ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ಆಯೋಜಿಸುವ ಚಿತ್ರಸಂತೆಯ 22ನೇ ಆವೃತ್ತಿ 2025, ಜನವರಿ 5ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಲಾ ಸಾಧಕರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರಸಕ್ತ ಸಾಲಿನ ಡಿ.ದೇವರಾಜು ಅರಸು ಪ್ರಶಸ್ತಿಯನ್ನು ಡಾ.ಎಂ.ಎಸ್.ಮೂರ್ತಿ ಅವರಿಗೆ, ಕೆ.ಎಸ್.ನಾಗರತ್ನಮ್ಮ ಪ್ರಶಸ್ತಿಯನ್ನು ಎ.ರಾಮಕೃಷ್ಣಪ್ಪ ಅವರಿಗೆ, ವೈ. ಸುಬ್ರಮಣ್ಯ ರಾಜು ಪ್ರಶಸ್ತಿಯನ್ನು ಜಿ.ಎಲ್.ಭಟ್ ಅವರಿಗೆ, ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿಯನ್ನು ಸೂರ್ಯಪ್ರಕಾಶ್ ಗೌಡ ಅವರಿಗೆ, ಎಂ. ಆರ್ಯಮೂರ್ತಿ ಪ್ರಶಸ್ತಿಯನ್ನು ನಿರ್ಮಲ ಕುಮಾರಿ ಸಿ.ಎಸ್. ಅವರಿಗೆ ನೀಡಲಾಗುತ್ತಿದೆ ಎಂದು ಪ್ರಕಟಿಸಿದೆ.
ಜ.4, ಶನಿವಾರ ಬೆಳಗ್ಗೆ 11.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎನ್‌ಜಿಎಂಎ ನವದೆಹಲಿ ಮಹಾನಿರ್ದೇಶಕರಾದ ಡಾ.ಸಂಜೀವ್ ಕಿಶೋರ್ ಗೌತಮ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಲಿದೆ. ಭಾನುವಾರ ಜ.5ರಂದು ನಡೆಯಲಿರುವ ಚಿತ್ರಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಾಪ್ರದರ್ಶನ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಶಾಸಕ ಎಸ್.ಟಿ.ಸೋಮಶೇಖರ್, ಶಾಸಕ ರಿಜ್ವಾನ್ ಅರ್ಹದ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.