- ಸಾಧನ ಸಂಗಮ ರಂಗೋಪನಿಷತ್ ರಂಗಮಂದಿರದಲ್ಲಿ ಕಾರ್ಯಕ್ರಮ
ಸಾಧನ ಸಂಗಮ ನೃತ್ಯ ಕೇಂದ್ರದ ವಿದ್ಯಾರ್ಥಿನಿಯರಾದ ಕುಸುಮ ಆರ್., ಕುಮಾರಿ ಸುಚಿತ್ರಾ ಎಸ್ ಮತ್ತು ಕುಮಾರಿ ಲಕ್ಷ್ಯಾ ಆರ್. ಅವರ ‘ಗೆಜ್ಜೆ ಪೂಜೆ’ ನೃತ್ಯ ಕಾರ್ಯಕ್ರಮ ನವೆಂಬರ್ 24, ಭಾನುವಾರದಂದು ಸಂಜೆ 6ಕ್ಕೆ ರಂಗೋಪನಿಷತ್ ರಂಗಮಂದಿರದಲ್ಲಿ ನಡೆಯಲಿದೆ. ಭಾರತೀ ತೀರ್ಥ ಸಂಗೀತ ವಿದ್ಯಾ ಗುರುಕುಲದ ಸಂಸ್ಥಾಪಕಿ ಮತ್ತು ನಿರ್ದೇಶಕರಾದ ವಿದುಷಿ ಗೀತಾ ಶ್ಯಾಮಸುಂದರ್ ಹಾಗೂ ಮ್ಯಾಕ್ಸ್ ಮುಲ್ಲರ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಜೆ. ಮತ್ತು ಜಿ. ಜನಾರ್ಧನ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪುರಸ್ಕೃತೆ ಗುರು ಜ್ಯೋತಿ ಪಟ್ಟಾಭಿರಾಮ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಕಾರ್ಯಕ್ರಮದ ಪ್ರಶಿಕ್ಷಣ ಮತ್ತು ನಟ್ಟುವಾಂಗವನ್ನು ಗುರು ಡಾ. ಸಾಧನಶ್ರೀ ಪಿ. ಮತ್ತು ಕುಮಾರಿ ಪವಿತ್ರ ಪ್ರಿಯಾ ಎನ್. ಅವರು ನಿರ್ವಹಿಸಲಿದ್ದಾರೆ. ಗಾಯನದಲ್ಲಿ ವಿದ್ವಾನ್ ರಾಜೀವ್ ರಾಜಗೋಪಾಲನ್, ಮೃದಂಗದಲ್ಲಿ ವಿದ್ವಾನ್ ಪವನ್ ಮಾಧವ್ ಮಾಸುರ್, ವೇಣು ವಾದನದಲ್ಲಿ ವಿದ್ವಾನ್ ಶಶಾಂಕ್ ಜೋಡಿದಾರ್, ಪಿಟೀಲು ವಾದನದಲ್ಲಿ ವಿದ್ವಾನ್ ಕೃಷ್ಣ ಕಶ್ಯಪ್ ಅವರು ಪಾಲ್ಗೊಳ್ಳಲಿದ್ದಾರೆ.
ಮೂವರು ನರ್ತಕಿಯರು ಕಳೆದ ಕೆಲವು ವರ್ಷಗಳಿಂದ ಸಾಧನ ಸಂಗಮ ನೃತ್ಯ ಕೇಂದ್ರದಲ್ಲಿ ನಿರಂತರವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಆರಂಭಿಕ ಹಂತದ ಅಭ್ಯಾಸಗಳನ್ನು ನಿಭಾಯಿಸುವ ಸಾಮರ್ಥ್ಯ ಇರುವ ಹಿನ್ನೆಲೆಯಲ್ಲಿ ಅಧಿಕೃತವಾಗಿ ಗೆಜ್ಜೆ ಪೂಜೆ ಮೂಲಕ ಮುಂದಿನ ಕಲಿಕೆಗೆ ಅನುವು ಮಾಡಿಕೊಡಲಾಗುತ್ತದೆ. ಸಾಂಪ್ರದಾಯಿಕವಾಗಿ ಭರತನಾಟ್ಯ ಕಲಿಕೆಯಲ್ಲಿ ಗುರುವಾದವರು ಶಿಷ್ಯರಿಗೆ ಇಂತಹದ್ದೊಂದು ಅವಕಾಶ ನಿರ್ಮಿಸಿಕೊಡುತ್ತಾರೆ. ಇದು ಮುಂದಿನ ಕಲಿಕೆಗೆ ಅತ್ಯಂತ ಮಹತ್ವಪೂರ್ಣವಾದ ಹೆಜ್ಜೆಯಾಗಿರುತ್ತದೆ.
ಮೂವರು ನರ್ತಕಿಯರಿಗೆ ಅಭಿನಂದನೆಯೊಂದಿಗೆ ಶುಭಕೋರೋಣ.