@150: ರೋರಿಚ್ ಕಲಾಕೃತಿಗಳ ಪ್ರದರ್ಶನ

Share This

  • ಹಿಮಾಲಯ ಪರ್ವತಶ್ರೇಣಿಗಳ ರಸದೌತಣ
  • ನವೆಂಬರ್ 18ರಂದು ಸಂಪನ್ನ

 

“ವಿಶ್ವ ಕಲಾಕ್ಷೇತ್ರದಲ್ಲಿ ನಿಕೋಲಸ್ ರೋರಿಚ್ ಅವರು ಅವರದೇ ಆದ ಸ್ಥಾನ ಹೊಂದಿದ್ದಾರೆ. ಹಾಗೆ ಅವರ ಲೇಖನಿಗೂ ಒಂದು ವಿಶೇಷ ಸ್ಥಾನ ದಕ್ಕಿದೆ. ಅವರ ಬ್ರಶ್ ಸ್ಟ್ರೋಕ್  ಎಂಥವರನ್ನೂ ಆಕರ್ಷಿಸುವ ಶಕ್ತಿ ಹೊಂದಿದ್ದರೆ, ಅವರ ಲೇಖನಿಯಲ್ಲಿ ವಿಶಿಷ್ಠ ಕಾರ್ಯಸಾಧನೆಯ ಗುಣವಿದೆ. ದೀರ್ಘಕಾಲದ ಪ್ರಭಾವ ಬೀರಬಲ್ಲ ಅಂತಃಶಕ್ತಿ ಅವರ ಲೇಖನಿ ಮತ್ತು ಕುಂಚದಲ್ಲಿದೆ. ಈ ಎರಡೂ ಕ್ಷೇತ್ರವನ್ನು ಸರಿದೂಗಿಸುವ ಸಾಮರ್ಥ್ಯ ನಿಕೋಲಸ್ ರೋರಿಚ್ ಅವರಲ್ಲಿದೆ. ಅವರ ಕಲಾಕೃತಿಗಳಲ್ಲಿ ಇಡೀ ಪ್ರಪಂಚದ ಗಮನವನ್ನೆ ಸೆಳೆಯಬಲ್ಲ ಆಕರ್ಷಣೆಯ ಗುಣಗಳಿವೆ” ಎಂದಿದ್ದಾರೆ ಅಭನೀಂದ್ರನಾಥ್ ಠಾಗೋರ್.

 

1946, ಶಾಂತಿನಿಕೇತನದಲ್ಲಿದ್ದ ಸಂದರ್ಭದಲ್ಲಿ ಹೇಳಿದ ಮಾತಿದು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಠಾಗೋರರೆ ಹೀಗೆ ಹೇಳಿರುವಾಗ ಸಹಜವಾಗಿಯೆ ರೋರಿಚ್ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬೇಕು ಅನಿಸುವುದು ಸಹಜ. ಇದೀಗ ಇದಕ್ಕೊಂದು ಸುವರ್ಣಾವಕಾಶವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಒದಗಿಸಿಕೊಟ್ಟಿದೆ. ಗ್ಯಾಲರಿ 1 ಮತ್ತು 2ರಲ್ಲಿ ರೋರಿಚ್ ಅವರ 150ನೇ ಜನ್ಮದ ದಿನದ ಹಿನ್ನೆಲೆಯಲ್ಲಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಿದೆ. ಮ್ಯೂಸಿಯಂನಲ್ಲಿ ನೋಡಲು ಸಾಧ್ಯವಾಗದ ಒಂದಿಷ್ಟು ಕಲಾಕೃತಿಗಳೂ ಸೇರಿದಂತೆ 30ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. Vspominaya Roerich@150 ಶೀರ್ಷಿಕೆಯಡಿ ಅತ್ಯಂತ ಶಿಸ್ತುಬದ್ಧವಾಗಿ, ಕಲಾಕೃತಿಗಳ ಸೌಂದರ್ಯಕ್ಕೆ ಧಕ್ಕೆ ಬರದಂತೆ ಪ್ರದರ್ಶಿಸಲಾಗಿದೆ. ಕಲಾಕೃತಿಗೆ ಈ ಗುಣಮಟ್ಟದ ಪ್ರದರ್ಶನ ನೀಡುವುದು ಪ್ರಶಂಸನಾರ್ಹ. ಚಿತ್ರಕಲಾ ಪರಿಷತ್ ಈ ಪ್ರದರ್ಶನವನ್ನು ಅತ್ಯಂತ ಎಚ್ಚರಿಕೆಯಿಂದ ಆಯೋಜಿದೆ. ಅಷ್ಟೇ ಅಲ್ಲ, ರೋರಿಚ್ ಅವರಿಗೆ ಸಲ್ಲಬೇಕಾದ ಗೌರವ ಕೂಡ.

 

1920ರಲ್ಲಿ ಭಾರತಕ್ಕೆ ಬಂದು, ಹಿಮಾಚಲಪ್ರದೇಶದ ಕುಲು ಕಣಿವೆಯ ನಗ್ಗರ್ ಎಂಬ ಹಳ್ಳಿಯಲ್ಲಿ ನೆಲೆಸಿದ್ದ ರೋರಿಚ್ ಅವರು ಹಿಮಾಲಯ ಪರ್ವತ ಶ್ರೇಣಿಯ ಸಾವಿರಾರು ಕಲಾಕೃತಿಗಳನ್ನು ರಚಿಸಿದ್ದರು. ಅವರ ಸಾಕಷ್ಟು ಕಲಾಕೃತಿಗಳು ಭಾರತದಾದ್ಯಂತ ಇವೆ. ಅನೇಕ ಸಂಗ್ರಹಾಲಯಗಳಲ್ಲಿ ಅವರ ಕಲಾಕೃತಿಗಳನ್ನು ನೋಡಲು ಸಾಧ್ಯವಿದೆ. ಅವರ ಪುತ್ರ ಸ್ಟೆಟೊಸ್ಲಾವ್ ರೋರಿಚ್ ಅವರು ಬೆಂಗಳೂರಿನಲ್ಲೆ ನೆಲೆಸಿದ್ದರು. ತದನಂತರದ ದಿನಗಳಲ್ಲಿ ತಮ್ಮ ಬಳಿ ಇದ್ದ ತಂದೆ ನಿಕೋಲಸ್ ರೋರಿಚ್ ಅವರ 36 ಕಲಾಕೃತಿಗಳನ್ನು ಹಾಗೂ ತಮ್ಮ ಒಂದಿಷ್ಟು ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ ಸಂಗ್ರಹಕ್ಕೆ ನೀಡಿದ್ದರು. ಈ ಸಂಗ್ರಹದ ಕಲಾಕೃತಿಗಳನ್ನೇ ಇದೀಗ ಪ್ರದರ್ಶಿಸಲಾಗಿದೆ.

 

ಸ್ನೇಹಿತರೆ, ರೋರಿಚ್ ಅವರ ಕಲಾಕೃತಿಗಳ ಪ್ರದರ್ಶನ ನವೆಂಬರ್ 18ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಪ್ರದರ್ಶನ ವೀಕ್ಷಿಸಿ ಬನ್ನಿ.

 

 

 

 

 

 


Share This

Leave a Reply

Your email address will not be published. Required fields are marked *