ನಾಟ್ಯ ಸಂಗಮ; ಅಭಿನಯ ದರ್ಪಣ!

Share This

  •  ಮನಮೋಹಕ ನೃತ್ಯ ಪ್ರದರ್ಶನ ನೀಡಿದ ಅಕ್ಷತಾ, ರಾಧಿಕಾ

“ಮಾರುತ”
ಪರಿಚಯ ಇಲ್ಲದವರು ಬಲು ವಿರಳ. ಹೌದು, “ವಾಯು” ಮತ್ತೊಂದು ಹೆಸರೇ ಮಾರುತ!
ಶರವೇಗಕ್ಕೂ ಮಿಗಿಲೆನಿಸುವ ಬಲ. ಪವನ ಸುತ, ಅತಿ ವೇಗದಲ್ಲಿ ಹಾರಬಲ್ಲ ಶಕ್ತಿಶಾಲಿ ಆಂಜನೇಯ, ಹನುಮಂತ. ವಾಯು ಪುತ್ರನಾಗಿರುವ ಕಾರಣದಿಂದಾಗಿ “ಮಾರುತಿ” ಎಂಬ ಹೆಸರು.
ರಾಮಾಯಣ ಮಹಾಗ್ರಂಥದ ಒಂದು ಅದ್ಭುತ ಪರಿಕಲ್ಪನೆ “ಮಾರುತಿ”. ರಾಮಾಯಣದ ಬಹು ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಆಂಜನೇಯ ಆರಂಭದಿಂದ ಅಂತ್ಯದ ತನಕ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ರಾಮನಿಗೋಸ್ಕರ ಅದೆಷ್ಟೋ ತ್ಯಾಗ ಮಾಡುತ್ತಾನೆ. ರಾಮ ಭಕ್ತ ಪರೋಪಕಾರಿಯಾಗಿ, ದಯಾಳುವಾಗಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ರಾಮ ಎಲ್ಲಿರುತ್ತಾನೋ ಅಲ್ಲಿ ಮಾರುತಿ. ರಾಮಾಯಣ ಕಥಾ ಭಾಗದ ಪ್ರಮುಖ ಘಟ್ಟದಲ್ಲೆಲ್ಲಾ ಮಾರುತಿ ಮಾರುತ ವೇಗದಲ್ಲಿ ಕಾಣಿಸಿಕೊಳ್ಳುವುದೇ ಈ ಮಹಾಗ್ರಂಥದ ಅತ್ಯಂತ ಸ್ವಾರಸ್ಯ ಭರಿತವಾದ ಕಲ್ಪನೆ. ಬಹುಶಃ ಮಾರುತಿ ಎಂಬ ಆ ಒಂದು ಪಾತ್ರ ಇಲ್ಲದಿದ್ದಿದ್ದರೆ ರಾಮಾಯಣ ರಂಜಿಸುತ್ತಿರಲಿಲ್ಲವೇನೋ..!
ಬೆಂಗಳೂರಿನ ನೃತ್ಯಾಂಕುರ್ ಸಂಸ್ಥೆ ಆಯೋಜಿಸಿದ ” A Double Bill ” ಶೀರ್ಷಿಕೆಯ ಭರತನಾಟ್ಯ ಕಾರ್ಯಕ್ರಮ ಭಾನುವಾರ, ಫೆ.3ರಂದು ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಿತು. ನೃತ್ಯಗುರು, ಶಾಸ್ತ್ರೀಯ ನೃತ್ಯ ಸಂಯೋಜಕ ವಿದ್ವಾನ್ ಪಾರ್ಶ್ವನಾಥ ಉಪಾಧ್ಯೆ ಅವರ ಶಿಷ್ಯೆ ಅಕ್ಷತಾ ವಿಶ್ವನಾಥ್ ಅವರು “ಮಾರುತಿ”ಯ ಕುರಿತ ನೃತ್ಯ ಆಯ್ದುಕೊಂಡು ಮನೋಜ್ಞವಾದ ಕಾರ್ಯಕ್ರಮ ನೀಡಿ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಹಿರಿಯ ಕಲಾವಿದೆ ಗುರು ರಾಧಿಕಾ ಶೆಟ್ಟಿ ಅವರು “ಮಾನುಷಿ” ಕುರಿತ ನೃತ್ಯ ಪ್ರದರ್ಶಿಸಿ ಅಭಿನಯದ ಮೂಲಕವೇ ಪ್ರೇಕ್ಷಕರ ಹೃದಯ ಗೆದ್ದರು. “ಹೊಸ ಬೇರು ಹಳೆ ಚಿಗುರು” ಎನ್ನುವುದಕ್ಕೆ ” A Double Bill ” ಸಾಕ್ಷಿ ಎನ್ನುವಂತಿತ್ತು.

 

 

| ಅಕ್ಷತಾ ನೃತ್ಯಕ್ಕೆ ಅಚ್ಚರಿಪಟ್ಟ ಪ್ರೇಕ್ಷಕ |
ಎಂಟನೇ ಕ್ಲಾಸ್ ವಿದ್ಯಾರ್ಥಿನಿ ಅಕ್ಷತಾ ವಿಶ್ವನಾಥ್ ನೃತ್ಯ ಸಾಮರ್ಥ್ಯಕ್ಕೂ, ಅವರ ವಯಸ್ಸಿಗೂ ಅಜಗಜಾಂತರ. ‘ ಕಲಾಭಿವ್ಯಕ್ತಿಗೆ ವಯಸ್ಸಿನ ಹಂಗಿಲ್ಲ’ ಎನ್ನುತ್ತಾರೆ. ಅಕ್ಷತಾ ವಿಶ್ವನಾಥ್ ನೃತ್ತ, ಭಾವಾಭಿನಯ, ಆಂಗಿಕಾಭಿನಯ ಗಮನಿಸಿದಾಗ ಅಕ್ಷರಶಃ ಸತ್ಯ ಎನ್ನಬೇಕು. ಅಷ್ಟು ಅಚ್ಚುಕಟ್ಟಾಗಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾದರು. ರಾಮಾಯಣದ ಅತ್ಯಂತ ಸುಂದರವಾದ ಭಾಗ ಕಿಷ್ಕಿಂದಾಕಾಂಡ, ಸುಂದರಕಾಂಡದ ದೃಶ್ಯಗಳು ಕಣ್ಣೆದುರು ಬಂದು ಹೋದವು. ವಯಸ್ಸಿಗೂ ಮೀರಿದ ಪ್ರದರ್ಶನ ನೀಡುವಲ್ಲಿ ಅಕ್ಷತಾ ಯಶಸ್ವಿಯಾದರು. ಆರಂಭದಿಂದ ಅಂತ್ಯದ ತನಕ ಎಲ್ಲಿಯೂ ದೈಹಿಕ ಸಾಮರ್ಥ್ಯ ಕಡಿಮೆಯಾಯ್ತು ಎಂಬ ಅಪಸ್ವರ ಬಾರದಂತೆ ಬಲ ಕಾಯ್ದುಕೊಂಡು ನೃತ್ಯ ಪ್ರದರ್ಶಿಸಿದರು.

ರಾಧಿಕಾ “ನೃತ್ತ ರಂಗಾಭಿನಯ”!
ಮಂಗಳೂರಿನ ನೃತ್ಯಗಾತಿ ರಾಧಿಕಾ ಶೆಟ್ಟಿ ಅವರ “ಮಾನುಷಿ” ನೃತ್ಯದ ಪರಿಕಲ್ಪನೆಯ ನೃತ್ಯ ಸಂಯೋಜನೆಯಲ್ಲಿ ಸರಸ್ವತಿ, ಮೀರಾಬಾಯಿ, ದೇವಕಿ ಮತ್ತು ಅಕ್ಕಮಹಾದೇವಿ ಅವರ ಭಕ್ತಿ ಪ್ರಧಾನ ನಾಟ್ಯ ಪ್ರದರ್ಶನ ಪ್ರೇಕ್ಷಕರನ್ನು ಅತ್ತಿತ್ತ ನೋಡಲು ಬಿಡಲಿಲ್ಲ. ಅತ್ಯಂತ ಸೊಗಸಾದ ಅಭಿನಯ ನೀಡುವ ಮೂಲಕ ಹಾಗೂ ಅವರ ಹಸ್ತ ಶುದ್ಧಿ ಗಮನಾರ್ಹವೆನಿಸಿತು.      ವಿಶೇಷವಾಗಿ ಮೀರಾಬಾಯಿ ಮತ್ತು ದೇವಕಿಯ ನೃತ್ಯ ಪ್ರದರ್ಶನ ಅಪರೂಪದ್ದಾಗಿತ್ತು. ಗಿರಿಧರ ಗೋಪಾಲ ಅಂಕಿತದಲ್ಲಿ ಭಕ್ತಿ ಸಾಗರದ ಅಲೆ ಅಲೆಯಲ್ಲೂ ಕಾಣಿಸಿಕೊಳ್ಳುವ ಮೀರಾ ಗೋಪಾಲನಿಗಾಗಿ ಹಂಬಲಿಸುವ ಪರಿಯನ್ನು ರಾಧಿಕಾ ಅವರು ಸುಂದರವಾಗಿ ಅಭಿನಯ ಪೂರ್ಣವಾಗಿ ಅಭಿವ್ಯಕ್ತಗೊಳಿಸಿದರು. ನಂತರದ ದೇವಕಿ ನೃತ್ಯ ಎಲ್ಲವನ್ನೂ ಮೀರಿಸುವಂತೆ ಇತ್ತು. ಮಗ ಕೃಷ್ಣನನ್ನು ಹಂಬಲಿಸಿಕೊಳ್ಳುತ್ತಲೇ ಇರುವ ದೇವಕಿಯ ಭಾವನಾತ್ಮಕ ಪ್ರಸ್ತುತಿ ಕೂಡ ಅತ್ಯಂತ ಸುಂದರವಾಗಿ ಮೂಡಿಬಂತು. ಭಾವಾಭಿನಯ ಪ್ರಧಾನವಾದ ನೃತ್ತ ಸಂಯೋಜನೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಎಲ್ಲೂ ಸೋಲಲಿಲ್ಲ. ರಾಧಿಕಾ ಅವರು ಈ ಸನ್ನಿವೇಶವನ್ನು ತಮ್ಮ ಅನುಭವದ ಬಲದಿಂದ ಬಹಳ ಜಾಣತನದಿಂದ, ಅಚ್ಚುಕಟ್ಟಾಗಿ ನಿರ್ವಹಿಸಿದರು.
ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಅವರ ನಟವಾಂಗ, ವಿದ್ವಾನ್ ರೋಹಿತ್ ಭಟ್ ಉಪ್ಪೂರು ಅವರ ಗಾಯನ, ವಿದ್ವಾನ್ ವಿನಯ್ ನಾಗರಾಜನ್ ಅವರ ಮೃದಂಗ, ವಿದ್ವಾನ್ ನಿತೀಶ್ ಅಮ್ಮಣ್ಣಾಯ ಅವರ ಕೊಳಲು ವಾದನ ರಾಧಿಕಾ ಅವರ ಪ್ರದರ್ಶನ ಗುಣಮಟ್ಟವನ್ನು ದ್ವಿಗುಣಗೊಳಿಸಿತು.

 

 


Share This

Leave a Reply

Your email address will not be published. Required fields are marked *