ಆಶಾದಾಯಕ ಬೆಳವಣಿಗೆಗೆ ಆರ್ಟ್ ಮುಂಬೈ ಮುನ್ನುಡಿ!

Share This

  • ನಿರೀಕ್ಷೆ ಹೆಚ್ಚಿಸಿದ 2024ರ ಆವೃತ್ತಿ
  • ವಿಶ್ವದ ಗಮನ ಸೆಳೆದ ಕಲಾಪ್ರದರ್ಶನ

ಕಲಾಪ್ರದರ್ಶನವೊಂದು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಷ್ಟು ಪರಿಣಾಮಕಾರಿಯಾಗಿ ಸಂಯೋಜಿಸಲು ಸಾಧ್ಯವಿದೆ ಎನ್ನುವುದನ್ನು 2024ರ ಆರ್ಟ್ ಮುಂಬೈ (Art Mumbai) ಆವೃತ್ತಿ ಸಾಬೀತು ಪಡಿಸಿದೆ. ಕಲಾ ವಲಯದಿಂದ ಒಳ್ಳೆಯ ಅಭಿಪ್ರಾಯಗಳು ಮೂಡಿವೆ. ಕಲಾಪ್ರದರ್ಶನ ಆಯೋಜನೆಯ ಜೊತೆಗೆ ಗುಣಮಟ್ಟ ಕಾಪಾಡಿಕೊಳ್ಳುವುದು ಎಷ್ಟು ಮಹತ್ವದ್ದು ಎನ್ನುವುದನ್ನು ಆರ್ಟ್ ಮುಂಬೈ ಆಯೋಜಕರು ಪ್ರತಿಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ವಾಸದಿಂದ ಹೇಳಬಹುದು.

ನವೆಂಬರ್ 15ರಿಂದ 17ರ ತನಕ ಮುಂಬೈನ ಮಹಾಲಕ್ಷ್ಮೀ ರೇಸ್‌ಕೋರ್ಸ್ ಮೈದಾನದಲ್ಲಿ ನಡೆದ ಆರ್ಟ್ ಮುಂಬೈ 2ನೇ ಆವೃತ್ತಿಯು ಮೊದಲನೇ ಆವೃತ್ತಿಗಿಂತಲೂ ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜನೆಗೊಂಡಿತ್ತು. ದೇಶ ಮತ್ತು ವಿದೇಶಗಳ 71 ಗ್ಯಾಲರಿಗಳು ಪಾಲ್ಗೊಂಡಿದ್ದವು. 500ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗಿದ್ದವು. ಬಹುತೇಕ ಗ್ಯಾಲರಿಗಳು ಹೊಸ ಹೊಸ ಕಲಾಕೃತಿಗಳನ್ನು ಪ್ರದರ್ಶಿಸುವ ಪ್ರಯತ್ನ ಮಾಡಿವೆಯಾದರೂ ಕೆಲವೊಂದಿಷ್ಟು ಕಲಾಕೃತಿಗಳು ಮರುಕಳಿಸಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೂ ಕಲಾಪ್ರಿಯರನ್ನು ಆಕರ್ಷಿಸಿವೆ. ಭಾರತೀಯ ಸಂಸ್ಕೃತಿಯ ಜೊತೆಗೆ ಹಾಸುಹೊಕ್ಕಿರುವ ಕಲಾ ಪ್ರಕಾರಗಳು ಸೇರಿದಂತೆ 21ನೇ ಶತಮಾನದ ಸಮಕಾಲೀನ ಕಲಾಕೃತಿಗಳು ಈ ಬೃಹತ್ ಕಲಾಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು.

ಉತ್ತಮ ಆರ್ಟ್ ಮಾರ್ಕೆಟ್ ಹೊಂದಿರುವ ಮಾಯಾ ನಗರಿ ಮುಂಬೈ ಇಂತಹದ್ದೊಂದು ಬೃಹತ್ ಪ್ರಮಾಣದ ಕಲಾ ಪ್ರದರ್ಶನದ ನಿರೀಕ್ಷೆಯಲ್ಲಿತ್ತು. ಇದನ್ನು ಆರ್ಟ್ ಮುಂಬೈ ಆಕ್ರಮಿಸಿಕೊಂಡಿದೆ. ವದೇರಾ ಆರ್ಟ್ ಗ್ಯಾಲರಿ(Vadehra Art Gallery), ನೇಚರ್ ಮೊರ್ಟೆ(Nature Morte), ಎಕ್ಸ್ಪಿರಿಮೆಂಟರ್(Experimenter), ಗ್ಯಾಲರಿ ಇಸಾ (Galerie Isa), ತಾರಕ್(Tarq), ಡಿಎಜಿ(DAG), ಗ್ಯಾಲರಿ ಇಸ್ಪೇಸ್(Gallery Espace), ಗ್ಯಾಲರಿ ಸುಮುಖ(Gallery Sumukha), ಇಮಾಮಿ ಆರ್ಟ್(Emami Art) ಸೇರಿದಂತೆ ಭಾರತದ ಇನ್ನೂ ಅನೇಕ ಪ್ರತಿಷ್ಠಿತ ಗ್ಯಾಲರಿಗಳು ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದವು. ಗಮನಾರ್ಹ ಸಂಗತಿ ಏನೆಂದರೆ, ಲಂಡನ್, ಪ್ಯಾರಿಸ್, ದುಬೈ, ಅಮೆರಿಕ ಸೇರಿದಂತೆ 9 ವಿದೇಶಿ ಗ್ಯಾಲರಿಗಳು ಪಾಲ್ಗೊಂಡಿದ್ದವು. ಇದಲ್ಲದೆ, ದೇಶದ ಪ್ರಮುಖ ಮರ‍್ನಾಲ್ಕು ಆರ್ಟ್ ಫೌಂಡೇಶನ್‌ಗಳು ಪಾಲ್ಗೊಂಡಿದ್ದವು. ಈ ಎಲ್ಲಾ ಗ್ಯಾಲರಿಗಳು ತಮ್ಮ ಸಂಪರ್ಕದಲ್ಲಿರುವ ಕಲಾವಿದರ ಉತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದವು.

ದೇಶ ಮತ್ತು ಕೆಲ ವಿದೇಶಿ ಹಿರಿಯ ಕಲಾವಿದರ ಕಲಾಕೃತಿಗಳು ಹಾಗೂ ಇತ್ತೀಚಿನ ದಿನಗಳಲ್ಲಿ ಮುಂಚೂಣಿಯಲ್ಲಿರುವ ಕಲಾವಿದರ ಕಲಾಕೃತಿಗಳೂ ಪ್ರದರ್ಶನದಲ್ಲಿದ್ದವು. ಗಮನಿಸಬೇಕಾದ ಒಂದು ಅಂಶವೇನೆಂದರೆ, ಹೆಚ್ಚಿನ ಗ್ಯಾಲರಿಗಳು ಸಮಕಾಲೀನ ಕಲಾಕೃತಿಗಳನ್ನೆ ಪ್ರದರ್ಶಿಸಿದ್ದವು. ಗ್ಯಾಲರಿಗಳು ಗುಣಮಟ್ಟದ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಕಲಾ ಮೌಲ್ಯ ಹೆಚ್ಚಿಸಿದ ಆರ್ಟ್ ಮುಂಬೈ

‘ಆರ್ಟ್ ಮುಂಬೈ’ ೨ನೇ ಆವೃತ್ತಿಯ ಗುಣಮಟ್ಟ ಮುಂಬೈ ಮತ್ತು ಮುಂಬೈ ಸಂಪರ್ಕ ಬೆಳೆಸಿಕೊಂಡಿರುವ ಕಲಾವಿದರು, ಗ್ಯಾಲರಿಗಳು, ಕಲಾ ಸಂಸ್ಥೆಗಳು, ಕಲಾಶಾಲೆಗಳು ಮತ್ತು ಕಲಾ ಪ್ರಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗಾಗಲೇ ಉತ್ತಮ ಮಾರುಕಟ್ಟೆ ಹೊಂದಿರುವ ಮುಂಬೈನಲ್ಲಿ ಆರ್ಟ್ ಮುಂಬೈ ಕಲಾಪ್ರದರ್ಶನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಲಾ ಮೌಲ್ಯ ಹೆಚ್ಚುವಲ್ಲಿಯೂ ಪರಿಣಾಮ ಬೀರಿದೆ. ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಪ್ರತಿವರ್ಷ ಆಯೋಜನೆಗೊಳ್ಳುವ ಇಂಡಿಯಾ ಆರ್ಟ್ ಫೇರ್ ಮಾದರಿಯ, ಎಲ್ಲಾ ಕಲಾ ಪ್ರಕಾರಗಳನ್ನು ಒಳ್ಳಗೊಳ್ಳುವ ಕಲಾಪ್ರದರ್ಶನದ ಅಗತ್ಯತೆ ಮುಂಬೈ ಮಹಾನಗರಿಗೆ ಇತ್ತು. ಇದನ್ನೀಗ ಆರ್ಟ್ ಮುಂಬೈ ತುಂಬಿಕೊಟ್ಟಿದೆ. ಗ್ಲೋಬಲ್ ಆರ್ಟ್ ಮಾರ್ಕೆಟ್‌ನಲ್ಲಿ ಮುಂಬೈ ಕೂಡ ಒಂದು ಪ್ರಮುಖ ಸ್ಥಾನ ಪಡೆದುಕೊಳ್ಳುವುದರಲ್ಲಿ ಯಾವ ಸಂದೇಹ ಇಲ್ಲ.

 

 


Share This

Leave a Reply

Your email address will not be published. Required fields are marked *