- ಕಣ್ಣರಳಿಸಿ ನೋಡಬೇಕೆನಿಸುವ ಬಣ್ಣಗಳ ನಿರ್ವಹಣೆ
- ಗಮನ ಸೆಳೆಯುವ ಗಣಪತಿ ಹೆಗಡೆ ಕಲಾಕೃತಿಗಳು
ಕಪ್ಪೆಯೊಂದು ಕುರ್ಚಿಯ ಮೇಲೆ ಹಾಯಾಗಿ ಕುಳಿತಿದೆ. ಪ್ರಾಣಿ ಪಕ್ಷಿಗಳು ಹೊದಿಕೆ ಹೊದ್ದು ಸಂಭ್ರಮಿಸುತ್ತಿವೆ, ಕಣ್ಣರಳಿಸಿ ಹಾಡುತ್ತಿವೆ. ಎಲ್ಲೆಲ್ಲೂ ಸೊಬಗು, ಸಹ್ಯಾದ್ರಿ ಹಸಿರು ಹಾಸಿಗೆಯ ಮೇಲಿನ ಬಣ್ಣ ಬಣ್ಣದ ಎಲೆಗಳೂ ಮಾತನಾಡುತ್ತಿವೆ. ಚುಮು ಚುಮು ಚಳಿಗೆ ಮೊಗ್ಗುಗಳೆಲ್ಲವೂ ಅರಳುತ್ತಿವೆ. ಮಲೆನಾಡಿನ ಮರ-ಗಿಡಗಳು ಚಳಿಯ ಪರಿವೆಯೇ ಇಲ್ಲದೆ ಸ್ನೇಹಜೀವಿಯಾಗಿ ವರ್ತಿಸುತ್ತಿವೆ.
ಹೌದು, ಇಂತಹದ್ದೊಂದು ಸುಂದರವಾದ ಲೋಕ ಗ್ಯಾಲರಿಯಲ್ಲಿ ನಿರ್ಮಾಣಗೊಂಡಿದೆ. Heart touching art works ಎಂದರೆ ಅತಿಶಯೋಕ್ತಿ ಆಗಲಾರದು.
ಇದೊಂದು ಅಚ್ಚರಿಯ ಪರಿಕಲ್ಪನೆ. ಎಲ್ಲೆಲ್ಲೋ ಇದ್ದು, ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಬದುಕುವ ಜೀವಿಗಳನ್ನು, ಸಸ್ಯ ಸಂಕುಲಗಳನ್ನು ಕ್ಯಾನ್ವಾಸ್ ಮೇಲೆ ನೋಡುವುದು ಖುಷಿ ಕೊಡುವ ಸಂಗತಿ. ಉತ್ತರಕನ್ನಡ ಕರಾವಳಿಯಿಂದ ಬೆಂಗಳೂರಿಗೆ ಬಂದು ನೆಲೆಸಿ ಕರಾವಳಿ, ಮಲೆನಾಡಿನ ಪರಿಸರದ ಪ್ರಮುಖ ಅಂಶಗಳನ್ನೇ (elements) ವಸ್ತು ವಿಷಯವಾಗಿಸಿಕೊಂಡು ಚಿತ್ರ ರಚಿಸುವ ಕಲಾವಿದ ಗಣಪತಿ ಹೆಗಡೆ ಅವರ ಕಲಾಕೃತಿಗಳು ಬೆಂಗಳೂರಿನ ಕಿಂಕಿಣಿ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ. ಹಾಗೆ ನೋಡಿದರೆ ಹೆಗಡೆ ಅವರ ಕಲಾಕೃತಿಗಳು ಕಿಂಕಿಣಿಯ ಸಂಗ್ರಹದಲ್ಲಿವೆ ಮತ್ತು ಆಗಾಗ ಪ್ರದರ್ಶನಗೊಳ್ಳುತ್ತವೆ. ಈಗ ಇತ್ತೀಚಿನ ಒಂದಿಷ್ಟು ಕಲಾಕೃತಿಗಳನ್ನು ಪ್ರದರ್ಶಿಸಿ ಗಮನಸೆಳೆದಿದ್ದಾರೆ.
ಸಾಂಪ್ರದಾಯಿಕ ಚಿತ್ರಕಲಾ ಶೈಲಿ ಮತ್ತು ನವ್ಯ ಕಲಾ ತಂತ್ರಗಳನ್ನು ಉಪಯೋಗಿಸಿಕೊಂಡು ಕಲಾಕೃತಿಗಳನ್ನು ರಚಿಸುವ ಗಣಪತಿ ಹೆಗಡೆ ಅವರ ಕಲಾಕೃತಿಗಳು ಸಾಮಾನ್ಯ ನೋಡುಗರನ್ನೂ ಬಲು ಬೇಗ ಆಕರ್ಷಿಸಿಬಿಡುತ್ತವೆ. ಕೆಲವೊಂದಿಷ್ಟು ಕಲಾಕೃತಿಗಳಲ್ಲಿ ಒಂದೇ ಆಕೃತಿಗಳ ಮರುಬಳಕೆ ಆಗುವುದರಿಂದ ಏಕತಾನತೆಯ ಭಾವ ಸಹಜ. ಹೆಗಡೆ ಅವರ ಕಲಾಕೃತಿಗಳಲ್ಲಿ ಇವು ತುಸು ಜಾಸ್ತಿಯಾಗಿಯೆ ಕಾಣಿಸುತ್ತವೆ. ಆದರೆ, ಸಂಯೋಜನೆ ದೃಷ್ಟಿಯಿಂದ ಅವು ಭಿನ್ನವಾಗಿ ಕಾಣುತ್ತವೆ. ನೋಡುಗನ ಜೊತೆ ಪ್ರಕೃತಿಯ ಜೀವಿಗಳು ಮಾತನಾಡುತ್ತಿವೆಯೇನೊ ಎನ್ನುವ ರೀತಿಯಲ್ಲಿ ಹೊಸ ಲೋಕ ಸೃಷ್ಟಿಸುವ ರೀತಿ ಗಮನಾರ್ಹ.
ಪ್ರಕೃತಿಯೊಳಗಿನ ಅಚ್ಚರಿ, ನಿಗೂಢಗಳ ಸೌಂದರ್ಯವನ್ನು ವೃದ್ಧಿಸುವಂತೆ (enhance) ಮಾಡುವ ಅಥವಾ ಉತ್ಪ್ರೇಕ್ಷೆಯ (exaggeration) ನೆಲೆಯಲ್ಲಿ ನೋಡುವ ವಿಶಿಷ್ಟತೆ ನೋಡುಗರನ್ನು ಸೆಳೆದು ನಿಲ್ಲಿಸುವಂತೆ ಮಾಡುತ್ತದೆ. ಗಣಪತಿ ಹೆಗಡೆ ಅವರೂ ಕೆಲವು ಕಡೆ ಈ ಜಾಣ್ಮೆಯನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸುತ್ತಾರೆ.
ಈ ಕಲಾಪ್ರದರ್ಶನ ವಾರಾಂತ್ಯಕ್ಕೆ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ನೋಡಿ ಬನ್ನಿ.