• ನೃತ್ಯ ನಿಪುಣ ತಂಡದಿಂದ ‘ನವರಸ ದೇವಿ’ ರೂಪಕ
• ಸಾಧನ ಸಂಗಮ ನೃತ್ಯ ಕೇಂದ್ರದಿಂದ ಪ್ರದರ್ಶನ
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಸಾಧನ ಸಂಗಮ ಟ್ರಸ್ಟ್ನ ನೃತ್ಯ ಕೇಂದ್ರವು ಪ್ರತಿವರ್ಷ ಆಯೋಜಿಸುವ ‘ಬಹುಳ ನೃತ್ಯೋತ್ಸವ’ ಜನವರಿ 26, ಭಾನುವಾರ ಸಂಜೆ ನಡೆಯಲಿದೆ. ಬಸವೇಶ್ವರ ನಗರದ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನೃತ್ಯ ಕೇಂದ್ರದ ಹಿರಿಯ ವಿದ್ಯಾರ್ಥಿಗಳನ್ನು ಒಳಗೊಂಡಿರುವ ‘ನೃತ್ಯ ನಿಪುಣ’ ತಂಡವು ‘ನವರಸ ದೇವಿ’ ರೂಪಕವನ್ನು ಪ್ರದರ್ಶಿಸುತ್ತಿದೆ.
ನೃತ್ಯ ಕೇಂದ್ರದ ಮುಖ್ಯಸ್ಥರಾದ ಗುರು, ಡಾ.ಸಾಧನಶ್ರೀ ಪಿ. ಅವರು ಬಹುಳ ನೃತ್ಯೋತ್ಸವಕ್ಕೆ ಸಂಬಂಧಿಸಿ ಮಾಹಿತಿ ಹಂಚಿಕೊಂಡಿದ್ದಾರೆ. “ಅನೇಕ ವಿಶೇಷತೆಗಳಿಂದ ಕೂಡಿರುವ ಈ ರೂಪಕವು ರಾಜ್ಯೋತ್ಸವ ಪುರಸ್ಕೃತರಾದ ಗುರು ಜ್ಯೋತಿ ಪಟ್ಟಾಭಿರಾಮ್ ಅವರ ಪರಿಕಲ್ಪನೆಯಾಗಿದೆ. ಶತಾವಧಾನಿ ಆರ್. ಗಣೇಶ್ ಅವರ ರಚನೆ, ವಿದ್ವಾನ್ ಡಿ.ಎಸ್.ಶ್ರೀವತ್ಸ ಮತ್ತು ವಿದ್ವಾನ್ ಜಿ. ಗುರುಮೂರ್ತಿ ಅವರ ಸಂಗೀತ ನಿರ್ದೇಶನದಿಂದ ಕೂಡಿರುವ ಅಪರೂಪದ ರೂಪಕ ಇದಾಗಿದೆ. ಎಂ.ಸ್ವಾಮಿ ಅವರ ಸಹಕಾರದೊಂದಿಗೆ ನೃತ್ಯ ಸಂಯೋಜನೆಗೊಂಡಿದೆ. ಬಹುಳ ನೃತ್ಯೋತ್ಸವ ಸಂದರ್ಭದಲ್ಲಿ ಉತ್ಕಟ ದತ್ತ ಉಪಾಸಕರಾದ ಅವಧೂತ್ ದೀಕ್ಷಿತ್, ಗಾಯಕಿ ವಿದುಷಿ ಕಲಾವತಿ ಅವಧೂತ್, ಮುದ್ರಿಕಾ ಫೌಂಡೇಶನ್‌ನ ಸಂಸ್ಥಾಪಕಿ ಗುರು ಮಿನಾಲ್ ಪ್ರಭು ಹಾಗೂ ಆಯುರ್ವೇದ ವೈದ್ಯೆ ಡಾ.ಸಾವಿತ್ರಿ ಎಸ್.ಜಿ. ಅವರ ಸಾಧನೆ ಪರಿಗಣಿಸಿ ಸನ್ಮಾನಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
![](https://agniprapancha.com/wp-content/uploads/2025/01/WhatsApp-Image-2025-01-16-at-13.59.57-1.jpeg)
![](https://agniprapancha.com/wp-content/uploads/2025/01/WhatsApp-Image-2025-01-16-at-13.59.58-1.jpeg)
![](https://agniprapancha.com/wp-content/uploads/2025/01/WhatsApp-Image-2025-01-16-at-13.59.58-2.jpeg)