತು.
| ಮಾತನಾಡಿಸುವ ಕಲಾಕೃತಿ |
ಗ್ಯಾಲರಿಯ ಒಳ ಪ್ರವೇಶಿಸುತ್ತಿದ್ದಂತೆ ಶಿವಾನಂದ ಶಾಗೋಟಿ ಅವರ ಕಲಾಕೃತಿ ಗಮನ ಸೆಳೆಯಿತು. ಲೈಬ್ರರಿಯ ಸನ್ನಿವೇಶ, ಎಲ್ಲಾ ಭಂಗಿಯಲ್ಲೂ ಸ್ವತಃ ಕಲಾವಿದರೇ ಇದ್ದಾರೆ. ಯಾಕಿರಬಹುದು…? ಪ್ರಶ್ನೆ ಎದುರಾಗುತ್ತದೆ. ಮನಸ್ಸಲ್ಲೇ ಒಂದು ನಗು ಹುಟ್ಟಿಕೊಳ್ಳುತ್ತೆ. ಒಳಕ್ಕೆ ಕರೆದೊಯ್ಯುವ ದೃಶ್ಯ ಗಾಂಭೀರ್ಯ ಭಾವ ಮೂಡಿಸುತ್ತದೆ.
ದಿನಚರಿಯ ಅನೇಕ ಕ್ಷಣಗಳನ್ನೇ ತುಸು ವಿಡಂಬನಾತ್ಮಕವಾಗಿ, ವಸ್ತು ವಿಷಯಕ್ಕೆ ಧಕ್ಕೆಯಾಗದಂತೆ, ಆಂತರಿಕ ಗಾಂಭೀರ್ಯ ಉಳಿಸಿಕೊಂಡು ಅಭಿವ್ಯಕ್ತಿಗೊಳಿಸುವ ಶಿವಾನಂದ ಶಾಗೋಟಿ ಅವರ ಕಲಾಕೃತಿಗಳು ಅನೇಕ ಕಾರಣಗಳಿಂದ ಆಪ್ತವೆನಿಸುತ್ತವೆ. ಸ್ವತಃ ತಾವೇ ಕಲಾಕೃತಿಯೊಳಗಿನ ಪಾತ್ರವಾಗುತ್ತಾರೆ. ನೈಜವೆನಿಸುವ ದೃಶ್ಯ ನೋಡುಗರನ್ನು ತುಸು ಕ್ಷಣ ಹಿಡಿದು ನಿಲ್ಲಿಸುವಂತೆ ನಿರ್ವಹಿಸುತ್ತಾರೆ.
ಹೀಗೆ ಬಾರ್ ನಲ್ಲಿರುವ ವ್ಯಕ್ತಿಯಾಗಿಯೂ ಕಾಣಿಕೊಳ್ಳುವ ಕಲಾವಿದ ಶಾಗೋಟಿ ಉನ್ಮಾದದಲ್ಲಿರುವವರ ದೈಹಿಕ ಲಕ್ಷಣಗಳನ್ನು(body language), ಮುಖ ಭಾವನೆಗಳನ್ನು(facial expression) ತಮ್ಮದೇ ಅನ್ನಿಸುವ ರೀತಿಯಲ್ಲಿ ತೋರಿಸಿದ್ದಾರೆ. ಬಾರ್ ಗಳಲ್ಲಿ ಕಾಣಸಿಗುವ ಹಾಸ್ಯಾಸ್ಪದ ಪ್ರಸಂಗಗಳನ್ನು ಗಂಭೀರವಾಗಿ ಯೋಚಿಸಬೇಕೆನ್ನುವ ರೀತಿಯಲ್ಲೂ, ಗಂಭೀರವಾದುದನ್ನು ಸಲಭವಾಗಿ ಸ್ವೀಕರಿಸಿ (take it easy) ಎನ್ನುವಂತೆಯೂ, ಬಳಲಿ ಬೆಂಡಾಗಿದ್ದೇನೆ ಅನ್ನುವಂತೆಯೂ ತೋರ್ಪಡಿಸಿಕೊಂಡಿದ್ದಾರೆ. ಸಮಾಜದಲ್ಲಿ ನಿತ್ಯ ಎದುರಾಗುವ ನಾನಾ ರೀತಿಯ ಸನ್ನಿವೇಶಗಳಿಗೆ ಕಾರಣರಾಗುವವರ ಸ್ಥಾನದಲ್ಲಿ ಸ್ವತಃ ನಾನೇ ಇದ್ದಿದ್ದರೆ ಎಂದು ಕಲ್ಪಿಸಿಕೊಳ್ಳುವ ಶಿವಾನಂದ ಶಾಗೋಟಿ ಅದನ್ನೇ ಕಲಾಕೃತಿಗೆ ವಸ್ತು ವಿಷಯ ಮಾಡಿಕೊಳ್ಳುತ್ತಾರೆ. ಭ್ರಮಾತ್ಮಕ ಅನಿಸಿದರೂ ಆ ಸ್ಥಾನದಲ್ಲಿ ನಿಂತು ನೋಡುವ, ಅದನ್ನು ಅಭಿವ್ಯಕ್ತಿಗೆ ದುಡಿಸಿಕೊಳ್ಳುವ ಪ್ರಕ್ರಿಯೆ ಆಸಕ್ತಿ ಹುಟ್ಟಿಸುತ್ತವೆ. ಸ್ಫೂರ್ತಿಯೂ ಹೌದು.
| ಹೃದಯಸ್ಪರ್ಶಿ ಕಲಾವಿದ |
ಸಮಕಾಲೀನ (contemporary) ನೆಲೆಯಲ್ಲಿ ನೋಡುವುದಾದರೆ ಶಿವಾನಂದ ಶಾಗೋಟಿ ಅವರ ಕಲಾಕೃತಿಗಳು ಬಹಳ ಹೃದಯಸ್ಪರ್ಶಿ (impressive) ಎನ್ನಬಹುದು. ಅಷ್ಟೇ ಅಲ್ಲ, ದೇಶದ ಪ್ರಗತಿಪರ (progressive) ಕಲಾವಿದರಲ್ಲಿ ಒಬ್ಬರಾಗಿರುತ್ತಾರೆ ಎನ್ನುವುದಕ್ಕೆ ಅವರ ಕಲಾಕೃತಿಗಳೇ ನಿದರ್ಶನ. ಇಂಡಿಯಾ ಆರ್ಟ್ ಫೇರ್ ನ ಕಳೆದ ಮೂರು ಆವೃತ್ತಿಗಳಲ್ಲಿಯೂ ಶಾಗೋಟಿ ಅವರ ಕಲಾಕೃತಿ ಪ್ರದರ್ಶಿಸಲ್ಪಟ್ಟಿದ್ದವು.
ನಟನೆಯಲ್ಲಿಯೂ ತುಸು ತೊಡಗಿಸಿಕೊಂಡಿರುವ ಶಿವಾನಂದ ಶಾಗೋಟಿ ಅವರ ಕಲಾಕೃತಿಗಳು ಖಡಾಖಂಡಿತವಾಗಿ ವಿಡಂಬನೆಗಳಿಗೆ ಹತ್ತಿರ ಅನಿಸುತ್ತವೆ. ಇಂದಿನ ರಾಜಕಾರಣದ ಒಳಸುಳಿವು ಕೂಡ ಅವರ ಕಲಾಕೃತಿಗಳಲ್ಲಿನ ವಿಷಯವಾಗಿ ಕಾಣಿಸುತ್ತವೆ. ಕಲಾಕೃತಿಗಳಲ್ಲಿ ತದ್ರೂಪಿ ಪಾತ್ರಗಳ ಪ್ರಭಾವ ಅವರ ಅಭಿವ್ಯಕ್ತಿ ಮತ್ತು ಶೈಲಿಯ ಶಕ್ತಿ ಎನ್ನಬಹುದು. ಒಂದೊಮ್ಮೆ ತದ್ರೂಪಿ ಪಾತ್ರದಲ್ಲಿ ಅವರಲ್ಲದೇ ಬೇರೆ ವ್ಯಕ್ತಿಯ ದರ್ಶನವಾಗಿದ್ದರೆ ಬಹುಶಃ ಅಷ್ಟೊಂದು ಪರಿಣಾಮಕಾರಿ ಅನಿಸುತ್ತಿಲ್ಲವೇನೋ ಎಂಬಷ್ಟರ ಮಟ್ಟಿಗೆ ತಮ್ಮ ತನ ದಾಖಲಿಸಿದ್ದಾರೆ. ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಶಾಗೋಟಿ ಅವರ ಬಹುತೇಕ ಎಲ್ಲಾ ಕಲಾಕೃತಿಗಳಲ್ಲಿಯೂ ವಿಡಂಬನೆ, ವಸ್ತು ಗಾಂಭೀರ್ಯತೆ, ವರ್ಣ ಸಮತೋಲನ, ವಿಭಿನ್ನ ಸಂಯೋಜನೆ ಕಾಣಸಿಗುತ್ತವೆ. ಸಂಯೋಜನೆಗೆ ಬಳಸಿಕೊಳ್ಳುವ ಅಂಶಗಳು(elements) ಕುತೂಹಲ ಮೂಡಿಸುವಂತೆ ಇರುತ್ತವೆ. ಪರಿಣಾಮ ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ಆಪ್ತವೆನಿಸುತ್ತವೆ.
| ಫೆ. 29ರ ತನಕ “The Untold Stores” |
ಶಿವಾನಂದ ಅವರ ಇನ್ನಷ್ಟು ಕಲಾಕೃತಿಗಳು ದೆಹಲಿಯ
Art District Xlll ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ. “The Untold Stores” ಶೀರ್ಷಿಕೆಯಡಿ ನಡೆಯುತ್ತಿರುವ ಈ ಪ್ರದರ್ಶನವು ಫೆ.29ರಂದು ಸಂಪನ್ನಗೊಳ್ಳಲಿದೆ. ದೆಹಲಿಯಲ್ಲಿರುವ ಆಸಕ್ತರು ಭೇಟಿ ನೀಡಬಹುದು.
®agniprapancha