ಮೈಸೂರು ಶೈಲಿ ಪರಂಪರೆಯ ಹೊಳಹು

Share This

• ಡಿವಿಜಿ ನೆನಪಿಸಿದ ಪ್ರಭಾ ಮಲ್ಲೇಶ್ ಕಲಾಕೃತಿಗಳು   
• ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಕಲಾಪ್ರದರ್ಶನ
ವಿಜಯನಗರ ಸಾಮ್ರಾಜ್ಯದ ಕಾಲವದು. ಮೃಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಗೆ ವಿಶೇಷ ಮಾನ್ಯತೆ. ರಾಜರು ತಮ್ಮ ಆಸ್ಥಾನದಲ್ಲೇ ಕಲಾವಿದರನ್ನು ಇರಿಸಿಕೊಂಡು ಪೋಷಿಸಿದ ದಿನಗಳದು. ವೈಭವದ ದಿನಗಳು ಎಂದರೆ ಖಂಡಿತಾ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅಂತಹ ದಿನಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆದಿದ್ದ ಮೈಸೂರು ಶೈಲಿಯ ಸಾಂಪ್ರದಾಯಿಕ ಕಲೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಕುಟುಂಬಗಳು ಅಥವಾ ಕಲಾವಿದರು ಬಲು ವಿರಳ. ಅಲ್ಲಿ ಇಲ್ಲಿ ಒಬ್ಬರೊ ಇಬ್ಬರೋ ಸಿಗುತ್ತಾರಷ್ಟೆ. ಹವ್ಯಾಸಕ್ಕಾಗಿ ಕಲಿತವರು ನೂರಾರು ಮಂದಿ ಸಿಕ್ಕಾರು. ಆದರೆ ನಿರಂತರವಾಗಿ ಅದರೊಟ್ಟಿಗೆ ಬದುಕುವ ನಿರ್ಧಾರ ಮಾಡಿ, ಅನುಸರಿಸಿದವರು ಕಡಿಮೆ. ದಕ್ಷಿಣ ಭಾರತದ ಪ್ರಮುಖ ಸಾಂಪ್ರದಾಯಿಕ ಕಲಾ ಶೈಲಿಯ ಮೇಲಿನ ಆಸಕ್ತಿ, ಬದ್ಧತೆ ಅಂದಿನಷ್ಟು ಇಂದಿಲ್ಲ. ಆಧುನಿಕತೆಯ ಪ್ರಭಾವ, ಆಕರ್ಷಣೆಯೂ ಇದ್ದಿರಬಹುದು.
ಹೌದು, ಒಂದಿಷ್ಟು ಹಿರಿಯ ಜೀವಗಳನ್ನು ಹೊರತು ಪಡಿಸಿದರೆ, ಯುವ ಕಲಾವಿದರು ಮೈಸೂರು ಶೈಲಿಗೆ ಅಂಟಿಕೊಂಡಿಲ್ಲ. ಇದರರ್ಥ ಯುವ ಸಮುದಾಯದಲ್ಲಿ ಆಸಕ್ತಿ ಇಲ್ಲ ಎನ್ನಬೇಕೋ ಅಥವಾ ಲಾಭದಾಯಕ ಉಧ್ಯಮವೂ ಅಲ್ಲ ಎನ್ನುವ ಮನೋಭಾವ ಇದ್ದಿರಬಹುದೋ ಗೊತ್ತಿಲ್ಲ. ಕಲಿತವರಿದ್ದಾರೆ, ಮುಂದುವರಿಸುವವರಿಲ್ಲವಷ್ಟೆ.
ಆಶ್ಚರ್ಯ ಎನಿಸುವ ಇನ್ನೊಂದು ವಿಚಾರ ಏನೆಂದರೆ, ಇಂದಿನ ಕಲಾಶಾಲೆಯ ಪಠ್ಯದಲ್ಲೂ ಸಾಂಪ್ರದಾಯಿಕ ಕಲಾಶೈಲಿಯ ಕಲಿಕೆಗೆ ಜಾಗವಿಲ್ಲ. ಮುಂದಾಳತ್ವ ವಹಿಸಿ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಮಾಡಿರುವ ಉದಾಹರಣೆ ಇವೆ, ಇಲ್ಲವೆನ್ನಲ್ಲ. ಒಂದಂತೂ ಖರೆ, ಈ ಶೈಲಿಯ ಚಿತ್ರಕಲೆ ನಾಡಿನ ನೆಲದ ಶ್ರೇಷ್ಠ ಕಲೆಯಾಗಿದ್ದರಿಂದ ಪೋಷಣೆ ಆಗಬೇಕಿದೆ. ಕಲಿತು, ಅಭ್ಯಾಸ ಮುಂದುವರಿಸುವವರಿಗೆ ಒಳ್ಳೆಯ ಭವಿಷ್ಯವೂ ಇದೆ.
ಇವೆಲ್ಲದರ ನಡುವೆ, ಯುವ ಕಲಾವಿದರೂ ನಾಚಿಕೊಳ್ಳುವ ಹಾಗೆ, ಹುಬ್ಬೇರಿಸುವಂತೆ ನೂರಾರು ಕಲಾಕೃತಿಗಳನ್ನು ರಚಿಸಿದವರು ನಮ್ಮ ನಡುವೆ ಇದ್ದಾರೆ. ಇಂಥವರಲ್ಲಿ ಒಬ್ಬರಾದ ಹಿರಿಯ ಕಲಾವಿದೆ ಪ್ರಭಾ ಮಲ್ಲೇಶ್ ಅವರ ಕಲಾಕೃತಿಗಳು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1ರಲ್ಲಿ ಪ್ರದರ್ಶನಗೊಂಡಿವೆ. ಇತ್ತೀಚಿನ ಕಲಾಕೃತಿಗಳೂ ಸೇರಿದಂತೆ ಕೆಲ ಹಳೆಯ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿರುವ ಪ್ರಭಾ ಮಲ್ಲೇಶ್ ಅವರು ಅನುಭವಿ ಕಲಾವಿದೆ. ಹೊಸ ಹೊಸ ದೃಶ್ಯಗಳನ್ನು ಈ ಶೈಲಿಗೆ ಅಳವಡಿಸಿಕೊಳ್ಳುವ ಮೂಲಕ ಪರಂಪರೆಗೆ ಆಧಾರ ಸ್ತಂಭವಾಗಿದ್ದಾರೆ. ವಯೋಸಹಜ ಸಮಸ್ಯೆಗಳ ನಡುವೆಯೂ ಕಲಾಕೃತಿಗಳ ರಚನೆಯಲ್ಲಿ ತೊಡಗಿರುತ್ತಾರೆ ಎನ್ನುವುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿದೆ.
ಪ್ರದರ್ಶಿತ ‘ಶುಕಭಾಷಿಣಿ’, ‘ಶುಕ ಶೃಂಗಾರ’ ಶೀರ್ಷಿಕೆಯ ಕಲಾಕೃತಿಗಳು ನಮ್ಮ ಹೃದಯದಲ್ಲಿ ನೆಲೆಸಿರುವ ಪ್ರಸಿದ್ಧ ಸಾಹಿತಿ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಸಾಲುಗಳನ್ನು ನೆನಪಿಸಿದವು. ಅಂತಪುರ ಗೀತೆಗಳ ಬಹಳ ಸೊಗಸಾದ ಸಾಲುಗಳಿವು.
ಏನೇ ಶುಕಭಾಷಿಣಿ..!
ಸುದ್ದಿ ಏನೇ ಮನೋಲ್ಲಾಸಿನಿ..!
ಆರಾರ ತೆಗಳುತಲಾರಾರ ಪೊಗಳುತ,
ಈ ಲಾಲಿಗ ಉಸಿರುವೇ ಮಾರಾಂತರಂಗವ,
ಚಿಂತ ವಿಚಾರಂಗಳೇ,
ನಿನ್ನ ಸಂತೋಷ ಗೋಪ್ಯಂಗಳೆ,
ಕಾಂತಂಗದೇನೆ ಕಾಂತಂಗಳೊಸಗೇಯ,
ಕಾಂತೆ ನೀ ಕಳುಹಿ ಅಶಾಂತನನಾಗಿಪೆ,
ವನ್ಯ ಪ್ರವಾಸಿಯೊಳೇ,
ನಿನ್ನ ಬಿನ್ನಾಣ ಬೂಟಾಟಗಳ್,
ಇನ್ನಾರುಮಿಲ್ಲವೇ ಚೆನ್ನಕೇಶವನಿಗೆ,
ನಿನ್ನ ಅಂದ ಚಂದವ ಬಣ್ಣಿಪ ಚತುರರು
ಡಿವಿಜಿ ಕಂಡಿರುವ ಶುಕಭಾಷಿಣಿಯೇ ಪ್ರಭಾ ಮಲ್ಲೇಶ್ ಅವರ ಕೈಯಲ್ಲಿ ಅರಳಿದಂತಿವೆ. ರಾಮಾಯಣ, ವಿಶ್ವರೂಪ ದರ್ಶನ, ಶ್ರೀಕೃಷ್ಣ ಬಾಲ ಲೀಲೆ, ಶ್ರೀರಾಮ ಪಟ್ಟಾಭಿಷೇಕ ಸೇರಿದಂತೆ ಇನ್ನು ಕೆಲವು ಕಲಾಕೃತಿಗಳಲ್ಲಿನ ನಿರ್ವಹಣೆ ಅತಿಸುಂದರ.
ಮೈಸೂರು ಶೈಲಿ ಸಾಂಪ್ರದಾಯಿಕ ಕಲಾಕೃತಿಗಳ ರಚನೆಯಲ್ಲಿ ಅಪಾರ ಸಾಧನೆ ಮಾಡಿರುವ, ದೇಶದ ಪ್ರಸಿದ್ಧ ಕಲಾವಿದ ವೈ ಸುಬ್ರಹ್ಮಣ್ಯರಾಜು ಅವರ ಶಿಷ್ಯರಲ್ಲಿ ಒಬ್ಬರಾದ ಪ್ರಭಾ ಮಲ್ಲೇಶ್ ಅವರು ಕೂಡ ನೂರಾರು ಮಂದಿಗೆ ತಮ್ಮಲ್ಲಿರುವ ಕಲೆಯನ್ನು ಧಾರೆ ಎಳೆದಿದ್ದಾರೆ. ಯುವ ಸಮುದಾಯ ಮುಂದಿನ ಪೀಳಿಗೆಗೆ ದಾಟಿಸುತ್ತಾರೆ ಎನ್ನುವ ಆಶಾ ಭಾವದಲ್ಲಿದ್ದಾರೆ.
” ನಮ್ಮ ತಂದೆಯವರು ಆ ದಿನಗಳಲ್ಲಿ ಕಲಾವಿದರನ್ನು ನಮ್ಮ ಮನೆಗಳಿಗೆ ಕರೆಯಿಸುತ್ತಿದ್ದರು. ಇದರಿಂದಾಗಿ ನಾವೆಲ್ಲರು ಶೃದ್ಧೆಯಿಂದ ಕಲಿತುಕೊಳ್ಳಲು ಸಾಧ್ಯವಾಯಿತು. ಈ ಕಲೆ ಮುಂದಿನ ಪೀಳಿಗೆಯವರಿಗೂ ದಾಟಿಸುವ ಕೆಲಸ ಆಗಬೇಕು ಎನ್ನುತ್ತಾರೆ ” ಪ್ರಭಾ ಮಲ್ಲೇಶ್.
ಸ್ನೇಹಿತರೆ, ಈ ಕಲಾಪ್ರದರ್ಶನ ಜುಲೈ 12ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಭೇಟಿ ನೀಡಿ.

 

 


Share This

Leave a Reply

Your email address will not be published. Required fields are marked *